ADVERTISEMENT

ನಿರಂತರ ಮಳೆ, ಶುಂಠಿಗೆ ರೋಗ; ಕಂಗಾಲಾದ ಬೆಳೆಗಾರ

ವಾತಾವರಣದಲ್ಲಿ ವ್ಯತ್ಯಾಸ | ಗಾಳಿಯಲ್ಲಿ ವೇಗವಾಗಿ ಹರಡುತ್ತಿರುವ ರೋಗ

ಸಂತೋಷ ಜಿಗಳಿಕೊಪ್ಪ
Published 7 ಸೆಪ್ಟೆಂಬರ್ 2025, 7:53 IST
Last Updated 7 ಸೆಪ್ಟೆಂಬರ್ 2025, 7:53 IST
ಹಾವೇರಿ ಜಿಲ್ಲೆಯ ಚಿಕ್ಕಬಾಸೂರು ಬಳಿ ಬೆಳೆದಿರುವ ಶುಂಠಿ ಬೆಳೆಗೆ ರೋಗ ತಗುಲಿರುವುದು
ಹಾವೇರಿ ಜಿಲ್ಲೆಯ ಚಿಕ್ಕಬಾಸೂರು ಬಳಿ ಬೆಳೆದಿರುವ ಶುಂಠಿ ಬೆಳೆಗೆ ರೋಗ ತಗುಲಿರುವುದು   

ಹಾವೇರಿ: ಜಿಲ್ಲೆಯಲ್ಲಿ ವ್ಯಾಪಕವಾಗಿ ಬೆಳೆದಿರುವ ಶುಂಠಿ ಬೆಳೆಯಲ್ಲಿ ರೋಗ ಕಾಣಿಸಿಕೊಂಡಿದ್ದು, ಹಚ್ಚ ಹಸಿರಿನ ಬೆಳೆಯು ಕ್ರಮೇಣವಾಗಿ ಒಣಗಿ ನೆಲಕ್ಕಚ್ಚುತ್ತಿದೆ. ಕಣ್ಣೆದುರೇ ಶುಂಠಿ ಒಣಗುತ್ತಿರುವುದನ್ನು ನೋಡಿ ಬೆಳೆಗಾರರು ಕಂಗಾಲಾಗಿದ್ದು, ಸೂಕ್ತ ಔಷಧಕ್ಕಾಗಿ ಅಂಗಡಿಯಿಂದ ಅಂಗಡಿಗೆ ಅಲೆದಾಡುತ್ತಿದ್ದಾರೆ.

ಅರೆಮಲೆನಾಡು ಪ್ರದೇಶವಾದ ಹಾವೇರಿ ಜಿಲ್ಲೆ, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜೊತೆ ಗಡಿ ಹಂಚಿಕೊಂಡಿದೆ. ಇದರ ಪರಿಣಾಮವಾಗಿ ಹಾನಗಲ್, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ, ಬ್ಯಾಡಗಿ ತಾಲ್ಲೂಕಿನ ಹೆಚ್ಚಿನ ಜಮೀನಿನಲ್ಲಿ ಶುಂಠಿ ಬೆಳೆಯಲಾಗಿದೆ.

ಔಷಧಿ ಸೇರಿದಂತೆ ವಿವಿಧ ಉತ್ಪನ್ನಗಳ ತಯಾರಿಕೆಯಲ್ಲಿ ಶುಂಠಿಯನ್ನು ಹೆಚ್ಚಾಗಿ ಬಳಸುವುದರಿಂದ, ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ಕಂಪನಿಗಳ ಒಪ್ಪಂದದ ಮೂಲಕ ಜಿಲ್ಲೆಯಲ್ಲಿ ಶುರುವಾಗಿದ್ದ ಶುಂಠಿ ಕೃಷಿ, ಈಗ ಹೆಚ್ಚು ಕಡೆ ವ್ಯಾಪಿಸಿದೆ. ಹಲವರು, ವೈಯಕ್ತಿಕವಾಗಿ ಶುಂಠಿ ಬೆಳೆದು ಮಾರುಕಟ್ಟೆಗೆ ಸರಬರಾಜು ಮಾಡುತ್ತಿದ್ದಾರೆ.

ADVERTISEMENT

ಶುಂಠಿ ಬೆಳೆದು ಲಾಭ ಪಡೆದವರ ಕಥೆ ಕೇಳಿದ ರೈತರು, ತಮ್ಮ ಜಮೀನಿನಲ್ಲೂ ನೀರಾವರಿ ಮೂಲಕ ಶುಂಠಿ ಬೆಳೆಯಲಾರಂಭಿಸಿದ್ದಾರೆ. ಜಿಲ್ಲೆಯಾದ್ಯಂತ ಶುಂಠಿ ಕೃಷಿಗೆ ಬೇಡಿಕೆ ಬಂದಿದೆ. ಹಲವರು, ತಮ್ಮ ಜಮೀನಿನಲ್ಲಿ ಬದುಗಳನ್ನು ನಿರ್ಮಿಸಿ ಶುಂಠಿ ಬೆಳೆಯುತ್ತಿದ್ದಾರೆ. ಕೆಲವರು, ಅಡಿಕೆ ಹಾಗೂ ಇತರೆ ಬೆಳೆಗಳ ನಡುವೆ ಸಮಗ್ರ ಕೃಷಿ ಪದ್ಧತಿ ಮೂಲಕ ಶುಂಠಿ ಬೆಳೆಯುತ್ತಿದ್ದಾರೆ.

2024ರವರೆಗೂ ಶುಂಠಿಗೆ ಉತ್ತಮ ಬೆಲೆ ಸಿಕ್ಕಿತ್ತು. 2025ರಲ್ಲಿ ಶುಂಠಿ ಬೆಲೆ ಕುಸಿದಿದೆ. ಬೆಂಬಲ ಬೆಲೆಗೂ ರೈತರು ಆಗ್ರಹಿಸಿದ್ದರು. 2026ರಲ್ಲಾದರೂ ಉತ್ತಮ ಬೆಲೆ ಸಿಗಬಹುದೆಂದು ಈಗ ಶುಂಠಿ ಬೆಳೆಯುತ್ತಿದ್ದಾರೆ. ಆದರೆ, ಬಹುತೇಕ ಕಡೆ ಶುಂಠಿ ಬೆಳೆಗೆ ರೋಗ ತಗುಲಿದೆ. ಈ ರೋಗದಿಂದಾಗಿ ಬೆಳೆಯು ಹಂತ ಹಂತವಾಗಿ ಒಣಗಿ ಸಂಪೂರ್ಣ ನಾಶವಾಗುವ ಭಯವೂ ಇದೆ.

‘ನಮ್ಮೂರಿನ ರೈತರು, ಶುಂಠಿ ಬೆಳೆದು ಲಾಭ ಪಡೆದಿದ್ದರು. ಅದನ್ನು ನೋಡಿ ನಾನೂ ಈ ವರ್ಷ ಒಂದು ಎಕರೆ ಶುಂಠಿ ಬೆಳೆದಿದ್ದೇನೆ. ಈಗ ರೋಗ ಬಂದಿದ್ದು, ದಿಕ್ಕು ತೋಚದಂತಾಗಿದೆ. ಅಂಗಡಿಯವರ ಬಳಿ ಹೋಗಿ ಔಷಧಿ ತಂದು ಸಿಂಪರಣೆ ಮಾಡುತ್ತಿದ್ದೇನೆ. ಸದ್ಯಕ್ಕೆ ಹತೋಟಿ ಕಾಣಿಸುತ್ತಿಲ್ಲ’ ಎಂದು ಹಾನಗಲ್ ರೈತ ಶೇಖಪ್ಪ ತಿಳಿಸಿದರು.

ಎಲೆಚುಕ್ಕೆ ರೋಗ ಜಾಸ್ತಿ: ಶುಂಠಿ ಬೆಳೆಯಲ್ಲಿ ಕಾಣಿಸಿಕೊಂಡಿರುವ ರೋಗದಿಂದ ಆತಂಕಗೊಂಡಿರುವ ರೈತರು, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಎದುರು ಅಳಲು ತೋಡಿಕೊಂಡಿದ್ದಾರೆ. ಜಮೀನಿಗೆ ಭೇಟಿ ನೀಡಿದ್ದ ಅಧಿಕಾರಿಗಳು, ಎರಡು ಬಗೆಯ ರೋಗ ಇರುವುದನ್ನು ಪತ್ತೆ ಮಾಡಿದ್ದಾರೆ.

‘ಜಿಲ್ಲೆಯ ಸುಮಾರು 3,000 ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬೆಳೆಯಲಾಗಿದೆ. ಬೆಳೆಯಲ್ಲಿ ಎಲೆ ಮಚ್ಚೆ ರೋಗ–ಎಲೆ ಚುಕ್ಕೆ ರೋಗ (ಕೊಲೆಟೋಟ್ರೆಂಕೊಮ್) ಹಾಗೂ ಬೆಂಕಿ ರೋಗ (ಫ್ರಾಕ್ಷಿ ಪೈರಿಕ್ಯುಲೇರಿಯಾ) ತಗುಲಿರುವುದು ಪತ್ತೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿ ಕೊಲೆಟೋಟ್ರೆಂಕೊಮ್‌ ರೋಗ ಹೆಚ್ಚಿದೆ. ಈ ರೋಗದಿಂದಾಗಿ, ರಾತ್ರಿ ಕಳೆದು ಬೆಳಗಾಗುವುದರೊಳಗೆ ಬೆಳೆ ಬಾಡುತ್ತಿದೆ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲೆ ಮಚ್ಚೆ ರೋಗದಿಂದ, ಶುಂಠಿ ಗಿಡದ ಎಲೆ ಮತ್ತು ಕಾಂಡದ ಮೇಲೆ ನೀರಿನಿಂದ ಆವೃತವಾದ ಚಿಕ್ಕ ಗಾತ್ರದ ಮಚ್ಚೆಗಳು ಕಾಣಿಸುತ್ತವೆ. ಎಲೆಗಳು ತಿಳಿ ಹಳದಿ ಬಣ್ಣಗಳಿಂದ ಆವೃತವಾಗಿ ಮಧ್ಯದಲ್ಲಿ ಚಿಕ್ಕ ಗಾತ್ರದ ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಬೆಳೆ ಕ್ರಮೇಣ ಒಣಗುತ್ತದೆ. ಬೆಂಕಿ ರೋಗವಿದ್ದರೆ, ಶುಂಠಿ ಗಿಡದ ಎಲೆ ಮತ್ತು ಕಾಂಡಗಳ ಮೇಲೆ ವಜ್ರಾಕಾರ ಅಥವಾ ಕಣ್ಣಿನ ಆಕಾರದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ’ ಎಂದರು.

‘ನಿರಂತರ ಮಳೆ, ಮೋಡ ಕವಿದ ವಾತಾವರಣ, ಆಗಾಗ ಬಿಸಿಲು ಬಂದು ಹೋಗುವುದು ಸೇರಿದಂತೆ ವಿವಿಧ ಕಾರಣಗಳಿಂದ ಈ ರೋಗಗಳು ಕಾಣಿಸಿಕೊಂಡಿವೆ. ಈ ರೋಗಗಳು ಗಾಳಿಯಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ವೇಗವಾಗಿ ಹರಡುತ್ತವೆ. ಸಣ್ಣ ಪ್ರಮಾಣದಲ್ಲಿದ್ದ ರೋಗಗಳು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದು, ಇಡೀ ಶುಂಠಿ ಬೆಳೆ ನಾಶವಾಗುವ ಸಾಧ್ಯತೆಯಿದೆ’ ಎಂದು ಹೇಳಿದರು.

ಶುಂಠಿ ಬೆಳೆಗೆ ರೋಗ ತಗುಲಿದ್ದರಿಂದ ಎಲೆಯ ಬಣ್ಣ ಬದಲಾಗಿರುವುದು
ಪಕ್ಕದ ಜಮೀನಿನ ಶುಂಠಿಗಿದ್ದ ರೋಗ ನನ್ನ ಜಮೀನಿಗೂ ವ್ಯಾಪಿಸಿದೆ. ಅಂಗಡಿಯವರು ಹೇಳಿದ್ದ ಔಷಧ ತಂದು ಸಿಂಪಡಿಸಿದ್ದು ಇನ್ನೂ ಹತೋಟಿಗೆ ಬಂದಿಲ್ಲ. ನಷ್ಟದ ಭಯ ಶುರುವಾಗಿದೆ.
– ನಾಗರಾಜ ಕೊಪ್ಪದ, ಚಿಕ್ಕಬಾಸೂರು ರೈತ

‘ಔಷಧಿ ಸಿಂಪಡಿಸಿದರೆ ಹತೋಟಿ’

‘ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಶುಂಠಿಯಲ್ಲಿ ರೋಗ ಹೆಚ್ಚಾಗಿದೆ. ಹವಾಮಾನ ಬದಲಾವಣೆಯೇ ಇದಕ್ಕೆ ಕಾರಣ. ಸೂಕ್ತ ಪ್ರಮಾಣದಲ್ಲಿ ಔಷಧಿ ಸಿಂಪರಣೆ ಮಾಡಿದರೆ ರೋಗವನ್ನು ಹತೋಟಿಗೆ ತರಬಹುದು’ ಎಂದು ಹಾನಗಲ್ ತಾಲ್ಲೂಕು ತೋಟಗಾರಿಕೆ ಸಹಾಯಕ ಅಧಿಕಾರಿ ಮೃತ್ಯುಂಜಯ ಹಿರೇಮಠ ತಿಳಿಸಿದರು. ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಹಾಸನ ಹಾಗೂ ಚಿಕ್ಕಮಗಳೂರು ಕಡೆಗಳಲ್ಲಿ ಶುಂಠಿಯಲ್ಲಿ ಬೆಂಕಿ ರೋಗ ಕಾಣಿಸಿಕೊಂಡಿದೆ. ಹಾವೇರಿ ಜಿಲ್ಲೆಯಲ್ಲಿ ಎಲೆ ಮಚ್ಚು–ಎಲೆ ಚುಕ್ಕೆ ರೋಗದ ಪ್ರಮಾಣ ಹೆಚ್ಚಿದೆ. ಅಕ್ಕ–ಪಕ್ಕದ ಜಮೀನಿನಲ್ಲಿರುವ ಶುಂಠಿ ಕ್ರಮೇಣ ರೋಗಕ್ಕೆ ತುತ್ತಾಗುತ್ತಿದೆ. ರೋಗ ಬರದಂತೆ ಮುಂಜಾಗ್ರತಾ ಕ್ರಮವಾಗಿ ಸಿಂಪರಣೆ ಮಾಡಲು ಹಾಗೂ ರೋಗ ಬಂದ ನಂತರ ಸಿಂಪರಣೆ ಮಾಡಲು ಔಷಧಿ ಲಭ್ಯವಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.