
ಹಾವೇರಿ: ಬೇಸಿಗೆ ಆರಂಭದ ದಿನಗಳಲ್ಲಿಯೇ ಜಿಲ್ಲೆಯಾದ್ಯಂತ ಬಿಸಿಲು ಹೆಚ್ಚಾಗಿ ಸೆಕೆಯೂ ಉಂಟಾಗುತ್ತಿದೆ. ಇದರ ನಡುವೆಯೇ ಮಂಗಳವಾರ ಸಂಜೆ ಜಿಲ್ಲೆಯ ಹಲವು ಕಡೆಗಳಲ್ಲಿ ಜೋರು ಹಾಗೂ ಸಾಧಾರಣ ಮಳೆಯಾಗಿ, ಭೂಮಿಯೂ ತಂಪಾಯಿತು.
ಕಳೆದ ಬಾರಿಗಿಂತ ಈ ಬಾರಿ ಬೇಸಿಗೆಯಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಿರುವ ಬಗ್ಗೆ ಹವಾಮಾನ ಇಲಾಖೆ ಈಗಾಗಲೇ ಮಾಹಿತಿ ನೀಡಿದೆ. ಜಿಲ್ಲೆಯ ಹಾವೇರಿ, ರಾಣೆಬೆನ್ನೂರು, ಶಿಗ್ಗಾವಿ, ಸವಣೂರು, ಬ್ಯಾಡಗಿ, ಹಾನಗಲ್ ತಾಲ್ಲೂಕಿನಲ್ಲಿ ಹೆಚ್ಚಿನ ಬಿಸಿಲು ಇರಲಿದೆ. ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನಲ್ಲೂ ತಕ್ಕಮಟ್ಟಿಗೆ ಬಿಸಿಲು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಬಿಸಿಲು ಆರಂಭವಾಗಿರುವ ದಿನಗಳಲ್ಲಿಯೇ ಮಂಗಳವಾರ ಮಧ್ಯಾಹ್ನದಿಂದಲೇ ಜಿಲ್ಲೆಯ ಹಲವು ಕಡೆಗಳಲ್ಲಿ ಮೋಡ ಕವಿತ ವಾತಾವರಣ ಕಂಡುಬಂತು. ಅಲ್ಲಲ್ಲಿ ಗಾಳಿ ಸಹಿತವಾಗಿ ತುಂತುರು ಮಳೆ ಸುರಿಯಿತು. ಕೆಲವು ಕಡೆಗಳಲ್ಲಿ ಜೋರು ಮಳೆಯಾಗಿ, ರಸ್ತೆ ಹಾಗೂ ಕಾಲುವೆಗಳಲ್ಲಿ ನೀರು ಹರಿಯಿತು.
ಹಾವೇರಿ ನಗರ, ತಾಲ್ಲೂಕಿನ ಗುತ್ತಲ ಹಾಗೂ ಸುತ್ತಮುತ್ತಲ ಸ್ಥಳಗಳಲ್ಲಿ ಮಳೆ ಸುರಿಯಿತು. ಶಿಗ್ಗಾವಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿಯೂ ಸಂಜೆ ಜಿಟಿ ಜಿಟಿ ಮಳೆಯಾಯಿತು.
ಬ್ಯಾಡಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಸಂಜೆ ಮೋಡ ಕವಿದ ವಾತಾವರಣ ಕಾಣಿಸಿಕೊಂಡಿತು. ಮಳೆಯೂ ಸುರಿದು, ಜನರಿಗೆ ತಂಪಿನ ಅನುಭವ ನೀಡಿತು.
ಸವಣೂರು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಸಂಜೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು. ಗಾಳಿಯೂ ಜೋರಾಗಿ ಬೀಸಿತು. ರಾಣೆಬೆನ್ನೂರು ಹಾಗೂ ಹಿರೇಕೆರೂರಿನಲ್ಲೂ ರಾತ್ರಿ ಜಿಟಿ ಜಿಟಿ ಮಳೆಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.