
ಹಾವೇರಿ: ಕೇಸರಿ–ಬಿಳಿ–ಹಸಿರು ಸೀರೆಯನ್ನುಟ್ಟು ತಲೆ ಮೇಲೆ ಹೋಳಿಗೆ ಬುತ್ತಿಯನ್ನಿಟ್ಟು ಹೆಜ್ಜೆ ಹಾಕಿದ ತಾಯಂದಿರು. ಹಾರಾಡಿದ ಕೇಸರಿ ಬಾವುಟ, ಮೊಳಗಿದ ಧರ್ಮ ಜಾಗೃತಿಯ ಸಂದೇಶ. ಹೊಳೆಯಂತೆ ಹರಿದು ಬಂದು ‘ಧರ್ಮ ಸಾಗರ’ ಸೇರಿದ ಭಕ್ತ ಸಮೂಹ. ‘ಕಲ್ಯಾಣ’ವನ್ನೇ ಧರೆಗಿಳಿಸಿ ವಚನ ಪಠಿಸಿದ ಶರಣ–ಶರಣೆಯರು. ಆಧುನಿಕ ಯುಗದಲ್ಲೂ ‘ಧರ್ಮ ಕ್ರಾಂತಿ’ಯ ದೃಶ್ಯವನ್ನು ಬಾನಿನಿಂದಲೇ ನೋಡಿ ‘ಹೂವು’ಗಳ ಮೂಲಕ ಹರಿಸಿದ ಬಸವಾದಿ ಶರಣರು...
ನಗರದ ಹುಕ್ಕೇರಿಮಠ ಜಾತ್ರಾ ಮಹೋತ್ಸವದ ಅಂಗವಾಗಿ ಹೊಸಮನಿ ಸಿದ್ಧಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಮನೆ ಮನೆಯಿಂದ ಬಸವ ಬುತ್ತಿ’ ಹಾಗೂ ‘ವಚನ ವಂದನ–ಗುರುವಂದನ’ ಕಾರ್ಯಕ್ರಮವು 12ನೇ ಶತಮಾನದ ಬಸವಾದಿ ಶರಣರ ಕಲ್ಯಾಣವನ್ನೇ ಮರುಸೃಷ್ಟಿತು. ಜಿಲ್ಲಾ ಕ್ರೀಡಾಂಗಣದಲ್ಲಿ ಸೇರಿದ್ದ ಭಕ್ತ ಸಾಗರ, ‘ಮನೆಯಿಂದಲೇ ಮಕ್ಕಳಿಗೆ ಸಂಸ್ಕಾರ’ದ ಪ್ರತಿಜ್ಞೆ ಸ್ವೀಕರಿಸಿತು.
ಮಠದ ಸದಾಶಿವ ಸ್ವಾಮೀಜಿಯವರ ಪಟ್ಟಾಧಿಕಾರದ 15ನೇ ವರ್ಷದ ಸಂಭ್ರಮಾಚರಣೆ ನಿಮಿತ್ತ ಭಕ್ತರು ‘ವಚನ ವಂದನ – ಗುರುವಂದನ’ ಕಾರ್ಯಕ್ರಮ ಹಮ್ಮಿಕೊಂಡಿದ್ದರು. 11 ವಚನಗಳನ್ನು ಸಾಮೂಹಿಕವಾಗಿ ಪಠಿಸುವ ಮೂಲಕ, ವೇದಿಕೆಯಲ್ಲಿ ಆಸೀನರಿದ್ದ ಸದಾಶಿವ ಸ್ವಾಮೀಜಿಗೆ ಭಕ್ತಿಯನ್ನು ಸಮರ್ಪಿಸಿದರು. ಶೇಗುಣಸಿಯ ಮಹಾಂತಪ್ರಭು ಸ್ವಾಮೀಜಿಯವರು ಬಸವಾದಿ ಶರಣರ 11 ವಚನಗಳನ್ನು ಬೋಧಿಸಿದರು.
‘51 ಸಾವಿರ ಭಕ್ತರ ಸಮ್ಮುಖದಲ್ಲಿ ವಚನ ವಂದನ’ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. 8 ಎಕರೆ 50 ಗುಂಟೆ ಜಾಗದಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ಎಣಿಕೆಗೂ ಲೆಕ್ಕ ಸಿಗಲಿಲ್ಲ. ಎಲ್ಲರೂ ವಚನಗಳನ್ನು ಪಠಿಸಿ, ಗಿನ್ನಿಸ್ ದಾಖಲೆಗೂ ಹೆಜ್ಜೆ ಇಟ್ಟರು.
ಕಾಯಕ ನಿಷ್ಠೆ ಕಲಿಸಿದ ‘ಬಸವ ಬುತ್ತಿ’: ಜಾತ್ರೆ ನಿಮಿತ್ತ ಹಾವೇರಿಯ ಹಲವು ಪ್ರದೇಶಗಳ ಮಹಿಳೆಯರಿಂದ ಸುಮಾರು 6 ಲಕ್ಷ ಹೋಳಿಗೆ ತಯಾರಿಸಲು ಬಸವ ಬುತ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಮಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ಮೂಲಕ ಕಾಯಕ ನಿಷ್ಠೆ ಪ್ರದರ್ಶಿಸಿದ ಮಹಿಳೆಯರು, ಹೋಳಿಗೆ ಬುತ್ತಿ ಹೊತ್ತುಕೊಂಡು ಮಠದಿಂದ ಜಿಲ್ಲಾ ಕ್ರೀಡಾಂಗಣದತ್ತ ಶನಿವಾರ ಮೆರವಣಿಗೆ ನಡೆಸಿದರು.
ಮಠದಿಂದ ಆರಂಭಗೊಂಡ ಮೆರವಣಿಗೆ ಎಂ.ಜಿ.ರಸ್ತೆ. ಗಾಂಧಿ ವೃತ್ತ, ಜೆ.ಪಿ.ವೃತ್ತ, ಗುರುಭವನ ಮಾರ್ಗದಲ್ಲಿ ಸಾಗಿ ಜಿಲ್ಲಾ ಕ್ರೀಡಾಂಗಣ ತಲುಪಿತು. ಒಂದು ಬುತ್ತಿ ಕ್ರೀಡಾಂಗಣ ತಲುಪಿದರೆ, ಕೊನೆಯ ಬುತ್ತಿ ಇನ್ನೂ ಮಠದಲ್ಲಿರುವಷ್ಟು ಮಹಿಳೆಯರು ಮೆರವಣಿಗೆಯಲ್ಲಿದ್ದರು. ಸರ್ವ ಸ್ವಾಮೀಜಿಯವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಬುತ್ತಿ ಹೊತ್ತ ಮಹಿಳೆಯರು ಕ್ರೀಡಾಂಗಣ ಪ್ರವೇಶಿಸುತ್ತಿದ್ದಂತೆ ಆಕಾಶದಲ್ಲಿ ಹಾರಿಬಂದ ಹೆಲಿಕಾಪ್ಟರ್, ಹೂವಿನ ಮಳೆ ಸುರಿಸಿತು. ರಾಷ್ಟ್ರ ಗೀತೆಯೂ ಮೊಳಗಿತು. ನಂತರ, ವೇದಿಕೆ ಕಾರ್ಯಕ್ರಮ ಶುರುವಾಯಿತು. ಜ್ಯೂನಿಯರ್ ರಾಜ್‌ಕುಮಾರ್ ಖ್ಯಾತಿಯ ಅಶೋಕ ಬಸ್ತಿ ಹಾಗೂ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಗದಗ–ಡಂಬಳ–ಎಡೆಯೂರಿನ ತೋಂಟದಾರ್ಯ ಸಂಸ್ಥಾನ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ, ಗೌರಿಗದ್ದೆ ಅವಧೂತ ಆಶ್ರಮದ ವಿನಯ್ ಗುರೂಜಿ, ಶಿವಮೊಗ್ಗ ಆನಂದಪುರ ಮುರುಘಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮೀಜಿ, ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ, ಮಣಕವಾಡದ ಮೃತ್ಯುಂಜಯ ಸ್ವಾಮೀಜಿ ಅವರು ‘ವಚನ ವಂದನ’ಕ್ಕೆ ಸಾಕ್ಷಿಯಾದರು.
‘ಸುವರ್ಣಾಕ್ಷರದಲ್ಲಿ ಬರೆದಿಡುವ ಕಾರ್ಯಕ್ರಮ’
‘ಹಾವೇರಿಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಕಾರ್ಯಕ್ರಮ ಈ ವಚನ ವಂದನ’ ಎಂದು ಗದಗ–ಡಂಬಳ–ಎಡೆಯೂರಿನ ತೋಂಟದಾರ್ಯ ಸಂಸ್ಥಾನ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು. ವಚನ ವಂದನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ‘ಎನಗಿಂತ ಕಿರಿಯರಿಲ್ಲ. ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ಬಸವಣ್ಣನವರ ಆಶಯದಂತೆ ಭಕ್ತರ ಹೃದಯದಲ್ಲಿ ಸ್ಥಾನ ಪಡೆದಿರುವ ಶ್ರೇಯಸ್ಸು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಅವರಿಗೆ ಸಲ್ಲುತ್ತದೆ. ಹಿರಿಯ ಪೂಜ್ಯರ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವ ಸದಾಶಿವ ಸ್ವಾಮೀಜಿಯವರು ಶಿಸ್ತು ಮತ್ತು ಸಂಯಮಕ್ಕೆ ಹೆಸರಾದವರು. ಸಣ್ಣ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿ ಯುವಜನತೆಗೂ ಪ್ರೇರಣೆ ಆಗಿದ್ದಾರೆ’ ಎಂದರು.
‘ತಾಯಿ ಬದಲಾದರೆ ಸಮಾಜವೇ ಬದಲು’
‘ಇಂದಿನ ಸಾಮಾಜಿಕ ಮಾಧ್ಯಮಕ್ಕಿಂತಲೂ ಹೆಣ್ಣು ಮಕ್ಕಳ ಬಾಯಿ ತುಂಬಾ ದೊಡ್ಡದು. ತಾಯಂದಿರು ಸಂಸ್ಕಾರಯುತವಾಗಿ ಬದಲಾಗಿ ಮಕ್ಕಳಿಗೆ ಸಂಸ್ಕಾರ ಕೊಟ್ಟು ಬದಲಾಯಿಸಿದರೆ ಇಡೀ ಸಮಾಜವೇ ಬದಲಾಗುತ್ತದೆ’ ಎಂದು ಗೌರಿಗದ್ದೆ ಅವಧೂತ ಆಶ್ರಮದ ವಿನಯ್ ಗುರೂಜಿ ಹೇಳಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಹೆಣ್ಣು ಒಳ್ಳೆಯ ಆಲೋಚನೆ ಇಟ್ಟುಕೊಂಡರೆ ಮನೆ ಬೆಳಗುತ್ತದೆ. ಅದೇ ತಲೆಕೆಟ್ಟರೆ ಕುಟುಂಬವೇ ಹಾಳಾಗುತ್ತದೆ. ಇಂದಿನ ಕಾರ್ಯಕ್ರಮದ ರೀತಿಯಲ್ಲಿ ತಾಯಂದಿರು ನಿತ್ಯವೂ ವಚನಗಳನ್ನು ಪಠಿಸಬೇಕು. ಮಕ್ಕಳಿಗೂ ವಚನ ಹೇಳಿಕೊಡಬೇಕು’ ಎಂದರು. ‘ವಚನಕ್ಕೆ ಯಾವುದೇ ಧರ್ಮವಿಲ್ಲ. ಅವುಗಳನ್ನು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಗಂಡ–ಹೆಂಡತಿ ಜಗಳವಿರುವುದಿಲ್ಲ. ಯುವಜನತೆ ಮಾದಕ ವ್ಯಸನಿಗಳಾಗುವುದಿಲ್ಲ. ಎಸ್‌ಪಿ–ಜಿಲ್ಲಾಧಿಕಾರಿ ಕಚೇರಿಯೂ ಕಡಿಮೆಯಾಗುತ್ತದೆ. ಇದೇ ವಚನದ ಸಂದೇಶವನ್ನು ಬಾಂಗ್ಲಾದೇಶದಲ್ಲಿ ಹೇಳಿದ್ದರೆ ಅಲ್ಲಿ ಗಲಾಟೆಯೂ ಆಗುತ್ತಿರಲಿಲ್ಲ. ವಚನ ವಂದನವು ಎಲ್ಲ ಊರಿಗೆ ಮಾದರಿಯಾಗಿದೆ’ ಎಂದರು.
‘ಹಿರಿಯ ಕಲ್ಯಾಣ ಮರುಸೃಷ್ಟಿ’
‘ಹಾವೇರಿಯಲ್ಲಿ ಶಿವಬಸವ ಶಿವಯೋಗಿಯವರ ಕಾಲದಲ್ಲಿ ಮರಿ ಕಲ್ಯಾಣವಿತ್ತು. ಆದರೆ ಇಂದು ಹಿರಿ ಕಲ್ಯಾಣವೇ ಮರುಸೃಷ್ಟಿಯಾಗಿದೆ’ ಎಂದು ಶಿವಮೊಗ್ಗ ಆನಂದಪುರ ಮುರುಘಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘12ನೇ ಶತಮಾನದ ಆ ದಿನಗಳು ಪ್ರತಿರೂಪದಂತೆ ಕ್ರೀಡಾಂಗಣದಲ್ಲಿ ಕಾಣುತ್ತಿವೆ. ಅಪಾರ ಸಂಖ್ಯೆಯಲ್ಲಿ ಭಕ್ತ ಸಮೂಹ ಗಳಿಸಿರುವ ಹುಕ್ಕೇರಿಮಠ ಭಕ್ತದ ಹೃದಯದಲ್ಲಿ ಸ್ಥಾನ ಪಡೆದಿದೆ. ಬಸವಾದಿ ಶರಣದ ಆದರ್ಶಗಳನ್ನು ಕಾಪಿಟ್ಟುಕೊಂಡು ಭಕ್ತರಿಗೆ ತಲುಪಿಸುತ್ತಿದೆ’ ಎಂದರು.
ಕೃಷಿ ಮೇಳಕ್ಕೆ ತೆರೆ
ಹಾನಗಲ್ ರಸ್ತೆಯ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಹಮ್ಮಿಕೊಂಡಿದ್ದ ಕೃಷಿ ಮೇಳಕ್ಕೆ ಶನಿವಾರ ತೆರೆ ಬಿದ್ದಿತು. ಕೃಷಿ ಹಾಗೂ ಅದಕ್ಕೆ ಸಂಬಂಧಪಟ್ಟ ಮಾಹಿತಿಯುಳ್ಳ ಮಳಿಗೆಗಳು ಮೇಳದಲ್ಲಿದ್ದವು. ಜಿಲ್ಲೆ ಹಾಗೂ ಹೊರ ಜಿಲ್ಲೆಯ ರೈತರು ಮೇಳಕ್ಕೆ ಆಗಮಿಸಿ ಕೃಷಿ ಸಂಬಂಧಿತ ಮಾಹಿತಿ ಪಡೆದುಕೊಂಡರು. ಯಂತ್ರೋಪಕರಣ ಬೀಜ ಗೊಬ್ಬರ ಪಶು ಆಹಾರ ಕೃಷಿ ಬೆಳೆಯ ಮೌಲ್ಯವರ್ಧಿತ ವಸ್ತುಗಳು ಪ್ರದರ್ಶನದಲ್ಲಿದ್ದವು.