ADVERTISEMENT

ಹಾವೇರಿ ಜಿಲ್ಲೆಯಾದ್ಯಂತ ಸರ್ಕಾರಿ ಶಾಲೆಗಳು ಪುನರಾರಂಭ: ಮಕ್ಕಳಿಗೆ ಗುಲಾಬಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 16 ಮೇ 2022, 6:09 IST
Last Updated 16 ಮೇ 2022, 6:09 IST
   

ಹಾವೇರಿ: ಜಿಲ್ಲೆಯಾದ್ಯಂತ 1ರಿಂದ 10ನೇ ತರಗತಿಯ ಸರ್ಕಾರಿ ಶಾಲೆಗಳು ಸೋಮವಾರ ಪುನರಾರಂಭಗೊಂಡವು.

ಒಂದರೆಡು‌ ದಿನಗಳ ಮುಂಚಿತವಾಗಿ ಶಾಲೆಯ ಕೊಠಡಿಗಳನ್ನು ಸ್ವಚ್ಛ ಮಾಡಲಾಗಿತ್ತು. ಸೋಮವಾರ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಬಾಲಕಿಯರು ಶಾಲಾ ಅಂಗಳದಲ್ಲಿ ರಂಗೋಲಿ ಬಿಡಿಸಿ ಸಂಭ್ರಮಿಸಿದರು.

ಮೊದಲ ದಿನ ಶಾಲೆಗೆ ಬಂದ ಮಕ್ಕಳಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಗುಲಾಬಿ ನೀಡಿ, ಸಿಹಿ ವಿತರಿಸಿ ಸ್ವಾಗತಿಸಿದರು.

ADVERTISEMENT

ನಂತರ ಮಕ್ಕಳಿಗೆ ಹೊಸ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು. ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಹಾಲು ವಿತರಿಸಲಾಯಿತು. ಮಧ್ಯಾಹ್ನದ ಊಟಕ್ಕೆ ಪಾಯಸ (ಕೀರು), ಕಡುಬು ಹಾಗೂ ಹೋಳಿಗೆ (ಒಬ್ಬಟ್ಟು) ಅಡುಗೆಯನ್ನು ಸಿದ್ಧಪಡಿಸಲಾಗಿದೆ.

‘ಜಿಲ್ಲೆಗೆ ಶೇ 30ರಷ್ಟು ಪಠ್ಯಪುಸ್ತಕಗಳು ಪೂರೈಕೆಯಾಗಿವೆ. ಕಲಿಕೆಗೆ ತೊಂದರೆಯಾಗದಂತೆ ಎಲ್ಲ ಶಾಲೆಗಳಲ್ಲಿ ಬುಕ್ ಬ್ಯಾಂಕ್(ಹಳೆಯ ಪುಸ್ತಕಗಳ ಸಂಗ್ರಹ) ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕಲಿಕಾ ಚೇತರಿಕೆ ಉಪಕ್ರಮದ ಮೂಲಕ ಮಕ್ಕಳನ್ನು ಹೊಸ ಶೈಕ್ಷಣಿಕ ವರ್ಷದ ಬೋಧನೆಯನ್ನು ಆರಂಭಿಸುತ್ತೇವೆ" ಎಂದು ಡಿಡಿಪಿಐ ಜಗದೀಶ್ವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಾವೇರಿ ತಾಲ್ಲೂಕಿನಲ್ಲಿ 1500 ಮಕ್ಕಳು ಪ್ರವೇಶಾತಿ‌ ಪಡೆದಿದ್ದಾರೆ. ಇನ್ನೂ 2500 ಮಕ್ಕಳು ಪ್ರವೇಶ ಪಡೆಯುವ ನಿರೀಕ್ಷೆಯಿದೆ. ಎಸ್ ಡಿಎಂಸಿ ಹಾಗೂ ಪಾಲಕರೊಂದಿಗೆ ಸಭೆ ನಡೆಸಿ ಮಕ್ಕಳ ಕಲಿಕೆಯನ್ನು ಸುಧಾರಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇವೆ’ಎಂದು ಹಾವೇರಿ ತಾಲ್ಲೂಕು ಬಿಇಒ ಎಂ.ಎಚ್‌.ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.