ADVERTISEMENT

ರಾಣೆಬೆನ್ನೂರು: ಹೈನುಗಾರಿಕೆಯಲ್ಲಿ ಚಳಗೇರಿ ಗ್ರಾಮದ ದಂಪತಿಯ ಸಾಧನೆ

ಆಧುನಿಕ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಕ್ರಮಗಳ ಅಳವಡಿಕೆ

ಮುಕ್ತೇಶ ಕೂರಗುಂದಮಠ
Published 23 ಜನವರಿ 2026, 8:34 IST
Last Updated 23 ಜನವರಿ 2026, 8:34 IST
ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮದ ರೈತ ಮಹಿಳೆ ಸುಮಾ ಬಸವರಾಜ ಹೊಳಿಕಟ್ಟಿ ಅವರು ಸಾಕಿದ ರಾಸುಗಳು
ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮದ ರೈತ ಮಹಿಳೆ ಸುಮಾ ಬಸವರಾಜ ಹೊಳಿಕಟ್ಟಿ ಅವರು ಸಾಕಿದ ರಾಸುಗಳು   

ರಾಣೆಬೆನ್ನೂರು: ಹೈನುಗಾರಿಕೆ ರೈತರ ಪ್ರಮುಖವಾದ ಉಪಕಸುಬು. ಹೈನುಗಾರಿಕೆಯನ್ನು ನಂಬಿಕೊಂಡು ಬದುಕು ಕಟ್ಟಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿರುವ ಅನೇಕ ಕುಟುಂಬಗಳು ನಮ್ಮ ಕಣ್ಣ ಮುಂದೆ ಇವೆ. ಹೈನುಗಾರಿಕೆಯಲ್ಲಿ ರೈತ ಮಹಿಳೆಯರು ಕೂಡ ಭಾಗಿಯಾಗಿ ಕ್ಷೀರ ಕ್ಷೇತ್ರದಲ್ಲಿ ಮಹತ್‌ ಸಾಧನೆ ಮಾಡಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ತಾಲ್ಲೂಕಿನ ಚಳಗೇರಿ ಗ್ರಾಮದ ರೈತ ಮಹಿಳೆ ಸುಮಾ ಮತ್ತು ಪತಿ ಬಸವರಾಜ ಹೊಳಕಟ್ಟಿ ಯುವ ದಂಪತಿಗಳು.

ನೌಕರಿ ಹಿಡಿದು ಪಟ್ಟಣ ಪ್ರದೇಶದಲ್ಲಿ ಅಲೆದಾಡಿದರೂ ಕೆಲಸ ಸಿಗದೆ ನಿರುದ್ಯೋಗಕ್ಕೆ ಒಳಗಾಗುವ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಕೃಷಿಗೆ ಪೂರಕವಾದ ಹಾಗೂ ಸಾಂಪ್ರದಾಯಿಕವಾದ ಹೈನುಗಾರಿಕೆ ಇಂದು ದೂರವಾಗುತ್ತಿದ್ದರೂ ಹೈನುಗಾರಿಕೆಯಲ್ಲಿಯೇ ಸಾಧನೆ ಮಾಡಬೇಕು ಎನ್ನುವ ಶುದ್ಧ ಮನಸಿನಿಂದ ಇವರು ಸಾಧನೆ ಮೆಟ್ಟಿಲೇರುತ್ತಿದ್ದಾರೆ. ಆದರೆ ಇವರ ಕೈ ಹಿಡಿದಿರುವುದು ಮಾತ್ರ ಹೈನುಗಾರಿಕೆ.

ಸುಮಾ ಹಾಗೂ ಪತಿ ಬಸವರಾಜ ಇಬ್ಬರೂ ಪಿಯುಸಿ ಓದಿದ್ದಾರೆ. ಪತಿ ಬಸವರಾಜ ಅವರು ಪಟ್ಟಣದಲ್ಲಿ ಪಾರ್ಟನರ್‌ ಶಿಪ್‌ ಮೂಲಕ ʻವಾಟರ್‌ ಫಿಲ್ಟರ್‌ ಮಾರಾಟʼ ದಲ್ಲಿ ತೊಡಗಿದ್ದರು. ಅಲ್ಲಿ ಹೆಚ್ಚಿನ ಲಾಭ ಕಂಡು ಬರದ ಕಾರಣ ಅವರು ಬಸಮ್ಮ ಮತ್ತು ಮಾವ ಮಹಾಲಿಂಗಪ್ಪ ಹೊಳಿಕಟ್ಟಿ ಅವರ ಮಾರ್ಗದರ್ಶನದಲ್ಲಿ ಇಂದು ಹೈನುಗಾರಿಕೆಯಲ್ಲಿ ತನ್ನದೇ ವಿಶೇಷ ಸ್ಥಾನ ಪಡೆದುಕೊಂಡಿದ್ದಾರೆ.

ADVERTISEMENT

ದನದ ಕೊಟ್ಟಿಗೆಯನ್ನು ಸ್ವತಃ ಅವರೇ ಸ್ವಚ್ಛಮಾಡುವುಲ್ಲದೆ, ಅವುಗಳ ಆರೋಗ್ಯ ಹಾಗೂ ಚಲನವಲನದ ಕುರಿತು ಹೆಚ್ಚು ಗಮನ ನೀಡುತ್ತ ಅವುಗಳ ಆರೈಕೆ ಮಾಡುತ್ತಿರುವುದರಿಂದ ಸುಮಾ ಬಸವರಾಜ ಅವರು ಯಾವಾಗಲೂ ಲವಲವಿಕೆಯಿಂದಿರುತ್ತಾರೆ. ಹೈನುಗಾರಿಕೆ ಮಾಡುವುದರಿಂದ ನಷ್ಟ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ, ನಮಗೆ ನಷ್ಟ ಆಗಿಲ್ಲ. ಹೈನುಗಾರಿಕೆ ಎಂದರೆ ಎಲ್ಲರೂ ಹಾಲನ್ನು ಮಾತ್ರ ಲೆಕ್ಕ ಹಾಕುತ್ತಾರೆ. ಇನ್ನುಳಿದ ಉತ್ಪನ್ನವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುವುದು ಅವರ ಅಭಿಪ್ರಾಯ.

ಹೈನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಂಡು ಯಶಸ್ವಿಯಾಗಿದ್ದಾರೆ. ಕೊಟ್ಟಿಗೆ ಸುತ್ತಲೂ 5 ಸಿಸಿ ಕ್ಯಾಮಾರಾ ಅಳವಡಿಸಿದ್ದಾರೆ. ರಾಸುಗಳ ಚಿಕಿತ್ಸೆಗೆ ಮತ್ತು ರಾಸುಗಳು ಗರ್ಭಕಟ್ಟುವಿಕೆಗೆ ಸೂಕ್ತ ಚಿಕಿತ್ಸೆ ಕೊಡಿಸಲು ಒಬ್ಬ ಪಶು ತಾಂತ್ರಿಕ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿಯೇ ಹೈನುಗಾರಿಕೆಯಲ್ಲಿ ಅತಿ ಹೆಚ್ಚು ಹಾಲು ಪೂರೈಕೆ ಮಾಡುವ ತಾಲ್ಲೂಕಿನ ಕರೂರು ಹಾಲು ಉತ್ಪಾದಕರ ಸಂಘದ ಸದಸ್ಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈಚೆಗೆ ಬೆಂಗಳೂರಿನ ಜಿಕೆವಿಕೆ ಡಾ. ಬಾಬು ರಾಜೇಂದ್ರ ಪ್ರಸಾದ ಅಂತರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ ನಡೆದ ಪ್ರಗತಿಪರ ಮಹಿಳಾ ಹೈನುಗಾರರ ಸಮಾವೇಶ ಹಾಗೂ ತಾಂತ್ರಿಕ ವಿಚಾರ ಗೋಷ್ಠಿಯಲ್ಲಿ ತಾಲ್ಲೂಕಿನ ಚಳಗೇರಿ ಗ್ರಾಮದ ಸುಮಾ ಬಸವರಾಜ ಹೊಳಿಕಟ್ಟಿ ಅವರು ಕರೂರು ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅತ್ಯಧಿಕ ಹಾಲು ಸರಬರಾಜು ಮಾಡಿ ಹಾವೇರಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಪಾರಿತೋಷಕ ಮತ್ತು ಪ್ರಶಸ್ತಿಯನ್ನು ಪಡೆದಿದ್ದಾರೆ.

ಹೈನುಗಾರಿಕೆಯನ್ನು ಪ್ರಮುಖ ಕಸುಬಾಗಿಸಿಕೊಂಡಿರುವ ಇವರು ಇದರಲ್ಲಿ ಲಾಭ ಕಾಣಬಹುದು. ರೈತರು ತಮ್ಮ ಬದುಕನ್ನು ಹಸನಾಗಿಸಿಕೊಳ್ಳಬಹುದು ಎಂಬುದನ್ನು ಸಾಧಿಸಿ ತೋರಿಸಿಕೊಟ್ಟಿದ್ದಾರೆ.
ಕಳೆದ ಹತ್ತು ವರ್ಷಗಳ ಹಿಂದೆ ಮನೆ ಮುಂದೆಯೇ ಕೇವಲ 5 ರಿಂದ 6 ರಾಸುಗಳಿಂದ ಇವರ ಹೈನುಗಾರಿಕೆ ಆರಂಭವಾಗಿ ಈಗ ತಮ್ಮ ಜಮೀನಿನಲ್ಲಿ ಸೀಮೆ ಹಸು ಫಾರಂ ನಿರ್ಮಿಸಿಕೊಂಡು ಇವರ ಬಳಿ ಎಚ್‌.ಎಫ್‌. ಜೆರ್ಸಿ ತಳಿಯ 19 ಆಕಳು ಮತ್ತು 8 ಕರುಗಳು ಇವೆ.

ಸುಮಾ ಬಸವರಾಜ ಅವರು ರಾಸುಗಳಿಂದ ದಿನಾಲು ಬೆಳಿಗ್ಗೆ 130 ಲೀ ಮತ್ತು ಸಂಜೆ 120 ಲೀಟರ್‌ ಹಾಲನ್ನು ಕರೂರು ಪ್ರಾಥಮಿಕ ಹಾಲು ಉತ್ಪಾದಕರ ಸಂಘಕ್ಕೆ ಹಾಕುತ್ತಾರೆ. ಖರ್ಚು ತೆಗೆದು ತಿಂಗಳಿಗೆ ಸರಾಸರಿ ₹ 1 ಲಕ್ಷಕ್ಕಿಂತ ಹೆಚ್ಚು ಆದಾಯ ತೆಗೆಯುತ್ತಿದ್ದಾರೆ. ಸುಮಾ ಅವರಿಗೆ ಅವರ ಪತಿ ಬಸವರಾಜ, ಅತ್ತೆ ಬಸಮ್ಮ ಮತ್ತು ಮಾವ ಮಹಾಲಿಂಗಪ್ಪ ಅವರು ನಿತ್ಯ ಸಾಥ್‌ ನೀಡುತ್ತಾರೆ. ಕುಟುಂಬದವರೆಲ್ಲ ಸೇರಿ ಹಗಲು ರಾತ್ರಿ ದುಡಿಯುವುದರಿಂದ ನಾಲ್ಕು ಕಾಸು ಕೈಗೆ ಸಿಗುತ್ತದೆ ಎನ್ನುತ್ತಾರೆ ಸುಮಾ ಬಸವರಾಜ.

ದಿನಚರಿ: ಬೆಳಿಗ್ಗೆ 4 ಗಂಡ, ಹೆಂಡತಿ ಮತ್ತು ಅತ್ತೆ, ಮಾವ ಸೇರಿ ಮನೆಗೆಲಸದೊಂದಿಗೆ ಸಗಣಿ, ಗಂಜಲು ಬಾಚುವುದು, ಮೇವು ಕತ್ತರಿಸುವುದು, ಹಸಿ ಹುಲ್ಲು ತರುವುದು, ಹಾಲು ಕರೆದು ಕರೂರು ಡೈರಿಗೆ ಹಾಕುವ ಎಲ್ಲ ಕೆಲಸ ಮಾಡಿಕೊಳ್ಳುತ್ತಾರೆ. ಮಧ್ಯಾಹ್ನ ಸ್ಪಲ್ಪ ಹೊತ್ತು ವಿಶ್ರಾಂತಿ ಪಡೆಯುತ್ತಾರೆ. ಮತ್ತು ಸಂಜೆ ಅದೇ ಬದುಕು.

ಮೂಲತ: ರೈತಾಪಿ ಕುಟುಂಬದ ಸುಮಾ ಬಸವರಾಜ ಅವರಿಗೆ ಅವರ ಮಾವ ಮಹಾಲಿಂಗಪ್ಪ ಹೊಳಿಕಟ್ಟಿ ಹೆಸರಿನಲ್ಲಿ ಒಂದು ಎಕರೆ ಜಮೀನು ಇದೆ. ಹಸಿಮೇವನ್ನು ಬೆಳೆದಿದ್ದು ಇದರೊಂದಿಗೆ ಪಶುಆಹಾರ ಹಾಗೂ ಮೇವನ್ನು ಆಕಳುಗಳಿಗೆ ಆಹಾರವಾಗಿ ನೀಡುತ್ತಿದ್ದಾರೆ. ಇದರಿಂದ ಹಾಲಿನ ಗುಣಮಟ್ಟ ಹಾಗೂ ಹಾಲಿನ ಉತ್ಪಾದನೆಯೂ ಹೆಚ್ಚಳವಾಗುತ್ತಿದೆ.

ಆಕಳ ಸಗಣಿ ಗೊಬ್ಬರ ದರ ₹ 9 ಸಾವಿರದಿಂದ ₹ 10 ಸಾವಿರ ಒಂದು ಟ್ರ್ಯಾಕ್ಟರ್‌ ಮಾರಾಟ ಮಾಡುತ್ತಾರೆ. ವರ್ಷಕ್ಕೆ ಸಗಣಿ ಗೊಬ್ಬರದಿಂದ ₹ 1.5 ಲಕ್ಷ ಮತ್ತು ಆಕಳ ಗೋ ಮೂತ್ರ (ಗಂಜಲ) ₹ 35 ಸಾವಿರ ಆದಾಯ ಕಂಡುಕೊಂಡಿದ್ದಾರೆ. ಪ್ರತಿ ವರ್ಷ  ₹ 1 ಲಕ್ಷ ಖರ್ಚು ಮಾಡಿ ಒಣ ಮೇವು, ಹೊಟ್ಟು ಖರೀದಿಸುತ್ತಾರೆ.
ಹೆಚ್ಚು ಹಾಲು ಕೊಡುವ ದೊಡ್ಡ ಬುಳ್ಳಾಪುರ ಜಾನುವಾರು ಮಾರುಕಟ್ಟೆಯಿಂದ ಒಂದು ಆಕಳಿಗೆ ₹ 70 ರಿಂದ 80 ಸಾವಿರ ಹಣ ಕೊಟ್ಟು ಖರೀದಿ ಮಾಡಿಕೊಂಡು ಬರುತ್ತಾರೆ. 75 ಮೀಟರ್‌ ಉದ್ದ, 27 ಮೀಟರ್‌ ಅಗಲ ಉದ್ದಳತೆಯ ಹೈಟೆಕ್‌ ದನದ ಕೊಟ್ಟಿಗೆ ನಿರ್ಮಿಸಿದ್ದಾರೆ.

ಇವರು ಹೈನುಕಾರಿಗೆಗೆ ವೈಜ್ಞಾನಿಕತೆ ಅಳವಡಿಸಿಕೊಂಡಿದ್ದು  ಕ್ಷೀರ ಸಾಧನೆಗೆ ಪ್ರಮುಖ ಕಾರಣವಾಗಿದೆ. ಸುಸಜ್ಜಿತ ಕೊಟ್ಟಿಗೆಯಲ್ಲಿ ರಾಸುಗಳಿಗೆ ರಬ್ಬರ್‌ ಮ್ಯಾಟ್‌, ರಾಸುಗಳಿಗೆ ಬೇಕಾದ ಮೇವು ಕತ್ತರಿಸುವ ಯಂತ್ರ, ರಾಸು ಮೈತೊಳೆಯಲು ವಾಟರ್‌ ಸವೀರ್ಸಿಂಗ್‌ ಯಂತ್ರ ಬಳಸುತ್ತಾರೆ. ಹಾಲು ಕರೆಯುವ ಯಂತ್ರದ ಮೂಲಕ ಹಾಲು ಶೇಖರಣೆ ಯಂತ್ರ ಅಳವಡಿಸಿಕೊಂಡಿದ್ದಾರೆ. ಈ ಆಧುನಿಕ ತಂತ್ರಜ್ಞಾನದಿಂದ ಇವರ ಹೈನುಗಾರಿಕೆಗೆ ಶ್ರಮದ ಉಳಿತಾಯ ಹಾಗೂ ಸಮಯದ ಉಳಿತಾಯವಾಗಿದೆ.

ಹೈನುಗಾರಿಕೆಯಿಂದ ಉತ್ತಮ ಜೀವನ ಕಟ್ಟಿಕೊಳ್ಳಬಹುದು ಎಂಬುದನ್ನು ಸಾಧಿಸಿ ತೋರಿಸಿರುವ ರೈತ ಮಹಿಳೆ ಸುಮಾ ಇತರೆ ಮಹಿಳೆಯರಿಗೆ ಆದರ್ಶವಾಗಿದ್ದಾರೆ. ‘ಪ್ರಶಸ್ತಿ ಬಂದ ನಂತರ ಜವಾಬ್ದಾರಿ ಹೆಚ್ಚಿದೆ.  ಮಹಿಳೆಯರು ಮನೆಯಲ್ಲಿ ಒಂದು ಎರಡು ಆಕಳು , ಕುರಿ, ಮೇಕೆ, ಕೋಳಿ ಸಾಕಾಣಿಕೆ ಮಾಡಿಕೊಂಡು ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಬೇಕು’ ಎನ್ನುವುದು ಇವರ ಕಿವಿ ಮಾತಾಗಿದೆ. ರಾಸು ಸಾಕಾಣಿಕೆಯಲ್ಲಿ ಶ್ರಮಕ್ಕೆ ತಕ್ಕಂತೆ ಪ್ರತಿಫಲವಿದೆ. ಹಾವೆಮುಲ್‌ ಒಕ್ಕೂಟದಿಂದಲೂ ಅನೇಕ ಸವಲತ್ತುಗಳನ್ನು ಪಡೆದುಕೊಂಡಿದ್ದೇವೆ. ಹೈನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡ ಶ್ರಮ ಹಾಗೂ ಬಂಡವಾಳ ಕಡಿಮೆಯಾಗಿ ಲಾಭ ಹೆಚ್ಚಾಗುತ್ತದೆ ಎನ್ನುತ್ತಾರೆ ಸುಮಾ ಬಸವರಾಜ ಹೊಳಿಕಟ್ಟಿ.

ಹೈನುಗಾರಿಕೆಯಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡಿದ್ದಾರೆ ಎನ್ನುವ ಸಾಧನೆಗಾಗಿ ಇವರಿಗೆ ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ. ಈ ಪ್ರಶಸ್ತಿಗೆ ಹಾವೇಮುಲ್‌ ವತಿಯಿಂದ ಆಯ್ಕೆಮಾಡಲಾಗಿತ್ತು. ಇವರ ಈ ಸಾಧನೆಗೆ ಹಾವೇಮುಲ್‌ ಒಕ್ಕೂಟದಿಂದ, ಸ್ಥಳೀಯ ಸಂಘಸಂಸ್ಥೆಗಳಿಂದಲೂ ಹಲವಾರು ಗೌರವ ಪುರಸ್ಕಾರಗಳು ದೊರಕಿವೆ.

ಪತಿ ಬಸವರಾಜ ಹಾಗೂ ಮಾವ ಮಹಾಲಿಂಗಪ್ಪ ಅವರೊಂದಿಗೆ ಹೈನುಗಾರಿಕೆ ಕಾರ್ಯದಲ್ಲಿ ತೊಡಗಿರುವುದು.
ಎರಡು ವರ್ಷದ ಕರುವಿನೊಂದಿಗೆ ಸುಮಾ ಮತ್ತು ಪತಿ ಬಸವರಾಜ
ರಾಸುಗಳಿಗೆ ಮೇವು ಹಾಕುತ್ತಿರುವ ಸುಮಾ
ಚಳಗೇರಿ ಗ್ರಾಮದಲ್ಲಿ ದನದ ಕೊಟ್ಟಿಗೆಯಲ್ಲಿ ಸುಮಾ ಕೊಟ್ಟಿಗೆ ಸ್ವಚ್ಛಗೊಳಿಸುತ್ತಿರುವುದು.
ರಾಸುಗಳನ್ನು ಮೈ ತೊಳೆಯುವುದು
ಕೆಎಂಎಫ್‌ನಿಂದ ರಾಜ್ಯದ 16 ಒಕ್ಕೂಟಗಳಿಂದ ಹೆಚ್ಚು ಹಾಲು ಉತ್ಪಾದಕ ಸದಸ್ಯರನ್ನು ಗುರುತಿಸಿ ಆಯ್ಕೆ ಮಾಡುತ್ತಾರೆ. ಹಾವೇರಿ ಒಕ್ಕೂಟದಿಂದ ಚಳಗೇರಿಯ ಸುಮಾ ಬಸವರಾಜ ಹೊಳಿಕಟ್ಟಿ ಆಯ್ಕೆಯಾಗಿದ್ದರು. ಕೆಎಂಎಫ್‌ನಿಂದ ಗೌರವಿಸಲಾಗಿದೆ.
ಮಂಜನಗೌಡ ಪಾಟೀಲ ಹಾವೇಮುಲ್‌ ಅಧ್ಯಕ್ಷ.

‘ತಾಳ್ಮೆ ಶ್ರದ್ಧೆ ಮುಖ್ಯ’

‘ಕೊರೊನಾ ಸಂದರ್ಭದಲ್ಲಿ ನಮ್ಮ ಚಳಗೇರಿ ಗ್ರಾಮದ ಕೆಲ ಯುವ ಎಂಜಿನಿಯರ್‌ಗಳು ಲಕ್ಷಾಂತರ ಹಣ ಹೂಡಿಕೆ ಮಾಡಿ ರಾಸುಗಳನ್ನು ತಂದು ಎರಡು ಮೂರು ವರ್ಷ ಹೈನುಗಾರಿಕೆ ಮಾಡಿ ನಿರ್ವಹಣೆ ಮಾಡಲಾಗದೇ ಹಾನಿ ಅನುಭವಿಸಿ ವಾಪಸು ಬೆಂಗಳೂರು ಸೇರಿದ ಉದಾಹರಣೆಗಳು ಇವೆ.’ ‘ಬರೀ ಓದು ದುಡ್ಡು ಇದ್ದರೆ ಹೈನುಗಾರಿಕೆ ಮಾಡಲಾಗದು. ತಾಳ್ಮೆ ಶ್ರಮ ಶ್ರದ್ಧೆ ಬಹಳ ಮುಖ್ಯ. ಇಲ್ಲಿ ಕೈಕೆಸರಾದರೆ ಬಾಯಿ ಮೊಸರು ಆಗುವುದು’ ಎನ್ನುತ್ತಾರೆ ಸುಮಾ ಅವರ ಪತಿ ಬಸವರಾಜ ಹೊಳಿಕಟ್ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.