ADVERTISEMENT

ಹಾವೇರಿ: ಕೆಲಸದಿಂದ ತೆಗೆದಿದ್ದಕ್ಕೆ ಆಂಬುಲೆನ್ಸ್‌ನಲ್ಲಿದ್ದ ವೈದ್ಯಕೀಯ ಉಪಕರಣ ಕಳವು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 7:22 IST
Last Updated 20 ಫೆಬ್ರುವರಿ 2026, 7:22 IST
ರಟ್ಟೀಹಳ್ಳಿ ಪೊಲೀಸರು ಆರೋಪಿಯಿಂದ ಜಪ್ತಿ ಮಾಡಿರುವ ವೈದ್ಯಕೀಯ ಉಪಕರಣಗಳು
ರಟ್ಟೀಹಳ್ಳಿ ಪೊಲೀಸರು ಆರೋಪಿಯಿಂದ ಜಪ್ತಿ ಮಾಡಿರುವ ವೈದ್ಯಕೀಯ ಉಪಕರಣಗಳು   

ಹಾವೇರಿ: ಜಿಲ್ಲೆಯ ರಟ್ಟೀಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ನಿಲ್ಲಿಸಿದ್ದ ಆಂಬುಲೆನ್ಸ್‌ನಲ್ಲಿದ್ದ ವೈದ್ಯಕೀಯ ಉಪಕರಣಗಳನ್ನು ಕಳವು ಮಾಡಿದ್ದ ಆರೋಪದಡಿ ಬಸವರಾಜ ನಾಗಪ್ಪ ಹೂಲಿಹಳ್ಳಿ (36) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

‘ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಹರಗುವಳ್ಳಿ ಗ್ರಾಮದ ಬಸವರಾಜ, ರಾಣೆಬೆನ್ನೂರಿನಲ್ಲಿ ನೆಲೆಸಿದ್ದ. ಈ ಹಿಂದೆ, 108 ಆಂಬುಲೆನ್ಸ್ ವಾಹನದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕೆಲ ದಿನಗಳ ಹಿಂದೆಯಷ್ಟೇ ಈತನನ್ನು ಕೆಲಸದಿಂದ ತೆಗೆಯಲಾಗಿತ್ತು. ಹೊಸ ಆಂಬುಲೆನ್ಸ್ ಮಾಡುವ ಉದ್ದೇಶದಿಂದ ಆತ, ಕಳ್ಳತನ ಮಾಡಿದ್ದನೆಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ರಟ್ಟೀಹಳ್ಳಿ ಪೊಲೀಸರು ಹೇಳಿದರು.

‘ಆಂಬುಲೆನ್ಸ್ ವಾಹನಗಳಲ್ಲಿರುವ ವಸ್ತುಗಳಿಗೆ ಹೆಚ್ಚಿನ ಬೆಲೆ ಇರುವ ಸಂಗತಿ ಆರೋಪಿಗೆ ಗೊತ್ತಿತ್ತು. ಅದೇ ಕಾರಣಕ್ಕೆ ಆತ, ರಟ್ಟೀಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ನಿಲ್ಲಿಸಿದ್ದ ಆಂಬುಲೆನ್ಸ್‌ನಲ್ಲಿದ್ದ ₹ 2.58 ಲಕ್ಷ ಮೌಲ್ಯದ ಮಾನಿಟರ್, ವೆಂಟಿಲೇಟರ್ ಹಾಗೂ ಸಿರಿಂಜ್ ಪಂಪ್‌ ಕಳ್ಳತನ ಮಾಡಿದ್ದ. ಈ ವಸ್ತುಗಳನ್ನು ಗಂಗಾವತಿಯಲ್ಲಿ ಮಾರಾಟ ಮಾಡಿದ್ದ. ಈತನನ್ನು ಬಂಧನ ಮಾಡುತ್ತಿದ್ದಂತೆ, ವೈದ್ಯಕೀಯ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ’ ಎಂದರು.

ADVERTISEMENT

ಮತ್ತೆರೆಡು ಕಡೆ ಕಳವು: ‘ಆರೋಪಿ ಬಸವರಾಜ, ಕುಪ್ಪೇಲೂರು ಹಾಗೂ ಹಾವೇರಿ ಜಿಲ್ಲಾಸ್ಪತ್ರೆ ಎದುರು ನಿಲ್ಲಿಸಿದ್ದ ಆಂಬುಲೆನ್ಸ್ ವಾಹನಗಳಲ್ಲಿಯೂ ಕಳ್ಳತನ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಕೃತ್ಯದಿಂದ ಬಂದ ಹಣದಲ್ಲಿ ಆರೋಪಿ, ಹೊಸ ಆಂಬುಲೆನ್ಸ್ ಖರೀದಿಸಿ ಸ್ವಂತ ವಾಹನದ ಚಾಲಕನಾಗಲು ಸಂಚು ರೂಪಿಸಿದ್ದ’ ಎಂದು ಪೊಲೀಸರು ಹೇಳಿದರು.

‘ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ನಿಲ್ಲಿಸಿದ್ದ ಆಂಬುಲೆನ್ಸ್‌ನಲ್ಲಿ ಜ. 28ರಿಂದ ಜ. 30ರವರೆಗಿನ ಅವಧಿಯಲ್ಲಿ ಕಳವು ಮಾಡಿದ್ದ ಆರೋಪಿ, ₹ 1.50 ಲಕ್ಷ ಮೌಲ್ಯದ ವೆಂಟಿಲೇಟರ್, ₹ 75 ಸಾವಿರ ಮೌಲ್ಯದ ಮಾನಿಟರ್ ಹಾಗೂ ₹ 25 ಸಾವಿರ ಮೌಲ್ಯದ ಸಿರಿಂಜ್ ಪಂಪ್ ಕೊಂಡೊಯ್ದಿದ್ದ.. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು’ ಎಂದರು.

‘ರಾಣೆಬೆನ್ನೂರು ತಾಲ್ಲೂಕಿನ ಕುಪ್ಪೇಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ನಿಲ್ಲಿಸಿದ್ದ 108 ಆಂಬುಲೆನ್ಸ್‌ ವಾಹನದ ಗಾಜು ಒಡೆದು, ₹ 35 ಸಾವಿರ ಮೌಲ್ಯದ ಪಲ್ಸ್ ಮಾನಿಟರ್, ₹ 50 ಸಾವಿರ ಮೌಲ್ಯದ ವೆಂಟಿಲೇಟರ್, ₹15 ಸಾವಿರ ಮೌಲ್ಯದ ಸಿರಿಂಜ್ ಪಂಪ್ ಉಪಕರಣಗಳನ್ನು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆಯೂ ಹಲಗೇರಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.