
ಹಾವೇರಿ: ಹೋರಿ ಬೆದರಿಸುವ ಹಬ್ಬದ ಆಚರಣೆಗೆ ರಾಜ್ಯ ಸರ್ಕಾರ 18 ಷರತ್ತು ವಿಧಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಹೋರಿ ಮಾಲೀಕರು ಹಾಗೂ ಅಭಿಮಾನಿಗಳು, ಡಿ. 6ರಿಂದ ಅಹೋರಾತ್ರಿ ಧರಣಿ ನಡೆಸುವುದಾಗಿ ಘೋಷಿಸಿದ್ದಾರೆ.
ನಗರದ ಕಾಗಿನಲೆ ರಸ್ತೆಯಲ್ಲಿರುವ ಮುರುಘಾಮಠದಲ್ಲಿ ಭಾನುವಾರ ಸಭೆ ನಡೆಸಿದ ಹೋರಿ ಮಾಲೀಕರು ಹಾಗೂ ಅಭಿಮಾನಿಗಳು, ಅಹೋರಾತ್ರಿ ಧರಣಿ ಕೈಗೊಳ್ಳುವ ಬಗ್ಗೆ ತೀರ್ಮಾನಿಸಿದರು. ಧರಣಿಗೆ ಸಿದ್ಧತೆ ಮಾಡಿಕೊಳ್ಳಲು ಜವಾಬ್ದಾರಿ ಹಂಚಿಕೆ ಮಾಡಿದರು.
‘ಅಖಿಲ ಕರ್ನಾಟಕ ರೈತರ ಜನಪದ ಕ್ರೀಡೆ ಹೋರಿ ಹಬ್ಬ ಹೋರಾಟ ಸಮಿತಿಯ ನೇತೃತ್ವದಲ್ಲಿ ಡಿ.6ರಿಂದ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ. ಅಂದು ಬೆಳಿಗ್ಗೆ ಪುರಸಿದ್ದೇಶ್ವರ ದೇವಸ್ಥಾನದಿಂದ ಎಂ.ಜಿ. ರಸ್ತೆ, ಜೆ.ಪಿ. ವೃತ್ತ, ಜೆ.ಎಚ್. ಪಟೇಲ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಯವರೆಗೂ ಹೋರಿಗಳ ಮೆರವಣಿಗೆ ನಡೆಯಲಿದೆ. ಹಬ್ಬ ಮಾಡುವ 500ಕ್ಕೂ ಹೆಚ್ಚು ಹೋರಿಗಳು ಮೆರವಣಿಗೆಯಲ್ಲಿ ಸೇರುವ ನಿರೀಕ್ಷೆಯಿದೆ’ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಹೋರಿ ಮಾಲೀಕರು ಹೇಳಿದರು.
‘ಜಿಲ್ಲಾಧಿಕಾರಿ ಕಚೇರಿ ಎದುರು ಟೆಂಟ್ ಹಾಕುತ್ತೇವೆ. ಅಲ್ಲಿಯೇ ಹೋರಿಗಳನ್ನು ಇಟ್ಟುಕೊಂಡು ಅಹೋರಾತ್ರಿ ಧರಣಿ ಮಾಡುತ್ತೇವೆ. ಹೋರಿ ಸ್ಪರ್ಧೆಗೆ ಅನುಮತಿ ಸಿಗುವವರೆಗೂ ನಮ್ಮ ಧರಣಿ ಕೈಬಿಡುವುದಿಲ್ಲ. ಸ್ಥಳದಲ್ಲಿಯೇ ಹೋರಿಗಳಿಗೆ ಮೇವು ಹಾಗೂ ನೀರಿನ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಮಾಲೀಕರು ತಿಳಿಸಿದರು.
ಮನವಿಗೆ ಸಿಗದ ಸ್ಪಂದನೆ: ‘ರಾಜ್ಯ ಸರ್ಕಾರ ವಿಧಿಸಿರುವ 18 ಷರತ್ತುಗಳನ್ನು ಪಾಲಿಸಿ, ಹಬ್ಬ ಮಾಡಲು ಸಾಧ್ಯವಾಗುವುದಿಲ್ಲ. 18 ಷರತ್ತುಗಳ ಪೈಕಿ ಕೆಲ ಷರತ್ತುಗಳನ್ನು ಕೈಬಿಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಆದರೆ, ಮನವಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ, ಧರಣಿ ಆರಂಭಿಸಲು ತೀರ್ಮಾನಿಸಲಾಗಿದೆ’ ಎಂದು ಹೋರಿ ಮಾಲೀಕರು ಘೋಷಿಸಿದರು.
‘ಪಕ್ಕದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಹಾಗೂ ಸುತ್ತಮುತ್ತ ನಿರಂತರವಾಗಿ ಹೋರಿ ಬೆದರಿಸುವ ಸ್ಪರ್ಧೆಗಳು ನಡೆಯುತ್ತಿವೆ. ಅಲ್ಲಿಯ ಜಿಲ್ಲಾಡಳಿತ, ಸ್ಪರ್ಧೆ ಆಚರಣೆಗೆ ಅವಕಾಶ ಮಾಡಿಕೊಡುತ್ತಿದೆ. ಹಾವೇರಿ ಜಿಲ್ಲಾಡಳಿತ ಮಾತ್ರ ಅಡ್ಡಿಪಡಿಸುತ್ತಿದೆ’ ಎಂದು ಖಂಡಿಸಿದರು.
‘ಗಣೇಶ ಹಬ್ಬದ ಸಂದರ್ಭದಲ್ಲಿಯೂ ರಾಜ್ಯ ಸರ್ಕಾರ ಹಲವು ಷರತ್ತು ವಿಧಿಸಿತ್ತು. ಈಗ, ಹೋರಿ ಹಬ್ಬಕ್ಕೂ ಷರತ್ತು ವಿಧಿಸಿರುವುದು ಖಂಡನೀಯ. ರಾಜ್ಯ ಸರ್ಕಾರದ ಈ ವರ್ತನೆಗೆ ವಿರುದ್ಧವೇ ಈಗ ಧರಣಿ ಆರಂಭಿಸುತ್ತಿದ್ದೇವೆ’ ಎಂದರು.
ನಾಲ್ವರ ಸಾವಿನ ಬಳಿಕ ಕಠಿಣ ನಿಯಮ: ದೀಪಾವಳಿ ಸಂದರ್ಭದಲ್ಲಿ ಏರ್ಪಡಿಸಿದ್ದ ಹೋರಿ ಬೆದರಿಸುವ ಆಚರಣೆ ಹಾಗೂ ಹೋರಿ ಮೆರವಣಿಗೆ ವೇಳೆ ಅವಘಡ ಸಂಭವಿಸಿ ನಾಲ್ವರು ಮೃತಪಟ್ಟಿದ್ದರು. ಇದರಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ, ಹೋರಿ ಹಬ್ಬದ ಆಚರಣೆಗೆ ರಾಜ್ಯ ಸರ್ಕಾರದ 18 ಷರತ್ತು ಪಾಲಿಸುವುದನ್ನು ಕಡ್ಡಾಯಗೊಳಿಸಿದೆ.
ಷರತ್ತು ಕಡ್ಡಾಯದಿಂದಾಗಿ ದೀಪಾವಳಿ ನಂತರ ಜಿಲ್ಲೆಯಲ್ಲಿ ಎಲ್ಲಿಯೂ ಹೋರಿ ಬೆದರಿಸುವ ಸ್ಪರ್ಧೆ ನಡೆದಿಲ್ಲ. ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಹೋರಿಗಳಿದ್ದರೂ ತವರು ಜಿಲ್ಲೆಯಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ. ಪಕ್ಕದ ಜಿಲ್ಲೆಗಳ ಸ್ಪರ್ಧೆಗೆ ಮಾತ್ರ ಸೀಮಿತವಾಗಿವೆ. ಇದೇ ಕಾರಣಕ್ಕೆ ಹೋರಿ ಮಾಲೀಕರು ಹಾಗೂ ಅಭಿಮಾನಿಗಳು, ಹಾವೇರಿ ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಗೆ ವಿಧಿಸಿರುವ ಷರತ್ತು ಕೈಬಿಡುವಂತೆ ಆಗ್ರಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.