ರಾಣೆಬೆನ್ನೂರು: ನಗರದಲ್ಲಿ ಪ್ರತಿಷ್ಠಾಪಿಸಿದ್ದ ಮೂರು ಗಣೇಶ ಮೂರ್ತಿಗಳ ಶೋಭಾಯಾತ್ರೆ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಬುಧವಾರ ಜರುಗಿತು. ಸುಡು ಬಿಸಿಲನ್ನು ಲೆಕ್ಕಿಸದೆ ಜನರು ಭವ್ಯ ಶೋಭಾಯಾತ್ರೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡರು.
ಇಲ್ಲಿನ ಮೇಡ್ಲೇರಿ ರಸ್ತೆಯ ಗಂಗಾಜಲ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಮೊದಲ ಬಾರಿಗೆ ಅನ್ನದಾತ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಿದ ಅನ್ನದಾತ ಮಹಾಗಣಪತಿ, ಅಶೋಕ ವೃತ್ತದಲ್ಲಿ ವಿರಾಟ್ ಹಿಂದೂ ಮಹಾಸಭಾ ಪ್ರತಿಷ್ಠಾಪಿಸಿದ ನಾಲ್ಕನೇ ವರ್ಷದ ವಿರಾಟ್ ಹಿಂದೂ ಮಹಾಗಣಪತಿ ಹಾಗೂ ಕಾಕಿ ಗಲ್ಲಿಯಲ್ಲಿ ವಿಜಯಲಕ್ಷ್ಮೀ ಹವ್ಯಾಸಿ ಕ್ರೀಡಾ ಸಂಘ ಪ್ರತಿಷ್ಠಾಪಿಸಿದ 43ನೇ ವರ್ಷದ ರಾಣೆಬೆನ್ನೂರು ಮಹಾಗಣಪತಿ ಮೂರ್ತಿಉನ್ನು ಸಿಂಗರಿಸಿದ ಟ್ರ್ಯಾಕ್ಟರ್‌ಗಳಲ್ಲಿ ಮೆರವಣಿಗೆ ಮಾಡಲಾಯಿತು.
ಅಂಚೆ ಕಚೇರಿ ವೃತ್ತದಲ್ಲಿ ಮೂರು ಮೂರ್ತಿಗಳು ಒಂದೆಡೆ ಸೇರಿದವು. ಡಿಜೆ ಸದ್ದಿಗೆ ಯುವಜನರು ಕುಣಿದು ಕುಪ್ಪಳಿಸಿದರು. ಕೆಲವರು ಕೇಸರಿ ಧ್ವಜ ಹಿಡಿದು ಹೆಜ್ಜೆ ಹಾಕಿದರು. ಮೆರವಣಿಗೆಯಲ್ಲಿ ಭಾಗವಹಿಸಿದ ಭಕ್ತರು, ಕಲಾವಿದರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಸಕಲ ವಾದ್ಯಮೇಳದೊಂದಿಗೆ ಸ್ಟೇಷನ್ ರಸ್ತೆ, ಸಂಗಮ ವೃತ್ತ, ರಂಗನಾಥ ನಗರ, ಸುಭಾಷ ವೃತ್ತ, ದೊಡ್ಡಪೇಟೆ, ಪುಟ್ಟಯ್ಯನಮಠದ ರಸ್ತೆ, ತಳವಾರ ಗಲ್ಲಿ, ಚತುರ್ಮುಖಿ ದೇವಸ್ಥಾನ ವೃತ್ತ, ಎಂ.ಜಿ. ರಸ್ತೆ, ದುರ್ಗಾ ವೃತ್ತ, ಕುರುಬಗೇರಿ ವೃತ್ತ, ಹಲಗೇರಿ ವೃತ್ತ, ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಯಿತು. ಬಸವೇಶ್ವರ ವೃತ್ತದಲ್ಲಿ ಮಹಾಮಂಗಳಾರತಿ ಹಾಗೂ ಸಿಡಿಮದ್ದು ಸಿಡಿಸಲಾಯಿತು.
ಕಾಶಿ ವಿಶ್ವನಾಥ, ಮಲ್ಲಿಕಾರ್ಜುನ ದೇವಸ್ಥಾನ, ಸೋಮನಾಥ ದೇವಾಲಯ, ಮಹಾಕಾಲೇಶ್ವರ ದೇವಸ್ಥಾನ, ನಾಗೇಶ್ವರ, ರಾಮೇಶ್ವರ, ಕೇದಾರನಾಥ, ವೈದ್ಯನಾಥ, ಭೀಮಾಶಂಕರ, ಓಂಕಾರೇಶ್ವರ ಸ್ಥಬ್ಧ ಚಿತ್ರಗಳು, ಸ್ವಾತಂತ್ರ್ಯ ಯೋಧರು, ನಾಡಿನ ಮಹನೀಯರ ವೇಷಭೂಷಣ, ಅಟವಾಳಗಿ ಸಹೋದರರ ವೀರಗಾಸೆ, ಸಮಾಳ ಮೆರಗು ನೀಡಿತು.
ಹಳೇ ಪಿ.ಬಿ. ರಸ್ತೆ ಮೂಲಕ ಕುಮಾರಪಟ್ಟಣದ ಬಳಿಯ ತುಂಗಭದ್ರಾ ನದಿಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.
ಬೆಳಿಗ್ಗೆ ಅನ್ನದಾನ ಸಂಸ್ಥೆಯ ಮಹಾಗಣಪತಿ ಮೂರ್ತಿ ಮೆರವಣಿಗೆಗೆ ಶಾಸಕ ಪ್ರಕಾಶ ಕೋಳಿವಾಡ ವಿಶೇಷ ಪೂಜೆ ಸಲ್ಲಿಸಿದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
ಮಾಜಿ ಶಾಸಕ ಅರುಣಕುಮಾರ ಪೂಜಾರ, ವಿರಾಟ ಹಿಂದೂ ಮಹಾಸಭಾದ ಅಧ್ಯಕ್ಷ ನಾಗೇಂದ್ರಸಾ ಪವಾರ, ಕಾಕಿ ಗಲ್ಲಿಯ ವಿಜಯಲಕ್ಷ್ಮೀ ಹವ್ಯಾಸಿ ಕ್ರೀಡಾಸಂಘದ ಅಧ್ಯಕ್ಷ ಲಿಂಗರಾಜ ಬೂದನೂರ, ಅನ್ನದಾತ ಮಹಾಗಣಪತಿ ಸಮಿತಿ ಅಧ್ಯಕ್ಷ ನಾಗರಾಜ ಸಾಲಗೇರಿ, ಶ್ರೀನಿವಾಸ ಕಾಕಿ, ಅಭಿಷೇಕ ಗೌಡಶಿವಣ್ಣನವರ, ಚೋಳಪ್ಪ ಕಸವಾಳ, ನಿಂಗರಾಜ ಕೋಡಿಹಳ್ಳಿ, ಬಸವರಾಜ ಹುಲ್ಲತ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.