
ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ‘ಆರ್‌ಡಿಪಿಆರ್ ನೌಕರರ ಕ್ರೀಡಾಕೂಟ’ದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ರುಚಿ ಬಿಂದಲ್ ಅವರು ಕ್ರೀಡಾಜ್ಯೋತಿ ಸ್ವೀಕರಿಸಿದರು
ಹಾವೇರಿ: ‘ಗ್ರಾಮೀಣ ಭಾಗದಲ್ಲಿ ಜನಪ್ರತಿನಿಧಿಗಳ ಜೊತೆಯಲ್ಲಿಯೇ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಹಾಗೂ ಇತರೆ ಸಿಬ್ಬಂದಿ ಒತ್ತಡದಲ್ಲಿ ಕೆಲಸ ಮಾಡಬೇಕು. ಒತ್ತಡ ನಿರ್ವಹಣೆ ಮಾಡಲಾಗದೇ ಹಲವು ಪಿಡಿಒಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ, ಇಲಾಖೆಯಲ್ಲಿರುವ ಪ್ರತಿಯೊಬ್ಬರು ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಂಡು ಒತ್ತಡವನ್ನು ಸಮರ್ಥವಾಗಿ ಎದುರಿಸಬೇಕು’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು.
ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (ಆರ್‌ಡಿಪಿಆರ್) ವತಿಯಿಂದ ಹಮ್ಮಿಕೊಂಡಿರುವ ‘ಆರ್‌ಡಿಪಿಆರ್ ನೌಕರರ ಕ್ರೀಡಾಕೂಟ’ವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಪಿಡಿಒ ಹುದ್ದೆ ಹೊಸದಾಗಿ ಸೃಷ್ಟಿಯಾದಾಗ ಸಾಫ್ಟ್‌ವೇರ್ ಎಂಜಿನಿಯರ್ ಸೇರಿ ಹಲವರು ಅರ್ಜಿ ಹಾಕಿ ಆಯ್ಕೆಯಾದರು. ಆದರೆ, ಅವರಿಗೆ ಕೆಲಸದ ಒತ್ತಡ ನಿರ್ವಹಣೆ ಮಾಡಲು ಆಗಲಿಲ್ಲ. ನಾವು ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳ ಜೊತೆ ನೇರವಾಗಿ ಸಂಪರ್ಕದಲ್ಲಿದ್ದು ಕೆಲಸ ಮಾಡುವುದು ವಿರಳ. ಆದರೆ, ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು ಹಾಗೂ ಸದಸ್ಯರು, ಜನಪ್ರತಿನಿಧಿಗಳ ಜೊತೆಯಲ್ಲಿಯೇ ಕೆಲಸ ಮಾಡಬೇಕು. ಜನಪ್ರತಿನಿಧಿಗಳು ಸಹ ಜನರ ಆಶೋತ್ತರಗಳನ್ನು ನೆರವೇರಿಸಲು ಪ್ರಯತ್ನಿಸುತ್ತಾರೆ. ಅವರ ಜೊತೆಗೆ ಅಧಿಕಾರಿಗಳು ಸಹಕರಿಸಿ, ಜನರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಕೊಡಬೇಕು’ ಎಂದರು.
‘ಸರ್ಕಾರಿ ನೌಕರರು ಸದಾ ಒತ್ತಡದಲ್ಲಿರುತ್ತಾರೆ. ವೈಯಕ್ತಿಕ ಜೀವನ ಹಾಗೂ ಆರೋಗ್ಯ ರಕ್ಷಣೆಗೂ ಸಮಯ ಸಿಗುವುದಿಲ್ಲ. ಇಂಥ ಸ್ಥಿತಿಯಲ್ಲಿ ಈ ವರ್ಷ ನಾಲ್ಕು ಬಾರಿ ಸರ್ಕಾರಿ ನೌಕರರ ಕ್ರೀಡಾಕೂಟ ಮಾಡಿರುವುದು ದೊಡ್ಡ ಸಾಧನೆಯಾಗಿದೆ. ಆರ್‌ಡಿಪಿಆರ್ ಕ್ರೀಡಾಕೂಟದಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡಿರುವುದು ಸ್ವಾಗತಾರ್ಹ’ ಎಂದು ಹೇಳಿದರು.
‘ಭಾರತ ಹಳ್ಳಿಗಳ ದೇಶ. ಹಳ್ಳಿಗಳು ಅಭಿವೃದ್ಧಿಯಾದರೆ ಮಾತ್ರ ದೇಶ ಅಭಿವೃದ್ಧಿ ಎಂಬುದಾಗಿ ಮಹಾತ್ಮ ಗಾಂಧೀಜಿ ಹೇಳಿದ್ದಾರೆ. ಜನರಿಗೆ ಕುಡಿಯುವ ನೀರು, ರಸ್ತೆ, ನೈರ್ಮಲ್ಯ, ಸಮುದಾಯದ ಆಸ್ತಿಗಳ ರಕ್ಷಣೆ ಸೇರಿ ಹಲವು ಕಾರ್ಯಕ್ರಮವನ್ನು ಆರ್‌ಡಿಪಿಆರ್ ನೌಕರರು ಜನರಿಗೆ ತಲುಪಿಸುತ್ತಿದ್ದಾರೆ. ಪ್ರತಿಯೊಬ್ಬರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಕ್ರೀಡಾಕೂಟಕ್ಕಷ್ಟೇ ಸೀಮಿತವಾಗದೇ ನಿತ್ಯವೂ ಒಂದು ಗಂಟೆ ಯಾವುದಾದರು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದರು.
ಜಿ.ಪಂ. ಸಿಇಒ ರುಚಿ ಬಿಂದಲ್ ಮಾತನಾಡಿ, ‘ಕ್ರೀಡೆಯಲ್ಲಿ ಗೆಲುವು ಮುಖ್ಯವಲ್ಲ. ಸ್ಪರ್ಧೆ ಮುಖ್ಯ. ದಿನವೂ ಒತ್ತಡದಲ್ಲಿ ಕೆಲಸ ಮಾಡುವ ನೌಕರರು, ಕ್ರೀಡೆಯಲ್ಲಿ ಭಾಗವಹಿಸಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದರು.
ಎರಡು ದಿನಗಳ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಹಾವೇರಿ, ರಾಣೆಬೆನ್ನೂರು, ಹಾನಗಲ್, ಬ್ಯಾಡಗಿ, ಹಿರೇಕೆರೂರು, ಶಿಗ್ಗಾವಿ, ಸವಣೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕು ಪಂಚಾಯಿತಿ ನೌಕರರು, ಜಿಲ್ಲಾ ಪಂಚಾಯಿತಿ ನೌಕರರು ಹಾಗೂ ಆರ್‌ಡಬ್ಲ್ಯುಎಸ್ ನೌಕರರ ತಂಡಗಳು ಆಕರ್ಷಕ ಶಿಸ್ತುಬದ್ಧ ಪಥಸಂಚಲನ ನಡೆಸಿದವು.
ಜಿಲ್ಲಾ ಎಸ್‌ಪಿ ಯಶೋಧಾ ವಂಟಗೋಡಿ, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ್ ಎಲ್., ಜಿ.ಪಂ. ಉಪ ಕಾರ್ಯದರ್ಶಿ ಪುನೀತ್ ಬಿ.ಆರ್., ಹೆಚ್ಚುವರಿ ಎಸ್‌ಪಿ ಎಲ್.ವೈ. ಶಿರಕೋಳ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲೇಶ ಕರಿಗಾರ, ಆರ್‌ಡಿಪಿಆರ್ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮೌಲಾಸಾಬ ಯಲವಿಗಿ ಹಾಜರಿದ್ದರು.
ಜಿಲ್ಲೆಯ ಹಲವು ಪಂಚಾಯಿತಿಯ ಪಿಡಿಒಗಳು ಹಾಗೂ ಆರ್‌ಡಿಪಿಆರ್ ನೌಕರರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಇದಕ್ಕಾಗಿ ಶನಿವಾರ ಬೆಳಿಗ್ಗೆಯೇ ಅವರು ಜಿಲ್ಲಾ ಕ್ರೀಡಾಂಗಣಕ್ಕೆ ಬಂದಿದ್ದರು. ಪಂಚಾಯಿತಿ ಕೆಲಸ ನಿಮಿತ್ತ ಕೆಲ ಜನರು, ಕ್ರೀಡಾಂಗಣಕ್ಕೆ ಬಂದು ಪಿಡಿಒಗಳನ್ನು ಭೇಟಿಯಾದರು.
ಕ್ರೀಡಾಂಗಣದಲ್ಲಿಯೇ ಜನರನ್ನು ಭೇಟಿಯಾದ ಕೆಲ ಪಿಡಿಒಗಳು, ‘ಕ್ರೀಡಾಕೂಟ ಮುಗಿದ ಬಳಿಕ ಕೆಲಸ ಮಾಡಿಕೊಡುತ್ತೇವೆ. ಈಗ ಸ್ಥಳದಿಂದ ಹೋಗಿ’ ಎಂದು ಜನರನ್ನು ಕಳುಹಿಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.