
ಹಾವೇರಿ: ಜಿಲ್ಲೆಯ ಜನರ ದಿನನಿತ್ಯದ ಕೆಲಸಗಳಿಗೆ ಆಸರೆಯಾಗಿರುವ ಬೈಕ್ ಕಳ್ಳತನ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಪ್ರಸಕ್ತ ವರ್ಷದ ಜನವರಿಯಿಂದ ನವೆಂಬರ್‌ವರೆಗೆ 193 ಬೈಕ್‌ಗಳು ಕಳ್ಳತನವಾಗಿದ್ದು, ಇದರಲ್ಲಿ ಕೇವಲ 52 ಪ್ರಕರಣಗಳನ್ನು ಮಾತ್ರ ಪೊಲೀಸರು ಪತ್ತೆ ಮಾಡಿದ್ದಾರೆ.
ರೈತಾಪಿ ನಾಡಾಗಿರುವ ಜಿಲ್ಲೆಯಾದ್ಯಂತ ರೈತರು, ಹೊಲಗಳಿಗೆ, ಮಾರುಕಟ್ಟೆಗೆ ಹಾಗೂ ಇತರೆ ಕೆಲಸಕ್ಕೆ ಹೋಗಿ ಬರಲು ಬೈಕ್‌ಗಳನ್ನು ಅವಲಂಬಿಸಿದ್ದಾರೆ. ನಗರ ಹಾಗೂ ಪಟ್ಟಣಗಳಿಗೆ ಉದ್ಯೋಗ ಅರಿಸಿ ಹೋಗುವವರೂ ಬೈಕ್ ಬಳಸುತ್ತಿದ್ದಾರೆ. ಜೊತೆಗೆ, ವ್ಯಾಪಾರಕ್ಕೂ ಬೈಕ್ ಬಳಕೆಯಾಗುತ್ತಿದೆ. ಕೆಲವರ ಬದುಕಿಗೆ ಬೈಕ್‌ಗಳೇ ಆಧಾರವಾಗಿವೆ. ಇಂಥ ಬೈಕ್‌ಗಳ ಮೇಲೆ ಕಳ್ಳರ ಕಣ್ಣು ಬೀಳುತ್ತಿದೆ.
ಜಿಲ್ಲೆಯ ಹಾವೇರಿ, ರಾಣೆಬೆನ್ನೂರ, ಬ್ಯಾಡಗಿ, ಹಿರೇಕೆರೂರು, ಹಾನಗಲ್, ಶಿಗ್ಗಾವಿ, ಸವಣೂರು ಹಾಗೂ ರಟ್ಟೀಹಳ್ಳಿಯಲ್ಲಿ ಹಲವು ಬೈಕ್‌ಗಳು ಕಳ್ಳತನವಾಗಿವೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿಯೂ ಬೈಕ್‌ಗಳ ಕಳ್ಳತನ ನಡೆದಿದ್ದು, ಈ ಬಗ್ಗೆ ಆಯಾ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿಯೇ ಹೆಚ್ಚಾಗಿ ಬೈಕ್‌ಗಳ ಕಳ್ಳತನಗಳು ನಡೆಯುತ್ತಿವೆ. ನಕಲಿ ಕೀ ಬಳಸಿ ಹಾಗೂ ಹ್ಯಾಂಡಲ್ ಲಾಕ್ ಮುರಿದು ಬೈಕ್‌ಗಳನ್ನು ಕದ್ದೊಯ್ಯಲಾಗುತ್ತಿದೆ. ಆಸ್ಪತ್ರೆ, ಬಸ್ ನಿಲ್ದಾಣ, ಸಾರ್ವಜನಿಕ ರಸ್ತೆ, ಸರ್ಕಾರಿ ಕಚೇರಿ ಎದುರು... ಹೀಗೆ ಹಲವು ಕಡೆಗಳಲ್ಲಿ ನಿಲ್ಲಿಸುವ ಬೈಕ್‌ಗಳನ್ನೇ ಗುರಿಯಾಗಿಸಿಕೊಂಡು ಕಳ್ಳರು ಕೃತ್ಯ ಎಸಗುತ್ತಿದ್ದಾರೆ. ಹಾಡಹಗಲೇ ಬೈಕ್‌ಗಳನ್ನು ಕದ್ದೊಯ್ದಿರುವ ಘಟನೆಗಳೂ ನಡೆದಿವೆ.
34 ಪ್ರಕರಣಗಳ ಸುಳಿವಿಲ್ಲ: ‘2025ರ ಜನವರಿ 1ರಿಂದ ನವೆಂಬರ್ 15ರವರೆಗೆ ಜಿಲ್ಲೆಯಾದ್ಯಂತ 193 ಬೈಕ್‌ಗಳು ಕಳ್ಳತನವಾಗಿವೆ. ಇದರಲ್ಲಿ 141 ಪ್ರಕರಣಗಳ ಬಗ್ಗೆ ತನಿಖೆ ಮುಂದುವರಿದಿದೆ. ಆದರೆ, 34 ಪ್ರಕರಣಗಳಲ್ಲಿ ಯಾವುದೇ ಸುಳಿವು ಸಿಕ್ಕಿಲ್ಲ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘6 ಪ್ರಕರಣಗಳು ಸುಳ್ಳು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. 12 ಪ್ರಕರಣಗಳಲ್ಲಿ ವಿಚಾರಣೆ ಬಾಕಿಯಿದೆ’ ಎಂದೂ ಮಾಹಿತಿ ತಿಳಿಸಿದ್ದಾರೆ.
‘ಜಿಲ್ಲಾಸ್ಪತ್ರೆ, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲಿ ನಿಲ್ಲಿಸಿರುವ ಬೈಕ್‌ಗಳನ್ನೇ ಕಳ್ಳರು ಕದ್ದಿದ್ದಾರೆ. ಕೆಲವರು ಕಡೆಗಳಲ್ಲಿ ನಕಲಿ ಕೀ ಬಳಸಿ ಬೈಕ್ ಕದ್ದಿದ್ದಾರೆ. ಇನ್ನು ಹಲವೆಡೆ, ಹ್ಯಾಂಡಲ್ ಲಾಕ್ ಮುರಿದು ಬೈಕ್ ಕದ್ದೊಯ್ದಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಿಡಿಭಾಗ ಬಿಚ್ಚಿ ಮಾರಾಟ: ‘ಬೈಕ್‌ಗಳನ್ನು ಕಳ್ಳತನ ಮಾಡುವ ಬಹುತೇಕರು, ಸೆಕೆಂಡ್ ಹ್ಯಾಂಡ್ ಹೆಸರಿನಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಆದರೆ, ಈಗ ಬೈಕ್‌ಗಳನ್ನು ನೇರವಾಗಿ ಮಾರಾಟ ಮಾಡಿದರೆ ಸಿಕ್ಕಿಬೀಳುವ ಭಯ ಕಳ್ಳರಲ್ಲಿದೆ. ಹೀಗಾಗಿ, ಅವರು ಬೈಕ್‌ಗಳನ್ನು ಬಿಡಿಭಾಗಗಳನ್ನು ಬಿಚ್ಚಿ ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಬೈಕ್‌ಗಳನ್ನು ಕದ್ದು ಬಿಡಿ ಭಾಗ ಬಿಚ್ಚಿ ಮಾರುತ್ತಿದ್ದ ಆರೋಪದಡಿ ಬ್ಯಾಡಗಿ ಬೆಟ್ಟದ ಮಲ್ಲೇಶ್ವರ ನಗರದ ಮೈನುದ್ದೀನ ಬಸೀರಸಾಬ ಇನಾಮದಾರ ಹಾಗೂ ಸಂಗಮೇಶ್ವರ ನಗರದ ಮಯುದ್ದೀನ ಸುಲೇಮಾನ್ ಕೋಳೂರು ಎಂಬುವವರನ್ನು 2024 ರಲ್ಲಿಯೇ ಬಂಧಿಸಿದ್ದೆವು. ಇವರಿಂದಲೇ, ಬಿಡಿಭಾಗ ಮಾರಾಟದ ದಂಧೆಯ ಮಾಹಿತಿ ಸಿಕ್ಕಿತ್ತು. ಈಗ ಎಲ್ಲ ಪ್ರಕರಣಗಳಲ್ಲಿಯೂ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿದಿದೆ’ ಎಂದರು.
204 ವಾಹನ ಕಳವು
‘2025ರ ಜನವರಿಯಿಂದ ನವೆಂಬರ್ 15ರವರೆಗೆ ಜಿಲ್ಲೆಯಾದ್ಯಂತ 204 ವಾಹನಗಳು ಕಳ್ಳತನ ವಾಗಿವೆ. ಇದರಲ್ಲಿ 6 ಪ್ರಕರಣಗಳು ಸುಳ್ಳು ಎಂಬುದು ಪತ್ತೆಯಾಗಿದೆ. 13 ಪ್ರಕರಣಗಳ ವಿಚಾರಣೆ ಬಾಕಿಯಿದೆ. 36 ಪ್ರಕರಣಗಳಲ್ಲಿ ಯಾವುದೇ ಸುಳಿವು ಸಿಕ್ಕಿಲ್ಲ. 149 ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
16 ಬೈಕ್ ಜಪ್ತಿ ಮಾಡಿದ್ದ ಪೊಲೀಸರು ಜಿಲ್ಲೆಯ ಹಲವು ಕಡೆಗಳಲ್ಲಿ ಬೈಕ್ ಕಳ್ಳತನ ಮಾಡಿದ್ದ ಆರೋಪದಡಿ ಅಪ್ಪು ಬಸವಣ್ಣೆಪ್ಪ ನಾಗೇನಹಳ್ಳಿ (35) ಎಂಬುವವರನ್ನು ಜನವರಿಯಲ್ಲಿ ಬಂಧಿಸಿದ್ದ ಹಾವೇರಿ ಶಹರ ಠಾಣೆ ಪೊಲೀಸರು ₹5.15 ಲಕ್ಷ ಮೌಲ್ಯದ 16 ಬೈಕ್ ಜಪ್ತಿ ಮಾಡಿದ್ದರು. ‘ರಾಣೆಬೆನ್ನೂರ ತಾಲ್ಲೂಕಿನ ಕವಲೆತ್ತು ಗ್ರಾಮದ ಅಪ್ಪು ಹಾವೇರಿ ರಾಣೆಬೆನ್ನೂರ ಬ್ಯಾಡಗಿ ತಾಲ್ಲೂಕಿನ ಹಲವು ಕಡೆಗಳಲ್ಲಿ ಕಳ್ಳತನ ಮಾಡಿದ್ದ. ನಕಲಿ ಕೀಗಳನ್ನು ಬಳಸಿ ಕೃತ್ಯ ಎಸಗುತ್ತಿದ್ದ. ಮಾರುಕಟ್ಟೆ ಸಂತೆ ಬಸ್ ನಿಲ್ದಾಣ ಬಳಿ ಸುತ್ತಾಡಿ ಬೈಕ್ ಕದಿಯುತ್ತಿದ್ದ’ ಎಂದು ಪೊಲೀಸರು ಹೇಳಿದರು.
Cut-off box - ‘ತನಿಖೆಯಲ್ಲಿ ಪೊಲೀಸರ ನಿರ್ಲಕ್ಷ್ಯ’ ‘ಬೈಕ್ ಕಳ್ಳತನ ಪ್ರಕರಣದ ಬಗ್ಗೆ ದೂರು ನೀಡಿದರೆ ಪೊಲೀಸರು ನಮ್ಮನ್ನೇ ಆರೋಪಿಯಂತೆ ನೋಡುತ್ತಾರೆ. ನೀನು ಏಕೆ ಅಲ್ಲಿ ಬೈಕ್ ನಿಲ್ಲಿಸಿದ್ದು? ಎಂದು ಪ್ರಶ್ನಿಸುತ್ತಾರೆ. ಬೈಕ್ ಕಳ್ಳತನ ಪ್ರಕರಣದ ತನಿಖೆಯಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ’ ಎಂದು ಬೈಕ್ ಮಾಲೀಕರೊಬ್ಬರು ದೂರಿದರು. ‘ಆರು ತಿಂಗಳ ಹಿಂದೆಯೇ ನನ್ನ ಬೈಕ್ ಕಳ್ಳತನವಾಗಿದ್ದು ಠಾಣೆಗೆ ದೂರು ನೀಡಿದ್ದೇನೆ. ಅದನ್ನು ಇದುವರೆಗೂ ಹುಡುಕಿಲ್ಲ. ಯಾವುದೇ ಸುಳಿವು ಇಲ್ಲವೆಂದೇ ಪೊಲೀಸರು ದಿನದೂಡುತ್ತಿದ್ದಾರೆ. ತನಿಖೆ ಬಗ್ಗೆ ವಿಚಾರಿಸಲು ಠಾಣೆಗೆ ಹೋದರೆ ಬಂದೋಬಸ್ತ್ ನೆಪ ಹೇಳಿ ವಾಪಸು ಕಳುಹಿಸುತ್ತಾರೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.