7 ಗ್ರಾಮಗಳಿಗೆ 8 ಖಾಸಗಿ ಕೊಳವೆಬಾವಿ ನೀರು
ಹಾನಗಲ್: ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿದೆ. ಖಾಸಗಿ ಕೊಳವೆಬಾವಿಗಳನ್ನು ಆಶ್ರಯಿಸುವ ಅನಿವಾರ್ಯತೆ ಎದುರಾಗುತ್ತಿದೆ.
ನಿರೀಕ್ಷೆಯಂತೆ ಮಳೆ ಬೀಳದ ಕಾರಣಕ್ಕಾಗಿ ಗ್ರಾಮಗಳಲ್ಲಿ ನೀರು ಪೂರೈಸಲು ಸ್ಥಳೀಯ ಆಡಳಿತ ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಹರಸಾಹಸ ಪಡುತ್ತಿದೆ.
ತಾಲ್ಲೂಕಿನ 7 ಗ್ರಾಮಗಳಲ್ಲಿ 8 ಖಾಸಗಿ ಕೊಳವೆಬಾವಿಯನ್ನು ಬಾಡಿಗೆ ಪಡೆದು ಅವುಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ತಾಲ್ಲೂಕಿನ 52 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇರುವುದಾಗಿ ಗುರುತಿಸಲಾಗಿದೆ.
ಗಿರಿಸಿನಕೊಪ್ಪ, ಗುರುರಾಯಪಟ್ಟಣ, ನೀರಲಗಿ, ಗಡೆಗುಂಡಿಯಲ್ಲಾಪೂರ, ಹೊಂಕಣ, ಬೈಚವಳ್ಳಿ, ಆಲದಕಟ್ಟಿ ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಕ್ಕಮಟ್ಟಿಗೆ ಹತೋಟಿಯಲ್ಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕಳೆದ ಸಾರಿ ಇದೇ ಏಪ್ರೀಲ್ ಮತ್ತು ಮೇ ತಿಂಗಳಲ್ಲಿ 50 ಗ್ರಾಮಗಳಲ್ಲಿ 78 ಖಾಸಗಿ ಕೊಳವೆಬಾವಿ ಆಶ್ರಯಿಸಲಾಗಿತ್ತು. ಆ ಸಮಯದಲ್ಲಿ ಹೊಸದಾಗಿ ಕೊರೆಸಿದ ಕೊಳವೆಬಾವಿಗಳೂ ಬತ್ತಿದ್ದವು.
ಸದ್ಯಕ್ಕೆ ವರದಾ ಮತ್ತು ಧರ್ಮಾ ನದಿಯಲ್ಲಿ ನೀರಿಲ್ಲ. ವರದಾ ನದಿ ನೀರನ್ನು ಅವಲಂಬಿಸಿ ಚಾಲ್ತಿಯಲ್ಲಿರುವ ಕೂಡಲ, ಕೂಸನೂರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಪುನಶ್ಚೇತನ ಕಾಮಗಾರಿಯ ನೆಪದಲ್ಲಿ ಬಂದ್ ಸ್ಥಿತಿಯಲ್ಲಿವೆ. ಚಾಲ್ತಿಯಲ್ಲಿರುವ ಉಪ್ಪಣಶಿ, ಚಿಕ್ಕಾಂಶಿ ಹೊಸೂರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ನದಿ ನೀರಿನ ಅಭಾವದಿಂದ ಬಂದ್ ಆಗುವ ದಿನಗಳೂ ದೂರವಿಲ್ಲ.
ಕಳೆದ ವರ್ಷ ಸುರಿದ ಉತ್ತಮ ಮಳೆಯಿಂದಾಗಿ ಧರ್ಮಾ, ವರದಾ ನದಿಗಳು ತುಂಬಿ ಹರಿದಿದ್ದವು. ಬಾಳಂಬೀಡ, ಹಿರೇಕಾಂಶಿ ಏತ ನೀರಾವರಿ ಯೋಜನೆಗಳು ಚಾಲನೆಗೊಂಡು ನೂರಾರು ಕೆರೆಗಳು ಭರ್ತಿಯಾಗಿದ್ದ ಪರಿಣಾಮವಾಗಿ ಈ ಬೇಸಿಗೆಯ ಆರಂಭದಲ್ಲಿಯೂ ಅಂತರ್ಜಲಮಟ್ಟ ಸುಧಾರಿತ ಸ್ಥಿತಿಯಲ್ಲಿತ್ತು.
ಆದರೆ, ಹಾನಗಲ್ ತಾಲ್ಲೂಕಿನಲ್ಲಿ ವಾಡಿಕೆಯಷ್ಟು ಉತ್ತಮ ಮಳೆಯಾಗಿಲ್ಲ. ಮಾರ್ಚ್ ಅಂತ್ಯ ಮತ್ತು ಏಪ್ರಿಲ್ ಆರಂಭದ ಮೊದಲ ವಾರದಲ್ಲಿ ಸಂಜೆಯಾಗುತ್ತಲೇ ಮಳೆಯ ಮೋಡಗಳ ಆರ್ಭಟ ಶುರುವಾಗುತ್ತಿತ್ತು. ಆಗಲೂ ವರುಣ ಕೃಪೆ ತೋರಲಿಲ್ಲ. ಅಲ್ಲಿಂದ ಈಗ ಮೇ ತಿಂಗಳು ಆರಂಭಗೊಂಡರೂ ಮಳೆ ಮರಿಚಿಕೆಯಾಗಿದೆ.
‘ಮಾರ್ಚ್ ಆರಂಭದಿಂದಲೇ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳ ಪಟ್ಟಿ ಮಾಡಿದ್ದೇವೆ. ನಿರೀಕ್ಷೆಯಂತೆ ಮಳೆ ಬಂದಿದ್ದರೆ, ಕೊಳವೆಬಾವಿಗಳು ಪುನಶ್ಚೇತನಗೊಳ್ಳುತ್ತಿದ್ದವು. ಈಗ ಮೇನಿಂದ ನೀರಿನ ಅಭಾವ ಅಲ್ಲಲ್ಲಿ ಸೃಷ್ಠಿಯಾಗುತ್ತಿದೆ. ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಪಡೆಯಲು ಮುಂಚಿತವಾಗಿ ಗುರುತಿಸಿಟ್ಟುಕೊಳ್ಳಲಾಗಿದೆ. ನೀರಿನ ಸಮಸ್ಯೆ ನಿಭಾಯಿಸಲು ಅನುದಾನದ ಕೊರತೆಯಿಲ್ಲ. ಆದರೆ, ಈತನಕ ಟ್ಯಾಂಕರ್ ಮೂಲಕ ನೀರೊದಗಿಸುವ ಸ್ಥಿತಿ ಬಂದಿಲ್ಲ’ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಚಂದ್ರಶೇಖರ ನೆಗಳೂರ ಹೇಳಿದರು.
ಗೆಜ್ಜಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಎ.ಎಂ. ಯಲವಿಗಿ, ‘ಗೆಜ್ಜಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿರಿಸಿನಕೊಪ್ಪ ಮತ್ತು ಗುರುರಾಯಪಟ್ಟಣ ಗ್ರಾಮಕ್ಕೆ ಕಳೆದ ತಿಂಗಳು ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು. ಸ್ಥಳೀಯ ಕೊಳವೆಬಾವಿಯನ್ನು ಬಾಡಿಗೆ ಪಡೆದು ಗ್ರಾಮಗಳ ಮೇಲ್ಮಟ್ಟದ ಜಲಾಗಾರಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ’ ಎಂದರು.
ಕೊಳವೆಬಾವಿಯನ್ನು ಬಾಡಿಗೆ ಪಡೆದು ನೀರು ಸರಬರಾಜು
ನೀರಲಗಿ ಗ್ರಾಮದಲ್ಲಿ ಸ್ಥಳೀಯ ಆಡಳಿತದ ಕೊಳವೆಬಾವಿಗಳು ಬತ್ತಿದ ಸಂದರ್ಭದಲ್ಲಿ ತೆರೆದ ಕೊಳವೆಬಾವಿಯನ್ನು ನಿರ್ಮಿಸಿ ನೀರಿನ ದಾಹ ನೀಗಿಸುವ ಕೆಲಸ ನಾಲ್ಕೈದು ವರ್ಷದಿಂದ ನಡೆದುಕೊಂಡು ಬಂದಿದೆ. ಪ್ರತಿ ಬೇಸಿಗೆಯಲ್ಲಿ ಈ ತೆರೆದ ಕೊಳವೆಬಾವಿಯ ಜಲ ನಿಸ್ತೇಜಗೊಳ್ಳುತ್ತದೆ. ಹೀಗಾಗಿ ಸಮೀಪದ ರೈತರ ಕೊಳವೆಬಾವಿಯನ್ನು ಬಾಡಿಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಸಮ್ಮಸಗಿ ಗ್ರಾಮ ಪಂಚಾಯಿತಿ ಪಿಡಿಒ ಹನುಮಂತ ತಹಸೀಲ್ದಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.