ADVERTISEMENT

ಹಾವೇರಿ| ಮನುಷ್ಯ ಸೃಷ್ಟಿಸುವ ವಸ್ತುಗಳಿಂದ ಪರಿಸರ ನಾಶ: ಅಶೋಕ ಶಾಸ್ತ್ರಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 6:33 IST
Last Updated 21 ಜನವರಿ 2026, 6:33 IST
ಹಾವೇರಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ‘ಪರಿಸರ ಸಂರಕ್ಷಣೆ’ ವಿಶೇಷ ಉಪನ್ಯಾಸ ಮತ್ತು ಕವಿಗೋಷ್ಠಿಯನ್ನು ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ಉಪನಿರ್ದೇಶಕ ಅಶೋಕ ಶಾಸ್ತ್ರಿ ಉದ್ಘಾಟಿಸಿದರು
ಹಾವೇರಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ‘ಪರಿಸರ ಸಂರಕ್ಷಣೆ’ ವಿಶೇಷ ಉಪನ್ಯಾಸ ಮತ್ತು ಕವಿಗೋಷ್ಠಿಯನ್ನು ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ಉಪನಿರ್ದೇಶಕ ಅಶೋಕ ಶಾಸ್ತ್ರಿ ಉದ್ಘಾಟಿಸಿದರು   

ಹಾವೇರಿ: ‘ಮನುಷ್ಯನ ಉತ್ತಮ ಬದುಕಿಗಾಗಿ ಸಕಲವನ್ನೂ ಪರಿಸರ ಕೊಡುತ್ತಿದೆ. ಆದರೆ, ಮನುಷ್ಯ ತನ್ನ ಸ್ವಾರ್ಥ ಮತ್ತು ದುರಾಸೆಯಿಂದಾಗಿ ಪ್ರಕೃತಿ ಮೇಲೆ ಅಮಾನುಷ ದಾಳಿ ಮಾಡಿ ಮಲೀನಗೊಳಿಸುತ್ತಿದ್ದಾನೆ. ಮನುಷ್ಯರ ಚಟುವಟಿಕೆಗಳಿಂದ ಸೃಷ್ಠಿಯಾಗುವ ವಸ್ತುಗಳೇ ಪರಿಸರ ನಾಶಕ್ಕೆ ಕಾರಣವಾಗುತ್ತಿದೆ’ ಎಂದು ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ಉಪನಿರ್ದೇಶಕ ಅಶೋಕ ಶಾಸ್ತ್ರಿ ಹೇಳಿದರು.

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ‘ಇಕೋ ಕ್ಲಬ್’ ವತಿಯಿಂದ ಈಚೆಗೆ ಏರ್ಪಡಿಸಿದ್ದ ‘ಪರಿಸರ ಸಂರಕ್ಷಣೆ’ ವಿಶೇಷ ಉಪನ್ಯಾಸ ಮತ್ತು ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

‘ಕುಡಿಯುವ ನೀರು, ಶುದ್ಧ ಗಾಳಿಯನ್ನು ಹಣ ಕೊಟ್ಟು ಪಡೆದುಕೊಳ್ಳುವ ಪರಿಸ್ಥಿತಿ ಬಂದಿದೆ. ಕಾಡುಗಳ ನಾಶ, ವಿಪರೀತ ನಗರೀಕರಣ, ಮಿತಿಮೀರಿದ ಕೈಗಾರೀಕರಣ, ಪ್ಲಾಸ್ಟಿಕ್ ವಸ್ತುಗಳ ಸೃಷ್ಠಿ, ಮನುಷ್ಯ ಜನ್ಯ ತ್ಯಾಜ್ಯಗಳು ಮತ್ತು ಇ– ತ್ಯಾಜ್ಯ ಅಸಮರ್ಪಕ ನಿರ್ವಹಣೆಯಿಂದ ಪರಿಸರದ ಆರೋಗ್ಯ ಹದಗೆಡುತ್ತಿದೆ. ಪರಿಸರ ಉಳಿಸುವ ಹೊಣೆ ಎಲ್ಲರ ಮೇಲಿದೆ. ವಿದ್ಯಾರ್ಥಿಗಳು ಕನಿಷ್ಠ ಮನೆಗೊಂದು ಮರ ನೆಟ್ಟು ಬೆಳೆಸಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕು’ ಎಂದರು.

ADVERTISEMENT

‘ಇಕೋ ಕ್ಲಬ್’ ಸಂಚಾಲಕ ಶೇಖರ ಭಜಂತ್ರಿ ಮಾತನಾಡಿ, ‘ಪಂಚಭೂತಗಳಿಂದ ಸೃಷ್ಠಿಯಾದ ನಾವು, ನಮ್ಮ ಸ್ವಾರ್ಥಕ್ಕಾಗಿ ಪಂಚಭೂತಗಳನ್ನೇ ಮಲೀನಗೊಳಿಸುತ್ತಿದ್ದೇವೆ. ಭೂಮಿ ತಾಯಿ ಎಂದು ಪೂಜಿಸಿ ಅವಳ ಒಡಲನ್ನೇ ಬಗೆಯುತ್ತಿದ್ದೇವೆ. ನೆಲ, ಜಲ ಗಾಳಿಗೂ ವಿಷ ತುಂಬುತ್ತಿದ್ದೇವೆ. ಅಭಿವೃದ್ಧಿ ನೆಪದಲ್ಲಿ ಪರಿಸರ ನಾಶ ಮಾಡುತ್ತಿದ್ದೇವೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಬಸವರಾಜ ಇಟ್ಟಿಗುಡಿ ಮಾತನಾಡಿದರು. ಉಪನ್ಯಾಸಕಿ ನಿರ್ಮಲ ಎಸ್., ವಿದ್ಯಾರ್ಥಿನಿಯರಾದ ಗಿರಿಜಾ ಕಡೆಕೊಪ್ಪ, ಅನಿತಾ ಕೋಣಿಯವರ, ಸಾನಿಯಾ ಗುಳೇದ, ಮೇಘಾ, ಐಶ್ವರ್ಯ ಹಾಗೂ ಇತರರು, ಸ್ವರಚಿತ ಕವಿತೆಗಳನ್ನು ವಾಚಿಸಿದರು.

ಉಪನ್ಯಾಸಕ ಎಸ್.ಎಸ್. ನಿಸ್ಸಿಮಗೌಡ್ರು ಅವರು ‘ಮನುಷ್ಯನ ಅಸ್ತಿತ್ವಕ್ಕೆ ಪರಿಸರ ಮತ್ತು ಜೀವ ವೈವಿಧ್ಯತೆಯ ಮಹತ್ವ’ ವಿಷಯದ ಕುರಿತು ಉಪನ್ಯಾಸ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.