
ಹಾವೇರಿ: ‘ನಾನು ಲಿಂಗಾಯತ, ನಾನು ಗೌಡ, ನಾನು ಆ ಜಾತಿ, ನಾನು ಈ ಜಾತಿ ಎಂಬುದನ್ನು ಬಿಟ್ಟು ನಾವೆಲ್ಲ ಹಿಂದೂ ಎಂಬ ಏಕೋಭಾವ ಬೆಳೆಸಿಕೊಂಡರೆ ಮಾತ್ರ ಭಾರತ ಸದೃಢವಾಗುತ್ತದೆ’ ಎಂದು ಪಾರಂಪರಿಕ ಆಯುರ್ವೇದ ವೈದ್ಯ ಹನುಮಂತ ಮಳಲಿ ಹೇಳಿದರು.
ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ‘ಹಿಂದೂ ಸಮಾಜೋತ್ಸವ’ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ದೇಶವನ್ನು ನೂರಾರು ವರ್ಷಗಳ ಕಾಲ ಬ್ರಿಟೀಷರು ಆಳಿದರೂ ಹಿಂದೂಗಳು ತಮ್ಮ ಅಸ್ತಿತ್ವ ಉಳಿಸಿಕೊಂಡಿದ್ದಾರೆ. ಹಿಂದೂಸ್ತಾನದಲ್ಲಿ ಅಂತಹ ದೈವಿಶಕ್ತಿ ಅಡಗಿರುವ ಕಾರಣ, ಇಂದು ಇಡೀ ಜಗತ್ತು ಭಾರತದತ್ತ ಬೆರಗು ಗಣ್ಣಿನಿಂದ ನೋಡುತ್ತಿದೆ’ ಎಂದರು.
‘ಕ್ರೈಸ್ತ ಸಮುದಾಯದಲ್ಲಿ 100ಕ್ಕೂ ಅಧಿಕ, ಮುಸ್ಲಿಮರಲ್ಲಿ 50ಕ್ಕೂ ಅಧಿಕ ಉಪ ಜಾತಿಗಳಿವೆ. ಅವರು ತಾನು ಕ್ರಿಶ್ಚಿಯನ್, ಮುಸ್ಲಿಂ ಎಂದೇ ಹೇಳುತ್ತಾರೆ. ನಾವು ಮಾತ್ರ ಲಿಂಗಾಯತರು, ಗೌಡರು, ಬ್ರಾಹ್ಮಣರು, ಇತ್ಯಾದಿ ಜಾತಿಗಳಿಗೆ ಅಂಟಿಕೊಂಡಿದ್ದೇವೆ. ಹಿಂದೂಗಳನ್ನು ಒಡೆದು ಆಳಲುವುದಕ್ಕಾಗಿ ಕೆಲವರು ಪ್ರಚೋದನೆ ನೀಡುತ್ತಿದ್ದಾರೆ. ಅದಕ್ಕೆ ನಾವೆಂದೂ ಬಲಿಯಾಗಬಾರದು. ಜಾತಿ ಭಾವ ಹೋಗುವವರೆಗೆ ದೇಶ ಉದ್ದಾರ ಆಗಲ್ಲ. ಎಲ್ಲವನ್ನೂ ಬಿಟ್ಟು ಹೊರಬರಬೇಕು’ ಎಂದು ಹೇಳಿದರು.
‘ದೇಶಕ್ಕೆ ಸ್ವರಾಜ್ಯ ಬಂದಿರಬಹುದು. ಆದರೆ, ಸುರಾಜ್ಯ ಬಂದಿಲ್ಲ. ಗುಲಾಮಗಿರಿ ಪದ್ಧತಿ ಇನ್ನೂ ಬದಲಾವಣೆ ಆಗಿಲ್ಲ. ನಾವಿನ್ನೂ ಸಾಂಸ್ಕೃತಿಕ ಗುಲಾಮಗಿರಿಯಲ್ಲಿ ಇದ್ದೇವೆ. ಸಮಾನ ಜೀವನ ಪದ್ಧತಿ, ಸಾಂಸ್ಕೃತಿಕ ಜ್ಞಾನ ಪದ್ಧತಿ ಇರುವ ದೇಶ ನಮ್ಮದಾಗಿದೆ. ಧರ್ಮ ಮತ್ತು ಕುಲ ಎರಡೂ ಬೇರೆ ಬೇರೆ. ಕುಲ ಎಂಬುದು ವೃತ್ತಿ ಮಾಡಲು ಬೇಕಾದ ಒಂದು ಅಂಶ. ಇದನ್ನೇ ಜಾತಿ, ಧರ್ಮಕ್ಕೆ ಅಂಟಿಸಿದ್ದಾರೆ. ಭಾರತ ಸಶಕ್ತ ಆಗಿರಬೇಕಾದರೆ ಜಾತೀಯತೆಯನ್ನು ನಿರ್ಮೂಲನೆ ಮಾಡಬೇಕು. ಇಲ್ಲವಾದರೆ ಹಿಂದುತ್ವ ಉಳಿಯುವುದಿಲ್ಲ’ ಎಂದು ಎಚ್ಚರಿಸಿದರು.
‘ಓಂಕಾರ ಹೇಳುವವರು, ಪುನರ್ ಜನ್ಮ ಒಪ್ಪುವವರು, ಗೋಮಾತೆಯನ್ನು ಪೂಜಿಸುವವರು, ಗಂಗೆಯನ್ನು ಪೂಜಿಸುವವರು, ಹಿಂಸೆ ಮಾಡದವರು ಹಿಂದೂಗಳು’ ಎಂದು ಹನುಮಂತ ಮಳಲಿ ಹೇಳಿದರು.
‘ಭಾರತದಲ್ಲಿ ಸ್ವಾಭಿಮಾನಕ್ಕೆ ಕೊರತೆ ಇದೆ. ಹಿಂದೂಗಳಿಗೆ ಇರುವುದು ಒಂದೇ ಭಾರತ. ಇದನ್ನು ಉಳಿಸಿ ಬೆಳೆಸೋಣ. ಹಿಂದೂಗಳು ಯಾವತ್ತೂ ಯಾವ ದೇಶದ ಮೇಲೂ ದಾಳಿ ಮಾಡಿಲ್ಲ. ಚುನಾವಣೆ ಸಂದರ್ಭದಲ್ಲಿ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಇಂತಹ ಪಕ್ಷಕ್ಕೆ ಮತ ಹಾಕಿ ಎಂದು ಹೇಳುವುದಿಲ್ಲ. ನಮ್ಮ ದೇಶ, ಸಂಸ್ಕೃತಿ ರಕ್ಷಿಸುವ, ಪ್ರೀತಿಸುವ, ಅಭಿವೃದ್ಧಿಯತ್ತ ಕೊಂಡೊಯ್ಯುವ ಸಮರ್ಥ ನಾಯಕನಿಗೆ ಮತ ಹಾಕಬೇಕು’ ಎಂದರು.
ಹರಸೂರು ಬಣ್ಣದಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.
ಹಿಂದೂ ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ರಾಜಶೇಖರ ಎಸ್. ಮಾಗನೂರ, ಸಮಿತಿ ಅಧ್ಯಕ್ಷ ವಿಜಯಕುಮಾರ ಗೊಡಚಿ ಹಾಗೂ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.