ADVERTISEMENT

ಹಾವೇರಿ: ಜ. 7ರಂದು ಹಿಮ್ಸ್ ಉದ್ಘಾಟನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ: ಸಮಾರಂಭ ಆಯೋಜನೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 6:50 IST
Last Updated 1 ಜನವರಿ 2026, 6:50 IST
ಹಾವೇರಿಯ ಹಿಮ್ಸ್ ಉದ್ಘಾಟನಾ ಸಮಾರಂಭದ ಸಿದ್ಧತೆ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ನೇತೃತ್ವದಲ್ಲಿ ಬುಧವಾರ ಪೂರ್ವಭಾವಿ ಸಭೆ ಜರುಗಿತು
ಹಾವೇರಿಯ ಹಿಮ್ಸ್ ಉದ್ಘಾಟನಾ ಸಮಾರಂಭದ ಸಿದ್ಧತೆ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ನೇತೃತ್ವದಲ್ಲಿ ಬುಧವಾರ ಪೂರ್ವಭಾವಿ ಸಭೆ ಜರುಗಿತು   

ಹಾವೇರಿ: ಇಲ್ಲಿಯ ದೇವಗಿರಿ ರಸ್ತೆಯಲ್ಲಿರುವ ‘ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್‌)’ ಉದ್ಘಾಟನೆಗೆ ದಿನ ನಿಗದಿಯಾಗಿದ್ದು, ವ್ಯವಸ್ಥಿತವಾಗಿ ಸಮಾರಂಭ ಹಮ್ಮಿಕೊಳ್ಳಲು ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದೆ.

ನಗರದ ಹಿಮ್ಸ್‌ನಲ್ಲಿ ಎಂಬಿಬಿಎಸ್ ತರಗತಿಗಳು ಶುರುವಾಗಿ ಹಲವು ವರ್ಷವಾಗಿದೆ. ಆದರೆ, ಹಿಮ್ಸ್ ಉದ್ಘಾಟನೆಯಾಗಿರಲಿಲ್ಲ. ಮುಖ್ಯಮಂತ್ರಿಯವರ ಸಮಯಕ್ಕಾಗಿ ಅಧಿಕಾರಿಗಳು ಪ್ರಯತ್ನಿಸುತ್ತಿದ್ದರು. ಈಗ ಜ. 7ರಂದು ಮುಖ್ಯಮಂತ್ರಿ ಅವರು ಸಮಯ ನೀಡಿದ್ದು, ಅಂದೇ ಹಿಮ್ಸ್ ಉದ್ಘಾಟನಾ ಸಮಾರಂಭ ಆಯೋಜಿಸಲಾಗುತ್ತಿದೆ.

ಉದ್ಘಾಟನಾ ಸಮಾರಂಭದ ಸಿದ್ಧತೆ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಹಿಮ್ಸ್‌ ಸಭಾಭವನದಲ್ಲಿ ಬುಧವಾರ ಸಭೆ ನಡೆಸಿದರು.

ADVERTISEMENT

‘ಜನವರಿ 7ರಂದು ಹಾವೇರಿ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರುತ್ತಿದ್ದಾರೆ. ಜಿಲ್ಲೆಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶೀಲಾನ್ಯಾಸ ನೆರೆವೇರಿಸಲಿದ್ದಾರೆ. ಹಿಮ್ಸ್‌ ಉದ್ಘಾಟನೆ ಮಾಡಲಿದ್ದಾರೆ’ ಎಂದು ವಿಜಯ ಮಹಾಂತೇಶ ಅವರು ಅಧಿಕಾರಿಗಳಿಗೆ ತಿಳಿಸಿದರು.

‘ಹಾವೇರಿಯ ಹಿಮ್ಸ್‌ ಉದ್ಘಾಟನಾ ಸಮಾರಂಭವನ್ನು ಅರ್ಥಪೂರ್ಣವಾಗಿ ಆಯೋಜಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇಂದಿನಿಂದಲೇ ತಯಾರಿ ಮಾಡಿಕೊಳ್ಳಬೇಕು’ ಎಂದು ಸೂಚಿಸಿದರು.

‘ಹಿಮ್ಸ್ ಉದ್ಘಾಟನಾ ವೇದಿಕೆಯಲ್ಲೇ, ಜಿಲ್ಲೆಯ ಅಗಡಿ ಗ್ರಾಮದ ಅಂಗನವಾಡಿ ನಂ. 71ರ ಕಟ್ಟಡ ಕಾಮಗಾರಿಯನ್ನು ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ. ಕರ್ಜಗಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನೂತನ ಶಾಲಾ ಕಟ್ಟಡ, ಹಾವೇರಿಯ ಕನವಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಠಡಿ ನಿರ್ಮಾಣ ಕಾಮಗಾರಿಯನ್ನೂ ಉದ್ಘಾಟನೆ ಮಾಡಲಿದ್ದಾರೆ’ ಎಂದರು.

‘ಹಾವೇರಿಯಲ್ಲಿ ನಿರ್ಮಾಣವಾದ ಹೊಸ ಪ್ರವಾಸ ಮಂದಿರ ಹಾಗೂ ನೆಲೋಗಲ್‌ನಲ್ಲಿ ನಿರ್ಮಾಣವಾದ ಹೊಸ ಪ್ರವಾಸ ಮಂದಿರವೂ ಉದ್ಘಾಟನೆಯಾಗಲಿದೆ. ಗೌಡಶಾನಿ ನೀಲಗೌಡ ಬಾಲಕಿಯರ ಪ್ರಥಮ ದರ್ಜೆ ಮಹಾವಿದ್ಯಾಲಯದ ಅಭಿವೃದ್ಧಿ ಕಾಮಗಾರಿ, ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ ಕಟ್ಟಡ ಶೀಲಾನ್ಯಾಸವೂ ನೆರವೇರಲಿದೆ’ ಎಂದರು.

‘ಮುಖ್ಯಮಂತ್ರಿ ಅವರು ಬರುವುದರಿಂದ, ಸಾಕಷ್ಟು ಗಣ್ಯರು ನಗರಕ್ಕೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಭದ್ರತೆ ಬಗ್ಗೆಯೂ ಹೆಚ್ಚಿನ ಒತ್ತು ನೀಡಬೇಕು. ಅಗತ್ಯವಿರುವ ಕಡೆಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಬೇಕು’ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ರುಚಿ ಬಿಂದಲ್, ಜಿಲ್ಲಾ ಎಸ್‌ಪಿ ಯಶೋಧಾ ವಂಟಗೋಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಲ್. ನಾಗರಾಜ್, ಹಿಮ್ಸ್ ನಿರ್ದೇಶಕ ಡಾ. ಪ್ರದೀಪಕುಮಾರ ಎಂ.ವಿ ಹಾಗೂ ಇತರರು ಇದ್ದರು.

‘2022ರಲ್ಲಿ ಹಿಮ್ಸ್ ಆರಂಭ’

ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಹಿಮ್ಸ್) 2020ರ ಜನವರಿಯಲ್ಲಿ ಸರ್ಕಾರ ಆಡಳಿತಾತ್ಮಕ ಮಂಜೂರಾತಿ ನೀಡಿತ್ತು. 2022ರಲ್ಲಿ ಸಂಸ್ಥೆ ಆರಂಭವಾಗಿ ಎಂಬಿಬಿಎಸ್‌ ವಿದ್ಯಾರ್ಥಿಗಳ ವ್ಯಾಸಂಗ ಶುರುವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಾಲುದಾರಿಕೆಯ ಅನುದಾನ ಪಡೆದುಕೊಂಡು ಸಂಸ್ಥೆ ನಿರ್ಮಿಸಲಾಗಿದೆ. ಸುಸಜ್ಜಿತ ಆಡಳಿತ ಕಟ್ಟಡ ವಿದ್ಯಾರ್ಥಿಗಳ ಹಾಸ್ಟೆಲ್‌ಗಳ ಕ್ಯಾಂಪಸ್ ಇದಾಗಿದೆ.  ಅಂಗರಚನಾ ವಿಜ್ಞಾನ ಸಾಮಾನ್ಯ ಔಷಧ ಸಮುದಾಯ ಔಷಧ ಔಷಧ ವಿಜ್ಞಾನ ಸೂಕ್ಷ್ಮ ಜೀವ ವಿಜ್ಞಾನ ಜೀವ ರಸಾಯನ ವಿಜ್ಞಾನ ಚರ್ಮ ವಿಜ್ಞಾನ ವಿಧಿ ವಿಜ್ಞಾನ ದಂತ ವಿಜ್ಞಾನ ಜನರಲ್ ಸರ್ಜರಿ ರೋಗ ವಿಜ್ಞಾನ ಪ್ರಸೂತಿ ಮತ್ತು ಸ್ತ್ರೀರೋಗ ವಿಜ್ಞಾನ ಆರ್ಥಾಲಜಿ ರೇಡಿಯಾಲಜಿ ‍ಪೀಡಿಯಾಟ್ರಿಕ್ಸ್ ಮೂಳೆ ವಿಜ್ಞಾನ ಮನೋ ವಿಜ್ಞಾನ ಸೇರಿದಂತೆ 20 ವಿಭಾಗಗಳು ಸಂಸ್ಥೆಯಲ್ಲಿವೆ. ಹಾವೇರಿ ಜಿಲ್ಲಾಸ್ಪತ್ರೆ ನಿರ್ವಹಣೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿರುವ ಹಿಮ್ಸ್ ವೈದ್ಯರು ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳ ತಪಾಸಣೆ ಹಾಗೂ ಚಿಕಿತ್ಸೆಗೆ ಒತ್ತು ನೀಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.