ADVERTISEMENT

ಬಿತ್ತನೆ ಶುರು: ಯಂತ್ರೋಪಕರಣ ಖರೀದಿ ಜೋರು

ಕಾರ್ಮಿಕರ ಕೊರತೆ; ಕೂರಿಗೆಗೆ ಹೆಚ್ಚು ಬೇಡಿಕೆ, ಟ್ರ್ಯಾಕ್ಟರ್‌ ಖರೀದಿಗೂ ಆಸಕ್ತಿ

ಸಂತೋಷ ಜಿಗಳಿಕೊಪ್ಪ
Published 21 ಮೇ 2025, 4:22 IST
Last Updated 21 ಮೇ 2025, 4:22 IST
   

ಹಾವೇರಿ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಸುರಿಯುತ್ತಿದ್ದು, ಕೃಷಿಭೂಮಿಯನ್ನು ಹದಗೊಳಿಸಿರುವ ರೈತರು ಬಿತ್ತನೆಗೆ ತಯಾರಿ ಶುರು ಮಾಡಿದ್ದಾರೆ. ಪ್ರತಿ ಗ್ರಾಮದಲ್ಲೂ ಕೃಷಿ ಕಾರ್ಮಿಕರ ಕೊರತೆ ಕಾಡುತ್ತಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ರೈತರು ಯಂತ್ರೋಪಕರಣಗಳ ಮೊರೆ ಹೋಗಿದ್ದಾರೆ.

ಜಿಲ್ಲೆಯಲ್ಲಿರುವ ಬಹುತೇಕ ರೈತರು ಎತ್ತುಗಳಿಂದ ಬಿತ್ತನೆ ಮಾಡುವ ಪದ್ಧತಿಯನ್ನು ಕೈಬಿಟ್ಟಿದ್ದಾರೆ. ಇದೇ ಜಾಗದಲ್ಲಿ ಆಧುನಿಕ ಕಬ್ಬಿಣ ಹಾಗೂ ಸ್ಟೀಲ್‌ನ ಕೂರಿಗೆಗಳು ಲಗ್ಗೆ ಇಟ್ಟಿವೆ. ಮುಂಗಾರು ಪೂರ್ಣ ಮಳೆ ಶುರುವಾಗಿದ್ದರಿಂದ, ಬಿತ್ತನೆಗಾಗಿ ರೈತರು ಯಂತ್ರೋಪಕರಣ ಖರೀದಿಯಲ್ಲಿ ತೊಡಗಿದ್ದಾರೆ. ಇದರಿಂದಾಗಿ ಜಿಲ್ಲೆಯ ಬಹುತೇಕ ಯಂತ್ರೋಕರಣ ಮಾರಾಟ ಮಳಿಗೆಗಳಲ್ಲಿ ರೈತರ ಸಂದಣಿ ಕಂಡುಬರುತ್ತಿದೆ.

ರೈತಾಪಿ ನಾಡು ಎನಿಸಿಕೊಂಡಿರುವ ಹಾವೇರಿ ಜಿಲ್ಲೆಯ ಬಹುತೇಕರಿಗೆ ಕೃಷಿಯೇ ಜೀವನಾಧಾರ. ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ, ಬಿತ್ತನೆ ಕಾರ್ಯ ಶುರುವಾಗುತ್ತದೆ. ಜಿಲ್ಲೆಯಲ್ಲಿ ಈಗ ಕೃಷಿ ಕಾರ್ಮಿಕರ ಕೊರತೆ ಕಾಡುತ್ತಿರುವುದರಿಂದ, ಬಿತ್ತನೆಗೂ ಜನರು ಸಿಗದ ಸ್ಥಿತಿ ನಿರ್ಮಾಣವಾಗಿದೆ. ಇದೇ ಕಾರಣಕ್ಕೆ ರೈತರು, ಯಂತ್ರೋಪಕರಣಗಳನ್ನು ಬಳಸಿಕೊಂಡು ಬಿತ್ತನೆ ಹಾಗೂ ಇತರೆ ಕೃಷಿ ಕೆಲಸಗಳನ್ನು ಮಾಡುತ್ತಿದ್ದಾರೆ.

ADVERTISEMENT

ಟ್ರ್ಯಾಕ್ಟರ್ ಸಹಾಯದಿಂದ ಕೃಷಿ ಕೆಲಸ ಮಾಡುವ ಉಪಕರಣಗಳನ್ನು ರೈತರು ಖರೀದಿಸುತ್ತಿದ್ದಾರೆ. ತಮ್ಮ ಹೊಲದ ಕೆಲಸದ ಜೊತೆಯಲ್ಲಿಯೇ, ಪರಿಚಯಸ್ಥರ ಹೊಲಗಳಲ್ಲಿಯೂ ಬಾಡಿಗೆ ಆಧಾರದಲ್ಲಿ ದುಡಿಮೆ ಮಾಡುತ್ತಿದ್ದಾರೆ. ಆಧುನಿಕ ಯಂತ್ರೋಪಕರಣಗಳು, ಕೃಷಿ ನಂಬಿಕೊಂಡಿರುವ ಹಲವರಿಗೆ ಪರ್ಯಾಯ ಕೆಲಸವನ್ನೂ ಒದಗಿಸಿವೆ.

ಒಂದು ಎಕರೆಯಿಂದ 5 ಎಕರೆ ಜಮೀನು ಇರುವವರು, ಬಾಡಿಗೆ ಆಧಾರದಲ್ಲಿ ಕೃಷಿ ಯಂತ್ರಗಳಿಂದ ಬಿತ್ತನೆ ಮಾಡಿಸುತ್ತಿದ್ದಾರೆ. ಐದಕ್ಕಿಂತ ಹೆಚ್ಚು ಎಕರೆ ಜಮೀನು ಇರುವ ಬಹುತೇಕರು, ಸ್ವಂತ ಯಂತ್ರೋಪಕರಣಗಳನ್ನು ಖರೀದಿಸಿ ಬಿತ್ತನೆ ಮಾಡುತ್ತಿದ್ದಾರೆ. ಮುಂಗಾರು ಆರಂಭದ ದಿನಗಳಲ್ಲಿ ಪ್ರತಿ ವರ್ಷವೂ ಕೃಷಿ ಯಂತ್ರೋಪಕರಣಗಳಿಗೆ ಬೇಡಿಕೆ ಬರುತ್ತಿದೆ.

ರೈತರ ಕೆಲಸಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕೂರಿಗೆಗಳು, ರೋಟಾವೇಟರ್, ಮಲ್ಚಿಂಗ್‌ ಸೇರಿದಂತೆ ವಿವಿಧ ಉಪಕರಣಗಳು ಮಾರುಕಟ್ಟೆಯಲ್ಲಿವೆ. ಅವುಗಳ ಗುಣಮಟ್ಟ ಹಾಗೂ ಕೆಲಸದ ಆಧಾರದಲ್ಲಿ ಬೆಲೆಗಳಿವೆ. ಮಳಿಗೆಗಳಿಗೆ ಭೇಟಿ ನೀಡುತ್ತಿರುವ ರೈತರು, ತಮ್ಮ ಕೆಲಸಕ್ಕೆ ತಕ್ಕಂಥ ಉಪಕರಣಗಳನ್ನು ಖರೀದಿಸುತ್ತಿದ್ದಾರೆ. ಬೆಲೆಯ ವಿಚಾರದಲ್ಲಿ ಚೌಕಾಶಿಯೂ ನಡೆಯುತ್ತಿದೆ.

ಜಿಲ್ಲೆಯ ಕೆಲವರು ಎತ್ತುಗಳ ಸಹಾಯದಿಂದ ಬಿತ್ತನೆ ಮಾಡುತ್ತಿದ್ದಾರೆ. ಆದರೆ, ಬಹುತೇಕರು ಯಂತ್ರೋಪಕರಣ ಅವಲಂಬಿಸಿದ್ದಾರೆ. ಬಾಡಿಗೆ ಯಂತ್ರೋಪಕರಣದ ಮೂಲಕ ಬಿತ್ತನೆ ಮಾಡುವವರು, ಎಕರೆ ಹಾಗೂ ಗಂಟೆ ಲೆಕ್ಕದಲ್ಲಿ ₹ 700ರಿಂದ ₹ 1,500ವರೆಗೂ ಹಣ ಪಡೆಯುತ್ತಿದ್ದಾರೆ. ಯಂತ್ರೋಪಕರಣ ಖರೀದಿಸುವ ಶಕ್ತಿ ಇಲ್ಲದ ಸಣ್ಣ ಹಾಗೂ ಅತೀ ಸಣ್ಣ ಹಿಡುವಳಿದಾರ ರೈತರು, ಬಾಡಿಗೆ ಯಂತ್ರಗಳ ಮೂಲಕ ಬಿತ್ತನೆ ಮಾಡಿಸುತ್ತಿದ್ದಾರೆ.

ಗ್ರಾಮದಲ್ಲಿರುವ ಯುವಕರು, ಟ್ರ್ಯಾಕ್ಟರ್ ಚಾಲನೆ ಕಲಿಯುತ್ತಿದ್ದಾರೆ. ನಂತರ, ಯಂತ್ರೋಪಕರಣಗಳನ್ನು ಖರೀದಿಸಿ ಸ್ವ–ಉದ್ಯೋಗ ಕೈಗೊಂಡಿದ್ದಾರೆ.

ಯಂತ್ರವಿಲ್ಲದಿದ್ದರೆ ಬಿತ್ತನೆ ಅಸಾಧ್ಯ: ‘ಇತ್ತೀಚಿನ ದಿನಗಳಲ್ಲಿ ಕೃಷಿ ಕಾರ್ಮಿಕರ ಕೊರತೆ ಸಾಕಷ್ಟಿದೆ. ಸರ್ಕಾರ ಉಚಿತ ಅಕ್ಕಿ ನೀಡುತ್ತಿದೆ. ಜನರಿಗೆ ಸಾಕಷ್ಟು ಸೌಲಭ್ಯ ನೀಡುತ್ತಿದೆ. ಇದರಿಂದಾಗಿ ಜನರು, ಕೃಷಿ ಕೆಲಸಕ್ಕೆ ಬರುತ್ತಿಲ್ಲ. ಜಮೀನು ಹೊಂದಿರುವ ನಾವು ಹಾಗೂ ನಮ್ಮ ಕುಟುಂಬದವರೇ ಕೃಷಿ ಕೆಲಸ ಮಾಡುತ್ತಿದ್ದೇವೆ’ ಎಂದು ರೈತ ಸೋಮಪ್ಪ ಚಿತ್ತರಗಿ ಹೇಳಿದರು.

‘ಮುಂಗಾರು ಪೂರ್ವ ಮಳೆ ಉತ್ತಮ ರೀತಿಯಲ್ಲಿ ಸುರಿಯುತ್ತಿದ್ದು, ಈಗಾಗಲೇ ಭೂಮಿ ಹದಗೊಳಿಸಿದ್ದೇವೆ. ಈಗ ಬಿತ್ತನೆ ಆರಂಭಿಸಬೇಕು. ಕಾರ್ಮಿಕರನ್ನು ನಂಬಿಕೊಂಡರೆ, ಬಿತ್ತನೆ ಮಾಡಲು ಆಗುವುದಿಲ್ಲ. ಯಂತ್ರೋಪಕರಣ ಇದ್ದರೆ ಮಾತ್ರ ಬಿತ್ತನೆ ಸಾಧ್ಯವೆಂಬ ಕಾಲವಿದಾಗಿದೆ’ ಎಂದರು.

ರೈತರ ಬೇಡಿಕೆಗೆ ತಕ್ಕಷ್ಟು ಯಂತ್ರ: ‘ಕಳೆದ ವರ್ಷಕ್ಕಿಂತ ಈ ವರ್ಷ ಯಂತ್ರೋಪಕರಣಗಳಿಗೆ ಬೇಡಿಕೆ ಹೆಚ್ಚಿದೆ. ರೈತರ ಬೇಡಿಕೆಗೆ ತಕ್ಕಷ್ಟು ಯಂತ್ರಗಳನ್ನು ಒದಗಿಸಲಾಗುತ್ತಿದೆ. ಕೆಲ ಸಂದರ್ಭಗಳಲ್ಲಿ ಒಂದೆರೆಡು ದಿನಗಳನ್ನು ಬಿಟ್ಟು ಯಂತ್ರಗಳನ್ನು ಪೂರೈಸಲಾಗುತ್ತಿದೆ’ ಎಂದು ಯಂತ್ರೋಪಕರಣ ವ್ಯಾಪಾರಿ ಆರ್‌.ಬಿ. ದಿಡಗೂರು ತಿಳಿಸಿದರು.

‘ಕಳೆದ ವರ್ಷ ಬೇಡಿಕೆಗೆ ತಕ್ಕಷ್ಟು ಯಂತ್ರೋಪಕರಣ ಪೂರೈಸಲು ಆಗಿರಲಿಲ್ಲ. ಈ ವರ್ಷ ಮಳೆಯೂ ಉತ್ತಮ ರೀತಿಯಲ್ಲಿ ಆರಂಭವಾಗಿದೆ. ಎಲ್ಲರೂ ಬಿತ್ತನೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ಕೆಲದಿನಗಳವರೆಗೆ ಯಂತ್ರೋಪಕರಣಗಳಿಗೆ ಬೇಡಿಕೆ ಇರಲಿದೆ’ ಎಂದರು.

ಹಾವೇರಿಯಲ್ಲಿರುವ ಯಂತ್ರೋಪಕರಣ ಮಾರಾಟ ಮಳಿಗೆಗಳಲ್ಲಿ ರೈತರು ಯಂತ್ರಗಳನ್ನು ವೀಕ್ಷಿಸಿದರು
ನಮ್ಮದು 20 ಎಕರೆ ಜಮೀನಿದ್ದು ಕಾರ್ಮಿಕರ ಕೊರತೆಯಿದೆ. ಬಿತ್ತನೆಗೆ ಕೂರಿಗೆ ಖರೀದಿಸಿದ್ದು ಒಂದೇ ದಿನದಲ್ಲಿ 20 ಎಕರೆ ಬಿತ್ತನೆ ಮಾಡಬಹುದು
ಬಸನಗೌಡ ಜಾಪಾಳಿ ಸುಣ್ಣಕಲ್ಲಬಿದರಿ ರೈತ

ಸಬ್ಸಿಡಿ ನೀಡದ ಸರ್ಕಾರ: ರೈತರ ಆಕ್ರೋಶ ‘ಕೃಷಿ ಯಂತ್ರೋಪಕರಣ ಖರೀದಿ ಮೇಲೆ ಸರ್ಕಾರ ಸಬ್ಸಿಡಿ ನೀಡುತ್ತಿತ್ತು. ಆದರೆ ಈ ವರ್ಷ ಸಬ್ಸಿಡಿ ನೀಡುತ್ತಿಲ್ಲ’ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ. ‘ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಹೆಚ್ಚಿದೆ. ಈ ಹಿಂದೆ ಸರ್ಕಾರ ಸಬ್ಸಿಡಿ ನೀಡುತ್ತಿತ್ತು. ಆದರೆ ಈಗ ಬಂದ್ ಮಾಡಿದೆ. ಹೀಗಾಗಿ ಯಂತ್ರೋಪಕರಣ ಖರೀದಿಯೂ ಕಡಿಮೆಯಾಗಿದೆ. ಸಬ್ಸಿಡಿ ನೀಡಿದರೆ ಮತ್ತಷ್ಟು ರೈತರು ಯಂತ್ರಗಳನ್ನು ಖರೀದಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಸಬ್ಸಿಡಿ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ರೈತರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.