ADVERTISEMENT

ಕೋವಿಡ್ ತಡೆಗೆ ಸಿದ್ಧರಾಗಿ: ಸಚಿವ

ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 1 ಮೇ 2021, 7:57 IST
Last Updated 1 ಮೇ 2021, 7:57 IST
ಶಿಗ್ಗಾವಿ ಪಟ್ಟಣದಲ್ಲಿ ಶುಕ್ರವಾರ ಸರ್ಕಾರಿ ಆಸ್ಪತ್ರೆಯಲ್ಲಿನ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪಿಪಿಇ ಕಿಟ್ ಧರಿಸಿ ಪರಿಶೀಲನೆ ನಡೆಸಿದರು
ಶಿಗ್ಗಾವಿ ಪಟ್ಟಣದಲ್ಲಿ ಶುಕ್ರವಾರ ಸರ್ಕಾರಿ ಆಸ್ಪತ್ರೆಯಲ್ಲಿನ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪಿಪಿಇ ಕಿಟ್ ಧರಿಸಿ ಪರಿಶೀಲನೆ ನಡೆಸಿದರು   

ಶಿಗ್ಗಾವಿ: ಕೋವಿಡ್ ಎರಡನೇ ಅಲೆ ಉಲ್ಬಣವಾಗುತ್ತಿದ್ದು, ಆಸ್ಪತ್ರೆಗೆ ಬರುವ ಎಲ್ಲ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಬೇಕು. ಅಗತ್ಯ ಸಲಕರಣೆಗಳ ಸಿದ್ದತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸಲಹೆ ನೀಡಿದರು.

ಪಟ್ಟಣದಲ್ಲಿ ಶುಕ್ರವಾರ ನಡೆದ ಶಿಗ್ಗಾವಿ, ಸವಣೂರ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನೆಗಟಿವ್ ವರದಿ ಬಂದರು ಸಹ ರೋಗಿ ಬಗ್ಗೆ ನಿರ್ಲಕ್ಷ್ಯತೆ ಸರಿಯಲ್ಲ. ಅವರಿಗೂ ಸರಿಯಾದ ಚಿಕಿತ್ಸೆ, ಔಷಧಿಗಳನ್ನು ವಿತರಿಸಬೇಕು. ಶಿಗ್ಗಾವಿ, ಸವಣೂರ ಆಸ್ಪತ್ರೆಯಲ್ಲಿರುವ ಕೋವಿಡ್ ರೋಗಿಗಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಆಕ್ಸಿಜನ್‌, ಐಸೊಲೇಸನ್, ಔಷಧಿ ಸೇರಿದಂತೆ ಸಕಲ ಸಾಮಗ್ರಿಗಳನ್ನು ಸಂಗ್ರಹಿಸಿಕೊಳ್ಳಬೇಕು. ಅವಶ್ಯ ಬೇಡಿಕೆಗಳ ಇಂಡೆಕ್ಸ್ ಕಳುಹಿಸಿದರೆ, ಮಂಜೂರಾತಿ ಮಾಡಲಾಗುವುದು. ಅಲ್ಲದೆ ಅವಶ್ಯ ಸಿಬ್ಬಂದಿ ನೇಮಿಸಿಕೊಳ್ಳಲು ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ತಿಳಿಸಿದರು.

ADVERTISEMENT

ಶಿಗ್ಗಾವಿ, ಸವಣೂರ ಭಾಗದಲ್ಲಿ ಆಕ್ಸಿಜನ್ ಪ್ಲಾಂಟ್ ಮತ್ತು ಸ್ಟೋರೆಜ್‌ ಟ್ಯಾಂಕ್ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗುತ್ತಿದೆ. ಎರಡು ತಾಲ್ಲೂಕಿನ ಆಸ್ಪತ್ರೆಗಳಿಗೆ ಬೇಡ್‌ಗಳನ್ನು ಹೆಚ್ಚಿಸಲಾಗುತ್ತಿದೆ. ಕೋವಿಡ್ ಲಸಿಕೆ ಪಡೆಯಲು 18ವರ್ಷ ಮೇಲ್ಪಟ್ಟವರಿಗೆ ನೋಂದಣಿ ಮೇ 1ರಿಂದ ಆರಂಭಿಸಲಾಗುತ್ತದೆ. ಲಸಿಕೆಗಳನ್ನು ಸಂಗ್ರಹಿಸಿಕೊಂಡು ಲಸಿಕೆ ಹಾಕುವ ದಿನಾಂಕ ಪ್ರಕಟಿಸಲಾಗುವುದು ಎಂದರು.

ತಾಲ್ಲೂಕು ಪಂಚಾಯ್ತಿ ಇಒ ನೇತೃತ್ವದಲ್ಲಿ ಪ್ರತಿ ಗ್ರಾಮಗಳ ಸ್ವಚ್ಚತೆ ಜಾಗೃತಿ ಮೂಡಿಸಬೇಕು. ಪೊಲೀಸ್ ಇಲಾಖೆ ಇತರೆ ಇಲಾಖೆಗಳಿಗೆ ಸಹಕಾರ ನೀಡುವ ಮೂಲಕ ಮಾಸ್ಕ್ ಧರಿಸದ, ಅನಾವಶ್ಯಕವಾಗಿ ಓಡಾಡುವುದನ್ನು ನಿಯಂತ್ರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ನಂತರ ಸರ್ಕಾರಿ ಆಸ್ಪತ್ರೆಯಲ್ಲಿನ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿ ಪಿಪಿಇ ಕಿಟ್ ಧರಿಸಿ ಆಸ್ಪತ್ರೆಯಲ್ಲಿನ ವ್ಯವಸ್ಥೆ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.