ADVERTISEMENT

ರಾಣೆಬೆನ್ನೂರು: ಬೆಳ್ಳುಳ್ಳಿ ಬೀಜ ವ್ಯಾ‍ಪಾರ ಜೋರು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 14:55 IST
Last Updated 18 ಅಕ್ಟೋಬರ್ 2021, 14:55 IST
ರಾಣೆಬೆನ್ನೂರಿನ ಎಪಿಎಂಸಿ ಉಪಪ್ರಾರಂಗಣದಲ್ಲಿ ಭಾನುವಾರ ರೈತರು ತಂದ ಬೀಜದ ಬೆಳ್ಳುಳ್ಳಿಯನ್ನು ವ್ಯಾಪಾರಸ್ಥರು ತೂಕ ಮಾಡಿದರು
ರಾಣೆಬೆನ್ನೂರಿನ ಎಪಿಎಂಸಿ ಉಪಪ್ರಾರಂಗಣದಲ್ಲಿ ಭಾನುವಾರ ರೈತರು ತಂದ ಬೀಜದ ಬೆಳ್ಳುಳ್ಳಿಯನ್ನು ವ್ಯಾಪಾರಸ್ಥರು ತೂಕ ಮಾಡಿದರು   

ರಾಣೆಬೆನ್ನೂರು: ನಗರದ ಎಪಿಎಂಸಿ ಉಪಪ್ರಾಂಗಣದ ಬೆಳ್ಳುಳ್ಳಿ ಮಾರುಕಟ್ಟೆಯಲ್ಲಿ ಭಾನುವಾರ ಹಿಂಗಾರು ಹಂಗಾಮಿಗೆ ಬಿತ್ತನೆ ಮಾಡಲು ವಿವಿಧ ಜಿಲ್ಲೆಗಳಿಂದ ಬಂದ ರೈತರು ಹಾಗೂ ವ್ಯಾಪಾರಸ್ಥರು ಬೆಳ್ಳುಳ್ಳಿ ಬೀಜ ಖರೀದಿಸಿದರು.

ಕಳೆದ ಗುರುವಾರ ತಾಲ್ಲೂಕಿನ ಹಲಗೇರಿ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ಕ್ವಿಂಟಲ್‌ ಬೆಳ್ಳುಳ್ಳಿಗೆ ₹ 4,500–₹ 5,000 ದರ ಇತ್ತು. ರಾಣೆಬೆನ್ನೂರಿನ ಭಾನುವಾರದ ಮಾರುಕಟ್ಟೆಯಲ್ಲಿ ದರ ತುಸು ಹೆಚ್ಚಾಗಿದೆ.

‘ಇಲ್ಲಿನ ಭಾನುವಾರದ ಮಾರುಕಟ್ಟೆಯಲ್ಲಿ ಬಿತ್ತನೆ ಬೀಜದ ಬೆಳ್ಳುಳ್ಳಿ ಗಾತ್ರಕ್ಕೆ ಅನುಗುಣವಾಗಿ ₹ 7,200–₹ 8,500 ಹಾಗೂ ₹ 5,500– ₹ 6,500 ವರೆಗೆ ದರ ಇತ್ತು. ಹೈಬ್ರಿಡ್‌ ದರ ₹ 4,000 ಹಾಗೂ ₹ 3,000– ₹ 3,500 ವರೆಗೆ ಇತ್ತು’ ಎನ್ನುತ್ತಾರೆ ಬೆಳ್ಳುಳ್ಳಿ ವ್ಯಾಪಾರಸ್ಥ ಶಿವಣ್ಣ ಹಾಗೂ ಹಲಗೇರಿಯ ವೀರಯ್ಯ ಶಿವಪೂಜಿಮಠ.

ADVERTISEMENT

ಬೆಳಗಾವಿ, ವಿಜಯಪುರ, ಬೀಳಗಿ, ಕೊಪ್ಪಳ, ಬಳ್ಳಾರಿ, ನವಲಗುಂದ, ನರಗುಂದ, ಬಾದಾಮಿ, ಗದಗ, ಕಾರವಾರ ಜಿಲ್ಲೆಗಳಿಂದ ಬೆಳ್ಳುಳ್ಳಿ ಖರೀದಿಸಲು ಇಲ್ಲಿಗೆ ಬರುತ್ತಾರೆ.

‘ಈ ವರ್ಷ ಮಳೆ ಹದವರ್ತಿಯಾಗಿದ್ದು, ಹಿಂಗಾರಿ ಬೆಳ್ಳುಳ್ಳಿ ಬಿತ್ತನೆ ಮಾಡಲು ಸಕಾಲವಾಗಿದೆ. ನಾವು ಪ್ರತಿ ವರ್ಷ ರಾಣೆಬೆನ್ನೂರು ಮಾರುಕಟ್ಟೆಯಿಂದ ಬೆಳ್ಳುಳ್ಳಿ ಖರೀದಿ ಮಾಡಿಕೊಂಡು ಹೋಗುತ್ತೇವೆ. ಉತ್ತಮ ಬೆಳ್ಳುಳ್ಳಿ ಬೀಜ, ಒಳ್ಳೆಯ ತೂಕ ಮತ್ತು ದರ ಸಿಗುತ್ತದೆ’ ಎನ್ನುತ್ತಾರೆ ಬೈಲಹೊಂಗಲ ತಾಲ್ಲೂಕಿನ ಜಕವಾಡಕೊಪ್ಪದ ರೈತ ಬಸವರಾಜ ಗೌಡ್ರ.

‘ಪಸಕ್ತ ಸಾಲಿನಲ್ಲಿ ಬೆಳ್ಳುಳ್ಳಿ ಬೆಳೆಯುವ ಭಾಗದಲ್ಲಿ ಮುಂಗಾರು ಮಳೆ ಹೆಚ್ಚು ಸುರಿದಿದ್ದರಿಂದ ಮಾಲು ಕಪ್ಪಾಗಿದೆ. ಈ ವರ್ಷ ಬೆಳ್ಳುಳ್ಳಿ ಇಳುವರಿ ಕಡಿಮೆಯಾಗಿದೆ’ ಎನ್ನುತ್ತಾರೆ ರೈತ ಹನುಮಂತಪ್ಪ ಕಬ್ಬಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.