
ಹಾವೇರಿ: ‘ಆಧುನಿಕ ಜಗತ್ತಿನ ಭರಾಟೆಯಲ್ಲಿ ವಿವಿಧ ಕಾರಣಗಳಿಂದ ಒಡೆದುಹೋಗುತ್ತಿರುವ ಹಿಂದೂ ಸಮಾಜದ ಜನರನ್ನು ಒಗ್ಗೊಡಿಸುವ ಉದ್ದೇಶದಿಂದ ಇದೇ ಫೆ. 8ರಂದು ನಗರದಲ್ಲಿ ಹಿಂದೂ ಸಮಾಜೋತ್ಸವ ಆಯೋಜಿಸಲಾಗುತ್ತಿದೆ’ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದೂ ಧರ್ಮದ ಸರ್ವ ಸಮಾಜದ ಜನರು ಈ ಸಮಾಜೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಹಿಂದೂಗಳು ನಾವೆಲ್ಲ ಒಂದೂ ಎಂಬ ಸಂದೇಶ ನೀಡಬೇಕು’ ಎಂದರು.
‘ಫೆ. 8ರಂದು ಮಧ್ಯಾಹ್ನ 2.30 ಗಂಟೆಗೆ ಹುಕ್ಕೇರಿಮಠದಿಂದ ಮುನ್ಸಿಪಲ್ ಮೈದಾನದವರೆಗೆ ಭಾರತ ಮಾತೆಯ ಭಾವಚಿತ್ರದೊಂದಿಗೆ ಭವ್ಯ ಶೋಭಾಯಾತ್ರೆ ನಡೆಯಲಿದೆ. ಎಂ.ಜಿ. ರಸ್ತೆ, ಜೆ.ಪಿ. ವೃತ್ತ, ಹೈಸ್ಕೂಲ್ ರಸ್ತೆ ಸೇರಿ ವಿವಿಧ ರಸ್ತೆಗಳಲ್ಲಿ ಸಾಗಲಿವೆ. ದೇವರುಗಳು, ಮಹಾ ಪುರುಷರು, ಸ್ವಾತಂತ್ರ್ಯ ಹೋರಾಟಗಾರರು, ವಿವಿಧ ಕಲಾತಂಡಗಳು, ಮಾತೆಯರಿಂದ ಪೂರ್ಣ ಕುಂಭ, ಮಕ್ಕಳಿಂದ ವಿವಿಧ ವೇಷಭೂಷಣ ಪ್ರದರ್ಶನವಿರಲಿದೆ’ ಎಂದರು.
‘ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಸಂಜೆ 5 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ವಿವಿಧ ಮಠಾಧೀಶರು, ಸಮಾಜದ ಪ್ರಮುಖರು ಭಾಗವಹಿಸಲಿದ್ದಾರೆ. ಸಾಮಾಜಿಕ ಕಾರ್ಯಕರ್ತ ಹನುಮಂತ ಮಳಲಿ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ’ ಎಂದು ಹೇಳಿದರು.
‘ನಾವು ಉಳಿದರೆ ಸಮಾಜ ಉಳಿಯುತ್ತದೆ. ಸಮಾಜ ಉಳಿದರೆ ನಾವು ಉಳಿಯುತ್ತೇವೆ ಎಂಬುದನ್ನು ಜನರು ಮರೆಯಬಾರದು. ಇತ್ತೀಚಿನ ದಿನಗಳಲ್ಲಿ ಮತಾಂತರ ಹಾಗೂ ಬೇರೆ ಧರ್ಮಗಳ ಪ್ರಭಾವಕ್ಕೆ ಜನರು ಒಳಗಾಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಹಿಂದೂ ಸಮಾಜವನ್ನು ಜಾಗೃತಿಗೊಳಿಸಲು ಈ ಕಾರ್ಯಕ್ರಮ ಅಗತ್ಯವಾಗಿದೆ. ಆದರೆ, ಇದು ಯಾವುದೇ ಧರ್ಮದ ವಿರುದ್ಧವಾದ ಕಾರ್ಯಕ್ರಮವಲ್ಲ’ ಎಂದು ಸ್ಪಷ್ಟಪಡಿಸಿದರು.
ಹಿಂದೂ ಸಮ್ಮೇಳನ ಸಮಿತಿಯ ಅಧ್ಯಕ್ಷ ವಿಜಯಕುಮಾರ ಗೊಡಚಿ ಮಾತನಾಡಿ, ‘ಫೆ. 6ರಂದು ಮಧ್ಯಾಹ್ನ ಬೈಕ್, ಆಟೊ, ಕಾರು ರ‍್ಯಾಲಿಯಿದೆ. ಇದು, ಯಾವುದೇ ಧರ್ಮದ ವಿರುದ್ಧದ ಕಾರ್ಯಕ್ರಮವಲ್ಲ. ಯಾವುದೇ ರಾಜಕೀಯವೂ ಇಲ್ಲ. ಇದೊಂದು ಹಿಂದೂ ಸಮಾಜವನ್ನು ಒಗ್ಗೊಡಿಸುವ ಕಾರ್ಯಕ್ರಮ’ ಎಂದರು.
‘ಸಮಾಜದ ಎಲ್ಲ ಜಾತಿಯವರು ಒಂದೇ ಎಂಬ ಭಾವನೆ ಬರಬೇಕು. ಸಾಮರಸ್ಯದಿಂದ ಇರಬೇಕು. ಪರಸ್ಪರ ಸಹಬಾಳ್ವೆ ನಡೆಸಬೇಕು. ಹಿಂದೂ ಸಂಸ್ಕೃತಿಯನ್ನು ಉಳಿಸಿಕೊಂಡು, ಯುವಜತೆಯನ್ನು ಎಚ್ಚರಿಸಬೇಕು. ಮುಂಬರುವ ಜನಾಂಗಕ್ಕೂ ಸಮಾಜದ ಸಂಸ್ಕೃತಿಯನ್ನು ಕೊಂಡೊಯ್ಯಬೇಕೆಂಬುದು ಈ ಕಾರ್ಯಕ್ರಮದ ಉದ್ದೇಶ’ ಎಂದರು.
ಮುಖಂಡ ಸುಭಾಷ ಬೆಂಗಳೂರು ಮಾತನಾಡಿ, ‘ಯುವಜನತೆ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಹಿರಿಯ ಮಾತು ಕೇಳುತ್ತಿಲ್ಲ. ಇಂಥ ಯುವಜನತೆಯನ್ನು ಸರಿ ದಾರಿಗೆ ತಂದು, ಸಮಾಜದ ಮಹತ್ವವನ್ನು ತಿಳಿಸಲು ಈ ಕಾರ್ಯಕ್ರಮ’ ಎಂದರು.
ಸಮಿತಿಯ ಗೌರವ ಅಧ್ಯಕ್ಷ ಆರ್.ಎಸ್. ಮಾಗನೂರ, ಪಿ.ಡಿ. ಶಿರೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.