ಹಾವೇರಿ: ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಕಳಪೆ ಬೀಜಗಳ ಹಾವಳಿ ಜೋರಾಗಿದ್ದು, ‘ಬಾಯಿ ಪ್ರಚಾರ’ ನಂಬಿ ರೈತರು ಕೈ ಸುಟ್ಟುಕೊಳ್ಳುತ್ತಿದ್ದಾರೆ. ಖುಲ್ಲಾ ಪೊಟ್ಟಣಗಳಲ್ಲಿ ಶುರುವಾಗಿದ್ದ ಕಳಪೆ ಬೀಜಗಳ ಮಾರಾಟ ದಂಧೆ, ಇದೀಗ ‘ಬ್ರ್ಯಾಂಡ್’ ರೂಪ ಪಡೆದುಕೊಂಡು ತೆರೆಮರೆಯಲ್ಲಿ ರೈತರನ್ನು ಸುಲಿಗೆ ಮಾಡುತ್ತಿದೆ.
ಸರ್ಕಾರದ ನಿಯಮಾವಳಿ ಪ್ರಕಾರ ಪರವಾನಗಿ ಪಡೆಯುತ್ತಿರುವ ದಂಧೆಕೋರರು ಚೆಂದದ ಪೊಟ್ಟಣಗಳಲ್ಲಿ ಕಳಪೆ ಬೀಜ ಇರಿಸಿ ಮಾರುತ್ತಿರುವ ಆರೋಪ ವ್ಯಕ್ತವಾಗುತ್ತಿದ್ದು, ದಂಧೆಗೆ ಕಡಿವಾಣ ಹಾಕಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತುಕೊಂಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಹಾವೇರಿ ಮಾತ್ರವಲ್ಲದೇ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ವಿಜಯಪುರ, ಗದಗ, ವಿಜಯನಗರ, ಧಾರವಾಡ, ಬೆಳಗಾವಿ ಹಾಗೂ ಸುತ್ತಮುತ್ತಲಿನ ರೈತರು ಸಹ ಕಳಪೆ ಬೀಜಗಳಿಂದ ನಷ್ಟ ಅನುಭವಿಸುತ್ತಿದ್ದಾರೆ. ‘ಕಡಿಮೆ ಬೆಲೆ, ಇಳುವರಿ ಹೆಚ್ಚು’ ಎಂಬ ಬಾಯಿ ಮಾತಿನ ಪ್ರಚಾರ ನಂಬಿ, ಕಳಪೆ ಬೀಜಗಳನ್ನು ಖರೀದಿಸಿ ಜಾಲಕ್ಕೆ ಸಿಲುಕುತ್ತಿದ್ದಾರೆ.
ಜಿಲ್ಲೆಯ ರಾಣೆಬೆನ್ನೂರು ನಗರವೇ ಕಳಪೆ ಬೀಜಗಳ ಕೇಂದ್ರವಾಗಿ ಮಾರ್ಪಟ್ಟಿರುವುದು ಜಗಜ್ಜಾಹೀರವಾಗಿದೆ. ರಾಣೆಬೆನ್ನೂರಿನಲ್ಲಿ 100ಕ್ಕೂ ಹೆಚ್ಚು ಅಧಿಕೃತ–ಅನಧಿಕೃತ ಬೀಜ ಮಾರಾಟ ಮಳಿಗೆಗಳಿವೆ. ಬೀಜ ತಯಾರಿಕಾ ಕಂಪನಿಗಳೂ ನೋಂದಣಿಯಾಗಿವೆ. ಇದೇ ರಾಣೆಬೆನ್ನೂರಿನ ಹಲವು ಕಡೆಗಳಲ್ಲಿ ಕಳಪೆ ಬೀಜಗಳ ಪೊಟ್ಟಣಗಳು ಮಾರಾಟವಾಗುತ್ತಿರುವ ದೂರುಗಳಿವೆ.
‘ರಾಣೆಬೆನ್ನೂರಿನಲ್ಲಿ ಕಳಪೆ ಬೀಜಗಳನ್ನು ರಾಜಾರೋಷವಾಗಿ ಮಾರಲಾಗುತ್ತಿದೆ. ಹೊರ ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಬೀಜ ಖರೀದಿಸುತ್ತಿದ್ದಾರೆ. ಕೃಷಿ ಅಧಿಕಾರಿಗಳು ಮಾತ್ರ ದೂರು ಬಂದರಷ್ಟೇ ಕ್ರಮವೆಂದು ಸಬೂಬು ಹೇಳುತ್ತಿದ್ದಾರೆ. ಹಲವು ವರ್ಷಗಳಿಂದ ನಡೆಯುತ್ತಿರುವ ಕಳಪೆ ಬೀಜ ಮಾರಾಟ ದಂಧೆಗೆ ಕೃಷಿ ಇಲಾಖೆಯ ಕೆಲ ಅಧಿಕಾರಿಗಳು, ಕೆಲ ಜನಪ್ರತಿನಿಧಿಗಳು ಹಾಗೂ ಪ್ರಭಾವಿಗಳ ಕೃಪಾಕಟಾಕ್ಷವಿದೆ’ ಎಂದು ರೈತರು ದೂರಿದರು.
ಖುಲ್ಲಾದಿಂದ ಆರಂಭವಾದ ದಂಧೆ: ‘ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಬೀಜೋಪಚಾರ ಹಾಗೂ ಸತ್ವ ಇಲ್ಲದ ಬೀಜಗಳನ್ನು ಕಡಿಮೆ ಬೆಲೆಗೆ ಮಾರಲಾಗುತ್ತದೆ. ಇದೇ ಬೀಜಗಳನ್ನು ಖರೀದಿಸುತ್ತಿದ್ದ ದಂಧೆಕೋರರು, ಅದಕ್ಕೆ ಬಣ್ಣ ಹಾಗೂ ಇತರ ರಾಸಾಯನಿಕವನ್ನು ಮಿಶ್ರಣ ಮಾಡಿ ಹಾವೇರಿ ಜಿಲ್ಲೆಗೆ ತಂದು ಖುಲ್ಲಾ ಪೊಟ್ಟಣದಲ್ಲಿ ಮಾರುತ್ತಿದ್ದರು’ ಎಂದು ರಾಣೆಬೆನ್ನೂರಿನ ರೈತರು ತಿಳಿಸಿದರು.
‘ಬೀಜ ಮೊಳಕೆಯೊಡೆಯದಿದ್ದಾಗ ಹಾಗೂ ಇಳುವರಿ ಕಡಿಮೆ ಬಂದಾಗಲೇ ರೈತರಿಗೆ ಕಳಪೆ ಬೀಜದ ಅರಿವಾಗಿತ್ತು. 2020ರಲ್ಲಿ ಅಂದಿನ ಕೃಷಿ ಸಚಿವ ಬಿ.ಸಿ. ಪಾಟೀಲ, ಕಳಪೆ ಬೀಜದ ವಿರುದ್ಧ ಕಾರ್ಯಾಚರಣೆ ಮಾಡಿಸಿದ್ದರು. 1 ಲಕ್ಷದ 685 ಕ್ವಿಂಟಲ್ ಕಳಪೆ ಬೀಜವನ್ನೂ ಜಪ್ತಿ ಮಾಡಿ, 150ಕ್ಕೂ ಹೆಚ್ಚು ಮಾರಾಟಗಾರರ ವಿರುದ್ಧ ಪ್ರಕರಣವನ್ನೂ ದಾಖಲಿಸಿದ್ದರು. ಇದರಿಂದ ಕಳಪೆ ಬೀಜ ಮಾರಾಟಕ್ಕೆ ತಕ್ಕಮಟ್ಟಿಗೆ ಲಗಾಮು ಬಿದ್ದಿತ್ತು.
ಬ್ರ್ಯಾಂಡ್ ಮೊರೆ ಹೋದ ದಂಧೆಕೋರರು: ಖುಲ್ಲಾ ಕಳಪೆ ಬೀಜ ಮಾರಾಟಕ್ಕೆ ಕಡಿವಾಣ ಬೀಳುತ್ತಿದ್ದಂತೆ ದಂಧೆಕೋರರು ಬ್ರ್ಯಾಂಡ್ ಮೊರೆ ಹೋಗಿದ್ದಾರೆ. ಬೀಜೋಪಚಾರ ಹಾಗೂ ಸತ್ವ ಇರುವ ಬೀಜಗಳನ್ನು ಮಾರಾಟ ಮಾಡುವುದಾಗಿ ಹೇಳಿ ಕೃಷಿ ಇಲಾಖೆ ಹಾಗೂ ಇತರ ಇಲಾಖೆಯಿಂದ ಪರವಾನಗಿ ಪಡೆದುಕೊಂಡಿದ್ದಾರೆ. ಪರವಾನಗಿ ಪಡೆದ ಅಧಿಕೃತ ಬ್ರ್ಯಾಂಡ್ ಹಾಗೂ ಅನಧಿಕೃತ ಬ್ರ್ಯಾಂಡ್ ಹೆಸರಿನಲ್ಲಿಯೇ ಕಳಪೆ ಬೀಜಗಳನ್ನು ತೆರೆಮರೆಯಲ್ಲಿ ಮಾರುತ್ತಿದ್ದು, ಇದನ್ನು ತಡೆಯುವವರು ಯಾರು ? ಎಂದು ರೈತರು ಪ್ರಶ್ನಿಸುತ್ತಿದ್ದಾರೆ.
‘ಬಿತ್ತನೆ ಬೀಜ ಮಾರಾಟ ಮಾಡಲು ಪರವಾನಗಿ ಕಡ್ಡಾಯವೆಂದು ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ದಂಧೆಕೋರರು, ಕಾನೂನು ಪ್ರಕಾರವೇ ಪರವಾನಗಿ ಪಡೆದಿದ್ದಾರೆ. 100 ಪೊಟ್ಟಣಗಳಲ್ಲಿ ಕೆಲ ಪೊಟ್ಟಣಗಳಲ್ಲಿ ಮಾತ್ರ ಗುಣಮಟ್ಟದ ಬೀಜ ಇರಿಸುತ್ತಿದ್ದಾರೆ. ಬಹುತೇಕ ಪೊಟ್ಟಣಗಳಲ್ಲಿ ಕಳಪೆ ಬೀಜ ಮಾರುತ್ತಿದ್ದಾರೆ. ದಂಧೆಕೋರರು ನೀಡುವ ಮಾದರಿ ಬೀಜಗಳನ್ನಷ್ಟೇ ಪರಿಶೀಲನೆ ನಡೆಸಿ ಪರವಾನಗಿ ನೀಡುವ ಕೃಷಿ ಇಲಾಖೆ ಅಧಿಕಾರಿಗಳು, ಪ್ರತಿ ಪೊಟ್ಟಣಗಳ ಪರಿಶೀಲನೆ ಮಾಡುತ್ತಿಲ್ಲ’ ಎಂದು ರಾಣೆಬೆನ್ನೂರಿನ ರೈತರು ಹೇಳುತ್ತಿದ್ದಾರೆ.
‘ಕೃಷಿಯೇ ರೈತರ ಜೀವಾಳ. ಬಿತ್ತಿದ ಬೀಜ ಕಳಪೆಯಾದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬರುತ್ತಾರೆ. ಯಾವುದೇ ಕಂಪನಿಯಾದರೂ ಪ್ರತಿ ಪೊಟ್ಟಣಗಳಲ್ಲಿರುವ ಬೀಜವನ್ನು ಪರಿಶೀಲಿಸಿದ ಬಳಿಕವೇ ರೈತರಿಗೆ ಮಾರಾಟ ಮಾಡುವ ವ್ಯವಸ್ಥೆ ಜಾರಿಯಾಗಬೇಕು’ ಎಂದು ರೈತರು ಆಗ್ರಹಿಸುತ್ತಿದ್ದಾರೆ.
ತೋಟಗಾರಿಕೆಯಲ್ಲೂ ಹಾವಳಿ: ಮೆಣಸಿನಕಾಯಿಯ ಕಳಪೆ ಬೀಜಗಳನ್ನು ಜಿಲ್ಲೆಯಲ್ಲಿ ಮಾರಿರುವ ಪ್ರಕರಣಗಳು ವರದಿಯಾಗಿವೆ. ಬ್ಯಾಡಗಿ, ಶಿಗ್ಗಾವಿ ಹಾಗೂ ಹಾನಗಲ್ ತಾಲ್ಲೂಕಿನ ಹಲವು ರೈತರು ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿರುವ ಕಳಪೆ ಬೀಜದ ದಂಧೆಕೋರರ ವಿರುದ್ಧ ರಾಜ್ಯಮಟ್ಟದ ಕಾರ್ಯಾಚರಣೆ ನಡೆಯಬೇಕುಷಣ್ಮುಖಪ್ಪ ಬಿ. ರಾಣೆಬೆನ್ನೂರು
ಕಳಪೆ ಬೀಜ ಮಾರಾಟದ ವಿರುದ್ಧ ಮಾಹಿತಿ ಅಥವಾ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದುಮಲ್ಲಿಕಾರ್ಜುನ ಜಂಟಿ ನಿರ್ದೇಶಕ ಕೃಷಿ ಇಲಾಖೆ
‘ಕಡಿಮೆ ಬೆಲೆ ಎಂಬ ಕಾರಣಕ್ಕೆ ಹಲವು ರೈತರು ಕಳಪೆ ಬೀಜಗಳನ್ನು ಖರೀದಿಸುತ್ತಿದ್ದಾರೆ. ಈ ಜಾಲ ಹೆಚ್ಚು ಬೆಳೆಯಲು ರೈತರೂ ಪ್ರಮುಖ ಕಾರಣ’ ಎಂದು ಕೃಷಿ ಇಲಾಖೆ ಅಧಿಕಾರಿಯೊಬ್ಬರು ದೂರಿದರು. ‘ಕಳಪೆ ಬೀಜಕ್ಕೆ ಯಾವುದೇ ರಸೀದಿ ನೀಡುತ್ತಿಲ್ಲ. ಚೀಟಿ ಮಾತ್ರ ಕೊಡುತ್ತಿದ್ದಾರೆ. ಈ ಚೀಟಿ ಪುರಾವೆಯಾಗುವುದಿಲ್ಲ. ಬೀಜ ಮೊಳಕೆಯೊಡೆಯದಿದ್ದಾಗ ರೈತರಿಗೆ ಯಾವುದೇ ಪರಿಹಾರವೂ ದೊರೆಯುವುದಿಲ್ಲ. ರೈತರು ಕಳಪೆ ಬೀಜ ಖರೀದಿಸುವುದನ್ನು ತ್ಯಜಿಸಿದರೆ ಈ ದಂಧೆ ಬುಡಸಮೇತ ನಶಿಸಿಹೋಗುತ್ತದೆ’ ಎಂದು ಹೇಳಿದರು. ‘ಸತ್ವವುಳ್ಳ ಪ್ರಮಾಣೀಕರಿಸಿದ ಬೀಜಗಳು ಇಲಾಖೆಯಲ್ಲಿ ಕಡಿಮೆ ಬೆಲೆಗೆ ಸಬ್ಸಿಡಿ ಮೂಲಕ ಲಭ್ಯವಿದೆ. ರಸೀದಿಯೂ ದೊರೆಯುತ್ತದೆ. ಖರೀದಿ ವಿವರ ಆನ್‌ಲೈನ್‌ನಲ್ಲಿಯೂ ದೊರೆಯುತ್ತದೆ. ಆದರೂ ರೈತರು ಅಕ್ಕ–ಪಕ್ಕದವರ ಮಾತು ನಂಬಿ ಕಳಪೆ ಬೀಜ ಖರೀದಿಸುತ್ತಿದ್ದಾರೆ. ಮೋಸವಾದಾಗ ಮಾತ್ರ ಇಲಾಖೆಗೆ ಬಂದು ದೂರು ನೀಡುತ್ತಿದ್ದಾರೆ. ಮೋಸವಾಗುವ ಮುನ್ನವೇ ರೈತರು ಎಚ್ಚೆತ್ತುಕೊಳ್ಳಬೇಕುದೆ’ ಎಂದು ಕೋರಿದರು.
‘ತೆಲಂಗಾಣ ಹಾಗೂ ಆಂಧ್ರಪ್ರದೇಶದಿಂದ ಕಳಪೆ ಬೀಜಗಳನ್ನು ತಂದು ರಾಣೆಬೆನ್ನೂರಿನಲ್ಲಿ ಮಾರುವ ಜನರಿದ್ದಾರೆ. ಇದಕ್ಕಾಗಿ ಮಧ್ಯವರ್ತಿಗಳು ಕೆಲಸ ಮಾಡುತ್ತಿದ್ದಾರೆ. ಪ್ರತಿ ವರ್ಷವೂ ಕೋಟಿಗೂ ಹೆಚ್ಚು ಮೊತ್ತದಲ್ಲಿ ವ್ಯವಹಾರ ನಡೆಯುತ್ತಿದೆ’ ಎಂಬ ಮಾಹಿತಿಯಿದೆ. ತೆಲಂಗಾಣದ ಆದಿಲಾಬಾದ್ ಮಂಚೇರಿಯಲ್ ನಲ್ಗೊಂಡ ಮೆಹಬೂಬ್‌ನಗರ ಮತ್ತು ವಾರಂಗಲ್ ಜಿಲ್ಲೆಗಳಲ್ಲಿ ಈಚೆಗೆ ಕಾರ್ಯಾಚರಣೆ ನಡೆಸಿದ್ದ ಕೃಷಿ ಅಧಿಕಾರಿಗಳು ಕಳಪೆ ಬೀಜಗಳನ್ನು ಜಪ್ತಿ ಮಾಡಿದ್ದಾರೆ. ಇದೇ ಬೀಜಗಳನ್ನು ಕರ್ನಾಟಕಕ್ಕೆ ಸಾಗಿಸಲು ಪ್ರಯತ್ನಿಸುತ್ತಿದ್ದ ಸಂಗತಿಯನ್ನೂ ಪತ್ತೆ ಮಾಡಿದ್ದಾರೆ. ಕರ್ನಾಟಕದಿಂದ ಕಳ್ಳಸಾಗಣೆ ಮಾಡಿದ್ದ ₹ 98.75 ಲಕ್ಷ ಮೌಲ್ಯದ 3.7 ಟನ್ ಕಳಪೆ ಬೀಜವನ್ನೂ ತೆಲಂಗಾಣದಲ್ಲಿ ಜಪ್ತಿ ಮಾಡಲಾಗಿದೆ. ‘ಮೇ 26ರಂದು ಆದಿಲಾಬಾದ್‌ನಲ್ಲಿ 27 ಪೊಟ್ಟಣ ಕಳಪೆ ಬೀಜ ಮೇ 24 ರಂದು ಮಂಚೇರಿಯಲ್‌ನಲ್ಲಿ 30 ಕೆ.ಜಿ. ಕಳಪೆ ಬೀಜ ಆಸಿಫಾಬಾದ್ ಮಂಚೇರಿಯಲ್ ಹಾಗೂ ಕಾಗಜ್‌ನಗರದಲ್ಲಿ 20 ಕ್ವಿಂಟಲ್ ಕಳಪೆ ಬೀಜ ಜಪ್ತಿ ಮಾಡಲಾಗಿದೆ. ಏಳು ಮಂದಿಯನ್ನೂ ಬಂಧಿಸಲಾಗಿದೆ’ ಎಂದು ತೆಲಂಗಾಣದ ಅಧಿಕಾರಿಯೊಬ್ಬರು ಹೇಳಿದರು.
ಕಳಪೆ ಬೀಜ ಮಾರಾಟ ಮಾಡಿದ್ದ ಆರೋಪದಡಿ ರಾಣೆಬೆನ್ನೂರಿನ ಶಿವಂ ಸೀಡ್ಸ್ ನಿಸರ್ಗ ಸೀಡ್ಸ್ ಶ್ರೀ ಮರುಳಸಿದ್ದೇಶ್ವರ ಸೀಡ್ಸ್ ಮಳಿಗೆ ಮಾಲೀಕರು ಹಾಗೂ ನಿಸರ್ಗ ಸೀಡ್ಸ್ ಪ್ರೈವೇಟ್ ಲಿಮಿಟೆಡ್ ಮಾಲೀಕರ ವಿರುದ್ಧ ಈಚೆಗಷ್ಟೇ ಎಫ್‌ಐಆರ್ ದಾಖಲಾಗಿದೆ. ಆರೋಪಿತ ಮಾಲೀಕರು ತಮ್ಮ ಮಳಿಗೆಗಳಲ್ಲಿ ನಿಸರ್ಗ–5533 ಎಸ್‌ಎಂಎಸ್–999 4555 ಬ್ರ್ಯಾಂಡ್ ಹೆಸರಿನಲ್ಲಿ ಮೆಕ್ಕೆಜೋಳ ಮಾಡುತ್ತಿದ್ದರು. 100ಕ್ಕೂ ಹೆಚ್ಚು ರೈತರು ಈ ಬೀಜ ಖರೀದಿಸಿ ಬಿತ್ತನೆ ಮಾಡಿದ್ದರು. ಬೀಜ ಮೊಳಕೆಯೊಡೆಯದಿದ್ದಾಗ ಕಳಪೆ ಎಂಬುದು ಗೊತ್ತಾಗಿ ಪ್ರತಿಭಟನೆ ನಡೆಸಿದ್ದರು. ಪರಿಶೀಲನೆ ನಡೆಸಿದ್ದ ಕೃಷಿ ಇಲಾಖೆ ಅಧಿಕಾರಿಗಳು ಮಾರಾಟಗಾರರ ವಿರುದ್ಧ ಠಾಣೆಗೆ ದೂರು ನೀಡಿದ್ದರು. ‘ಆರೋಪಿಗಳು ಮಾರುತ್ತಿದ್ದ ಬೀಜಗಳನ್ನು ಕೃಷಿ ಇಲಾಖೆ ಅಧಿಕಾರಿಗಳು ಏಕೆ ಪರಿಶೀಲನೆ ಮಾಡಲಿಲ್ಲ. ಪರವಾನಗಿ ನೀಡಿ ಸುಮ್ಮನಾಗಿದ್ದಕ್ಕೆ ಕಾರಣವೇನು? ಕಳಪೆ ಬೀಜ ಮಾರಾಟದಲ್ಲಿ ಕೃಷಿ ಅಧಿಕಾರಿಗಳ ಪಾತ್ರವೂ ಇದ್ದು ಸೂಕ್ತ ತನಿಖೆ ನಡೆಯಬೇಕು’ ಎಂದು ರೈತರು ಆಗ್ರಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.