ADVERTISEMENT

ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜ.24ರಿಂದ: ತಿಮ್ಮಾಪೂರ ಸಮ್ಮೇಳನಾಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 2:34 IST
Last Updated 22 ಜನವರಿ 2026, 2:34 IST
ಲಿಂಗಯ್ಯ ಹಿರೇಮಠ
ಲಿಂಗಯ್ಯ ಹಿರೇಮಠ   

ಹಾವೇರಿ: ‘ಸವಣೂರು ಪಟ್ಟಣದ ದೊಡ್ಡ ಹುಣಸೆ ಕಲ್ಮಠದ ಆವರಣದ ಚನ್ನಬಸವೇಶ್ವರ ಮಂಗಲ ಭವನದಲ್ಲಿ ಜ. 24 ಮತ್ತು 25ರಂದು ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ’ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸವಣೂರು ತಾಲ್ಲೂಕು ಘಟಕಗಳ ಸಹಯೋಗದಲ್ಲಿ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದೆ. ಸಮ್ಮೇಳನಾಧ್ಯಕ್ಷರಾಗಿ ಎಚ್.ಐ. ತಿಮ್ಮಾಪೂರ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದರು.

‘ಜ. 24ರಂದು ಬೆಳಿಗ್ಗೆ 7.30 ಗಂಟೆಗೆ ಜಿಲ್ಲಾಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಅವರು ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ. ನಂತರ, ಪರಿಷತ್ ಧ್ವಜಾರೋಹಣವಿದೆ. ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಗೌಡ ಪಾಟೀಲ ಅವರು ಆರೋಹಣ ಮೂಲಕ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ’ ಎಂದರು.

ADVERTISEMENT

‘ಬೆಳಿಗ್ಗೆ 8.30ಕ್ಕೆ ನಾಡದೇವಿಗೆ ಅಡವಿಸ್ವಾಮಿಮಠದ ಕುಮಾರ ಸ್ವಾಮೀಜಿಯವರು ಪೂಜೆ ಸಲ್ಲಿಸಲಿದ್ದಾರೆ. ಬಳಿಕ, ಭರಮಲಿಂಗೇಶ್ವರ ವೃತ್ತದಲ್ಲಿ ಸಮ್ಮೇಳನಾಧ್ಯಕ್ಷ ಎಚ್.ಐ. ತಿಮ್ಮಾಪೂರ ಅವರ ಮೆರವಣಿಗೆ ಆರಂಭವಾಗಲಿದೆ. ಜಿಲ್ಲಾ ಎಸ್‌.‍ಪಿ. ಯಶೋಧಾ ವಂಟಗೋಡಿ ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ’ ಎಂದರು.

‘ಬೆಳಿಗ್ಗೆ 10.30 ಗಂಟೆಗೆ ಉದ್ಘಾಟನಾ ಸಮಾರಂಭವಿದೆ. ದೊಡ್ಡಹುಣಸೆ ಕಲ್ಮಠದ ಚನ್ನಬಸವ ಮಹಾಸ್ವಾಮೀಜಿ ಹಾಗೂ ಕಲ್ಮಠದ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಶಾಸಕ ಯಾಸೀರ್‌ ಅಹ್ಮದ್ ಖಾನ್ ಪಠಾಣ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದರು.

ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಗೌಡ ಪಾಟೀಲ, ನಿಕಟಪೂರ್ವ ಅಧ್ಯಕ್ಷ ಪ್ರಭು ಅರಗೋಳ, ಹೋಬಳಿ ಅಧ್ಯಕ್ಷ ಬಸನಗೌಡ ಪಾಟೀಲ ಪತ್ರಿಕಾಗೋಷ್ಠಿಯಲ್ಲಿದ್ದರು.

ಎಂಟು ಗೋಷ್ಠಿ

‘ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ ಸ್ತ್ರೀ ಪರ ಚಿಂತನೆಗಳು ವೈವಿದ್ಯತೆ ಗೋಷ್ಠಿ ಕವಿಗೋಷ್ಠಿ ನೇಗಿಲಯೋಗಿ ಸಂಕೀರ್ಣ ಗೋಷ್ಠಿ ದಮನಿತರ ಧ್ವನಿ ನಮ್ಮ ಜಿಲ್ಲೆ ನಮ್ಮ ಹೆಮ್ಮೆ ಎಂಬ ವಿವಿಧ ವಿಷಯಗಳು ಸೇರಿ 8 ಗೋಷ್ಠಿಗಳು ನಡೆಯಲಿವೆ. ಜ. 25ರಂದು ಸಂಜೆ 5.45ಕ್ಕೆ ಬಹಿರಂಗ ಅಧಿವೇಶನ ಜರುಗಲಿದೆ. ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನವಿದೆ’ ಎಂದು ಲಿಂಗಯ್ಯ ಹಿರೇಮಠ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.