ADVERTISEMENT

ಹಾವೇರಿ: ಗಣೇಶ ಮೂರ್ತಿ ಮಾರಾಟ ಜೋರು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 2:35 IST
Last Updated 23 ಆಗಸ್ಟ್ 2025, 2:35 IST
ಹಾವೇರಿಯಲ್ಲಿ ಮಹಿಳೆಯೊಬ್ಬರು ಗಣಪತಿ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡಿದರು
ಹಾವೇರಿಯಲ್ಲಿ ಮಹಿಳೆಯೊಬ್ಬರು ಗಣಪತಿ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡಿದರು   

ಹಾವೇರಿ: ಗಣೇಶೋತ್ಸವ ಆಚರಣೆಗೆ ದಿನಗಣನೆ ಶುರುವಾಗಿದ್ದು, ಹಬ್ಬಕ್ಕೆ ಅಗತ್ಯವಿರುವ ಗಣೇಶ ಮೂರ್ತಿಗಳ ಖರೀದಿ ಜೋರಾಗಿದೆ. ಜಿಲ್ಲೆಯಾದ್ಯಂತ ಹಲವು ತಯಾರಕರ ಬಳಿ, ಜನರು ಮೂರ್ತಿಗಳನ್ನು ಕಾಯ್ದಿರಿಸುತ್ತಿದ್ದಾರೆ.

ಶ್ರಾವಣ ಮಾಸ ಮುಗಿಯುತ್ತಿದ್ದಂತೆ ಜನರು, ಗಣೇಶ ಹಬ್ಬದ ತಯಾರಿ ಶುರು ಮಾಡುತ್ತಾರೆ. ಈ ವರ್ಷ ಯುಗಾದಿ ಮುಗಿಯುತ್ತಿದ್ದಂತೆ ಗಣಪತಿ ತಯಾರಿ ಕೆಲಸಗಳು ಶುರುವಾಗಿವೆ. ತಯಾರಕರು, ಮಣ್ಣನ್ನು ಹದ ಮಾಡಿ ತರಹೇವಾರಿ ಮಾದರಿಯ ಗಣಪತಿ ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ.

ಜಿಲ್ಲೆಯ ಹಲವು ಕಲಾವಿದರು ಕುಟುಂಬ ಸಮೇತರಾಗಿ ಮೂರ್ತಿಗಳನ್ನು ತಯಾರಿಸಿಟ್ಟಿದ್ದಾರೆ. ಜನರು ಸಹ ಕುಟುಂಬ ಸಮೇತವಾಗಿ ಬಂದು, ತಮ್ಮಿಷ್ಟದ ಗಣಪತಿ ಮೂರ್ತಿಗಳನ್ನು ಆಯ್ಕೆ ಮಾಡಿ ಕಾಯ್ದಿರಿಸುತ್ತಿದ್ದಾರೆ.

ADVERTISEMENT

ಹಾವೇರಿಯ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಗಣಪತಿ ಮೂರ್ತಿಗಳನ್ನು ಹೊಂದಿಸಿಡಲಾಗಿದೆ. ಸಣ್ಣ ಗಣಪತಿಯಿಂದ ಹಿಡಿದು ದೊಡ್ಡ ಗಣಪತಿಯವರೆಗೂ ಎಲ್ಲ ಪ್ರಕಾರದ ಮೂರ್ತಿಗಳು ಇಲ್ಲಿ ಲಭ್ಯ ಇವೆ.

ಜಿಲ್ಲೆಯ ಹಲವು ಕಡೆಗಳಲ್ಲೂ ಮಣ್ಣಿನ ಮೂರ್ತಿಗಳನ್ನು ಮಾರಾಟಕ್ಕೆ ಇರಿಸಲಾಗಿದೆ. ಕೆಲವರು ಪೆಂಡಾಲ್ ಹಾಗೂ ಶೆಡ್‌ ಹಾಕಿಕೊಂಡು ಗಣಪತಿ ಮೂರ್ತಿಗಳನ್ನು ವೀಕ್ಷಣೆಗೆ ಇರಿಸಿದ್ದಾರೆ.

ಹಾವೇರಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಇರುವ ಗಣಪತಿ ಮೂರ್ತಿಗಳನ್ನು ಕಾಯ್ದಿರಿಸಲು, ಜಿಲ್ಲೆಯ ಹಲವು ತಾಲ್ಲೂಕಿನ ಜನರು ಬರುತ್ತಿದ್ದಾರೆ. ಹಾವೇರಿ, ಹಾನಗಲ್, ಹಿರೇಕೆರೂರು, ಶಿಗ್ಗಾವಿ, ಸವಣೂರು ಹಾಗೂ ಇತರೆ ತಾಲ್ಲೂಕಿನ ಜನರು ಪ್ರತಿ ವರ್ಷವೂ ಇಲ್ಲಿಂದಲೇ ಗಣಪತಿ ಮೂರ್ತಿ ಕೊಂಡೊಯ್ಯುತ್ತಾರೆ. 

ಮನೆ, ಅಂಗಡಿ ಹಾಗೂ ಖಾಸಗಿ ಸ್ಥಳಗಳಲ್ಲಿ ಇರಿಸುವ ಗಣಪತಿ ಮೂರ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಯ್ದಿರಿಸಲಾಗುತ್ತಿದೆ. ಅದರಂತೆ, ಸಾರ್ವಜನಿಕ ಸ್ಥಳಗಳಲ್ಲಿ ಕೂರಿಸುವ ಗಣಪತಿ ಮೂರ್ತಿಗಳಿಗೂ ಬೇಡಿಕೆ ಬಂದಿದೆ.
2 ಅಡಿಯಿಂದ 6 ಅಡಿಯಷ್ಟು ಎತ್ತರದ ದೊಡ್ಡ ಗಣಪತಿ ಮೂರ್ತಿಗಳು ವೀರಭದ್ರೇಶ್ವರ ದೇವಸ್ಥಾನದಲ್ಲಿ ಸಿಗಲಿವೆ.

ಹಿಂದೂಗಳ ಹಲವು ದೇವರ ರೂಪದಲ್ಲಿ ಗಣಪತಿ ಮೂರ್ತಿಗಳು ರಾರಾಜಿಸುತ್ತಿವೆ. ಮೂರ್ತಿ ತಯಾರಿಯನ್ನೇ ನಂಬಿಕೊಂಡಿರುವ ಹಲವು ಕುಟುಂಬಗಳು ಜಿಲ್ಲೆಯಲ್ಲಿವೆ. ಅಂಥ ಕುಟುಂಬಗಳಿಗೂ ಮೂರ್ತಿಗಳು ಜೀವನಾಧಾರವಾಗಿವೆ.

ಹಾವೇರಿಯಲ್ಲಿ ತಯಾರಕರೊಬ್ಬರು ಗಣಪತಿ ಮೂರ್ತಿಗೆ ಅಂತಿಮ ಸ್ಪರ್ಶ ನೀಡಿದರು

ಗುಣಮಟ್ಟದ ಮಣ್ಣಿನಿಂದ ತಯಾರಿ: ‘ವಿಘ್ನ ನಿವಾರಕ ಗಣಪತಿ ಮೂರ್ತಿಯನ್ನು ಹಿಂದೂಗಳು ಆರಾಧಿಸುತ್ತಾರೆ. ಇಂಥ ಗಣಪತಿ ಮೂರ್ತಿ ತಯಾರಿಯನ್ನೂ ಅತಿ ಶಿಸ್ತಿನಿಂದ ಮಾಡಬೇಕಾಗುತ್ತದೆ. ಜಿಲ್ಲೆಯ ಹಲವು ಕಡೆಗಳಲ್ಲಿರುವ ಕೆರೆಯ ಮಣ್ಣು ತಂದು ಮೂರ್ತಿ ತಯಾರಿ ಮಾಡುತ್ತೇನೆ’ ಎಂದು ಮೂರ್ತಿ ತಯಾರಕರೊಬ್ಬರು ಹೇಳಿದರು.

‘ಕೆರೆ ಮಣ್ಣಿನೊಂದಿಗೆ ಹತ್ತಿ ಹಾಗೂ ನಾರು ಮಿಶ್ರಣ ಮಾಡಿ, ಅದೇ ಮಣ್ಣನ್ನು ಹದ ಮಾಡಲಾಗುತ್ತದೆ. ನಂತರ, ಮೂರ್ತಿ ತಯಾರಿ ಶುರುವಾಗುತ್ತದೆ. ತಮ್ಮಿಷ್ಟದ ಗಣಪತಿ ಮೂರ್ತಿಯನ್ನು ಕಾಯ್ದಿರಿಸಿ, ಹಬ್ಬದ ದಿನದಂದು ಕೊಂಡೊಯ್ಯುತ್ತಾರೆ’ ಎಂದು ತಿಳಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮಂಡಳಿಯವರು, ಈಗಾಗಲೇ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಪೂಜೆ ಮಾಡಿದ್ದಾರೆ.

ಹಾವೇರಿ ಗಾಂಧಿ ವೃತ್ತದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆಗಾಗಿ ಮಂಡಳಿ ಪದಾಧಿಕಾರಿಗಳು ಧ್ವಜಾರೋಹಣ ಪೂಜೆ ನೆರವೇರಿಸಿದರು

ಪಿಒಪಿ ವಿರುದ್ಧ ಕಾರ್ಯಾಚರಣೆ ಪರಿಸರಕ್ಕೆ ಹಾನಿ

ಮಾಡುವ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿಗಳ ಮಾರಾಟವೂ ಅಲ್ಲಲ್ಲಿ ನಡೆಯುತ್ತಿದೆ. ಇದೇ ಕಾರಣಕ್ಕೆ ಪಿಒಪಿ ಮೂರ್ತಿಗಳ ವಿರುದ್ಧ ನಗರಸಭೆ ಹಾಗೂ ಪರಿಸರ ಇಲಾಖೆ ಅಧಿಕಾರಿಗಳು ನಿರಂತರವಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಹಾವೇರಿಯಲ್ಲಿ ಇತ್ತೀಚೆಗೆ ಕಾರ್ಯಾಚರಣೆ ನಡೆಸಿದ್ದ ಅಧಿಕಾರಿಗಳು ಕೆಲ ಮೂರ್ತಿಗಳನ್ನು ಜಪ್ತಿ ಮಾಡಿದ್ದಾರೆ. ಅದರ ಮಾರಾಟಗಾರರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಮೂರ್ತಿ ಮಾರಾಟ ಸ್ಥಳಗಳಲ್ಲಿ ಬ್ಯಾನರ್ ಪ್ರದರ್ಶನ ಮಾಡಿರುವ ಅಧಿಕಾರಿಗಳು ಪಿಒಪಿ ಗಣಪತಿ ಮೂರ್ತಿ ಖರೀದಿಸದಂತೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ.

‘ಸಾರ್ವಜನಿಕ ಆಸ್ತಿಗೆ ಹಾನಿಯಾದರೆ ದಂಡ’

ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲು ಅನುಮತಿ ಪಡೆಯುವುದು ಕಡ್ಡಾಯ ಮಾಡಲಾಗಿದೆ. ಪ್ರತಿಷ್ಠಾಪನೆ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿಯಾದರೆ ದಂಡ ವಸೂಲಿ ಮಾಡುವುದಾಗಿ ನಗರಸಭೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ‘ಆಗಸ್ಟ್ 27ರಂದು ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಪೆಂಡಾಲ್‌ಗೆ ಅನುಮತಿ ಪಡೆದವರು ಷರತ್ತುಗಳನ್ನು ಪಾಲಿಸಬೇಕು. ಸಾರ್ವಜನಿಕ ಸ್ಥಳಗಳಾದ ರಸ್ತೆ ಚರಂಡಿ ಉದ್ಯಾನ ಬೀದಿದೀಪ ಕಟ್ಟಡ ಹಾಗೂ ಇತರೆ ಆಸ್ತಿಗಳಿಗೆ ಹಾನಿ ಮಾಡಬಾರದು. ಹಾನಿ ಮಾಡಿದವರ ವಿರುದ್ಧ ಕ್ರಮ ಕೈಗೊಂಡು ದಂಡ ಸಂಗ್ರಹಿಸಲಾಗುವುದು’ ಎಂದು ರಾಣೆಬೆನ್ನೂರು ನಗರಸಭೆ ಪೌರಾಯುಕ್ತ ಎಫ್‌.ವೈ. ಇಂಗಳಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.