
ಹಾವೇರಿ: ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಹಾವೇರಿ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಎಂಜಿನಿಯರ್ ಶೇಖಪ್ಪ ಸಣ್ಣಪ್ಪ ಮತ್ತೀಕಟ್ಟಿ ಅವರ ಮನೆ ಹಾಗೂ ಇತರೆ ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದು, ₹ 3.69 ಕೋಟಿ ಮೊತ್ತದ ಆಸ್ತಿ ಪತ್ತೆ ಮಾಡಿದ್ದಾರೆ.
ಶೇಖಪ್ಪ ಅವರು ವಾಸವಿದ್ದ ಹಾವೇರಿಯ ಬಸವೇಶ್ವರನಗರದಲ್ಲಿರುವ ಬಾಡಿಗೆ ಮನೆ, ಹುಬ್ಬಳ್ಳಿಯಲ್ಲಿರುವ ಮನೆಗಳು, ವಾಣಿಜ್ಯ ಸಂಕೀರ್ಣ, ಸಂಬಂಧಿಕರ ಮನೆ ಸೇರಿದಂತೆ 6 ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ಮಂಗಳವಾರ ಶೋಧ ನಡೆಸಿದರು.
ಹಾನಗಲ್ ತಾಲ್ಲೂಕಿನ ಅಕ್ಕಿವಳ್ಳಿ ಗ್ರಾಮದ ಶೇಖಪ್ಪ ಅವರು ಸಹಾಯಕ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ್ದರು. ಸದ್ಯ ಕಾರ್ಯಪಾಲಕ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಇವರು ತಮ್ಮ ಸಂಪಾದನೆಗಿಂತ ಶೇ 221ರಷ್ಟು ಹೆಚ್ಚುವರಿ ಆಸ್ತಿ ಗಳಿಸಿರುವುದು ಪೊಲೀಸರ ಶೋಧದಿಂದ ಗೊತ್ತಾಗಿದೆ.
ಸ್ವಂತ ಊರಲ್ಲಿ 4 ಎಕರೆ ತೋಟ ಹೊಂದಿರುವ ಶೇಖಪ್ಪ ಅವರು ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿರುವ ಮಾಹಿತಿ ಲಭ್ಯವಾಗಿದೆ. ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಶೇಖಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು, ಆರೋಪಿಗೆ ನೋಟಿಸ್ ನೀಡಿದ್ದಾರೆ. ಶೇ 221ರಷ್ಟು ಹೆಚ್ಚು ಆಸ್ತಿಗೆ ಸಂಬಂಧಪಟ್ಟಂತೆ ಸ್ಪಷ್ಟನೆ ನೀಡುವಂತೆ ಸೂಚಿಸಿದ್ದಾರೆ. ಆಸ್ತಿಗೆ ದಾಖಲೆ ನೀಡದಿದ್ದರೆ, ಆರೋಪಿ ವಿರುದ್ಧ ಪೊಲೀಸರು ಮುಂದಿನ ಕ್ರಮ ಜರುಗಿಸಲಿದ್ದಾರೆ.
₹10.44 ಲಕ್ಷ ನಗದು ಜಪ್ತಿ: ‘ಶೇಖಪ್ಪ ಅವರು ವಾಸವಿದ್ದ ಹಾವೇರಿಯ ಬಸವೇಶ್ವರ ನಗರದ ಮನೆಯಲ್ಲಿ ₹10.44 ಲಕ್ಷ ನಗದು ಪತ್ತೆಯಾಗಿದೆ. ಕೆಲಸವೊಂದಕ್ಕೆ ಸಂಬಂಧಪಟ್ಟಂತೆ ಲಂಚದ ರೂಪದಲ್ಲಿ ಪಡೆದ ಹಣವಿರುವ ಅನುಮಾನವಿದ್ದು, ಈ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ಹೇಳಿವೆ.
‘₹ 1.72 ಕೋಟಿ ಮೌಲ್ಯದ 14 ನಿವೇಶನ, ₹ 1.94 ಕೋಟಿ ಮೌಲ್ಯದ ಮೂರು ಮನೆಗಳು(ಒಂದು ವಾಣಿಜ್ಯ ಸಂಕೀರ್ಣ) ಹಾಗೂ ನಾಲ್ಕು ಎಕರೆ ತೋಟದ ದಾಖಲೆಗಳು ಸಿಕ್ಕಿವೆ. ₹10.44 ಲಕ್ಷ ನಗದು ಜೊತೆಯಲ್ಲಿ, ₹ 25.40 ಲಕ್ಷ ಮೌಲ್ಯದ ಚಿನ್ನಾಭರಣ, ₹ 1.18 ಕೋಟಿ ಮೊತ್ತದ ಇತರೆ ಸಾಮಗ್ರಿ ಹಾಗೂ ₹ 15 ಲಕ್ಷ ಮೌಲ್ಯದ ವಾಹನ ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿವೆ.
‘ಅಕ್ಷಯ್ ಪಾರ್ಕ್‌ನಲ್ಲಿ ವಾಣಿಜ್ಯ ಸಂಕೀರ್ಣ, ಭೈರಿದೇವರಕೊಪ್ಪದಲ್ಲಿ 2 ಅಂತಸ್ತಿನ ಮನೆ, ದಾವಣಗೆರೆಯಲ್ಲೂ ಮನೆ ಇರುವ ಮಾಹಿತಿ ಲಭ್ಯವಾಗಿದೆ’ ಎಂದರು.
ಸರ್ಕಾರಕ್ಕೂ ವಂಚನೆ: ‘ಎಂಜಿನಿಯರ್ ಶೇಖಪ್ಪ ಅವರು ತಮ್ಮ ಸ್ವಂತ ಕಾರಿಗೂ ಸರ್ಕಾರಿ ಕಚೇರಿಯ ನೋಂದಣಿ ಫಲಕ ಅಳವಡಿಸಿದ್ದರು. ಅವರ ಪತ್ನಿ ಹಾಗೂ ಮಕ್ಕಳು, ಟೋಲ್‌ಗೇಟ್‌ಗಳಲ್ಲಿ ಸರ್ಕಾರಿ ಕಾರು ಎಂದು ನಮೂದಿಸಿ ಟೋಲ್ ಪಾವತಿಸದೇ ಉಚಿತವಾಗಿ ಸಂಚರಿಸುತ್ತಿದ್ದರು. ಇದರಿಂದ ಸರ್ಕಾರಕ್ಕೂ ವಂಚನೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಜೊತೆಗೆ, ಬೇನಾಮಿ ಹೆಸರಿನಲ್ಲೂ ಹಲವು ವಾಹನಗಳನ್ನು ಹೊಂದಿರುವ ಮಾಹಿತಿಯಿದೆ’ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.