ಹಾನಗಲ್: ಇಲ್ಲಿಯ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ನಡೆದ ಲೋಕಾಯುಕ್ತ ಪೊಲೀಸರ ಜನಸಂಪರ್ಕ ಸಭೆಯಲ್ಲಿ 16 ದೂರುಗಳು ಸಲ್ಲಿಕೆಯಾದವು.
‘ಶಿವಮೊಗ್ಗ – ತಡಸ ರಸ್ತೆಯ ಕರಗುದರಿ ಕ್ರಾಸ್‌ನಲ್ಲಿ ಸ್ಥಾಪಿಸಲಾದ ಟೋಲ್‌ಗೇಟ್ ಅಕ್ರಮವಾಗಿದ್ದು, ಅದನ್ನು ತೆರವು ಮಾಡಬೇಕು’ ಎಂದು ಜನರು ಅರ್ಜಿ ಸಲ್ಲಿಸಿದರು.
‘ಹಳೆಯ ರಸ್ತೆಗೆ ಹೊಸ ಕರವೆಂದು ಟೋಲ್‌ಗೇಟ್ ಸ್ಥಾಪಿಸಲಾಗಿದೆ. ಇದಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿತ್ತು. ಅದನ್ನು ಲೆಕ್ಕಿಸದೇ ಟೋಲ್ ಸಂಗ್ರಹಣೆ ನಡೆಸಲಾಗುತ್ತಿದೆ. ಇದು ನಿಯಮಬಾಹಿರ’ ಎಂದು ಜನರು ದೂರಿದರು.
ಮದ್ಯ ಅಕ್ರಮ ಮಾರಾಟ, ವಿದ್ಯಾರ್ಥಿ ನಿಲಯಗಳ ನಿರ್ವಹಣೆಯಲ್ಲಿ ಲೋಪ, ತಾಲ್ಲೂಕು ಪಂಚಾಯಿತಿಯ ವಾಣಿಜ್ಯ ಮಳಿಗೆಗಳ ವಿಚಾರಗಳ ಬಗ್ಗೆಯೂ ಜನರು ದೂರು ನೀಡಿದರು.
ಕೆರೆ ಒತ್ತುವರಿ, ಕಂದಾಯ ಭೂ ಅಳತೆ, ರಸ್ತೆ ಸೇರಿದಂತೆ ಹಲವು ವೈಯಕ್ತಿಕ ಸಮಸ್ಯೆಗಳ ಬಗ್ಗೆಯೂ ಜನರು ಅರ್ಜಿ ಸಲ್ಲಿಸಿದರು.
‘ಗ್ರಾಮೀಣ ಭಾಗದಲ್ಲಿ ಮದ್ಯ ಅಕ್ರಮ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಸಣ್ಣಪುಟ್ಟ ಅಂಗಡಿಯಲ್ಲೂ ಮದ್ಯ ಮಾರಲಾಗುತ್ತಿದೆ. ಇದನ್ನು ತಡೆಯಬೇಕಾದ ಅಬಕಾರಿ ಇಲಾಖೆ ಮೌನವಾಗಿದೆ’ ಎಂದು ಜನರು ದೂರಿದರು.
‘ಪಟ್ಟಣದ ತಾಲ್ಲೂಕು ಪಂಚಾಯಿತಿಯ ವಾಣಿಜ್ಯ ಮಳಿಗೆಗಳ ಬಾಡಿಗೆ ಅವಧಿ ಮುಗಿದು 10 ವರ್ಷವಾಗಿದೆ. ಮಳಿಗೆಗಳ ಮರು ಹರಾಜು ಆಗಿಲ್ಲ. ಈಗಿರುವ ಬಾಡಿಗೆದಾರರು ಮತ್ತೊಬ್ಬರಿಗೆ ಹೆಚ್ಚಿನ ದರಕ್ಕೆ ಮರು ಬಾಡಿಗೆ ನೀಡಿ ಹಣ ಪಡೆಯುತ್ತಿದ್ದಾರೆ. ಇದು ಅಕ್ರಮ’ ಎಂದು ಜನರು ದೂರಿದರು.
ಲೋಕಾಯುಕ್ತ ಡಿವೈಎಸ್‌ಪಿ ಮಧುಸೂದನ, ಇನ್‌ಸ್ಪೆಕ್ಟರ್ ದಾದಾವಲಿ, ಮಂಜುನಾಥ ಪಂಡಿತ, ಬಸವರಾಜ ಹಳವಣ್ಣನವರ, ತಹಶೀಲ್ದಾರ್ ರೇಣುಕಾ ಎಸ್. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.