ADVERTISEMENT

ಮತದಾರರನ್ನು ಆಮಿಷಕ್ಕೆ ಪ್ರಚೋದಿಸುತ್ತಿರುವ ಡಿಕೆಶಿ: ಸಚಿವ ಮುನಿರತ್ನ

ತೋಟಗಾರಿಕಾ ಸಚಿವ ಮುನಿರತ್ನ ಆರೋಪ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 14:45 IST
Last Updated 21 ಅಕ್ಟೋಬರ್ 2021, 14:45 IST
ಸಚಿವ ಮುನಿರತ್ನ 
ಸಚಿವ ಮುನಿರತ್ನ    

ಹಾವೇರಿ: ‘ಬಿಜೆಪಿಯ ನೋಟು ತೆಗೆದುಕೊಂಡು, ಕಾಂಗ್ರೆಸ್‌ಗೆ ಓಟು ಕೊಡಿ’ ಎಂದು ಹೇಳುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಮತದಾರರನ್ನು ಆಮಿಷಕ್ಕೆ ಪ್ರಚೋದಿಸುತ್ತಿದ್ದಾರೆ. ಇದು ಚುನಾವಣೆ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಲ್ಲವೇ? ಎಂದು ತೋಟಗಾರಿಕಾ ಸಚಿವ ಮುನಿರತ್ನ ಪ್ರಶ್ನಿಸಿದರು.

ಹಾನಗಲ್‌ ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಶಿರಾ ಮತ್ತು ಆರ್‌.ಆರ್‌.ನಗರ ಉಪಚುನಾವಣೆಯಲ್ಲೂ ಡಿ.ಕೆ.ಶಿವಕುಮಾರ್‌ ಇದೇ ರೀತಿ ಮತದಾರರನ್ನು ಪ್ರಚೋದಿಸುತ್ತಿದ್ದರು. ನಮ್ಮನ್ನು ಗೆಲ್ಲಿಸಿದರೆ ಕ್ಷೇತ್ರಕ್ಕೆ ಏನು ಮಾಡುತ್ತೇವೆ ಎಂಬುದನ್ನು ಹೇಳುವುದನ್ನು ಬಿಟ್ಟು ಮತದಾರರು ಅಡ್ಡದಾರಿ ಹಿಡಿಯಲು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಬಗ್ಗೆ ಜೆಡಿಎಸ್‌ ನಾಯಕರು ಲಘುವಾಗಿ ಮಾತನಾಡುತ್ತಿದ್ದಾರೆ. ಬಿಜೆಪಿಯೊಂದಿಗೆ ಸಮ್ಮಿಶ್ರ ಸರ್ಕಾರ ರಚನೆ ಮಾಡುವಾಗ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಏನು ಎಂಬುದು ಗೊತ್ತಿರಲಿಲ್ಲವೇ? ಎಂದು ತಿರುಗೇಟು ನೀಡಿದರು. ಸಿದ್ದರಾಮಯ್ಯ ಮತ್ತು ಡಿಕೆಶಿಯನ್ನು ಕೆಲವರು ‘ಜೋಡೆತ್ತು’ ಎಂದು ಬಿಂಬಿಸುತ್ತಿದ್ದಾರೆ. ಅವು ಜೋಡೆತ್ತುಗಳಲ್ಲ, ಅವಳಿ ದೋಣಿಗಳು. ಬೇರೆ ಬೇರೆ ದಿಕ್ಕಿನಲ್ಲಿ ಚಲಿಸುತ್ತವೆ. ನಾವೆಲ್ಲರೂ ‘ಬಿಜೆಪಿ’ ಎಂಬ ಹಡಗಿನಲ್ಲಿ ಪ್ರಯಾಣ ಮಾಡುತ್ತೇವೆ ಎಂದು ಹೇಳಿದರು.

ADVERTISEMENT

ಜೆಡಿಎಸ್‌ ಅನ್ನು ಬಿಜೆಪಿಯ ಬಿ ಟೀಮ್‌ ಎನ್ನುವ ಆರೋಪವಿದೆಯಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ, ‘ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ಇನ್ನೊಂದು ಪಕ್ಷದಿಂದ ಲಾಭ ಮಾಡಿಕೊಳ್ಳುವ ಅಗತ್ಯವಿಲ್ಲ. ಜೆಡಿಎಸ್‌ ಮತಗಳಿಗೂ ನಮಗೂ ಸಂಬಂಧವಿಲ್ಲ. ನಾವು ಮತದಾರರ ಬಳಿ ಮಾತ್ರ ಮತಯಾಚನೆ ಮಾಡುತ್ತೇವೆ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.