ADVERTISEMENT

ಹಾವೇರಿ | ಮುಷ್ಕರ ವಿಫಲ; ಬಸ್‌ ಸಂಚಾರ ಸುಗಮ

ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 2:32 IST
Last Updated 6 ಆಗಸ್ಟ್ 2025, 2:32 IST
ಹಾವೇರಿ ಕೇಂದ್ರ ನಿಲ್ದಾಣದಲ್ಲಿ ಮಂಗಳವಾರ ಯಥಾಪ್ರಕಾರ ಬಸ್‌ಗಳು ಸಂಚರಿಸಿದವು
ಹಾವೇರಿ ಕೇಂದ್ರ ನಿಲ್ದಾಣದಲ್ಲಿ ಮಂಗಳವಾರ ಯಥಾಪ್ರಕಾರ ಬಸ್‌ಗಳು ಸಂಚರಿಸಿದವು   
ಜಿಲ್ಲೆಯಾದ್ಯಂತ 586 ಬಸ್‌ ಸಂಚಾರ | ಹೊರ ಜಿಲ್ಲೆಗಳ ಬಸ್‌ ಸಂಚಾರದಲ್ಲಿ ವ್ಯತ್ಯಯ | ಬಿಗಿ ಪೊಲೀಸ್‌ ಬಂದೋಬಸ್ತ್‌ 

ಹಾವೇರಿ: ವೇತನ ಹಿಂಬಾಕಿ ಪಾವತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನಿಗಮಗಳ ರಾಜ್ಯ ಮಟ್ಟದ ಸಂಘಟನೆ ನೀಡಿದ್ದ ಮುಷ್ಕರ, ಹಾವೇರಿ ಜಿಲ್ಲೆಯಲ್ಲಿ ವಿಫಲವಾಗಿದೆ. ಜಿಲ್ಲೆಯಲ್ಲಿ ಮಂಗಳವಾರ ಸ್ಥಳೀಯ ಬಸ್‌ಗಳ ಸಂಚಾರ ಯಥಾಪ್ರಕಾರ ಮುಂದುವರಿದಿದ್ದರಿಂದ, ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆ ಉಂಟಾಗಲಿಲ್ಲ.

ಮಂಗಳವಾರ ಬೆಳಿಗ್ಗೆಯಿಂದ ಬಸ್‌ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸುವಂತೆ ಸಂಘಟನೆ ಮುಖಂಡರು ಕರೆ ನೀಡಿದ್ದರು. ಆದರೆ, ಎಂದಿನಂತೆ ಜಿಲ್ಲೆಯ 545 ಮಾರ್ಗದಲ್ಲಿ 586 ಬಸ್‌ಗಳು ಸಂಚಾರ ನಡೆಸಿದವು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ವಾಕರಸಾಸಂ) ಚಾಲಕರು, ನಿರ್ವಾಹಕರು ಹಾಗೂ ಇತರೆ ವಿಭಾಗದ ನೌಕರರು ಮಂಗಳವಾರ ಬೆಳಿಗ್ಗೆ ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದರು.

ADVERTISEMENT

ಜಿಲ್ಲೆಯ ಹಾವೇರಿ, ರಾಣೆಬೆನ್ನೂರು, ಹಾನಗಲ್, ಶಿಗ್ಗಾವಿ, ಸವಣೂರು, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ ತಾಲ್ಲೂಕಿನಲ್ಲಿ ಬಹುತೇಕ ಕಡೆಗಳಲ್ಲಿ ಬೆಳಿಗ್ಗೆಯಿಂದಲೇ ಬಸ್‌ ಸಂಚಾರ ಸಹಜವಾಗಿತ್ತು.

ಶಾಲೆ-–ಕಾಲೇಜು ವಿದ್ಯಾರ್ಥಿಗಳು, ನೌಕರರು, ದಿನಗೂಲಿ ಕಾರ್ಮಿಕರು ನಿತ್ಯವೂ ಬಸ್‌ನಲ್ಲಿ ಸಂಚರಿಸುತ್ತಾರೆ. ಮಂಗಳವಾರ ಎಲ್ಲರೂ ಯಥಾಪ್ರಕಾರ ಬಸ್ ಪ್ರಯಾಣ ಮಾಡಿದರು.

ಸ್ಥಳೀಯ ಬಸ್‌ಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗಲಿಲ್ಲ. ಆದರೆ, ಹೊರ ಜಿಲ್ಲೆಗಳಿಂದ ಬರಬೇಕಿದ್ದ ಹಾಗೂ ಹೊರ ಜಿಲ್ಲೆಗಳಿಗೆ ಹೋಗಬೇಕಿದ್ದ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ ಕಂಡುಬಂತು. ಸಂಜೆಯ ನಂತರ, ಎಲ್ಲ ಬಸ್‌ಗಳ ಸಂಚಾರ ಪುನಃ ಚುರುಕುಗೊಂಡಿತು.

ಮುಷ್ಕರ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾವೇರಿ ಕೇಂದ್ರ ಬಸ್ ನಿಲ್ದಾಣ ಹಾಗೂ ತಾಲ್ಲೂಕು ನಿಲ್ದಾಣಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

ಹಾವೇರಿ ಜಿಲ್ಲೆಯಲ್ಲಿ ಮಂಗಳವಾರ ಎಲ್ಲ ಬಸ್‌ಗಳು ವೇಳಾಪಟ್ಟಿಯಂತೆ ಸಂಚರಿಸಿವೆ. ಮುಷ್ಕರದಿಂದ ಯಾವುದೇ ಪರಿಣಾಮ ಬೀರಿಲ್ಲ
ವಿಜಯಕುಮಾರ ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.