ADVERTISEMENT

ಹಾವೇರಿ: ಜನವರಿ 15ರಂದು ಹರ ಜಾತ್ರಾ ಮಹೋತ್ಸವ – 2025

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 6:50 IST
Last Updated 1 ಜನವರಿ 2026, 6:50 IST
ಹಾವೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಹರ ಜಾತ್ರೆ’ ಪೋಸ್ಟರ್‌ಗಳನ್ನು ವಚನಾನಂದ ಸ್ವಾಮೀಜಿ ಬಿಡುಗಡೆ ಮಾಡಿದರು
ಹಾವೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಹರ ಜಾತ್ರೆ’ ಪೋಸ್ಟರ್‌ಗಳನ್ನು ವಚನಾನಂದ ಸ್ವಾಮೀಜಿ ಬಿಡುಗಡೆ ಮಾಡಿದರು   

ಹಾವೇರಿ: ‘ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಜ. 15ರಂದು ‘ಹರ ಜಾತ್ರಾ ಮಹೋತ್ಸವ – 2025’ ಹಮ್ಮಿಕೊಳ್ಳಲಾಗಿದೆ’ ಎಂದು ವಚನಾನಂದ ಸ್ವಾಮೀಜಿ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು’ ಎಂದು ಕೋರಿದರು.

‘ಕಿತ್ತೂರು ರಾಣಿ ಚನ್ನಮ್ಮ ಅವರ ದ್ವಿಶತಮಾನ ವಿಜಯೋತ್ಸವದ ನೆನಪಿನಲ್ಲಿ ಕೇಂದ್ರ ಸರ್ಕಾರವು ₹200 ನಾಣ್ಯ ಬಿಡುಗಡೆ ಮಾಡಿರುವುದು ಸಮಾಜಕ್ಕೆ ಖುಷಿ ತಂದಿದೆ. ಜಾತ್ರಾ ಮಹೋತ್ಸವದಂದು, ಚನ್ನಮ್ಮ ಅವರ ದ್ವಿಶತಮಾನ ವಿಜಯೋತ್ಸವದ ಸಮಾರೋಪ ಸಮಾರಂಭವನ್ನೂ ಹಮ್ಮಿಕೊಳ್ಳಲಾಗಿದೆ. ಈ ವರ್ಷದಿಂದ ಸಾಧಕರೊಬ್ಬರಿಗೆ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ನೀಡಲಾಗುತ್ತಿದೆ. ಆಯ್ಕೆಗೆ ಸಮಿತಿ ರಚಿಸಲಾಗಿದ್ದು, ಸದ್ಯದಲ್ಲೇ ಹೆಸರು ಪ್ರಕಟಿಸಲಾಗುವುದು’ ಎಂದು ಹೇಳಿದರು.

ADVERTISEMENT

ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಡಾ. ಬಸವರಾಜ ವೀರಾಪೂರ ಮಾತನಾಡಿ, ‘ವಚನಾನಂದ ಸ್ವಾಮೀಜಿಯವರು ಪಟ್ಟಾಧಿಕಾರ ಸ್ವೀಕರಿಸಿ 8 ವರ್ಷವಾಗಿದ್ದು, ಅಷ್ಟಮ ವಾರ್ಷಿಕ ಪೀಠಾರೋಹಣವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ’ ಎಂದರು.

ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸೋಮನಗೌಡ ಪಾಟೀಲ ಮಾತನಾಡಿ, ‘ಮುಂದಿನ ವರ್ಷದಿಂದ ತೇರು ಎಳೆಯುವ ಮೂಲಕ ಜಾತ್ರೆ ಆಚರಿಸಲಾಗುವುದು’ ಎಂದರು.

ಮುಖಂಡರಾದ ಬಿ. ಶಂಕರ್, ಮಲ್ಲಿಕಾರ್ಜುನ ಹಾವೇರಿ, ಮಲ್ಲಿಕಾರ್ಜುನ ಅಂಗಡಿ, ವಸಂತಾ, ನಾಗರತ್ನಾ, ನಾಗೇಶ ಮಾಳಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.