ಹಾವೇರಿ: ಜಿಲ್ಲೆಯ ಹಾನಗಲ್ ಹೊರವಲಯದಲ್ಲಿ ಟೋಲ್‌ಗೇಟ್ ನಿರ್ಮಾಣ ಕೆಲಸ ಮುಕ್ತಾಯಗೊಂಡಿದ್ದು, ಸ್ಥಳೀಯರ ವಿರೋಧದ ನಡುವೆಯೇ ಜೂನ್ 16ರಿಂದ ಶುಲ್ಕ ಸಂಗ್ರಹ ಪ್ರಕ್ರಿಯೆ ಆರಂಭಿಸಲು ಸಿದ್ಧತೆ ನಡೆದಿದೆ.
ಶಿವಮೊಗ್ಗದಿಂದ ತಡಸಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಹಾದು ಹೋರಿವು ಹಾನಗಲ್ ತಾಲ್ಲೂಕಿನ ಕರಗುದರಿ ಬಳಿ ಟೋಲ್‌ಗೇಟ್ ನಿರ್ಮಿಸಲಾಗಿದೆ. ಈ ಸ್ಥಳದಲ್ಲಿ ಟೋಲ್‌ಗೇಟ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದ ಸ್ಥಳೀಯರು, ಆರಂಭದಲ್ಲಿಯೇ ಹೋರಾಟ ಶುರು ಮಾಡಿದ್ದರು.
ಟೋಲ್ ಸಂಗ್ರಹ ಗುತ್ತಿಗೆ ಪಡೆದಿರುವ ಕಂಪನಿ ಮುಖ್ಯಸ್ಥರು ಹಾಗೂ ಹೋರಾಟಗಾರರ ನಡುವೆ ತಹಶೀಲ್ದಾರ್ ರೇಣುಕಾ ನೇತೃತ್ವದಲ್ಲಿ ಸಭೆಯು ನಡೆದಿತ್ತು. ಸಭೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತಕ್ಕೆ (ಕೆಆರ್‌ಡಿಸಿಎಲ್) ಅಧಿಕಾರಿಗಳು, ‘ಸಾಲ ಮಾಡಿ ರಸ್ತೆ ನಿರ್ಮಿಸಲಾಗಿದೆ. ಸಾಲ ತೀರಿಸಲು ಟೋಲ್‌ಗೇಟ್ ಅನಿವಾರ್ಯ. ಸರ್ಕಾರದ ಆದೇಶದಂತೆ ಟೋಲ್‌ಗೇಟ್ ಆರಂಭಿಸಲಾಗುತ್ತಿದೆ’ ಎಂದಿದ್ದರು. ಹಾನಗಲ್ ವಿಧಾನಸಭಾ ಕ್ಷೇತ್ರದ ಜನರಿಗೆ ಶುಲ್ಕದಿಂದ ವಿನಾಯಿತಿ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದರು.
ಇದಾದ ನಂತರ, ಹಲವು ದಿನಗಳವರೆಗೆ ಟೋಲ್‌ಗೇಟ್ ನಿರ್ಮಾಣ ಕೆಲಸ ಸ್ಥಗಿತಗೊಳಿಸಲಾಗಿತ್ತು. ಕೆಲದಿನಗಳ ಹಿಂದೆಯಷ್ಟೇ ಟೋಲ್‌ಗೇಟ್ ನಿರ್ಮಾಣ ಕೆಲಸವನ್ನು ಆರಂಭಿಸಿ, ಇದೀಗ ಪೂರ್ಣಗೊಳಿಸಲಾಗಿದೆ. ಜೂನ್ 16ರಿಂದ ಟೋಲ್‌ಗೇಟ್ ಶುಲ್ಕ ಸಂಗ್ರಹ ಆರಂಭಿಸಲಾಗುವುದೆಂದು ಕೆಆರ್‌ಡಿಸಿಎಲ್ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದಾರೆ.
‘ಲೋಕೋಪಯೋಗಿ ಇಲಾಖೆ ಹಾಗೂ ಕೆಶಿಫ್‌ನಿಂದ ನಿರ್ಮಿಸಿರುವ ರಾಜ್ಯ ಹೆದ್ದಾರಿಯಲ್ಲಿ ಟೋಲ್‌ಗೇಟ್ ನಿರ್ಮಿಸಿ ಟೋಲ್ ವಸೂಲಿ ಮಾಡುವ ಜವಾಬ್ದಾರಿಯನ್ನು ಕೆಆರ್‌ಡಿಸಿಎಲ್‌ಗೆ ವಹಿಸಲಾಗಿದೆ. ದಾವಣಗೆರೆಯ ಜ್ಯೋತಿಪ್ರಕಾಶ್ ಕೆ.ಎಂ. ಅವರಿಗೆ ಶುಲ್ಕ ವಸೂಲಿಯ ಗುತ್ತಿಗೆ ನೀಡಲಾಗಿದೆ. ಸರ್ಕಾರದ ನಿರ್ದೇಶನದಂತೆ ಶುಲ್ಕ ನಿಗದಿಪಡಿಸಿ ಪಟ್ಟಿ ಬಿಡುಗಡೆ ಮಾಡಲಾಗಿದೆ’ ಎಂದು ಕೆಆರ್‌ಡಿಸಿಎಲ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಹಾನಗಲ್ ಗಡಿಯಿಂದ ತಡಸ ನಡುವಿನ 43.46 ಕಿ.ಮೀ. ವ್ಯಾಪ್ತಿಯಲ್ಲಿ ಟೋಲ್ ಸಂಗ್ರಹ ಮಾಡಲು ಕರಗುದರಿ ಬಳಿ ಟೋಲ್‌ಗೇಟ್ ನಿರ್ಮಿಸಲಾಗಿದೆ.
ತಿಂಗಳ ಪಾಸ್‌ಗೆ ಒಪ್ಪಿಗೆ: ‘ಹಾನಗಲ್ ತಾಲ್ಲೂಕಿನ ಹಲವು ಹಳ್ಳಿಗಳ ಜನರು, ಕರಗುದರಿ ಮೂಲಕ ತಾಲ್ಲೂಕು ಕೇಂದ್ರಕ್ಕೆ ನಿತ್ಯವೂ ಓಡಾಡುತ್ತಾರೆ. ಟೋಲ್‌ಗೇಟ್‌ನಿಂದಾಗಿ ಆರ್ಥಿಕ ಹೊರೆಯಾಗಲಿದೆ. ಸ್ಥಳೀಯರಿಗೆ ಟೋಲ್‌ನಲ್ಲಿ ವಿನಾಯಿತಿ ನೀಡಬೇಕು’ ಎಂದು ಸ್ಥಳೀಯರು ದೂರಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಕೆಆರ್‌ಡಿಸಿಎಲ್ ಅಧಿಕಾರಿಗಳು, ‘ಗುತ್ತಿಗೆದಾರರ ಮೂಲಕ ತಿಂಗಳ ಪಾಸ್ ನೀಡಲು ಒಪ್ಪಿಗೆ ನೀಡಲಾಗಿದೆ. ನಿರ್ದಿಷ್ಟ ಪ್ರವೇಶದ ಪಾಸ್‌ಗಳ ಮೂಲಕ ಸ್ಥಳೀಯರು, ಅನಿಯಮಿತವಾಗಿ ಸಂಚರಿಸಲು ಅವಕಾಶವಿದೆ. ಟ್ರ್ಯಾಕ್ಟರ್, ಬೈಕ್‌ಗಳಿಗೆ ಉಚಿತ ಪ್ರವೇಶವಿದೆ. ಎರಡು ಗ್ರಾಮಗಳ ಜನರ ಓಡಾಟಕ್ಕೂ ವಿನಾಯಿತಿ ನೀಡಲು ಚಿಂತನೆ ನಡೆದಿದೆ’ ಎಂದು ಹೇಳಿದರು.
ಹೋರಾಟಕ್ಕೆ ಸಿದ್ಧತೆ: ‘ಟೋಲ್‌ಗೇಟ್ ಆರಂಭದ ಮುನ್ಸೂಚನೆ ಸಿಗುತ್ತಿದ್ದಂತೆ ಹೋರಾಟ ಆರಂಭಿಸಿದ್ದೆವು. ಕಲ್ಲುಗಳನ್ನು ಕಿತ್ತು ಹಾಕಿ ಆಕ್ರೋಶ ಹೊರಹಾಕಿದ್ದೆವು. ಈಗ ವಿರೋಧದ ನಡುವೆಯೇ ಟೋಲ್‌ಗೇಟ್ ಆರಂಭಿಸುತ್ತಿದ್ದಾರೆ. ಟೋಲ್‌ಗೇಟ್ ಆರಂಭವಾಗುವುದನ್ನೇ ಕಾಯುತ್ತಿದ್ದೇವೆ. ಮತ್ತೊಂದು ಸುತ್ತಿನ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಸ್ಥಳೀಯರು ಹೇಳಿದರು.
ಕೆಆರ್‌ಡಿಸಿಎಲ್ರೂ ಪಿಸಿರುವ ನಿಯಮ ಹಾಗೂ ನಿಗದಿಪಡಿಸಿರುವ ಶುಲ್ಕದ ಪ್ರಕಾರ ಟೋಲ್‌ಗೇಟ್ ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ.– ಜ್ಯೋತಿಪ್ರಕಾಶ್ ಕೆ.ಎಂ. ಟೋಲ್‌ಗೇಟ್ ಗುತ್ತಿಗೆದಾರ
‘ಸ್ಥಳೀಯರಿಗೆ ಉಚಿತವೆಂದಿದ್ದ ಶಾಸಕ’
‘ಟೋಲ್‌ಗೇಟ್ ಆರಂಭಕ್ಕೆ ಸ್ಥಳೀಯರಿಂದ ವಿರೋಧವಿರುವುದು ಗಮನದಲ್ಲಿದೆ. ಸ್ಥಳೀಯರಿಗೆ ಉಚಿತ ಸಂಚಾರ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಸ್ಥಳೀಯ ಶಾಸಕ ಶ್ರೀನಿವಾಸ್ ಮಾನೆ ತಿಳಿಸಿದ್ದರು. ಆದರೆ ಉಚಿತದ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಟೋಲ್‌ಗೇಟ್‌ನಿಂದ ಸ್ಥಳೀಯರಿಗೆ ಆಗುವ ಸಮಸ್ಯೆಗಳ ಬಗ್ಗೆ ‘ಪ್ರಜಾವಾಣಿ’ಯಲ್ಲಿ ‘ಟೋಲ್‌ಗೇಟ್ ಹೊರೆ’ ಶೀರ್ಷಿಕೆಯಡಿ ಸರಣಿ ವರದಿಗಳು ಪ್ರಕಟಿಲಾಗಿತ್ತು. ಈ ವರದಿಗೆ ಪ್ರತಿಕ್ರಿಯಿಸಿದ್ದ ಶ್ರೀನಿವಾಸ್ ಮಾನೆ ‘ನಾನು ಎಂದಿಗೂ ಜನಪರ. ಸ್ಥಳೀಯ ಜನರಿಗೆ ಟೋಲ್‌ಗೇಟ್‌ನಲ್ಲಿ ಉಚಿತ ಸಂಚಾರಕ್ಕೆ ಅನುಕೂಲ ಮಾಡಿಕೊಡಿಸುತ್ತೇನೆ’ ಎಂದಿದ್ದರು. ಶಾಸಕರು ಮಧ್ಯಪ್ರವೇಶಿಸಿ ಸ್ಥಳೀಯರ ಸಂಚಾರಕ್ಕೆ ವಿನಾಯಿತಿ ಕೊಡಿಸಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.