ADVERTISEMENT

ಹಾನಗಲ್: ಪಾಳುಬಿದ್ದ ಈಜುಕೊಳದ ಕಾಯಕಲ್ಪಕ್ಕೆ ಚಿಂತನೆ

ಮಾರುತಿ ಪೇಟಕರ
Published 11 ಜನವರಿ 2026, 2:28 IST
Last Updated 11 ಜನವರಿ 2026, 2:28 IST
ಹಾನಗಲ್‌ ತಾಲ್ಲೂಕು ಕ್ರೀಡಾಂಗಣದಲ್ಲಿರುವ ಈಜುಕೊಳದ ದುಸ್ಥಿತಿ 
ಹಾನಗಲ್‌ ತಾಲ್ಲೂಕು ಕ್ರೀಡಾಂಗಣದಲ್ಲಿರುವ ಈಜುಕೊಳದ ದುಸ್ಥಿತಿ    

ಹಾನಗಲ್: ಇಲ್ಲಿಯ ತಾಲ್ಲೂಕು ಕ್ರೀಡಾಂಗಣದಲ್ಲಿರುವ ಈಜುಕೊಳ ನಿರ್ಲಕ್ಷಕ್ಕೆ ಒಳಗಾಗಿ 8 ವರ್ಷಗಳಿಂದ ಪಾಳು ಬಿದ್ದಿದೆ. ಇದರ ದುರಸ್ತಿಗೆ ಜನರು ಆಗ್ರಹಿಸುತ್ತಿದ್ದಾರೆ. ಜನರ ಒತ್ತಾಯದಂತೆ ಈಜುಕೊಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂಬ ಚಿಂತನೆ ಮುನ್ನೆಲೆಗೆ ಬಂದಿದೆ.

ಇಲ್ಲಿನ ಪುರಸಭೆಯಲ್ಲಿ ಇತ್ತೀಚೆಗೆ ನಡೆದ 2026–27ನೇ ಸಾಲಿನ ಆಯವ್ಯಯ ಮಂಡನೆಯ ಪೂರ್ವಭಾವಿ ಸಭೆಯಲ್ಲಿ ಈಜುಕೊಳದ ಬಗ್ಗೆ ಚರ್ಚೆ ನಡೆಯಿತು. ಈಜುಕೊಳ ಅಭಿವೃದ್ಧಿಗೆ ಜನರು ತಮ್ಮ ಒತ್ತಾಯ ಮಂಡಿಸಿದರು.

ಜನರ ಆಗ್ರಹದಂತೆ ಪುರಸಭೆಯ ಆಯವ್ಯಯದಲ್ಲಿ ಈಜುಕೊಳ ಅಭಿವೃದ್ಧಿ ವಿಷಯ ಸೇರ್ಪಡೆಯಾಗುವ ನಿರೀಕ್ಷೆಯಿದೆ.

ADVERTISEMENT

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಡಿ ಇರುವ ಈಜುಕೊಳ ಸದ್ಯ ಬಂದ್‌ ಸ್ಥಿತಿಯಲ್ಲಿದೆ. ಒಳಗೆ ಪ್ರವೇಶಿಸಿದರೆ, ಪತನಗೊಂಡ ಸಾಮ್ರಾಜ್ಯದ ಕುರುಹುಗಳಂತೆ ಭಾಸವಾಗುತ್ತದೆ.

2017ರಲ್ಲಿ ₹ 2.16 ಕೋಟಿ ವೆಚ್ಚದಲ್ಲಿ ಈಜುಕೋಳ ನಿರ್ಮಾಣ ಮಾಡಲಾಗಿತ್ತು. ಅಂದಿನ ಶಾಸಕ ದಿ. ಮನೋಹರ ತಹಸೀಲ್ದಾರ್‌, ಅಂದಿನ ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವ ಪ್ರಮೋದ್ ಮಧ್ವರಾಜ್‌ ಅವರಿಂದ ಈಜುಕೊಳ ಉದ್ಘಾಟನೆ ಮಾಡಿಸಿದ್ದರು.

ಉದ್ಘಾಟನೆ ಬಳಿಕ ಈಜುಕೊಳ ಸಾರ್ವಜನಿಕರ ಬಳಕೆಗೆ ಸಿಗಲಿಲ್ಲ. ಲೋಕೋಪಯೋಗಿ ಇಲಾಖೆ ಅಡಿಯಲ್ಲಿ ಕಾಮಗಾರಿ ಪೂರ್ಣಗೊಂಡು ಕ್ರೀಡಾ ಇಲಾಖೆಗೆ ಹಸ್ತಾಂತರಗೊಂಡ ಆರಂಭದಲ್ಲಿ ಖಾಸಗಿಯವರಿಗೆ ನಿರ್ವಹಣೆ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆ ಪಡೆದವರಿಂದಲೂ ಈಜುಕೋಳ ನಿರ್ವಹಣೆಯಾಗಲಿಲ್ಲ. ಅಂದಿನಿಂದ ಈ ತನಕ 8 ವರ್ಷದಿಂದ ಈಜುಕೊಳ ಬಾಗಿಲು ಬಂದ್ ಆಗಿದೆ.

ಈಜುಕೊಳದ ಆವರಣದ ಗೋಡೆ ಅಲ್ಲಲ್ಲಿ ಕುಸಿದಿದೆ. ಕಿಡಿಗೇಡಿಗಳು ಆವರಣ ಪ್ರವೇಶಿಸಿ ಮತ್ತಷ್ಟು ಹಾಳು ಮಾಡುತ್ತಿದ್ದಾರೆ. ದುಬಾರಿ ಸಾಮಗ್ರಿಗಳು, ನೀರು ಪಂಪ್‌ ಮಾಡುವ ಸಾಧನಗಳು, ಮೋಟರ್‌ ಕಣ್ಮರೆಯಾಗಿವೆ.

ಆವರಣದಲ್ಲಿನ ಎರಡು ಕೊಳಗಳಲ್ಲಿ ಗಲೀಜು ನೀರು ಸಂಗ್ರಹವಾಗಿದೆ. ದುರ್ನಾತ ಬೀರುತ್ತಿವೆ. ಪಾಚಿ ಕಟ್ಟಿಕೊಂಡಿದೆ. ಮಕ್ಕಳ ಕೊಳ ಒಡೆದುಕೊಂಡಿದೆ. ಟೈಲ್ಸ್‌ಗಳು ಕಿತ್ತಿವೆ. ಕಿಟಕಿ ಗಾಜುಗಳು ಒಡೆದಿವೆ. ಅಲ್ಲಲ್ಲಿ ಪೊದೆ ಬೆಳೆದಿದೆ.

₹8 ಲಕ್ಷ ಮೀಸಲಿಡುವ ಯೋಚನೆ: ‘ಕೋಟಿಗಳ ವೆಚ್ಚದಲ್ಲಿ ನಿರ್ಮಾಣಗೊಂಡ ಈಜುಕೊಳ ಜನರ ಬಳಕೆಗೆ ಲಭ್ಯವಾಗಬೇಕು. ಕ್ರೀಡಾ ಇಲಾಖೆ ಸಹಕರಿಸುತ್ತಿಲ್ಲ. ಹೀಗಾಗಿ, ಪುರಸಭೆಯ ಆಯವ್ಯಯದಲ್ಲಿ ಈಜುಕೊಳ ಸುಧಾರಣೆಗೆ ಕಾಮಗಾರಿ ಕೈಗೆತ್ತಿಕೊಳ್ಳಬೇಕು’ ಎಂದು ಪೂರ್ವಭಾವಿ ಸಭೆಯಲ್ಲಿ ನಿವಾಸಿ ಯಲ್ಲಪ್ಪ ಕಿತ್ತೂರ ಆಗ್ರಹಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಜಗದೀಶ ವೈ.ಕೆ., ‘ಕ್ರೀಡಾ ಇಲಾಖೆಯನ್ನು ಸಂಪರ್ಕಿಸಿ, ಈಜುಕೊಳ ಅಭಿವೃದ್ಧಿಗಾಗಿ ಆಯವ್ಯಯದಲ್ಲಿ ಸುಮಾರು ₹8 ಲಕ್ಷ ಮೀಸಲಿಡುವ ಬಗ್ಗೆ ಯೋಚನೆ ಇದೆ’ ಎಂದು ಹೇಳಿದರು.

ಈಜುಕೊಳ ಮತ್ತೆ ಆರಂಭವಾಗಲಿ: ‘ಈಜು ಪ್ರತಿಯೊಬ್ಬ ವ್ಯಕ್ತಿಗೆ ಅಗತ್ಯದ ಕಲೆ. ಇದರಿಂದ ಆಕಸ್ಮಿಕ ಸಂದರ್ಭಗಳಲ್ಲಿ ಜೀವ ರಕ್ಷಣೆ ಸಾಧ್ಯ. ಪ್ರತಿ ದಿನ ಈಜುವುದು ಉತ್ತಮ ವ್ಯಾಯಾಮವೂ ಹೌದು. ನಾವು ಚಿಕ್ಕವರಿದ್ದಾಗ ಶಾಲೆಗೆ ಬಿಡುವು ಸಿಕ್ಕಾಗ ಇಲ್ಲಿನ ಆನಿಕೆರೆಯಲ್ಲಿ ಈಜು ಮಾಡುತ್ತಿದ್ದೆವು. ಈಗಿನ ಹುಡುಗರಿಗೆ ಆ ಭಾಗ್ಯವಿಲ್ಲ. ಈಗ ಆನಿಕೆರೆ, ಕುಡಿಯುವ ನೀರಿನ ಬಳಕೆಗೆ ಮೀಸಲಾಗಿದೆ. ಪಟ್ಟಣದ ಈಜುಕೊಳ ಮತ್ತೆ ಆರಂಭಗೊಳ್ಳಬೇಕು’ ಎಂದು ಬಸವರಾಜ ಶೀಲವಂತ ಹೇಳಿದರು. 

ಈಜುಕೊಳ ಯಂತ್ರಗಳ ಕೊಠಡಿಯ ಸಾಮಗ್ರಿಗಳನ್ನು ಕಳ್ಳರು ಕದ್ದೊಯ್ದಿರುವುದು
ಈಜುಕೊಳ ದುರಸ್ತಿ ಮತ್ತು ಕ್ರೀಡಾಂಗಣ ಕಾಮಗಾರಿಗಳಿಗಾಗಿ ₹1 ಕೋಟಿ ಅನುದಾನಕ್ಕಾಗಿ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ 
ಲತಾ ಬಿ.ಎಚ್‌. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.