ADVERTISEMENT

ಗುತ್ತಲ: ಮಟ್ಕಾ ಅಡ್ಡೆ ಮೇಲೆ ಶಾಸಕ ರುದ್ರಪ್ಪ ಲಮಾಣಿ ದಾಳಿ

ನಾಡ ಕಚೇರಿ ಉದ್ಘಾಟನೆಗೆ ಬಂದಿದ್ದ ಶಾಸಕರಿಗೆ ಸ್ಥಳೀಯರಿಂದ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 2:39 IST
Last Updated 3 ಮಾರ್ಚ್ 2026, 2:39 IST
ಗುತ್ತಲದಲ್ಲಿ ಮಟ್ಕಾ ಅಡ್ಡೆ ಹತ್ತಿರ ವಾಸಿಸುತ್ತಿರುವ ನಿವಾಸಿಗಳು ಉಪಸಭಾಪತಿ ರುದ್ರಪ್ಪ ಲಮಾಣಿ ಅವರನ್ನು ಮುತ್ತಿಗೆ ಹಾಕಿದರು
ಗುತ್ತಲದಲ್ಲಿ ಮಟ್ಕಾ ಅಡ್ಡೆ ಹತ್ತಿರ ವಾಸಿಸುತ್ತಿರುವ ನಿವಾಸಿಗಳು ಉಪಸಭಾಪತಿ ರುದ್ರಪ್ಪ ಲಮಾಣಿ ಅವರನ್ನು ಮುತ್ತಿಗೆ ಹಾಕಿದರು   

ಗುತ್ತಲ: ‘ಪಟ್ಟಣದ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ಸಮೀಪದಲ್ಲಿಯೇ ಕೊಠಡಿಯೊಂದರಲ್ಲಿ ಮಟ್ಕಾ ಬರೆಯುತ್ತಿದ್ದಾರೆ. ಇದನ್ನು ಯಾರೊಬ್ಬರೂ ತಡೆಯುತ್ತಿಲ್ಲ’ ಎಂದು ಆರೋಪಿಸಿ ಸ್ಥಳೀಯ ಮಹಿಳೆಯರು ಶಾಸಕ ರುದ್ರಪ್ಪ ಲಮಾಣಿ ಅವರಿಗೆ ಸೋಮವಾರ ಮುತ್ತಿಗೆ ಹಾಕಿದರು.

ಇದರಿಂದ ಎಚ್ಚೆತ್ತ ರುದ್ರಪ್ಪ ಲಮಾಣಿ, ಕೊಠಡಿ ಮೇಲೆ ದಾಳಿ ಮಾಡಿ ಮಟ್ಕಾ ಬರೆಯುತ್ತಿದ್ದ ವ್ಯಕ್ತಿಯೊಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪಟ್ಟಣದಲ್ಲಿರುವ ನಾಡ ಕಚೇರಿ ಉದ್ಘಾಟನೆ ಮತ್ತು ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ರುದ್ರಪ್ಪ ಲಮಾಣಿ ಮತ್ತು ತಹಶೀಲ್ದಾರ್ ಶರಣಮ್ಮ ಬಂದಿದ್ದರು. ಅವರನ್ನು ಅಡ್ಡಗಟ್ಟಿದ್ದ ಮಹಿಳೆಯರು, ‘ಮೀನು, ಮಾಂಸದಂಗಡಿಯವರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ದುರ್ವಾಸನೆ ಬರುತ್ತಿದೆ. ಅದನ್ನು ತಿನ್ನಲು ಬರುವ ನಾಯಿಗಳು ಮಕ್ಕಳ ಮೇಲೆ ದಾಳಿ ಮಾಡುತ್ತಿವೆ. ಇದರ ನಡುವೆಯೇ ಮಟ್ಕಾ ಹಾವಳಿ ಹೆಚ್ಚಾಗಿದೆ’ ಎಂದು ಅಳಲು ತೋಡಿಕೊಂಡಿದ್ದರು.

ADVERTISEMENT

ಮಹಿಳೆಯರನ್ನು ಸಮಾಧಾನಪಡಿಸಿದ ಶಾಸಕ, ಕೊಠಡಿಗೆ ಲಗ್ಗೆ ಇಟ್ಟರು. ಅವರ ಎದುರೇ ವ್ಯಕ್ತಿ ರಾಜಾರೋಷವಾಗಿ ಮಟ್ಕಾ (ಒ.ಸಿ.) ಬರೆದುಕೊಳ್ಳುತ್ತಿದ್ದ. ಅದನ್ನು ಕಂಡು ಗರಂ ಆದ ಶಾಸಕ, ಪಿಎಸ್‌ಐಗೆ ಕರೆ ಮಾಡಿ ಕರೆಸಿಕೊಂಡರು. ಅವರನ್ನೂ ತರಾಟೆಗೆ ತೆಗೆದುಕೊಂಡು, ವ್ಯಕ್ತಿಯನ್ನು ವಶಕ್ಕೆ ಒಪ್ಪಿಸಿದರು. 

ಪಿಎಸ್‌ಐ ಅಮಾನತಿಗೆ ಆಗ್ರಹ: ‘ಗುತ್ತಲ ಠಾಣೆಯ ಪಿಎಸ್‌ಐ ಅವರ ಕುಮ್ಮಕ್ಕಿನಿಂದಲೇ ಮಟ್ಕಾ ದಂಧೆ ನಡೆಯುತ್ತಿದೆ. ಈಗ ಶಾಸಕರೇ ನೇರವಾಗಿ ದಂಧೆಕೋರರನ್ನು ಹಿಡಿದುಕೊಟ್ಟಿದ್ದಾರೆ. ಮಟ್ಕಾ ನಡೆಯುತ್ತಿದ್ದರೂ ಮೌನವಾಗಿದ್ದ ಪಿಎಸ್‌ಐನನ್ನು ಕೆಲಸದಿಂದ ಅಮಾನತು ಮಾಡಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.