
ಹಾವೇರಿ: ಜಿಲ್ಲೆಯಲ್ಲಿ ನೀರಿನ ಸಮಸ್ಯೆ ನೀಗಿಸುವ ‘ಬೇಡ್ತಿ–ವರದಾ ನದಿ ಜೋಡಣೆ ಯೋಜನೆ’ ಜಾರಿಗೆ ಆಗ್ರಹಪಡಿಸಿ ಮಠಾಧೀಶರು ಮತ್ತು ಜನಪ್ರತಿನಿಧಿಗಳ ಸಮ್ಮುಖದಲ್ಲಿ ಜಿಲ್ಲಾ ಮಟ್ಟದಲ್ಲಿ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆ ನಿರ್ಧರಿಸಿದೆ.
ನಗರದಲ್ಲಿ ಸೋಮವಾರ ನಡೆದ ತುರ್ತು ಸಭೆಯಲ್ಲಿ ಮುಖಂಡರು, ‘ಕುಡಿಯುವ ನೀರು ಹಾಗೂ ಕೃಷಿಗೆ ನೀರು ಒದಗಿಸುವ ಯೋಜನೆಯನ್ನು ಯಾವುದೇ ಕಾರಣಕ್ಕೂ ಕೈಬಿಡದಂತೆ ಸರ್ಕಾರಕ್ಕೆ ಒತ್ತಾಯಿಸೋಣ’ ಎಂದರು.
‘ಜಿಲ್ಲೆಯಲ್ಲಿ ವರದಾ, ತುಂಗಭದ್ರಾ ಸೇರಿ ಹಲವು ನದಿಗಳಿದ್ದರೂ ಬರಗಾಲ ಆವರಿಸುತ್ತಿದೆ. ಬೇಸಿಗೆಯಲ್ಲಿ ನದಿ ತೀರದ ಊರುಗಳಲ್ಲಿ ಕುಡಿಯಲು ನೀರು ಸಿಗಲ್ಲ’ ಎಂದು ಅಳಲು ತೋಡಿಕೊಂಡಿರು.
‘ಕೃಷಿಗೆ ಮಳೆಯನ್ನೇ ಆಶ್ರಯಿಸಿರುವ ರೈತರಿಗೆ ಪ್ರತಿ ವರ್ಷ ನಷ್ಟವಾಗುತ್ತದೆ. ಇದಕ್ಕೆಲ್ಲ ಬೇಡ್ತಿ–ವರದಾ ನದಿ ಜೋಡಣೆಯೇ ಪರಿಹಾರ’ ಎಂದು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.
‘ಹಾವೇರಿ ಅಲ್ಲದೇ ಗದಗ, ಧಾರವಾಡ, ಕೊಪ್ಪಳ, ರಾಯಚೂರು ಜನರಿಗೂ ಯೋಜನೆಯಿಂದ ಲಾಭವಾಗಲಿದೆ. ಯೋಜನೆ ಜಾರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಚ್ಛಶಕ್ತಿ ತೋರಿವೆ. ಆದರೆ, ಕೆಲವರು ಈ ಯೋಜನೆಗೆ ಅಡ್ಡಿಪಡಿಸುತ್ತಿದ್ದಾರೆ’ ಎಂದರು.
ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಮಾತನಾಡಿ, ‘ಇದು ಕುಡಿಯುವ ನೀರಿಗೆ ಸಂಬಂಧಪಟ್ಟ ವಿಷಯ. ಅರಣ್ಯಕ್ಕೆ ಧಕ್ಕೆ ಆಗುವುದಿಲ್ಲ. ವಾಸ್ತವ ಅರಿಯದೇ ಅಡ್ಡಿಪಡಿಸುವುದು ಸರಿಯಲ್ಲ’ ಎಂದು ಪ್ರತಿಪಾದಿಸಿದರು.
‘ಜಿಲ್ಲೆಯ ನೀರಿನ ಬವಣೆ ನೀಗಿಸಲು ಯೋಜನೆ ಆಗಬೇಕು. ಹೋರಾಟಕ್ಕೆ ನಾವೂ ಬೆಂಬಲ ನೀಡುತ್ತೇವೆ. ಜನಪ್ರತಿನಿಧಿಗಳೂ ಜನರ ಹಿತ ರಕ್ಷಣೆಗಾಗಿ ಒಗ್ಗಟ್ಟಿನಿಂದ ಹೋರಾಟಕ್ಕೆ ಬರಬೇಕು’ ಎಂದರು.
ಬೇಡ್ತಿ–ವರದಾ ವಿಚಾರದಲ್ಲಿ ಹಾವೇರಿ ಜಿಲ್ಲೆಗೆ ಒಳ್ಳೆಯದಾಗುತ್ತಿದೆ. ಡಿಪಿಆರ್ ಮುನ್ನವೇ ವಿರೋಧಿಸಿ ಸಮಾವೇಶ ನಡೆಸಿ ಗೊಂದಲ ಸೃಷ್ಟಿ ಸರಿಯಲ್ಲ. ಡಿಪಿಆರ್ ಆಗುವವರೆಗೂ ಕಾಯಬೇಕುಶ್ರೀನಿವಾಸ್ ಮಾನೆ ಹಾನಗಲ್ ಕ್ಷೇತ್ರದ ಶಾಸಕ
‘ನದಿ ಜೋಡಣೆ ಯೋಜನೆಯನ್ನು ಭಾವನಾತ್ಮಕವಾಗಿ ಪರಿಗಣಿಸಬಾರದು. ವಸ್ತುಸ್ಥಿತಿ ಅರಿತು ಸಹಕರಿಸಬೇಕು. ಯೋಜನೆಯ ಮಹತ್ವ ತಿಳಿಸಲು ಪಕ್ಷಾತೀತವಾಗಿ ಜನಜಾಗೃತಿ ಸಮಾವೇಶ ಏರ್ಪಡಿಸುತ್ತೇವೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು. ಶಿರಸಿಯಲ್ಲಿ ನಡೆದ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಅರಣ್ಯಕ್ಕೆ ಯಾವುದೇ ಧಕ್ಕೆಯಾಗದಂತೆ ನೀರು ಎತ್ತುವ ಮೂಲಕ ಯೋಜನೆ ಜಾರಿಗೆ ಡಿಪಿಆರ್ ಆಗಲಿದೆ. ಆದರೆ ಕೆಲವರು ಜನರಿಗೆ ತಪ್ಪು ಸಂದೇಶ ನೀಡಿ ದಾರಿ ತಪ್ಪಿಸುತ್ತಿರುವುದು ಸರಿಯಲ್ಲ’ ಎಂದರು. ‘ಶಿರಸಿ–ಸಿದ್ದಾಪುರ ಹಾಗೂ ಹಾವೇರಿ ಜಿಲ್ಲೆಯ ಜನರ ನಡುವೆ ನಿಕಟ ಸಂಬಂಧವಿದೆ. ಇದಕ್ಕೆ ಧಕ್ಕೆ ತರಬಾರದು. ಕುಡಿಯುವ ನೀರಿನ ಸಮಸ್ಯೆಗೆ ಈ ಯೋಜನೆ ಪರಿಹಾರ ನೀಡಲಿದೆ. ಪ್ರತಿ ಗ್ರಾಮ ತಾಲ್ಲೂಕು ಮಟ್ಟದಿಂದ ಪಾದಯಾತ್ರೆ ಆರಂಭಿಸುವ ಚಿಂತನೆಯಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.