ಹಾನಗಲ್: ತಾಲ್ಲೂಕಿನ ಕರಗುದರಿ ಬಳಿ ಹೊಸದಾಗಿ ಸ್ಥಾಪನೆಯಾದ ಟೋಲ್ ಗೇಟ್‌ನಲ್ಲಿ ಸೋಮವಾರದಿಂದ ವಾಹನಗಳ ಶುಲ್ಕ ಸಂಗ್ರಹಣೆ ಶುರುವಾಗಿದ್ದು, ಹದಗೆಟ್ಟ ಹೆದ್ದಾರಿಗೆ ಸುಂಕವೇಕೆ ಎಂದು ಈ ರಸ್ತೆಯಲ್ಲಿ ಓಡಾಡುವವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತಡಸ–ಶಿವಮೊಗ್ಗ ರಸ್ತೆಗೆ ಹಾನಗಲ್ ಹೊರಭಾಗದ ಕರಗುದರಿ ಕ್ರಾಸ್ ಬಳಿಯಲ್ಲಿ ಟೋಲ್‌ಗೇಟ್ ಸ್ಥಾಪಿಸುವ ಪ್ರಕ್ರಿಯೆಗಳ ಆರಂಭದಿಂದಲೂ ಜನರ ವಿರೋಧ ವ್ಯಕ್ತವಾಗಿತ್ತು. ವಿವಿಧ ಸಂಘಟನೆಗಳಿಂದ ಹಲವಾರು ಬಾರಿ ಪ್ರತಿಭಟನೆ ನಡೆದಿದ್ದವು.
ಜನರ ವಿರೋಧದ ನಡುವೆಯೂ ಟೋಲ್ ಗೇಟ್ ಸ್ಥಾಪನೆಯಾಗಿ ಸುಂಕ ವಸೂಲಿ ನಡೆದಿರುವುದು ಈ ಭಾಗದ ಜನರಲ್ಲಿ ಅಸಮಾಧಾನ ಬುಗಿಲೇಳಲು ಕಾರಣವಾಗಿದೆ. ಮಂಗಳವಾರ ಟೋಲ್ ಗೇಟ್ ಸ್ಥಳದಲ್ಲಿ ಇಲ್ಲಿನ ವಿವಿಧ ಸಂಘಟನೆಗಳ ಪ್ರಮುಖರು ಮತ್ತು ಖಾಸಗಿ ವಾಹನ ಚಾಲಕರ ಸಂಘದವರು ಪ್ರತಿಭಟನೆ ನಡೆಸಿದರು.
ಸುಮಾರು 3 ಗಂಟೆ ಟೋಲ್‌ಗೇಟ್ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ಓಡಾಡುವ ವಾಹನಗಳಿಗೆ ಶುಲ್ಕ ಪಡೆಯದಂತೆ ಟೋಲ್ ಸಿಬ್ಬಂದಿಗೆ ಪ್ರತಿಭಟನಾ ನಿರತರು ತಾಕೀತು ಮಾಡಿದರು. ಸ್ಥಳಕ್ಕೆ ಆಗಮಿಸಿದ ಕೆಆರ್‌ಡಿಸಿಎಲ್ ಅಧಿಕಾರಿ ದಯಾನಂದ ಅವರಿಗೆ ಮನವಿ ಸಲ್ಲಿಸಿದರು.
ಈ ಭಾಗದ ಜನರ ಪ್ರತಿಭಟನೆಯ ವಿಷಯವನ್ನು ಇಲಾಖೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದು ಅಧಿಕಾರಿ ದಯಾನಂದ ಹೇಳಿದರು.
ವಿವಿಧ ಸಂಘಟನೆಯ ಪ್ರಮುಖರಾದ ರಾಮನಗೌಡ ಪಾಟೀಲ, ರಾಮು ಯಳ್ಳೂರ, ಕುಮಾರ ಹತ್ತಿಕಾಳ, ಚಂದ್ರು ಮಲಗುಂದ, ಯಲ್ಲಪ್ಪ ಶೇರಖಾನೆ, ಸಿ.ಮಂಜುನಾಥ, ನಾಗರಾಜ ಪೂಜಾರ, ರವಿಕುಮಾರ ಎಚ್, ಹನುಮಂತಪ್ಪ ಕೋಣನಕೊಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.