ADVERTISEMENT

ಹಾವೇರಿ | ಎಪಿಎಂಸಿ ನಿರ್ಲಕ್ಷ್ಯ: ಕನಿಷ್ಠ ಸೌಲಭ್ಯವಿಲ್ಲದ ಜಾನುವಾರು ಮಾರುಕಟ್ಟೆ

ಸಂತೋಷ ಜಿಗಳಿಕೊಪ್ಪ
Published 9 ಜೂನ್ 2025, 6:03 IST
Last Updated 9 ಜೂನ್ 2025, 6:03 IST
ಹಾವೇರಿ ಎಪಿಎಂಸಿ ಜಾನುವಾರು ಮಾರುಕಟ್ಟೆಯ ಒಳನೋಟ
ಹಾವೇರಿ ಎಪಿಎಂಸಿ ಜಾನುವಾರು ಮಾರುಕಟ್ಟೆಯ ಒಳನೋಟ   

ಹಾವೇರಿ: ರೈತಾಪಿ ನಾಡು ಎನಿಸಿಕೊಂಡಿರುವ ಹಾವೇರಿಯಲ್ಲಿ ಜಾನುವಾರು ಸಂತೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಹಾನಗಲ್ ರಸ್ತೆಯಲ್ಲಿರುವ ಎಪಿಎಂಸಿ ಆವರಣದಲ್ಲಿ ಪ್ರತಿ ಗುರುವಾರಕ್ಕೊಮ್ಮೆ ನಡೆಯುವ ಸಂತೆಗೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಜನರು ಬಂದು ಹೋಗುತ್ತಾರೆ. ಇಂಥ ಎಪಿಎಂಸಿ ಮಾರುಕಟ್ಟೆ ಆವರಣ ಹಲವು ಸಮಸ್ಯೆಗಳ ಆಗರವಾಗಿದ್ದು, ಜಾನುವಾರು ಖರೀದಿದಾರರು ಹಾಗೂ ಮಾರಾಟಗಾರರು ಯಾತನೆ ಅನುಭವಿಸುವಂತಾಗಿದೆ.

ಜಿಲ್ಲೆ, ಹೊರ ಜಿಲ್ಲೆಯ ರೈತರು ಹಾಗೂ ಮಾರಾಟಗಾರರಿಗೆ ಹಾವೇರಿ ಮಾರುಕಟ್ಟೆ ಅಚ್ಚುಮೆಚ್ಚಾಗಿದೆ. ಕುರಿ, ಮೇಕೆ, ಎತ್ತು, ಎಮ್ಮೆ, ಆಕಳು ಸೇರಿದಂತೆ ಎಲ್ಲ ಜಾನುವಾರುಗಳ ಮಾರಾಟವೂ ಭರ್ಜರಿಯಾಗಿ ನಡೆಯುತ್ತದೆ. ಅದಕ್ಕೆ ತಕ್ಕಂತೆ ಮಾರಾಟಗಾರರು ಹಾಗೂ ಖರೀದಿದಾರರಿಂದ ಶುಲ್ಕವನ್ನೂ ವಸೂಲಿ ಮಾಡಲಾಗುತ್ತದೆ.

ಮಾರುಕಟ್ಟೆ ನಿರ್ವಹಣೆ ಹಾಗೂ ಅಭಿವೃದ್ಧಿ ಹೆಸರಿನಲ್ಲಿ ಜನರಿಂದ ಶುಲ್ಕ ಸಂಗ್ರಹಿಸುವ ಏಜೆಂಟರೂ ಮಾರುಕಟ್ಟೆಯಲ್ಲಿದ್ದಾರೆ. ಪ್ರತಿ ಗುರುವಾರಕ್ಕೊಮ್ಮೆ ಸಾವಿರಾರು ರೂಪಾಯಿ ಶುಲ್ಕವಾದರೂ ಮಾರುಕಟ್ಟೆಯ ಅಭಿವೃದ್ಧಿ ಮಾತ್ರ ಮರಿಚಿಕೆಯಾಗಿದೆ.

ADVERTISEMENT

ಎಪಿಎಂಸಿ ವತಿಯಿಂದ ಜಾನುವಾರು ಮಾರುಕಟ್ಟೆಯ ನಿರ್ವಹಣೆ ಮಾಡಲಾಗುತ್ತಿದೆ. ಹಲವು ತಿಂಗಳಿನಿಂದ ಶುಲ್ಕ ವಸೂಲಿಯಲ್ಲಿಯೇ ಎಪಿಎಂಸಿ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರತರಾಗಿದ್ದು, ಅಭಿವೃದ್ಧಿಯತ್ತ ಗಮನ ಹರಿಸದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಉತ್ತರ ಕನ್ನಡ, ದಾವಣಗೆರೆ, ಬಳ್ಳಾರಿ, ಧಾರವಾಡ, ವಿಜಯನಗರ, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಚಿತ್ರದುರ್ಗ, ತುಮಕೂರು, ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳ ಜನರು ಹಾವೇರಿಯ ಜಾನುವಾರು ಮಾರುಕಟ್ಟೆಗೆ ಬಂದು ಹೋಗುತ್ತಾರೆ. ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು, ಕೇರಳ ರಾಜ್ಯಗಳಿಂದಲೂ ಜನರು ಮಾರುಕಟ್ಟೆಗೆ ಬರುತ್ತಾರೆ.

ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿರುವ ಹಾವೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಹೀಗಾಗಿ, ಜಾನುವಾರುಗಳ ಸಾಗಣೆಗೆ ಉತ್ತಮ ರಸ್ತೆ ಲಭ್ಯವಿದೆ. ಇದೇ ಕಾರಣಕ್ಕೆ ಮಾರುಕಟ್ಟೆ ಹೆಚ್ಚು ಜನಪ್ರಿಯತೆ ಪಡೆದಿದೆ. ಆದರೆ, ಹಲವು ಸಮಸ್ಯೆಗಳಿಂದ ಮಾರುಕಟ್ಟೆಯ ಹೆಸರಿಗೆ ಧಕ್ಕೆ ಬರುತ್ತಿದೆ.

ಎರಡಕ್ಕೂ ಪ್ರತ್ಯೇಕ ಮಾರುಕಟ್ಟೆ:

ಕುರಿ, ಮೇಕೆ, ಟಗರು ಮಾರಾಟ ಮಾಡಲು ಪ್ರತ್ಯೇಕ ಮಾರುಕಟ್ಟೆಯಿದೆ. ಅದರ ಪಕ್ಕವೇ ದನಕರುಗಳ ಮಾರುಕಟ್ಟೆಯಿದೆ. ಎರಡೂ ಮಾರುಕಟ್ಟೆಗಳೂ ಒಂದಕ್ಕೊಂದು ಹೊಂದಿಕೊಂಡಿದ್ದು, ಪ್ರತಿ ಗುರುವಾರ ಜನಸಂದಣಿ ಹೆಚ್ಚಿರುತ್ತದೆ.

ಬಹುತೇಕ ಮಾರಾಟಗಾರರು ಬುಧವಾರ ರಾತ್ರಿಯೇ ಎಪಿಎಂಸಿ ಆವರಣಕ್ಕೆ ಬಂದು, ತಮ್ಮ ಜಾಗ ಖಚಿತಪಡಿಸಿಕೊಳ್ಳುತ್ತಾರೆ. ಹಲವು ಖರೀದಿದಾರರು ಸಹ ಬುಧವಾರ ತಡರಾತ್ರಿ ಬಂದು, ನಸುಕಿನಲ್ಲಿ ವ್ಯಾಪಾರ ಮುಗಿಸಿ ಜಾನುವಾರುಗಳನ್ನು ಕೊಂಡೊಯ್ಯುತ್ತಾರೆ. ಬಕ್ರೀದ್ ಹಾಗೂ ಇತರೆ ಹಬ್ಬಗಳ ಸಂದರ್ಭದಲ್ಲಂತೂ ಸಾವಿರಾರು ಸಂಖ್ಯೆಯಲ್ಲಿ ಜನರು ಕುರಿ– ಮೇಕೆ ಮಾರುಕಟ್ಟೆಗೆ ಭೇಟಿ ನೀಡುತ್ತಾರೆ.

ಮಾರುಕಟ್ಟೆ ಸಂಪೂರ್ಣ ಗಲೀಜಾಗಿದ್ದು, ಸೊಳ್ಳೆಗಳ ಕಾಟವೂ ವಿಪರೀತರಾಗಿದೆ. ಆವರಣ ಸ್ವಚ್ಛತೆ ಮಾಯವಾಗಿದೆ. ಅನಿವಾರ್ಯವಾಗಿ ಜನರು ಬುಧವಾರ ರಾತ್ರಿ ಗಲೀಜು ಸ್ಥಳಗಳಲ್ಲಿಯೇ ಮಲಗಿ ದಿನದೂಡುತ್ತಿದ್ದಾರೆ. ಗುರುವಾರ ಬೆಳಿಗ್ಗೆ ಬಯಲು ಬಹಿರ್ದೆಸೆಗೆ ಹೋಗಿ, ನಂತರ ವ್ಯಾಪಾರ ಶುರು ಮಾಡುತ್ತಿದ್ದಾರೆ. ಇದು ಒಂದು ದಿನದ ಸಮಸ್ಯೆಯಲ್ಲ. ಪ್ರತಿ ಬುಧವಾರ ಹಾಗೂ ಗುರುವಾರ, ಮಾರುಕಟ್ಟೆಯಲ್ಲಿ ಜನರು ಹಲವು ಸಮಸ್ಯೆಗಳು ಎದುರಿಸುತ್ತಲೇ ಕಾಲ ಕಳೆಯುತ್ತಿದ್ದಾರೆ.

ಮಾರುಕಟ್ಟೆ ಬಳಿಯೇ ಸುಲಭ ಶೌಚಾಲಯ ನಿರ್ಮಿಸಲಾಗಿದ್ದು, ಅದು ಸಹ ನೀರಿನ ಕೊರತೆಯಿಂದ ಹಲವು ವರ್ಷಗಳಿಂದ ಬಾಗಿಲು ತೆರೆದಿಲ್ಲ. ಜೊತೆಗೆ, ಮಾರುಕಟ್ಟೆಯ ಇತರೆ ಯಾವುದೇ ಭಾಗದಲ್ಲೂ ಶೌಚಾಲಯವಿಲ್ಲ. ಮಾರುಕಟ್ಟೆಗೆ ಬರುವವರೆಲ್ಲರೂ ಗೋಡೆ ಹಾಗೂ ಕಸದ ಬಳಿಯೇ ಮಲ–ಮೂತ್ರವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದಾಗಿ ಮಾರುಕಟ್ಟೆಯ ವಾತಾವರಣವೂ ಕಲುಷಿತಗೊಳ್ಳುತ್ತಿದೆ.

‘ಮಾರುಕಟ್ಟೆ ಆವರಣದಲ್ಲಿ ಗಲೀಜು ಹಾಗೂ ದುರ್ನಾತವೇ ಹೆಚ್ಚಾಗಿದೆ. ಅಕ್ಕ–ಪಕ್ಕದ ಪ್ರದೇಶಗಳ ಕಸ ಹಾಗೂ ಗಲೀಜು ನೀರು ಮಾರುಕಟ್ಟೆಯೊಳಗೆ ಬರುತ್ತದೆ. ಜಾನುವಾರು ಮಾರುಕಟ್ಟೆ ಅವ್ಯವಸ್ಥೆ ನೋಡಿದರೆ, ಸಿಟ್ಟು ಬರುತ್ತದೆ. ಎಪಿಎಂಸಿಯವರಿಗೆ ಹಲವು ಬಾರಿ ಮನವಿ ಮಾಡಿದರೂ ಸಮಸ್ಯೆ ಬಗೆಹರಿಸುತ್ತಿಲ್ಲ’ ಎಂದು ರಾಣೆಬೆನ್ನೂರಿನ ರೈತ ಮೈಲಾರಪ್ಪ ಹೇಳಿದರು.

ವಿದ್ಯುತ್ ದೀಪಗಳಿಲ್ಲದೇ ಪರದಾಟ;

‘ಬುಧವಾರ ರಾತ್ರಿಯೇ ರೈತರು ಹಾಗೂ ಜಾನುವಾರು ಮಾರಾಟಗಾರರು, ಮಾರುಕಟ್ಟೆಗೆ ಬರುತ್ತಾರೆ. ಆದರೆ, ಇಲ್ಲಿ ಯಾವುದೇ ವಿದ್ಯುತ್ ದೀಪಗಳ ವ್ಯವಸ್ಥೆಯಿಲ್ಲ. ರಾತ್ರಿಯಾದರೆ ಮಾರುಕಟ್ಟೆಯಲ್ಲಿ ಕತ್ತಲು ಆವರಿಸುತ್ತಿದೆ’ ಎಂದು ರಾಣೆಬೆನ್ನೂರಿನ ರೈತ ಸೇದಿಯಪ್ಪ ಹೇಳಿದರು.

‘ಹಾವೇರಿ ಮಾರುಕಟ್ಟೆಯಲ್ಲಿ ಯಾವುದೇ ಮೋಸವಿಲ್ಲ. ಎಲ್ಲ ವ್ಯಾಪಾರಸ್ಥರು ಪ್ರಾಮಾಣಿಕವಾಗಿ ಜಾನುವಾರು ಮಾರುತ್ತಾರೆ. ಹೀಗಾಗಿ, ದೂರದ ಊರುಗಳಿಂದ ಜನರು ಇಲ್ಲಿಗೆ ಬರುತ್ತಾರೆ. ಆದರೆ, ಸ್ವಚ್ಛತೆ ಕೊರತೆ ಹೆಚ್ಚಿದೆ. ಅದನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ರೈತ ಬಸವರಾಜ, ‘ಜಾನುವಾರು ಸಗಣಿಯನ್ನು ಎಪಿಎಂಸಿ ಅವರೇ ಹರಾಜು ಮಾಡಿ ಹಣ ಸಂಗ್ರಹಿಸುತ್ತಾರೆ. ಮಾರಾಟಗಾರರು ಹಾಗೂ ಖರೀದಿದಾರರಿಂದ ಶುಲ್ಕ ಪಡೆಯುತ್ತಾರೆ. ಪ್ರತಿ ಕುರಿಗೆ ₹10 ಲೆಕ್ಕದಲ್ಲಿ ಪ್ರತಿ ವಾರ ಸಾವಿರಾರು ರೂಪಾಯಿ  ಶುಲ್ಕ ಸಂಗ್ರಹಿಸುತ್ತಾರೆ. ಅಷ್ಟಾದರೂ ಅಧಿಕಾರಿಗಳು, ಮಾರುಕಟ್ಟೆ ಅಭಿವೃದ್ಧಿಗೆ ಗಮನ ಹರಿಸದಿರುವುದು ಖಂಡನೀಯ’ ಎಂದು ಆಕ್ರೋಶ ಹೊರಹಾಕಿದರು.

ಜವಾರಿ ಕುರಿಗೆ ಹೆಸರುವಾಸಿ:

‘ಹಾವೇರಿ ಮಾರುಕಟ್ಟೆಯಲ್ಲಿ ಜವಾರಿ ಕುರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತವೆ. ಇಂಥ ಕುರಿಗಳನ್ನು ಖರೀದಿಸಲು ಜನರು ಮಹಾರಾಷ್ಟ್ರ, ಆಂಧ್ರಪ್ರದೇಶದಿಂದ ಬರುತ್ತಾರೆ’ ಎಂದು ರೈತ ನೀಲಪ್ಪ ಹೇಳಿದರು.

‘ಮಾರುಕಟ್ಟೆಯಲ್ಲಿ ಸಿಗುವ ಕುರಿ, ಮೇಕೆ ಹಾಗೂ ದನ–ಕರುಗಳಿಗೆ ಉತ್ತಮ ಬೇಡಿಕೆಯಿದೆ. ಆದರೆ, ಮಾರುಕಟ್ಟೆಯ ವ್ಯವಸ್ಥೆ ನೋಡಿದರೆ ನಾಚಿಕೆ ಬರುತ್ತದೆ. ದೂರದ ಊರುಗಳಿಂದ ಬರುವ ಜನರು, ಇಲ್ಲಿಯ ಎಪಿಎಂಸಿ ಆಡಳಿತ ಮಂಡಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿದ್ದರಿಂದ, ಮಾರುಕಟ್ಟೆಗೂ ಕೆಟ್ಟ ಹೆಸರು ಬರುತ್ತಿದೆ’ ಎಂದರು.

ಕುರಿ ಖರೀದಿದಾರ ಪ್ರಕಾಶ ಬಂಕಣ್ಣನವರ, ‘ಮಾರುಕಟ್ಟೆಯಲ್ಲಿ ಸ್ವಚ್ಛತೆಯಿಲ್ಲ. ಕಾಲುವೆಯಲ್ಲಿ ನೀರು ನಿಂತುಕೊಂಡು ಗಲೀಜಾಗಿದೆ. ವಿದ್ಯುತ್ ದೀಪಗಳ ವ್ಯವಸ್ಥೆಯಿಲ್ಲ. ಎತ್ತುಗಳ ಪರೀಕ್ಷೆಗೆ ಉತ್ತಮ ಜಾಗವಿಲ್ಲ. ಪೊಲೀಸರ ಭದ್ರತೆಯೂ ಇಲ್ಲ. ಬುಧವಾರ ರಾತ್ರಿಯೇ ಮಾರುಕಟ್ಟೆಗೆ ಬರುವ ಮಾರಾಟಗಾರರು, ಕಳ್ಳತನವಾಗುವ ಭಯದಲ್ಲಿದ್ದಾರೆ’ ಎಂದು ಹೇಳಿದರು.

ಹಾವೇರಿ ಎಪಿಎಂಸಿ ಜಾನುವಾರು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇರಿಸಿರುವ ಕುರಿಗಳು

‘ಮಾರುಕಟ್ಟೆ ಬಳಕೆಗಾಗಿ ಶುಲ್ಕ ಪಡೆಯಲಾಗುತ್ತಿದೆ. ಶುಲ್ಕ ನೀಡಲು ಎಲ್ಲರೂ ಸಿದ್ಧರಿದ್ದಾರೆ. ಆದರೆ, ಅದಕ್ಕೆ ತಕ್ಕಂತೆ ಸೌಲಭ್ಯಗಳನ್ನು ಒದಗಿಸಬೇಕು. ಶುಲ್ಕ ಮಾತ್ರ ಕಟ್ಟಿಸಿಕೊಂಡು ಸುಮ್ಮನಾದರೆ, ಏನು ಪ್ರಯೋಜನ’ ಎಂದು ಅವರು ಪ್ರಶ್ನಿಸಿದರು.

ಶೆಡ್‌ಗಳಲ್ಲಿ ನಡೆಯದ ವ್ಯಾಪಾರ:

‘ಆವರಣದಲ್ಲಿ ಕುರಿ,ಮೇಕೆ ಮಾರಾಟಕ್ಕೆ ಪ್ರತ್ಯೇಕ ಶೆಡ್ ನಿರ್ಮಿಸಲಾಗಿದೆ. ಆದರೆ, ಶೆಡ್‌ನಲ್ಲಿ ಯಾರೊಬ್ಬರೂ ಇರುವುದಿಲ್ಲ. ಎಲ್ಲರೂ ಆವರಣದ ರಸ್ತೆ ಹಾಗೂ ಇಕ್ಕೆಲಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಇದು ಸಹ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ’ ಎಂದು ಸ್ಥಳೀಯರು ಹೇಳಿದರು. 

ಹಾವೇರಿ ಎಪಿಎಂಸಿ ಜಾನುವಾರು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇರಿಸಿರುವ ಕುರಿಗಳ ಜೊತೆ ವ್ಯಾಪಾರಿಗಳು
ಜಾನುವಾರು ಮಾರುಕಟ್ಟೆಯಲ್ಲಿ ಮನುಷ್ಯರೂ ಇರುತ್ತಾರೆಂಬುದನ್ನು ಅಧಿಕಾರಿಗಳು ಮರೆತಿದ್ದಾರೆ. ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ
ಪ್ರಕಾಶ ಬಂಕಣ್ಣನವರ ಕುರಿ ಖರೀದಿದಾರ ಹಾವೇರಿ
ಬುಧವಾರ ರಾತ್ರಿಯೇ ಮಾರುಕಟ್ಟೆಗೆ ಬರುತ್ತೇವೆ. ತ್ವರಿತವಾಗಿ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಿಸಬೇಕು. ನಮ್ಮ ಕುರಿ–ಮೇಕೆಗಳಿಗೆ ಭದ್ರತೆ ಬೇಕು
ಸೇದಿಯಪ್ಪ ಕುರಿ ಮಾರಾಟಗಾರ ರಾಣೆಬೆನ್ನೂರು
ಬಿಸಿ ಮುಟ್ಟಿಸಿದ್ದ ಉಪ ಲೋಕಾಯುಕ್ತ
ಹಾವೇರಿಯಲ್ಲಿ ಫೆಬ್ರುವರಿ 11ರಿಂದ 13ರವರೆಗೆ ಪ್ರವಾಸ ಕೈಗೊಂಡಿದ್ದ ಉಪ ಲೋಕಾಯಕ್ತ ಬಿ. ವೀರಪ್ಪ ಅವರು ಜಾನುವಾರು ಮಾರುಕಟ್ಟೆಗೂ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಾರುಕಟ್ಟೆಯ ಅವ್ಯವಸ್ಥೆ ಕಂಡು ಎಪಿಎಂಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಸ್ವಚ್ಛತೆ ಇಲ್ಲದಿರುವುದು ಕುಡಿಯುವ ನೀರಿನ ವ್ಯವಸ್ಥೆ ಮಾಡದಿರುವುದು ಮಳಿಗೆಗಳು ಗಲೀಜಾಗಿರುವುದು ಸೇರಿದಂತೆ ಎಲ್ಲ ಅವ್ಯವಸ್ಥೆಯನ್ನು ಉಪ ಲೋಕಾಯುಕ್ತರು ಗಮನಿಸಿದ್ದರು. ಅಧಿಕಾರಿಗಳ ವಿರುದ್ಧ ಗರಂ ಆಗಿದ್ದ ಅವರು ಸ್ವಯಂಪ್ರೇರಿತ ದೂರು ಸಹ ದಾಖಲಿಸಿಕೊಂಡಿದ್ದಾರೆ. ಜೊತೆಗೆ ಮಾರುಕಟ್ಟೆಯಲ್ಲಿ ಮೂಲ ಸೌಕರ್ಯಗಳ ವ್ಯವಸ್ಥೆ ಮಾಡುವಂತೆಯೂ ಅಧಿಕಾರಿಗಳಿಗೆ ಗಡುವು ನೀಡಿದ್ದರು. ಆದರೆ ಅಧಿಕಾರಿಗಳು ಉಪ ಲೋಕಾಯುಕ್ತರ ಮಾತಿಗೂ ಕಿಮ್ಮತ್ತು ನೀಡಿಲ್ಲ. ಉಪ ಲೋಕಾಯುಕ್ತರು ಭೇಟಿ ನೀಡಿ ನಾಲ್ಕು ತಿಂಗಳಾದರೂ ಯಾವುದೇ ಸೌಕರ್ಯ ಕಲ್ಪಿಸಿಲ್ಲವೆಂದು ಜನರು ದೂರುತ್ತಿದ್ದಾರೆ.

ಭದ್ರತೆ ನೀಡದ ಪೊಲೀಸರು

ಎಪಿಎಂಸಿ ಮಾರುಕಟ್ಟೆಗೆ ಬುಧವಾರ ರಾತ್ರಿಯಿಂದಲೇ ಜನರು ಬರುವುದರಿಂದ ಭದ್ರತೆ ಅಗತ್ಯವಿದೆ. ಆದರೆ ಹಾವೇರಿಯ ಪೊಲೀಸರು ಭದ್ರತೆಗೆ ಹೆಚ್ಚು ಆಸಕ್ತಿ ತೋರುತ್ತಿಲ್ಲ. ಕುರಿ ಮೇಕೆ ಹಾಗೂ ದನಕರುಗಳು ಕಳ್ಳತನವಾಗುವ ಭಯ ಮಾರಾಟಗಾರರನ್ನು ಕಾಡುತ್ತಿದೆ.

ಗುರುವಾರ ಬೆಳಿಗ್ಗೆ ಮಾರುಕಟ್ಟೆ ಎದುರಿನ ಮುಖ್ಯರಸ್ತೆಯಲ್ಲಿ ಮಾತ್ರ ಪ್ರತ್ಯಕ್ಷವಾಗುವ ಪೊಲೀಸರು ಜಾನುವಾರುಗಳನ್ನು ಹೊತ್ತು ಬರುವ ವಾಹನಗಳನ್ನು ಮಾತ್ರ ತಪಾಸಣೆ ನಡೆಸುತ್ತಿದ್ದಾರೆ. ಆದರೆ ಎಪಿಎಂಸಿ ಒಳಗೆ ಏನೆಲ್ಲ ಭದ್ರತೆ ಕೈಗೊಳ್ಳಬೇಕೆಂದು ಎಂದಿಗೂ ಯೋಚನೆ ಮಾಡುತ್ತಿಲ್ಲ.

ಪೊಲೀಸರ ವರ್ತನೆಗೆ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಗುರುವಾರ ಒಂದೇ ದಿನದಲ್ಲಿ ಕೋಟಿಗೂ ಹೆಚ್ಚು ವಹಿವಾಟು ನಡೆಯುವ ಮಾರುಕಟ್ಟೆಗೆ ಸೂಕ್ತ ಭದ್ರತೆ ನೀಡಲು ಪೊಲೀಸರು ಮುಂದಾಗಬೇಕೆಂದು ಆಗ್ರಹಿಸುತ್ತಿದ್ದಾರೆ. ಮಾರುಕಟ್ಟೆಯ ಎದುರಿನ ರಸ್ತೆಯಲ್ಲಿ ಹಾಗೂ ಮಾರುಕಟ್ಟೆಯ ಒಳಗಿನ ಭಾಗದಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತದೆ. ಇದರಿಂದಾಗಿ ಕುರಿ ಮೇಕೆ ಹಾಗೂ ದನಕರುಗಳ ಮಾರಾಟಕ್ಕೆ ತೊಂದರೆ ಆಗಿದೆ. ಜನರ ಓಡಾಟಕ್ಕೂ ಅಡ್ಡಿಯಾಗಿದೆ. ವಾಹನಗಳನ್ನು ಬೇರೆಡೆ ನಿಲ್ಲಿಸಲು ವ್ಯವಸ್ಥೆ ಮಾಡಬೇಕು. ಕುರಿ ಮೇಕೆ ಹಾಗೂ ದನಕರುಗಳ ಮಾರಾಟಕ್ಕೆ ಮಾತ್ರ ಎಪಿಎಂಸಿ ಜಾಗವನ್ನು ಮೀಸಲಿಡುವಂತೆಯೂ ಜನರು ಒತ್ತಾಯಿಸುತ್ತಿದ್ದಾರೆ.

‘ಎಲ್ಲೆಂದರಲ್ಲಿ ವಾಹನ ನಿಲ್ಲಿಸುತ್ತಾರೆ. ಎಲ್ಲ ವಾಹನಗಳನ್ನು ಆವರಣದಿಂದ ಹೊರಗೆ ಹಾಕಬೇಕು. ಜಾನುವಾರು ಹಾಗೂ ಜನರನ್ನು ಮಾತ್ರ ಒಳಗೆ ಬಿಡಬೇಕು’ ಎಂದು ಜನರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.