ADVERTISEMENT

ಹಾವೇರಿ: ಲಾಕ್‌ಡೌನ್‌ ಅವಧಿಯಲ್ಲಿ 24 ಗಂಟೆಯೂ ಕಾರ್ಯ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2020, 9:28 IST
Last Updated 21 ಏಪ್ರಿಲ್ 2020, 9:28 IST
ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್‌–19ಗೆ ಸಂಬಂಧಿಸಿದಂತೆ ತೆರೆದಿರುವ ಸಹಾಯವಾಣಿ ಕೇಂದ್ರ  –ಪ್ರಜಾವಾಣಿ ಚಿತ್ರ 
ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್‌–19ಗೆ ಸಂಬಂಧಿಸಿದಂತೆ ತೆರೆದಿರುವ ಸಹಾಯವಾಣಿ ಕೇಂದ್ರ  –ಪ್ರಜಾವಾಣಿ ಚಿತ್ರ    

ಹಾವೇರಿ: ಕೊರೊನಾ ಸೋಂಕು (ಕೋವಿಡ್–19) ತಡೆಗಟ್ಟಲು ಹಾಗೂ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ತೆರೆದಿದ್ದು, ದಿನದ 24 ಗಂಟೆಯೂ ಇಲ್ಲಿನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಲಾಕ್‌ಡೌನ್‌ ಅವಧಿಯಲ್ಲಿ (ಏ.20ರವರೆಗೆ) ಒಟ್ಟು 317 ಕರೆಗಳನ್ನು ಸ್ವೀಕರಿಸಲಾಗಿದೆ. ಒಂದು ಪಾಳಿಯಲ್ಲಿ ವೈದ್ಯರು, ಪೊಲೀಸ್‌, ಆ್ಯಂಬುಲೆನ್ಸ್‌ ಮೇಲ್ವಿಚಾರಕ ಸೇರಿದಂತೆ 12 ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ದಿನಕ್ಕೆ 3 ಪಾಳಿಯಲ್ಲಿ ಒಟ್ಟು 36 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

‘ದುಡಿಮೆ ಇಲ್ಲ ಕೆಲಸ ಕೊಡಿ, ದಿನಸಿ ಸಿಕ್ಕಿಲ್ಲ ಕೊಡಿಸಿ, ರೇಷನ್‌ ಕಾರ್ಡ್‌ ಬಂದಿಲ್ಲ, ಹೊರ ಜಿಲ್ಲೆಗೆ ಹೋಗಲು ಪಾಸ್‌ ಬೇಕಿತ್ತು... ಇಂಥ ಕರೆಗಳೇ ಜಾಸ್ತಿ ಬರುತ್ತಿವೆ. ಕರೆ ಬಂದಾಗ, ಅವರ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆಯನ್ನು ನಮೂದಿಸಿಕೊಂಡು, ಸಂಬಂಧಪಟ್ಟ ಇಲಾಖೆ ಅಧಿಕಾರಿ ಗಮನಕ್ಕೆ ತರುತ್ತೇವೆ’ ಎಂದು ಸಹಾಯವಾಣಿ ಕೇಂದ್ರದ ಮುಖ್ಯಸ್ಥ ಚನ್ನಬಸಪ್ಪ ಚಿಂದಿ ಮಾಹಿತಿ ನೀಡಿದರು.

ADVERTISEMENT

‘ ಬೆಂಗಳೂರು, ಕೇರಳ, ಬೇರೆ ಜಿಲ್ಲೆಯಿಂದ ಕೆಲವರು ನಮ್ಮ ವಾರ್ಡ್‌, ಊರಿಗೆ ಬಂದಿದ್ದಾರೆ. ಅವರಿಗೆ ಆರೋಗ್ಯ ತಪಾಸಣೆ ಮಾಡಿ ಎಂದು ಕೆಲವರು ದೂರು ನೀಡುತ್ತಾರೆ. ಕ್ವಾರಂಟೈನ್‌ ಬಗ್ಗೆಯೂ ಜನರಿಗೆ ಆತಂಕವಿದ್ದು, ಅದರ ಬಗ್ಗೆಯೂ ಮಾಹಿತಿ ಕೇಳುತ್ತಾರೆ. ಕೊರೊನಾ ವೈರಸ್‌ ಸೋಂಕು ಮತ್ತು ಕೋವಿಡ್‌–19ಗೆ ಸಂಬಂಧಪಟ್ಟ ಮಾಹಿತಿಯನ್ನು ನೀಡುತ್ತಿದ್ದೇವೆ’ ಎಂದು ವೈದ್ಯಕೀಯ ಸಿಬ್ಬಂದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.