
ಹಾವೇರಿ: ‘ಮಠದ ಆಸ್ತಿಯನ್ನು ಮಾರಾಟ ಮಾಡಿದ ಆರೋಪದಡಿ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿರುವ ಕುಮಾರೇಶ್ವರ ವಿರಕ್ತಮಠದ ಪೀಠಾಧಿಪತಿ ವಿರುದ್ಧ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ (66) ವಿರುದ್ಧ ಹಾನಗಲ್ ಠಾಣೆಯಲ್ಲಿ ಸೋಮವಾರ ಎಫ್‌ಐಆರ್ ದಾಖಲಾಗಿದೆ.
ಹುಬ್ಬಳ್ಳಿ ಮೂರುಸಾವಿರ ಮಠದ ಸ್ವಾಮೀಜಿಯೂ ಆದ ಪೀಠಾಧಿಪತಿ ಅವರು ಮಠದ ಹೆಸರಿನಲ್ಲಿದ್ದ ಆಸ್ತಿಯನ್ನು ಅಕ್ರಮ ಮಾರಿ, ಬಂದ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ನಂಬಿಕೆದ್ರೋಹ ಎಸಗಿದ್ದಾರೆ’ ಎಂಬ ದೂರು ನೀಡಲಾಗಿತ್ತು.
ಮಠದ ಆಸ್ತಿ ರಕ್ಷಣೆಗಾಗಿ ಹೋರಾಟ ನಡೆಸುತ್ತಿರುವ ಭಕ್ತರ ಪರವಾಗಿ ಹಾನಗಲ್ ತಾಲ್ಲೂಕಿನ ಹೊಸಳ್ಳಿ ಗ್ರಾಮದ ರವೀಂದ್ರ ಶಿವಮೂರ್ತೆಪ್ಪ ಚಿಕ್ಕೇರಿ (50) ಅವರು ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಿದ್ದರು.
ವಿಚಾರಣೆ ನಡೆಸಿದ್ದ ನ್ಯಾಯಾಲಯ, ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿತ್ತು. ಅದರಂತೆ, ಕುಮಾರ ಸ್ವಾಮಿ ಉರುಫ್ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.
ನ್ಯಾಯಾಲಯದ ನಿರ್ದೇಶನದಂತೆ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ದಾಖಲೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು– ಯಶೋಧಾ ವಂಟಗೋಡಿ, ಜಿಲ್ಲಾ ಎಸ್.ಪಿ.
ಮಠದ ಆಸ್ತಿ ಮಾರಾಟ ಸಂಬಂಧ ಯಾವುದೇ ತನಿಖೆಗೂ ಸಿದ್ಧ. ಪೂರಕ ದಾಖಲೆಗಳಿವೆ. ತನಿಖೆಯಿಂದ ಸತ್ಯಾಂಶ ತಿಳಿಯಲಿದೆ. ಕೆಲವರು ಆಸ್ತಿ ವಿಚಾರವಾಗಿ ತಪ್ಪು ಮಾಹಿತಿ ನೀಡುತ್ತಿದ್ದಾರೆ– ಕುಮಾರ ಸ್ವಾಮಿ, ಹಾನಗಲ್ ಕುಮಾರೇಶ್ವರ ವಿರಕ್ತಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.