ಶಿವಾನಂದ ಪಾಟೀಲ
ಹಾನಗಲ್: ‘ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರಿಗೆ ಹಾನಗಲ್ ಪಟ್ಟಣ ಹಾಗೂ ತಾಲ್ಲೂಕಿನ ಸ್ಥಿತಿಗತಿಯ ವಾಸ್ತವದ ಅರಿವಿಲ್ಲ. ಹೀಗಾಗಿ, ಆಗಸ್ಟ್ 6ರಂದು ನಡೆಸಿದ್ದ ಹಾನಗಲ್ ಬಂದ್ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ’ ಎಂದು ನಾಗರಿಕ ಹಿತರಕ್ಷಣಾ ಸಮಿತಿಯ ಮುಖಂಡ ಭೋಜರಾಜ ಕರೂದಿ ದೂರಿದರು.
ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಾನಗಲ್‌ನಲ್ಲಿ ಒಂದು ನಿರ್ದಿಷ್ಟ ಸಂಘಟನೆ ಬಂದ್ ಆಚರಿಸಿದೆ. ಕಾನೂನು ಸುವ್ಯವಸ್ಥೆಯಲ್ಲಿ ರಾಜಕೀಯ ಮಾಡಬಾರದೆಂದು ಸಚಿವರು ಹೇಳಿಕೆ ನೀಡಿರುವುದು ಖಂಡನೀಯ’ ಎಂದರು.
‘ಸಚಿವರು ಎಷ್ಟು ಬಾರಿ ಹಾನಗಲ್‌ಗೆ ಭೇಟಿ ನೀಡಿದ್ದಾರೆ ? ಇಲ್ಲಿನ ವಾಸ್ತವ ವಿಚಾರಗಳ ಕುರಿತು ಎಷ್ಟು ತಿಳಿದುಕೊಂಡಿದ್ದಾರೆ ? ಎನ್ನುವುದನ್ನು ತಿಳಿಸಬೇಕು. ಸುಖಾಸುಮ್ಮನೇ, ನಾಗರಿಕ ಹಿತರಕ್ಷಣಾ ಸಮಿತಿಗೆ ಅವಮಾನ ಮಾಡುವ ಹೇಳಿಕೆ ನೀಡುವುದು ಸರಿಯಲ್ಲ. ಹಾನಗಲ್‌ನ ಎಲ್ಲ ವರ್ತಕರು ಸ್ವಯಂ ಪ್ರೇರಿತರಾಗಿ ಬಂದ್‌ಗೆ ಬೆಂಬಲ ನೀಡಿದ್ದು ಅವರಿಗೆ ಗೊತ್ತಾಗಬೇಕಿತ್ತು’ ಎಂದರು.
‘ಹಾನಗಲ್ ಬಂದ್‌ಗೂ ಮುನ್ನವೇ ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸಿ ಜನರ ಸಮಸ್ಯೆಗಳ ಆಲಿಸಬೇಕಿತ್ತು. ನಮ್ಮ ಸಮಿತಿ ಪಕ್ಷಾತೀತ, ಇದರಲ್ಲಿ ರಾಜಕೀಯ ಮಾಡುವ ಪ್ರಶ್ನೆಯೇ ಇಲ್ಲ. ನಾಗರಿಕ ಸಮಾಜಕ್ಕೆ ತೊಂದರೆ ಕೊಡುವ ದುಷ್ಟ ಶಕ್ತಿಗಳ ವಿರುದ್ಧ ಸಮಿತಿ ಹೋರಾಟ ಮುಂದುವರಿಸುತ್ತದೆ’ ಎಂದರು.
ಕಾಲಾವಕಾಶ ಕೇಳಿರುವ ಎಸ್‌ಪಿ: ಸಮಿತಿಯ ರಾಜು ಗೌಳಿ ಮಾತನಾಡಿ, ‘ಹಾನಗಲ್ ಬಂದ್ ನಂತರ, ಶಿಗ್ಗಾವಿಯಲ್ಲಿ ಎಸ್‌ಪಿ ಅವರು ಸಭೆ ನಡೆಸಿದರು. ಜನರ ಸಮಸ್ಯೆಗಳನ್ನು ಹಂತ ಹಂತವಾಗಿ ಈಡೇರಿಸಲು ಒಂದು ತಿಂಗಳ ಕಾಲಾವಕಾಶ ಪಡೆದುಕೊಂಡಿದ್ದಾರೆ’ ಎಂದರು.
‘ಗಾಂಜಾ, ಜೂಜು, ಮಟ್ಕಾ, ವಿದ್ಯಾರ್ಥಿನಿಯರಿಗೆ ಕಿರುಕುಳ, ಗೂಂಡಾಗಿರಿ ಸೇರಿದಂತೆ ಎಲ್ಲವನ್ನೂ ಎಸ್‌ಪಿಗೆ ತಿಳಿಸಲಾಗಿದೆ. ಒಂದು ತಿಂಗಳು ಕಾದು ನೋಡಿ, ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಸಮಿತಿಯ ಗುರುರಾಜ ನಿಂಗೋಜಿ, ಅನಂತವಿಕಾಸ ನಿಂಗೋಜಿ, ನಾಗೇಂದ್ರ ತುಮರಿಕೊಪ್ಪ, ಯಲ್ಲಪ್ಪ ಶೇರಖಾನೆ, ಗಣೇಶ ಮೂಡ್ಲಿಯವರ, ರಾಮು ಯಳ್ಳೂರ, ಬಾಳಾರಾಮ ಗುರ್ಲಹೊಸೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.