ಹಾವೇರಿ: ‘ಆಧಾರ್ ನೋಂದಣಿ ಕೇಂದ್ರಗಳಲ್ಲಿ ಹೆಸರು ತಿದ್ದುಪಡಿ ಸೇರಿದಂತೆ ಹಲವು ಕೆಲಸಗಳು ವಿಳಂಬವಾಗುತ್ತಿರುವ ದೂರುಗಳು ಬಂದಿವೆ. ಜಿಲ್ಲೆಯಲ್ಲಿರುವ ಕೇಂದ್ರಗಳು, ಸರಿಯಾದ ಸಮಯಕ್ಕೆ ಕೆಲಸ ಮಾಡಿಕೊಡಬೇಕು. ಇಲ್ಲದಿದ್ದರೆ, ಕೇಂದ್ರಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಖಡಕ್ ಸೂಚನೆ ನೀಡಿದರು.
ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಆಧಾರ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
‘ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಧಾರ್ ನೋಂದಣಿ ಕೇಂದ್ರಗಳು, ಕುಂಟು ನೆಪ ಹೇಳುವುದನ್ನು ಬಿಡಬೇಕು. ಚುರುಕಿನಿಂದ ಜನರ ಕೆಲಸ ಮಾಡಬೇಕು’ ಎಂದರು.
ಆಧಾರ್ ಕೇಂದ್ರಗಳ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ‘ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನಲ್ಲಿ 25, ಹಾನಗಲ್–41, ಹಾವೇರಿ–35, ಹಿರೇಕೆರೂರು–13, ರಾಣೆಬೆನ್ನೂರು–33, ರಟ್ಟೀಹಳ್ಳಿ–16, ಸವಣೂರಿ–17 ಹಾಗೂ ಶಿಗ್ಗಾವಿ ತಾಲ್ಲೂಕಿನಲ್ಲಿ 20 ಆಧಾರ ಕೇಂದ್ರಗಳಿವೆ. ನಾಡಕಚೇರಿ, ಬೆಂಗಳೂರು ಒನ್, ಕರ್ನಾಟಕ ಒನ್, ತಾಲ್ಲೂಕು ಪಂಚಾಯಿತಿ ಕಚೇರಿ, ಅಂಚೆ ಕಚೇರಿ, ವಿವಿಧ ಬ್ಯಾಂಕ್‌ಗಳಲ್ಲಿ ಆಧಾರ ದಾಖಲೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ’ ಎಂದರು.
‘ಜಿಲ್ಲೆಯಲ್ಲಿ ಸೊನ್ನೆಯಿಂದ ಐದು ವರ್ಷದೊಳಗಿನ 81,719, ಐದರಿಂದ 18 ವರ್ಷದೊಳಗಿನ 3,78,268 ಹಾಗೂ 18 ವರ್ಷ ಮೇಲ್ಪಟ್ಟ 14,26,791 ಜನರು ಆಧಾರ್ ನೋಂದಣಿ ಮಾಡಿಸಿದ್ದಾರೆ. ಐದು ವರ್ಷ ಮೇಲ್ಪಟ್ಟ 80,301 ಮಕ್ಕಳ ಹಾಗೂ 15 ವರ್ಷ ಮೇಲ್ಪಟ್ಟ 57,815 ಮಕ್ಕಳ ಬಯೋಮೆಟ್ರಿಕ್ ಬಾಕಿ ಇದೆ’ ಎಂದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಎಲ್. ಇದ್ದರು.
ಆಧಾರ್ ನೋಂದಣಿ ತಿದ್ದುಪಡಿ ಮೊಬೈಲ್ ನಂಬರ್ ಬದಲಾವಣೆಗೆ ಬರುವ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಬೇಕು. ತಿದ್ದುಪಡಿಗೆ ಬೇಕಾದ ಅಗತ್ಯ ದಾಖಲೆಗಳ ಕುರಿತು ಸರಿಯಾಗಿ ತಿಳಿಸಬೇಕು. ಪದೇ ಪದೇ ಕೇಂದ್ರಗಳಿಗೆ ಅಲೆದಾಡಿಸಬಾರದುವಿಜಯ ಮಹಾಂತೇಶ ದಾನಮ್ಮನವರ ಜಿಲ್ಲಾಧಿಕಾರಿ
ನವೋದಯಕ್ಕೆ ಅರ್ಜಿ ಸಲ್ಲಿಸಲು ಸಮಸ್ಯೆ ‘ವಿರಾಟ್ ರವಿರಾಜ ಪಾಟೀಲ ಎಂಬ ವಿದ್ಯಾರ್ಥಿಯ ಆಧಾರ್ ಕಾರ್ಡ್‌ನಲ್ಲಿ ಹೆಸರು ತಿದ್ದುಪಡಿಗೆ 15 ದಿನಗಳಿಂದ ಸತಾಯಿಸಲಾಗುತ್ತಿದೆ. ಈವರೆಗೆ ಆ ವಿದ್ಯಾರ್ಥಿಯ ಸಮಸ್ಯೆ ಇತ್ಯರ್ಥವಾಗಿಲ್ಲ. ಇದರಿಂದ ಆ ವಿದ್ಯಾರ್ಥಿ ನವೋದಯ ಶಾಲೆ ಪ್ರವೇಶಕ್ಕೆ ಅರ್ಜಿ ಹಾಕಲು ಸಮಸ್ಯೆಯಾಗಿದೆ. ವಿದ್ಯಾರ್ಥಿಯ ಪಾಲಕರು ಇಂದು ನನ್ನ ಗಮನಕ್ಕೆ ತಂದಿದ್ದಾರೆ. ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಬೇಕು. ಶಾಲಾ ವಿದ್ಯಾರ್ಥಿಗಳ ಆಧಾರ್ ತಿದ್ದುಪಡಿಯನ್ನು ಆದ್ಯತೆ ಮೇರೆಗೆ ಸರಿಪಡಿಸಬೇಕು’ ಎಂದು ಕೇಂದ್ರದವರಿಗೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.