ADVERTISEMENT

ಹಾವೇರಿ: ನಿರಂತರ ಮಳೆಯಿಂದ ಹೆಸರು ಬೆಳೆ ಹಾಳು- MSP ಕೇಂದ್ರಕ್ಕೆ ನೋಂದಣಿಯೇ ಇಲ್ಲ

ಸಂತೋಷ ಜಿಗಳಿಕೊಪ್ಪ
Published 7 ನವೆಂಬರ್ 2025, 2:47 IST
Last Updated 7 ನವೆಂಬರ್ 2025, 2:47 IST
<div class="paragraphs"><p>ಹಾವೇರಿ ಜಿಲ್ಲೆಯ ಸವಣೂರು ಎಪಿಎಂಸಿ ಆವರಣದಲ್ಲಿರುವ ಬೆಂಬಲ ಬೆಲೆ ಖರೀದಿ ಕೇಂದ್ರ</p></div>

ಹಾವೇರಿ ಜಿಲ್ಲೆಯ ಸವಣೂರು ಎಪಿಎಂಸಿ ಆವರಣದಲ್ಲಿರುವ ಬೆಂಬಲ ಬೆಲೆ ಖರೀದಿ ಕೇಂದ್ರ

   

ಹಾವೇರಿ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬೆಳೆದಿರುವ ಹೆಸರು ಬೆಳೆಯನ್ನು ಖರೀದಿಸಲು ರಾಜ್ಯ ಸರ್ಕಾರದಿಂದ ಬೆಂಬಲ ಬೆಲೆ ಕೇಂದ್ರ ತೆರೆಯಲಾಗಿದೆ. ಜಿಟಿ ಜಿಟಿ ಮಳೆಯಿಂದಾಗಿ ಹೆಸರು ಬೆಳೆ ಗುಣಮಟ್ಟ ಕಳೆದುಕೊಂಡಿದ್ದು, ಬೆಂಬಲ ಕೇಂದ್ರಕ್ಕೆ ಇದುವರೆಗೂ ಒಬ್ಬ ರೈತರು ಸಹ ನೋಂದಣಿ ಮಾಡಿಕೊಂಡಿಲ್ಲ.

ಜಿಲ್ಲೆಯ 514 ಹೆಕ್ಟೇರ್‌ ಕೃಷಿ ಪ್ರದೇಶದಲ್ಲಿ ಹೆಸರು ಬೆಳೆ ಬೆಳೆಯಲಾಗಿತ್ತು. ಮುಂಗಾರಿನಲ್ಲಿ ಜೋರು ಮಳೆಗಿಂತ ಜಿಟಿ ಜಿಟಿ ಮಳೆ ಹೆಚ್ಚಾಗಿದೆ. ಇದರಿಂದಾಗಿ ಹೆಸರು ಬೆಳೆ ಕಟಾವಿಗೆ ಬರುವ ಮುನ್ನವೇ ಭಾಗಶಃ ಹಾಳಾಗಿದೆ. ಕಟಾವಿಗೆ ಬಂದಿರುವ ಹೆಸರು ಸಹ ಎಫ್.ಎ.ಕ್ಯೂ ಗುಣಮಟ್ಟದ್ದಾಗಿಲ್ಲವೆಂದು ಬೆಂಬಲ ಬೆಲೆ ಕೇಂದ್ರದಲ್ಲಿ ತಿರಸ್ಕರಿಸಲಾಗುತ್ತಿದೆ.

ADVERTISEMENT

ಜಮೀನಿನಲ್ಲಿ ಬೆಳೆದಿರುವ ಹೆಸರು ಕಾಳನ್ನು ಹಿಡಿದುಕೊಂಡು ರೈತರು ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಕಾಳಿನ ಗುಣಮಟ್ಟ ಪರೀಕ್ಷೆ ನಡೆಸುತ್ತಿರುವ ಸಿಬ್ಬಂದಿ, ‘ಇದು ಖರೀದಿಗೆ ಯೋಗ್ಯವಲ್ಲ’ ಎಂದು ಹೇಳಿ ಕಳುಹಿಸುತ್ತಿದ್ದಾರೆ. ಹೀಗಾಗಿ, ಇದುವರೆಗೂ ಯಾವುದೇ ರೈತ ಕೇಂದ್ರದಲ್ಲಿ ಹೆಸರು ಕಾಳು ಮಾರಲು ನೋಂದಣಿ ಮಾಡಿಸಿಲ್ಲ.

ಜಿಲ್ಲೆಯ ಸವಣೂರು ತಾಲ್ಲೂಕಿನ 302 ಹೆಕ್ಟೇರ್ ಕೃಷಿ ಪ್ರದೇಶ ಹಾಗೂ ಹಾವೇರಿ ತಾಲ್ಲೂಕಿನ 120 ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ಹೆಸರು ಕಾಳು ಬೆಳೆಯಾಗಿದೆ. ಪ್ರತಿ ವರ್ಷವೂ ಈ ಎರಡು ತಾಲ್ಲೂಕಿನಲ್ಲಿ ಮಾತ್ರ ಮುಂಗಾರು ಹಂಗಾಮಿನಲ್ಲಿ ಹೆಸರು ಬೆಳೆಯಲಾಗುತ್ತಿದೆ. ಕಳೆದ ವರ್ಷವೂ ಹೆಸರು ಬೆಳೆ ಇಳುವರಿ ಕಡಿಮೆಯಾಗಿತ್ತು. ಈ ವರ್ಷವೂ ಜಿಟಿಜಿಟಿ ಮಳೆಯಿಂದಾಗಿ, ಸಂಪೂರ್ಣ ಬೆಳೆ ಹಾನಿಯಾಗಿದೆ.

ಹಲವು ಕಡೆಗಳಲ್ಲಿ ಜಮೀನಿನಲ್ಲಿಯೇ ನೀರು ನಿಂತುಕೊಂಡು ಹೆಸರು ಬೆಳೆ ಕೊಳೆತು ಹೋಗಿದೆ. ಕೆಲವು ಕಡೆಗಳಲ್ಲಿ ಕೈಗೆ ಸಿಕ್ಕಷ್ಟು ಬೆಳೆಯನ್ನು ರೈತರು ಕಟಾವು ಮಾಡಿದ್ದಾರೆ. ಕಟಾವು ನಂತರ ಕಾಳುಗಳನ್ನು ಪರೀಕ್ಷಿಸಿದಾಗ, ಗುಣಮಟ್ಟವಿಲ್ಲವೆಂಬುದನ್ನು ತಿಳಿದು ರೈತರು ಕಂಗಾಲಾಗಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಹೆಸರು ಕಾಳುಗಳನ್ನು ಪ್ರತಿ ಕ್ವಿಂಟಲ್‌ಗೆ ₹ 8,768ರಂತೆ ಖರೀದಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿ, ರೈತರು ಕಟಾವು ಮಾಡಿದ ನಂತರ ಹೆಸರು ಕಾಳುಗಳನ್ನು ಹಿಡಿದು ಕೇಂದ್ರಕ್ಕೆ ಹೋಗುತ್ತಿದ್ದಾರೆ. ಎಫ್‌.ಎ.ಕ್ಯೂ ಗುಣಮಟ್ಟದ ಕಾಳುಗಳು ಇಲ್ಲವೆಂದು ಹೇಳಿ ಕೇಂದ್ರದ ಸಿಬ್ಬಂದಿ ವಾಪಸು ಕಳುಹಿಸುತ್ತಿದ್ದಾರೆ.

₹8,768 ಬೆಂಬಲ ಬೆಲೆ ಸಿಗದಿದ್ದರೂ ಹಾಕಿದ ಬಂಡವಾಳದ ಹಣವಾದರೂ ಸಿಗಲಿ ಎಂಬ ಕಾರಣಕ್ಕೆ ರೈತರು ಖಾಸಗಿ ವ್ಯಾಪಾರಿಗಳಿಗೆ ಹೆಸರು ಮಾರುತ್ತಿದ್ದಾರೆ. ಎಪಿಎಂಸಿಗಳಲ್ಲಿ ಹೆಸರು ಕಾಳಿಗೆ ಕನಿಷ್ಠ ₹809 ಹಾಗೂ ಗರಿಷ್ಠ ₹7,511 (100 ಕೆ.ಜಿ.) ದರವಿದೆ. ಗುಣಮಟ್ಟ ತಗ್ಗಿರುವುದರಿಂದ, ರೈತರಿಗೆ ಕಡಿಮೆ ಬೆಲೆ ಸಿಗುತ್ತಿದೆ.

ಹಾವೇರಿ ಹಾಗೂ ಸವಣೂರು ತಾಲ್ಲೂಕಿನ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಗಳಲ್ಲಿ ಹೆಸರು ಖರೀದಿ ಕೇಂದ್ರ ತೆರೆಯಲಾಗಿದೆ. ಈ ಕೇಂದ್ರದಲ್ಲಿ ಯಾವುದೇ ರೈತರು ನೋಂದಣಿ ಮಾಡಿಸಿಲ್ಲ.

‘ಈ ವರ್ಷ ಹೆಸರು ಬೆಳೆ ಸಂಪೂರ್ಣ ಹಾಳಾಗಿದ್ದು, ರೈತರು ಕಂಗಾಲಾಗಿದ್ದಾರೆ. ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತರು ಸಂಕಷ್ಟದಲ್ಲಿದ್ದಾರೆ. ಹೆಸರು ಕಾಳನ್ನು ಕೇಂದ್ರಕ್ಕೆ ಕೊಂಡೊಯ್ದರೆ, ಖರೀದಿಸಲು ಸಾಧ್ಯವಿಲ್ಲವೆಂದು ವಾಪಸು ಕಳುಹಿಸುತ್ತಿದ್ದಾರೆ. ಹೀಗಾಗಿ, ಕಡಿಮೆ ಬೆಲೆಗೆ ಹೆಸರು ಮಾರುತ್ತಿದ್ದೇವೆ’ ಎಂದು ಸವಣೂರು ರೈತ ಮಲ್ಲಿಕಾರ್ಜುನ ಬಾಡದ ಹೇಳಿದರು.

‘ರೈತರು ಬೆಳೆದಿರುವ ಹೆಸರು ಕಾಳುಗಳನ್ನು ಗುಣಮಟ್ಟದ ಮೇಲೆ ಅಳೆಯದೇ ಖರೀದಿಸಬೇಕು. ರೈತರ ಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು’ ಎಂದು ಅವರು ಆಗ್ರಹಿಸಿದರು.

ರೈತರ ನೋಂದಣಿ ಆಗದ ಬಗ್ಗೆ ಪ್ರತಿಯಿಸಿದ ಸವಣೂರು ಕೇಂದ್ರದ ಅಧಿಕಾರಿಯೊಬ್ಬರು, ‘ನಮ್ಮ ಭಾಗದಲ್ಲಿ ಹೆಸರು ಬೆಳೆಯಿಲ್ಲ. ಇದ್ದರೂ ಎಲ್ಲವೂ ಹಾಳಾಗಿದೆ. ಹೀಗಾಗಿ, ರೈತರ ನೋಂದಣಿ ಆಗಿಲ್ಲ’ ಎಂದರು. 

ಮಳೆಯಿಂದ ಈ ಬಾರಿ ಹೆಸರು ಹಾಳಾಗಿದೆ. ಚೆನ್ನಾಗಿರುವ ಕಾಳನ್ನು ಮಾತ್ರ ಖರೀದಿ ಮಾಡುತ್ತಿರುವುದು ಸರಿಯಲ್ಲ. ಸಮೀಕ್ಷೆ ಮಾಡಿ ಎಲ್ಲ ಬಗೆಯ ಕಾಳುಗಳನ್ನು ತಕ್ಕಮಟ್ಟಿಗೆ ದರ ನಿಗದಿಪಡಿಸಿ ಖರೀದಿಸಬೇಕು

--ಮಂಜಪ್ಪ ಹಿರೇಕಣಗಿ ರೈತ

ನಾಲ್ಕು ಎಕರೆ ಜಮೀನಿನಲ್ಲಿ ಶೇಂಗಾ ಬೆಳೆದಿದ್ದೇನೆ. ಕೇಂದ್ರದಲ್ಲಿ ಹೆಚ್ಚು ಬೆಲೆ ಇರುವುದರಿಂದ ನೋಂದಣಿ ಮಾಡಿಸಿದ್ದೇನೆ. ಸದ್ಯದಲ್ಲೇ ಶೇಂಗಾ ತಂದು ಕೇಂದ್ರಕ್ಕೆ ಕೊಡುತ್ತೇನೆ

-ಶಿವಪ್ಪ ಹನುಮಂತಪ್ಪ ಅರಗೋಳ ಮಂತ್ರೋಡಿ ರೈತ

ಸೋಯಾಬಿನ್ ಶೇಂಗಾ ಬೆಳೆಗೆ ನೋಂದಣಿ

ಜಿಲ್ಲೆಯಲ್ಲಿ ಮೆಕ್ಕೆಜೋಳ ಸೋಯಾಬಿನ್ ಹಾಗೂ ಶೆಂಗಾ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗಿದೆ. ಸೋಯಾಬಿನ್ ಹಾಗೂ ಶೇಂಗಾ ಬೆಳೆಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ರಾಜ್ಯ ಸರ್ಕಾರ ಕೇಂದ್ರಗಳನ್ನು ತೆರೆದಿದೆ. ಎರಡೂ ಬೆಳೆಗೂ ಹಲವು ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಸವಣೂರು ಎಪಿಎಂಸಿ ಆವರಣದಲ್ಲಿರುವ ಖರೀದಿ ಕೇಂದ್ರದಲ್ಲಿ ಸೋಯಾಬಿನ್ ಬೆಳೆಗೆ 99 ರೈತರು ಹಾಗೂ ಶೇಂಗಾ ಬೆಳೆಗೆ ಮೂವರು ರೈತರು ನೋಂದಣಿ ಮಾಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.