ಹಾವೇರಿ: ಗಣೇಶೋತ್ಸವ ಆಚರಣೆ ಸಂದರ್ಭದಲ್ಲಿ ಡಿ.ಜೆ. (ಡಿಸ್ಕ್ ಜಾಕಿ) ಬಳಕೆ ಮಾಡದಂತೆ ನಿರ್ಬಂಧ ಹೇರಲಾಗಿದ್ದು, ಈ ನಿಯಮ ಉಲ್ಲಂಘಿಸಿದ ಆರೋಪದಡಿ ಹಾವೇರಿ ಶಹರ ಠಾಣೆಯಲ್ಲಿ ಮೊದಲ ಎಫ್‌ಐಆರ್ ದಾಖಲಾಗಿದೆ.
‘ಡಿ.ಜೆ.ಯ ಅತಿಯಾದ ಶಬ್ದದಿಂದ ಮಕ್ಕಳು, ಹಿರಿಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಜಿಲ್ಲೆಯ ಎಎಸ್‌ಐ ಒಬ್ಬರ ಕಿವಿಯ ತಮಟೆ ಸಹ ಹಾಳಾಗಿದೆ. ಇಂಥ ಹಲವು ಪ‍್ರಕರಣಗಳನ್ನು ಪರಿಗಣಿಸಿ, ಡಿ.ಜೆ. ಬಳಕೆಯನ್ನು ನಿಷೇಧಿಸಲಾಗಿದೆ. ಸರ್ಕಾರದ ಈ ಆದೇಶವನ್ನು ಎಲ್ಲರೂ ಪಾಲಿಸಬೇಕು’ ಎಂದು ಜಿಲ್ಲಾ ಎಸ್ಪಿ ಯಶೋಧಾ ವಂಟಗೋಡಿ ಅವರು ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು.
ಜಿಲ್ಲೆಯಾದ್ಯಂತ ನಡೆಯುವ ಗಣೇಶೋತ್ಸವದ ಮೆರವಣಿಗೆ ಸಂದರ್ಭದಲ್ಲಿ ಡಿ.ಜೆ. ಬಳಕೆ ಬಗ್ಗೆ ಕಣ್ಣಿಡುವಂತೆ ಎಲ್ಲ ಪೊಲೀಸರಿಗೆ ಸೂಚನೆ ನೀಡಿದ್ದರು. ಅದರನ್ವಯ ಪೊಲೀಸರು, ಭದ್ರತೆ ಜೊತೆಯಲ್ಲಿ ಡಿ.ಜೆ. ಬಗ್ಗೆಯೂ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಹಾವೇರಿಯ ಸುಭಾಷ್ ವೃತ್ತದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ಗಜಾನನ ಉತ್ಸವ ಸಮಿತಿಯವರು ಡಿ.ಜೆ. ಬಳಕೆ ಮಾಡಿರುವ ಬಗ್ಗೆ ಪುರಾವೆ ಸಂಗ್ರಹಿಸಿರುವ ಶಹರ ಠಾಣೆ ಪೊಲೀಸರು, ಈ ಬಗ್ಗೆ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಪ್ರಸಕ್ತ ವರ್ಷದ ಗಣೇಶೋತ್ಸವ ಸಂದರ್ಭದಲ್ಲಿ ಡಿ.ಜೆ. ಬಳಕೆ ಬಗ್ಗೆ ದಾಖಲಿಸಿದ ಮೊದಲ ಪ್ರಕರಣ ಇದಾಗಿದೆ.
‘ಆಗಸ್ಟ್ 27ರಂದು ಸಂಜೆ 7.30 ಗಂಟೆಯಿಂದ ರಾತ್ರಿ 11 ಗಂಟೆಯ ಅವಧಿಯಲ್ಲಿ ಹಾವೇರಿ ಸುಭಾಷ್ ವೃತ್ತದ ಗಜಾನನ ಉತ್ಸವ ಸಮಿತಿಯವರು ಹಾಗೂ ಹುಂಬಿ ಡಿ.ಜೆ. ಸೌಂಡ್ ಸಿಸ್ಟಮ್ ಮಾಲೀಕರು ಸೇರಿ ‘ಹಾವೇರಿ ಕಾ ರಾಜಾ’ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಡಿ.ಜೆ. ಬಳಸಿದ್ದಾರೆ’ ಎಂದು ಹಾವೇರಿ ಶಹರ ಠಾಣೆ ಪೊಲೀಸರು ಹೇಳಿದರು.
‘ಡಿ.ಜೆ. ಬಳಕೆ ಮಾಡದಂತೆ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘನೆ ಮಾಡಿ, ಹೆಚ್ಚಿನ ಧ್ವನಿಯ ಡಿ.ಜೆ. ಬಳಕೆ ಮಾಡಲಾಗಿದೆ. ಸಾರ್ವಜನಿಕರ ಶಾಂತಿಗೆ ತೊಂದರೆಯನ್ನುಂಟು ಮಾಡಲಾಗಿದೆ. ಹೀಗಾಗಿ, ಗಜಾನನ ಉತ್ಸವ ಸಮಿತಿ ಹಾಗೂ ಹುಂಬಿ ಡಿ.ಜೆ. ಸೌಂಡ್ ಸಿಸ್ಟಮ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗಣೇಶ ಪ್ರತಿಷ್ಠಾಪನೆಗೆ ಪರವಾನಗಿ ಪಡೆದವರಿಗೆ ನೋಟಿಸ್ ನೀಡಿ, ವಿಚಾರಣೆ ನಡೆಸಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.