ADVERTISEMENT

ಭವ್ಯ ಮನೆಗಳಿಗೆ ಟಾರ್ಪಲ್‌ಗಳೇ ಚಾವಣಿಗಳು!

ನೆರೆ ಹೊಡೆತಕ್ಕೆ ನಲುಗಿದ ಹಿರೇಮಗದೂರು * ಹಗೇವಿನಲ್ಲಿದ್ದ ಧಾನ್ಯಗಳೂ ನಾಶ, ಕೂಳಿಗೆ ಪರದಾಟ

ಎಂ.ಸಿ.ಮಂಜುನಾಥ
Published 22 ಆಗಸ್ಟ್ 2019, 19:46 IST
Last Updated 22 ಆಗಸ್ಟ್ 2019, 19:46 IST
ಚಾವಣಿ ಕುಸಿದ ಮನೆಗೆ ಟಾರ್ಪಲ್ ಕಟ್ಟಿರುವುದು 
ಚಾವಣಿ ಕುಸಿದ ಮನೆಗೆ ಟಾರ್ಪಲ್ ಕಟ್ಟಿರುವುದು    

ಹಾವೇರಿ: ಅವಶೇಷಗಳಡಿ ಹೂತು ಹೋಗಿದ್ದ ಮನೆ ಸಾಮಾನುಗಳು. ಅವುಗಳನ್ನು ಹೊರತೆಗೆದು ಸ್ವಚ್ಛಗೊಳಿಸುತ್ತಿದ್ದ ಮಹಿಳೆಯರು. ವಾಲಿದ ಗೋಡೆಗಳಿಗೆ ಬೊಂಬುಗಳನ್ನು ಆಸರೆಯಾಗಿ ನಿಲ್ಲಿಸಿ ಬದುಕು ಕಟ್ಟಿಕೊಳ್ಳುತ್ತಿದ್ದ ಗ್ರಾಮಸ್ಥರು. ಚಾವಣಿಯೇ ಇಲ್ಲದ ಮನೆಯಲ್ಲಿ 80ರ ವೃದ್ಧೆಯ ವಾಸ...!

ಸವಣೂರು ತಾಲ್ಲೂಕಿನ ಹಿರೇಮಗದೂರು ಗ್ರಾಮದಲ್ಲಿ ಬುಧವಾರದ ಕಂಡು ಚಿತ್ರಣವಿದು. ಇಲ್ಲಿ ಶತಮಾನದ ಹಿಂದೆ ಕಟ್ಟಿರುವ ಭವ್ಯ ಮನೆಗಳು ಮಾತ್ರವಲ್ಲದೇ, ವರ್ಷದ ಹಿಂದಷ್ಟೇ ಗೃಹಪ್ರವೇಶ ಮಾಡಿದ್ದ ಗೂಡುಗಳೂ ನೆಲಕ್ಕುರುಳಿವೆ. ನೆರೆಯ ಅಬ್ಬರ ಮರೆಯಾಗಿ ಊರು ಶಾಂತವಾದಂತೆ ಕಂಡರೂ, ಹಗೇವಿನಲ್ಲಿ ಸಂಗ್ರಹಿಸಿಟ್ಟಿದ್ದ ದವಸ–ಧಾನ್ಯಗಳೂ ನಾಶವಾಗಿ ತುತ್ತು ಕೂಳಿಗೂ ಒದ್ದಾಡುತ್ತಿರುವ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.‌

ಪೂರ್ತಿ ಮನೆ ಕಳೆದುಕೊಂಡವರು ಗ್ರಾಮದಲ್ಲೇ ಬಾಡಿಗೆ ಮನೆಗಳಲ್ಲಿ ನೆಲೆಸಿದ್ದಾರೆ. ಇನ್ನೂ ಕೆಲವರು ಸಂಬಂಧಿಕರ ಆಶ್ರಯದಲ್ಲಿದ್ದಾರೆ. ಚಾವಣಿಯಷ್ಟೇ ಬಿದ್ದಿದ್ದ ಮನೆಗಳಿಗೆ ದೊಡ್ಡ ದೊಡ್ಡ ಟಾರ್ಪಲ್‌ಗಳನ್ನು ಕಟ್ಟಿಕೊಂಡಿರುವ ನಿವಾಸಿಗಳು, ಅದು ಹಾರಿ ಹೋಗದಂತೆ ಬೊಂಬುಗಳನ್ನು ಜೋಡಿಸಿ ಕೃತಕ ಚಾವಣಿ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ.

ADVERTISEMENT

‘ನಮ್ಮ ಗ್ರಾಮದಲ್ಲಿ ಪರಿಹಾರ ಕೇಂದ್ರ ಇದೆಯಾದರೂ ಅಲ್ಲಿ ಅಳ್ಳಳ್ಳಿ, ಚಿಕ್ಕಮಗದೂರು ಹಾಗೂ ನದಿನೀರಲಗಿ ಗ್ರಾಮದ ಸಂತ್ರಸ್ತರೇ ಹೆಚ್ಚಿದ್ದಾರೆ. ಅವರ ಸ್ಥಿತಿ ನಮಗಿಂತಲೂ ಶೋಚನೀಯವಿರುವ ಕಾರಣ, ನಾವೂ ಏನೂ ಪ್ರಶ್ನೆ ಮಾಡಲು ಹೋಗಿಲ್ಲ. ನಮ್ಮ ಸಾಲಿನ ಎಲ್ಲ ಮನೆಗಳ ಗೋಡೆಗಳೂ ಬಿರುಕು ಬಿಟ್ಟಿದ್ದು, ಯಾವಾಗ ಬೀಳುತ್ತವೋ ಗೊತ್ತಿಲ್ಲ. ಮಕ್ಕಳನ್ನೆಲ್ಲ ಸಂಬಂಧಿಕರ ಮನೆಗೆ ಕಳುಹಿಸಿ, ನಾವು ಇಲ್ಲೇ ವಾಸ ಪ್ರಾರಂಭಿಸಿದ್ದೇವೆ. ರಾತ್ರಿ ಮಲಗಿದರೆ, ಬೆಳಿಗ್ಗೆ ಎದ್ದೇಳುತ್ತೇವೆ ಎಂಬ ನಂಬಿಕೆಯೇ ಇಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು ಗ್ರಾಮದ ಗದಿಗಯ್ಯ ಕೆಂಬಾವಿಮಠ.

8 ಮಂದಿ ಸಮಾಧಿ ಆಗ್ತಿದ್ವಿ: ‘ಆ.7ರ ನಸುಕಿನ ವೇಳೆ ಇಡೀ ಗ್ರಾಮ ಜಲಾವೃತವಾಗಿತ್ತು. ಇಬ್ಬರು ಮಕ್ಕಳು, ಪತ್ನಿ ಹಾಗೂ ಅಣ್ಣನ ಕುಟುಂಬ ಸದಸ್ಯರನ್ನು ತಕ್ಷಣ ಎದ್ದೇಳಿಸಿದೆ. ಮನೆಯೊಳಗೆ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದ ಕಾರಣ, ಹಿತ್ತಲ ಬಾಗಿಲು ಮೂಲಕ ಎಲ್ಲರೂ ಹೊರಗೆ ಹೋಗಿ ಕಟ್ಟೆ ಮೇಲೆ ನಿಂತುಕೊಂಡೆವು. ಎರಡೇ ನಿಮಿಷದಲ್ಲಿ ಧುಪ್‌... ಎಂದು ಶಬ್ದ ಕೇಳಿಸಿತು. ಬಾಗಿಲು ತೆಗೆದು ನೋಡಿದರೆ ಮನೆ ಪೂರ್ತಿ ಕುಸಿದಿತ್ತು. ಸ್ವಲ್ಪ ತಡವಾಗಿದ್ದರೂ ಎಂಟು ಜನ ಜೀವಂತ ಸಮಾಧಿ ಆಗುತ್ತಿದ್ದೆವು’ ಎಂದು ವೀರಯ್ಯ ಅವರು ಅಂದಿನ ಘಟನೆಯನ್ನು ನೆನೆಸಿಕೊಂಡರು.

ಮಳೆ ಬಂದ್ರೆ ಹೊರಗೆ ಓಡ್ತೀವಿ...

‘ಮಳೆ ಸುರಿದ್ರೆ ಜನ ರಕ್ಷಣೆಗಾಗಿ ಮನೆಯೊಳಗೆ ಓಡೋದನ್ನ ನೋಡಿರ್ತೀರಿ. ಆದ್ರೆ, ಈ ಊರಲ್ಲಿ ತುಂತುರು ಮಳೆ ಬಂದ್ರೂ ಜನ ಮನೆಯಿಂದ ಹೊರಗೆ ಓಡಿ ಬರ್ತಾರೆ. ಎಲ್ಲಿ ಮನೆ ಕುಸಿಯುತ್ತದೋ ಎಂಬ ಭಯ ಅವರಿಗೆ. ಮಳೆ, ಪ್ರವಾಹ ಎಂಬ ಎರಡು ಶಬ್ದಗಳನ್ನು ಕೇಳಿದ್ರೆ, ಗಾಢ ನಿದ್ರೆಯಲ್ಲಿದ್ರೂ ಬೆಚ್ಚಿ ಬೀಳ್ತಿದಾರೆ. ನೆರೆ ಆ ಮಟ್ಟದ ಅನಾಹುತವನ್ನು ಸೃಷ್ಟಿಸಿಬಿಟ್ಟಿದೆ’ ಎಂದು ಹೇಳಿದರು ಗ್ರಾಮದ ಅರ್ಜುನ್.

ನಿಲ್ಲುತ್ತಿಲ್ಲ ಹಿರಿಜೀವದ ಕಣ್ಣೀರು

‘ಇದು ನನ್ನ ಗಂಡನ ಮನೆ. ಅವರು ಹುಟ್ಟಿದ್ದು, ಆಡಿ ಬೆಳೆದದ್ದು, ನನ್ನೊಂದಿಗೆ 55 ವರ್ಷ ದಾಂಪತ್ಯ ಜೀವನ ಕಳೆದದ್ದು ಎಲ್ಲವೂ ಇಲ್ಲೇ. ಹೀಗಾಗಿ, ಈ ಮನೆಯ ಪ್ರತಿ ಜಾಗದಲ್ಲೂ ಅವರ ನೆನಪು ಅಡಗಿದೆ. ಐದು ವರ್ಷಗಳ ಹಿಂದೆ ಮನೆ ಕುಸಿದಾಗ, ಮಕ್ಕಳು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರಿಪೇರಿ ಮಾಡಿಸಿದ್ದರು. ಈಗ ಪ್ರವಾಹಕ್ಕೆ ಪುನಃ ಚಾವಣಿ ಬಿದ್ದು ಹೋಗಿದೆ.ಮತ್ತೆ ಮಳೆಯಾಗಬಹುದೆಂದು ರಿಪೇರಿ ಮಾಡಿಸಲು ಹೋಗಿಲ್ಲ’ ಎನ್ನುತ್ತ ದುಃಖತಪ್ತರಾದರು 80 ವರ್ಷದನೀಲಮ್ಮ ಬಾರ್ಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.