ಹಾವೇರಿ: ಶಿವಮೊಗ್ಗದಿಂದ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸಲು ನಿರ್ಮಿಸಿರುವ ರಾಜ್ಯ ಹೆದ್ದಾರಿಯ ಹಲವು ಕಡೆಗಳಲ್ಲಿ ಡಾಂಬರ್ ಕಿತ್ತು ಹೋಗಿದ್ದು, ಅಲ್ಲಲ್ಲಿ ತಗ್ಗುಗಳು ಬಿದ್ದಿವೆ. ಇಂಥ ಸ್ಥಿತಿಯಲ್ಲಿಯೇ ಜಿಲ್ಲೆಯ ಹಾನಗಲ್ ಪಟ್ಟಣದ ಹೊರವಲಯದಲ್ಲಿ ಟೋಲ್ ಗೇಟ್ ನಿರ್ಮಾಣ ಮಾಡುತ್ತಿರುವುದು, ಸ್ಥಳೀಯರು ವಿರೋಧಕ್ಕೆ ಕಾರಣವಾಗಿದೆ.
ಹಲವು ವರ್ಷಗಳ ಹಿಂದೆ ಶಿವಮೊಗ್ಗ– ತಡಸ ರಾಜ್ಯ ಹೆದ್ದಾರಿ ತೀರಾ ಹದಗೆಟ್ಟಿತ್ತು. ಈ ರಸ್ತೆಯಲ್ಲಿ ಓಡಾಡುವುದು ದುಸ್ತರವಾಗಿತ್ತು. ಆದರೆ, 2018ರ ನಂತರ ರಸ್ತೆಯ ಚಿತ್ರಣವೇ ಬದಲಾಯಿತು. ಸುಸಜ್ಜಿತ ರಸ್ತೆಯಲ್ಲಿ ಶಿವಮೊಗ್ಗ–ತಡಸ–ಹುಬ್ಬಳ್ಳಿ ಸಂಪರ್ಕ ಸಲೀಸಾಯಿತು.
ರಸ್ತೆ ನಿರ್ಮಾಣವಾಗಿ ಏಳು ವರ್ಷಗಳಾಗಿದ್ದು, ಈಗ ಅಲ್ಲಲ್ಲಿ ತಗ್ಗುಗಳು ಕಾಣಿಸಿವೆ. ಶಿವಮೊಗ್ಗ ಜಿಲ್ಲೆಯಿಂದ ಆರಂಭವಾಗಿರುವ ರಾಜ್ಯ ಹೆದ್ದಾರೆ, ಹಾನಗಲ್ ತಾಲ್ಲೂಕಿನ ಗಡಿಯಿಂದ ಹಾವೇರಿ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಇದೇ ರಸ್ತೆ, ಶಿಗ್ಗಾವಿ ತಾಲ್ಲೂಕಿನ ಗ್ರಾಮಗಳಲ್ಲಿ ಹಾದು ತಡಸ ತಲುಪುತ್ತದೆ. ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ವಾಹನಗಳು ಹುಬ್ಬಳ್ಳಿಗೆ ತೆರಳುತ್ತವೆ.
ಈ ಮಾರ್ಗದ ಪೈಕಿ ಹಾನಗಲ್ ಪಟ್ಟಣದಲ್ಲಿ ರಸ್ತೆ ಹದಗೆಟ್ಟಿದೆ. ಬಸ್ ನಿಲ್ದಾಣದಿಂದ ಮಲ್ಲಿಗಾರ ಸರ್ಕಾರಿ ಕಾಲೇಜುವರೆಗಿನ ರಸ್ತೆಯಲ್ಲಿ ತಗ್ಗುಗಳು ಬಿದ್ದಿವೆ. ಹಳ್ಳದ ಮೇಲ್ಸೇತುವೆ ಮೇಲೆಯೂ ರಸ್ತೆ ಭಾಗಶಃ ಹಾಳಾಗಿದೆ. ಮೇಲ್ಸೇತುವೆ ಸಮೀಪದಲ್ಲಿ ಪೆಟ್ರೋಲ್ ಬಂಕ್ ಇದ್ದು, ಅದರ ಎದುರಿನ ರಸ್ತೆಯಲ್ಲಿಯೂ ಅಲ್ಲಲ್ಲಿ ಸಣ್ಣ ತಗ್ಗುಗಳು ಬಿದ್ದಿವೆ.
ಇದೇ ಮೇಲ್ಸೇತುವೆಯಿಂದ 200 ಮೀಟರ್ ಅಂತರದಲ್ಲಿ ಹೊಸದಾಗಿ ಟೋಲ್‌ಗೇಟ್ ನಿರ್ಮಿಸಲಾಗುತ್ತಿದೆ. ರಸ್ತೆಯನ್ನು ಸುಸಜ್ಜಿತ ರೀತಿಯಲ್ಲಿ ಅಭಿವೃದ್ಧಿಪಡಿಸಿ ಟೋಲ್ ವಸೂಲಿ ಮಾಡಿದರೆ ಒಳ್ಳೆಯದು. ರಸ್ತೆ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಸಂದರ್ಭದಲ್ಲಿ ಟೋಲ್ ವಸೂಲಿ ಮಾಡಲು ಹೊರಟಿರುವ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ (ಕೆಆರ್‌ಡಿಸಿಎಲ್) ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ‘ಕ್ರಮೇಣ ಹದಗೆಡುತ್ತಿರುವ ರಸ್ತೆಯಲ್ಲಿ ಓಡಾಡಲು ಟೋಲ್ ಕಟ್ಟಬೇಕಾ’ ಎಂದು ಪ್ರಶ್ನಿಸುತ್ತಿದ್ದಾರೆ.
‘2018ರಲ್ಲಿ ನಿರ್ಮಿಸಲಾದ ರಾಜ್ಯ ಹೆದ್ದಾರಿಯಿಂದ ಸ್ಥಳೀಯ ಜನರಿಗೆ ಹೆಚ್ಚು ಅನುಕೂಲವಾಗಿದೆ. ಆದರೆ, ರಸ್ತೆ ನಿರ್ಮಾಣ ಮಾಡಿದ ಸಂದರ್ಭದಲ್ಲಿಯೇ ಟೋಲ್ ಗೇಟ್ ನಿರ್ಮಾಣ ಮಾಡಿದ್ದರೆ, ಎಲ್ಲರೂ ಒಪ್ಪುತ್ತಿದ್ದರು. ಇದೀಗ ರಸ್ತೆಯು ಹಲವು ಕಡೆಗಳಲ್ಲಿ ಹಾಳಾಗಿದೆ. ಕ್ರಮೇಣ ಹೆದಗೆಡುತ್ತಿರುವ ರಸ್ತೆಯಲ್ಲಿ ಓಡಾಡುವವರಿಂದ ಟೋಲ್ ಸಂಗ್ರಹಿಸಲು ಮುಂದಾಗಿರುವುದು ಖಂಡನೀಯ’ ಎಂದು ಹಾನಗಲ್ ನಿವಾಸಿ ವಿಠ್ಠಲ್ ಹೇಳಿದರು.
‘ರಸ್ತೆಯನ್ನು ಸುಸಜ್ಜಿತ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು. ಹೆದಗೆಡುತ್ತಿರುವ ಸ್ಥಳಗಳಲ್ಲಿ ಮರು ಡಾಂಬರೀಕರಣ ಮಾಡಬೇಕು. ಸ್ಥಳೀಯರ ಅಭಿಪ್ರಾಯ ಪಡೆದುಕೊಂಡ ನಂತರವೇ ಟೋಲ್‌ಗೇಟ್ ಆರಂಭಿಸಬೇಕು’ ಎಂದು ತಿಳಿಸಿದರು.
ಅವೈಜ್ಞಾನಿಕ ಟೋಲ್‌ಗೇಟ್: ಟೆಂಡರ್ ನಿಯಮಗಳನ್ನು ಉಲ್ಲಂಘಿಸಿ ಕರಗುದರಿ ಗ್ರಾಮದಿಂದ ಬಹುದೂರದಲ್ಲಿ ಟೋಲ್‌ಗೇಟ್ ನಿರ್ಮಾಣ ಮಾಡುತ್ತಿರುವುದು ಅವೈಜ್ಞಾನಿಕವೆಂದು ಜನರು ದೂರುತ್ತಿದ್ದಾರೆ. ಟೋಲ್‌ಗೇಟ್ ನಿರ್ಮಾಣದ ಮಾಹಿತಿ ತಿಳಿದಿದ್ದ ಕೆಲವರು, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಮನವಿಗಳು ಯಾವುದೇ ಫಲ ನೀಡಿಲ್ಲ. ‘ಟೋಲ್‌ಗೇಟ್ ನಿರ್ಮಾಣ ಮಾಡಿಯೇ ತೀರುತ್ತೇವೆ’ ಎಂದು ಕೆಆರ್‌ಡಿಸಿಎಲ್ ಅಧಿಕಾರಿಗಳು ಹೇಳುತ್ತಿರುವುದಾಗಿ ಜನರು ದೂರುತ್ತಿದ್ದಾರೆ.
‘ರಾಜಾರೋಷವಾಗಿ ಅನಧಿಕೃತ ಜಾಗದಲ್ಲಿ ಟೋಲ್‌ಗೇಟ್ ನಿರ್ಮಾಣ ಮಾಡಲಾಗುತ್ತಿದೆ. ಇದರ ವಿರುದ್ಧ ಕೆಲವರು ಹೋರಾಟ ಆರಂಭಿಸಿದ್ದಾರೆ. ಟೋಲ್‌ಗೇಟ್ ಆರಂಭವಾದರೆ, ವಾಹನಗಳಲ್ಲಿ ಸಂಚರಿಸುವ ಬಹುತೇಕರ ಜೇಬಿಗೆ ಕತ್ತರಿ ಬೀಳಲಿದೆ. ಹಾನಗಲ್ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು, ಟೋಲ್ ಗೇಟ್ ವಿರುದ್ಧ ಹೋರಾಟ ನಡೆಸಬೇಕಿದೆ’ ಎಂದು ಹಾನಗಲ್ ನಿವಾಸಿ ಕೊಟ್ರೇಶ್ ಹೇಳಿದರು.
‘ಟೋಲ್ ಗೇಟ್ ನಿರ್ಮಾಣ ಸ್ಥಗಿತಗೊಳಿಸುವಂತೆ ತಹಶೀಲ್ದಾರ್ ರೇಣುಕಾ ಅವರಿಗೆ ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಕೆಆರ್‌ಡಿಸಿಎಲ್ ಅಧಿಕಾರಿಗಳ ಗಮನಕ್ಕೆ ತರಲಾಗಿದೆಯೆಂದು ತಹಶೀಲ್ದಾರ್ ಅವರು ಉತ್ತರಿಸುತ್ತಿದ್ದಾರೆ. ಟೋಲ್ ಗೇಟ್ ನಿರ್ಮಾಣಕ್ಕೆ ಜನರ ವಿರೋಧವಿದೆ ಎಂಬುದು ಗೊತ್ತಿದ್ದರೂ ಅದರ ನಿರ್ಮಾಣ ತಡೆಯಲು ಅಧಿಕಾರಿಗಳು ಪ್ರಯತ್ನಿಸುತ್ತಿಲ್ಲ. ಮುಂಬರುವ ದಿನಗಳಲ್ಲಿ ಟೋಲ್ ಗೇಟ್ ನಿರ್ವಹಣೆಗಾರರು, ಕೆಆರ್‌ಡಿಸಿಎಲ್ ಹಾಗೂ ಸ್ಥಳೀಯ ಅಧಿಕಾರಿಗಳ ವಿರುದ್ಧವೂ ಜನರು ಹೋರಾಟ ಮಾಡಲಿದ್ದಾರೆ’ ಎಂದು ತಿಳಿಸಿದರು.
ತರಾತುರಿಯಲ್ಲಿ ಡಾಂಬರೀಕರಣ: ಟೋಲ್‌ಗೇಟ್ ನಿರ್ಮಾಣಕ್ಕೂ ಕೆಲದಿನಗಳ ಮುಂಚೆಯಷ್ಟೇ ಕರಗುದರಿ ವೃತ್ತದಿಂದ ನಿಟಗಿನಕೊಪ್ಪ–ನೆಲ್ಲಿಕೊಪ್ಪ ವೃತ್ತದವರೆಗೂ ಹೊಸದಾಗಿ ತರಾತುರಿಯಲ್ಲಿ ಡಾಂಬರೀಕರಣ ಮಾಡಲಾಗಿದೆ. ಮೇಲಿಂದ ಮೇಲೆ ಡಾಂಬರ್ ಹಾಕಿ, ಮೇಲ್ನೋಟಕ್ಕೆ ಚೆಂದ ಕಾಣುವಂತೆ ಮಾಡಲಾಗಿದೆ. ಈ ರಸ್ತೆಯಲ್ಲಿ ವಾಹನಗಳ ಓಡಾಟದ ದಟ್ಟಣೆ ಹೆಚ್ಚಾದರೆ, ಪುನಃ ಡಾಂಬರ್ ಕಿತ್ತುಹೋಗುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ.
‘ರಸ್ತೆ ನಿರ್ಮಾಣ ಮಾಡಿ 7 ವರ್ಷವಾದರೂ ಒಂದು ಬಾರಿಯೂ ಮರು ಡಾಂಬರೀಕರಣ ಮಾಡಿರಲಿಲ್ಲ. ಈಗ ಟೋಲ್‌ಗೇಟ್ ನಿರ್ಮಾಣಕ್ಕಾಗಿ ಡಾಂಬರೀಕರಣ ಮಾಡಲಾಗಿದೆ. ಅದು ಸಹ ಭಾಗಶಃ ಮಾತ್ರ. ಉಳಿದ ಕಡೆಗಳಲ್ಲಿ ಹಳೇ ಡಾಂಬರ್ ಮಾತ್ರವಿದೆ. ಟೋಲ್‌ಗೇಟ್ ಆರಂಭವಾದ ನಂತರ, ಮತ್ತಷ್ಟು ಕಡೆಗಳಲ್ಲಿ ಡಾಂಬರ್ ಕಿತ್ತು ಹೋದರೆ ಸರಿಪಡಿಸುವವರು ಯಾರು’ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.
ಜನರ ಕೂಗಿಗೆ ಕೆಆರ್‌ಡಿಸಿಎಲ್ ಅಧಿಕಾರಿಗಳು ಸ್ಪಂದಿಸಬೇಕು. ಅನಧಿಕೃತ ಟೋಲ್‌ಗೇಟ್ ನಿರ್ಮಾಣ ಬಂದ್ ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕುರಾಜಶೇಖರ ಕೆಂಬಾವಿ ಹಾನಗಲ್ ನಿವಾಸಿ
‘ಜನರಿಗೆ ಹೊರೆಯಾಗಲಿರುವ ಟೋಲ್ ಗೇಟ್ ನಿರ್ಮಾಣಕ್ಕೆ ಕೆಲ ಜನಪ್ರತಿನಿಧಿಗಳು ಸಹಕಾರ ನೀಡುತ್ತಿದ್ದಾರೆ’ ಎಂದು ಜನರು ದೂರುತ್ತಿದ್ದಾರೆ. ‘ಯಾವುದೇ ಸಣ್ಣ ಸುಳಿವು ಇಲ್ಲದಂತೆ ಟೋಲ್‌ಗೇಟ್ ನಿರ್ಮಾಣ ಕೆಲಸ ಆರಂಭಿಸಲಾಗಿತ್ತು. ಸ್ಥಳದಲ್ಲಿ ಕಲ್ಲು ಜೋಡಣೆ ಕೆಲಸವನ್ನು ನೋಡಿ ಕೆಲವರು ಮಾಹಿತಿ ಪಡೆದುಕೊಂಡಿದ್ದರು. ಟೋಲ್‌ಗೇಟ್ ನಿರ್ಮಾಣವನ್ನು ವಿರೋಧಿಸಿ ಮನವಿ ಸಲ್ಲಿಸಿದ್ದರು. ಇದಾದ ನಂತರವೂ ಟೋಲ್‌ಗೇಟ್ ಕೆಲಸ ನಿರ್ಮಾಣಗೊಂಡು ಅಂತಿಮ ಹಂತಕ್ಕೆ ಬಂದಿದೆ’ ಎಂದು ಹಾನಗಲ್ ನಿವಾಸಿಗಳು ಹೇಳಿದರು.
‘ಜನರಿಂದ ಜನರಿಗಾಗಿ ಜನರಿಗೋಸ್ಕರ ಎನ್ನುವ ಜನಪ್ರತಿನಿಧಿಗಳು ಟೋಲ್‌ಗೇಟ್ ಪರವಾಗಿ ನಿಂತಿರುವುದು ದುರದೃಷ್ಟಕರ. ಟೋಲ್‌ಗೇಟ್ ಆರಂಭವಾದರೆ ಜನಪ್ರತಿನಿಧಿಗಳು ತಮ್ಮ ಪ್ರಭಾವ ಬಳಸಿ ಉಚಿತವಾಗಿ ಸಂಚರಿಸುತ್ತಾರೆ. ಸಾಮಾನ್ಯ ಜನರು ಹಾಗೂ ಟ್ಯಾಕ್ಸಿ ಚಾಲಕರು ಹಣ ಕೊಟ್ಟು ಸಂಚರಿಸಬೇಕಾಗುತ್ತದೆ’ ಎಂದು ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.