
ಹಾವೇರಿ: ತಾಲ್ಲೂಕಿನ ಹೊಸರಿತ್ತಿಯ ಗುರು ಗುದ್ದಲೀಸ್ವಾಮಿ ಮಠದ ಗುದ್ದಲಿ ಶಿವಯೋಗೀಶ್ವರ ಸ್ವಾಮೀಜಿಯವರ 126ನೇ ಯಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಕಡುಬಿನ ಕಾಳಗ ಸಂಭ್ರಮದಿಂದ ಜರುಗಿತು.
ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಜೈಘೋಷಗಳ ನಡುವೆ ಕಾಳಗ ಅರ್ಥಪೂರ್ಣವಾಗಿ ನಡೆಯಿತು.
ಗುರು ಗುದ್ದಲೀಸ್ವಾಮಿ ಮಠದ ಪೀಠಾಧಿಪತಿಯಾದ ಸ್ವಾಮೀಜಿ, ತೆರೆದ ವಾಹನದಲ್ಲಿ ಕುಳಿತು ಭಕ್ತರ ಕಡೆ ಕಬ್ಬಿನ ತುಂಡುಗಳನ್ನು ಎರಚಿದರು. ರಸ್ತೆಯುದ್ದಕ್ಕೂ ಎರಡೂ ಬದಿಯಲ್ಲಿ ನೆರೆದಿದ್ದ ಭಕ್ತರು, ಕಬ್ಬಿನ ತುಂಡುಗಳನ್ನು ಹಿಡಿದುಕೊಳ್ಳಲು ಯತ್ನಿಸಿದರು. ಕೆಲವರಿಗೆ ಕಬ್ಬಿನ ತುಂಡುಗಳು ಸಿಕ್ಕವು.
‘ಸ್ವಾಮೀಜಿ ಅವರು ಎರಚುವ ಕಬ್ಬಿನ ತುಂಡುಗಳು ಸಿಕ್ಕರೆ ವರ್ಷಪೂರ್ತಿ ಒಳ್ಳೆಯದಾಗುತ್ತದೆ’ ಎಂಬ ಭಾವನೆ ಭಕ್ತರಲ್ಲಿದೆ. ಇದೇ ಕಾರಣಕ್ಕೆ ಕಬ್ಬಿನ ತುಂಡುಗಳನ್ನು ಪಡೆಯಲು ಭಕ್ತರು ನಾ ಮುಂದು, ತಾ ಮುಂದು ಎಂದು ಮುಗಿಬೀಳುತ್ತಿದ್ದ ದೃಶ್ಯಗಳು ಕಂಡುಬಂದವು.
ಕಬ್ಬಿನ ತುಂಡುಗಳು ಸಿಗುತ್ತಿದ್ದಂತೆ ಭಕ್ತರು, ‘ಹರಹರ ಮಹಾದೇವ’ ಎಂದು ಜೈಕಾರ ಕೂಗಿದರು. ಹೊಸರಿತ್ತಿ ಮಾತ್ರವಲ್ಲದೇ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕಡುಬಿನ ಕಾಳಗದ ನಂತರ ಸ್ವಾಮೀಜಿಯವರ ಸಿಂಹಾಸನಾರೋಹಣ ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯಿತು.
ಜಾತ್ರಾ ಕಾರ್ಯಕ್ರಮ: ಜ. 5ರಂದು ಚಂದನ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವಿದೆ. ಜ. 6 ಹಾಗೂ 7ರಂದು ಅಕ್ಕನ ಬಳಗದಿಂದ ವಿವಿಧ ಕಾರ್ಯಕ್ರಮಗಳಿವೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.