ರಾಣೆಬೆನ್ನೂರು: 12ನೇ ಶತಮಾನದಲ್ಲಿ ಸಮಾಜ ಸುಧಾರಣೆಗಾಗಿ ಬಸವಾದಿ ಶರಣರು ರೂಪಿಸಿದ್ದ ಅನುಭವ ಮಂಟಪ, ಇಂದಿಗೂ ಪ್ರಸ್ತುತ. ಇಂಥ ಅನುಭವ ಮಂಟಪವನ್ನು ಮರುಸೃಷ್ಟಿ ಮಾಡಿರುವ ರಾಣೆಬೆನ್ನೂರಿನ ರಾಜರಾಜೇಶ್ವರಿ ಯುವಕ ಮಂಡಳಿ ಪದಾಧಿಕಾರಿಗಳು, ಅದೇ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ.
ಜಗತ್ತಿನ ಮೊದಲ ಸಂಸತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾದ ಅನುಭವ ಮಂಟಪದ ದರುಶನ ಮತ್ತು ಬಸವಣ್ಣನವರು ವಿರಾಜಮಾನವಾಗಿ ಶೋಭಿಸುತ್ತಿರುವ ಬೃಹತ್ ಗಣೇಶನ ಮೂರ್ತಿ ಇಲ್ಲಿದೆ.
ಕಣ್ಮನ ಸೆಳೆಯುವ ವೇದಿಕೆಯಲ್ಲಿ ಜಾತ್ಯತೀತ ಸಮ ಸಮಾಜದ ಅನಾವರಣ ಮಾಡಲಾಗಿದೆ. ಬಸವಣ್ಣನವರ ಆರಂಭಿಕ ಜೀವನ, ಅನುಭವ ಮಂಟಪ, ಕಾಯಕವೇ ಕೈಲಾಸ, ತತ್ವಶಾಸ್ತ್ರ, ಪರಂಪರೆ ಮತ್ತು ಪ್ರಭಾವ, ಸಾಮಾಜಿಕ ಸುಧಾರಣೆ ಬಗ್ಗೆ ದೃಶ್ಯಗಳನ್ನು ತೆರೆದಿಡಲಾಗಿದೆ.
ಅನುಭವ ಮಂಟಪ ವೀಕ್ಷಣೆಗೆ ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ವಿಶ್ವಮಾನವ ಸಂದೇಶ ಸಾರಿದ, ಎಲ್ಲ ವರ್ಗದ ಜನ ಸಮುದಾಯವನ್ನು ಪರಿಗಣಿಸಿ ಲಿಂಗ-ವರ್ಗ-ವರ್ಣ ಬೇಧವಿಲ್ಲದ ಮನುಷ್ಯ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ ಶರಣರ ಚಿಂತನೆಗಳು ಇಲ್ಲಿ ಕಾಣಸಿಗುತ್ತಿವೆ.
ಜಗಜ್ಯೋತಿ ಬಸವಣ್ಣನವರು, ವಿಶ್ವಕ್ಕೆ ಮಾದರಿ. ಬಸವಣ್ಣನವರು ತಮ್ಮ ವಚನಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದವರು. ಅವರ ಅನುಭವ ಮಂಟಪದ ಕಾರ್ಯವೈಖರಿಗಳನ್ನು ಇಲ್ಲಿ ಕಾಣಬಹುದು. ಅನುಭವ ಮಂಟಪದ ಪ್ರತಿಯೊಂದು ಇತಿಹಾಸವೂ ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿದೆ.
ವಿಶ್ವಗುರು ಬಸವಣ್ಣ, ಅಲ್ಲಮ ಪ್ರಭು, ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ, ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ, ಅಕ್ಕಮಹಾದೇವಿ, ಮಾದಾರ ಚನ್ನಯ್ಯ, ನೂಲಿ ಚಂದಯ್ಯ, ಆಯ್ದಕ್ಕಿ ಲಕ್ಕಮ್ಮ, ಬೇಡರ ದಾಸಿಮಯ್ಯ ಸೇರಿದಂತೆ ಎಲ್ಲ ಶರಣರ ಪ್ರತಿಕೃತಿಗಳು ಈ ಅನುಭವ ಮಂಟಪದಲ್ಲಿ ರಾರಾಜಿಸುತ್ತಿವೆ.
19ರ ವರೆಗೆ ಪ್ರದರ್ಶನ:
‘ಸೆ. 1ರಿಂದ ಪ್ರದರ್ಶನ ಆರಂಭವಾಗಿದ್ದು 19ರ ವರೆಗೂ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಗಣೇಶ ಪ್ರತಿಷ್ಠಾಪನೆಯ ಪ್ರದರ್ಶನ ಇರುತ್ತದೆ. ಕುಪ್ಪೇಲೂರಿನ ಕಲಾವಿದರು 20 ದಿನಗಳ ಕಾಲ ಮಣ್ಣಿನ ಮೂರ್ತಿಗಳನ್ನು ನಿರ್ಮಿಸಿದ್ದಾರೆ. ಮೂರ್ತಿಗಳಿಗೆ ತಕ್ಕಂತೆ ವೇದಿಕೆ ಅಲಂಕಾರ ಮಾಡಲಾಗಿದೆ’ ಎಂದು ಸಮಿತಿ ಅಧ್ಯಕ್ಷ ಸಂತೋಷ ತೆವರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.