
ಹಾವೇರಿ: ಇಲ್ಲಿಯ ಹುಕ್ಕೇರಿಮಠ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಸದಾಶಿವ ಸ್ವಾಮೀಜಿಯವರ ಪಟ್ಟಾಧಿಕಾರದ 15ನೇ ವರ್ಷದ ಸಂಭ್ರಮವನ್ನು ಬೆಳ್ಳಿ ತುಲಾಭಾರದ ಮೂಲಕ ಆಚರಿಸಲಾಗುತ್ತಿದೆ. ವಚನಗಳ ಮೂಲಕವೇ ಸ್ವಾಮೀಜಿಗೆ ನಮನ ಸಲ್ಲಿಸಲೆಂದು 51,000 ಮಂದಿ ಸಮ್ಮುಖದಲ್ಲಿ ‘ವಚನ ವಂದನ’ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆದಿದ್ದು, ಈ ಕಾರ್ಯಕ್ರಮವು ‘ಬುಕ್ ಆಫ್ ವರ್ಲ್ಡ್ ರೆಕಾರ್ಡ್’ ಪಟ್ಟಿಗೆ ಸೇರಿಸಲು ಪ್ರಯತ್ನಗಳು ಶುರುವಾಗಿವೆ.
ನಗರದ ಹೃದಯ ಭಾಗದಲ್ಲಿರುವ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಭವ್ಯ ವೇದಿಕೆ ನಿರ್ಮಿಸಲಾಗುತ್ತಿದೆ. ಅದೇ ವೇದಿಕೆ ಬಳಿಯೇ ಡಿ. 27ರಂದು ಸಂಜೆ ವಚನ ವಂದನ ಕಾರ್ಯಕ್ರಮ ನಡೆಯಲಿದೆ.
ಸದಾಶಿವ ಸ್ವಾಮೀಜಿಯವರು ಕ್ರೀಡಾಂಗಣದ ಮಧ್ಯ ಭಾಗದಲ್ಲಿ ಪೀಠದಲ್ಲಿ ಕೂರಲಿದ್ದಾರೆ. 51 ಸಾವಿರ ಭಕ್ತರು, ಸ್ವಾಮೀಜಿಯವರ ಸುತ್ತಲೂ ವೃತ್ತಾಕಾರದಲ್ಲಿ ಕೂರಲಿದ್ದಾರೆ. ನಂತರ, ಬಸವಾದಿ ಶರಣರ ವಚನಗಳನ್ನು ಸಾಮೂಹಿಕವಾಗಿ ಹೇಳುವ ಮೂಲಕ ಸದಾಶಿವ ಸ್ವಾಮೀಜಿಗೆ ನಮನ ಸಲ್ಲಿಸಲಿದ್ದಾರೆ.
ವಚನ ವಂದನ ಕಾರ್ಯಕ್ರಮಕ್ಕಾಗಿ ಹಲವು ದಿನಗಳಿಂದ ತಯಾರಿ ನಡೆಯುತ್ತಿದೆ. ಜನಜಾಗೃತಿ ಪಾದಯಾತ್ರೆ ಸಂದರ್ಭದಲ್ಲಿಯೂ ಕಾರ್ಯಕ್ರಮದ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುತ್ತಿದೆ. ಡಿ. 27ರಂದು ಸಂಜೆ ಪ್ರತಿಯೊಬ್ಬರು ಕ್ರೀಡಾಂಗಣಕ್ಕೆ ಬರುವಂತೆ ಆಹ್ವಾನ ನೀಡಲಾಗುತ್ತಿದೆ.
‘ವಿಶೇಷ ಹಾಗೂ ವಿಭಿನ್ನವಾಗಿ ಇದೇ ಮೊದಲ ಬಾರಿಗೆ ವಚನ ವಂದನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಮೂಲಕ ಭಕ್ತರು, ತಮ್ಮ ಸ್ವಾಮೀಜಿಗೆ ನಮಿಸಲಿದ್ದಾರೆ. ಇದೊಂದು ಕಾರ್ಯಕ್ರಮ ವಿಶ್ವದಲ್ಲಿಯೇ ದಾಖಲೆ ಬರೆಯುವ ಕಾರ್ಯಕ್ರಮವಾಗಲಿದೆ’ ಎಂದು ಶೇಗುಣಸಿ ವಿರಕ್ತಮಠದ ಮಹಾಂತಪ್ರಭು ಸ್ವಾಮೀಜಿ ಹೇಳಿದರು.
ಬಸ್ತಿ ಓಣಿ ಸುತ್ತಮುತ್ತ ಪಾದಯಾತ್ರೆ: ಇಲ್ಲಿಯ ಬಸ್ತಿ ಓಣಿ ಕಲ್ಲು ಮಂಟಪ ರಸ್ತೆ ಹಾಗೂ ದೊಡ್ಡ ಬಸವಣ್ಣ ದೇವಸ್ಥಾನ ಮಾರ್ಗದಲ್ಲಿ ಜನಜಾಗೃತಿ ಪಾದಯಾತ್ರೆ ಶನಿವಾರ ಅದ್ಧೂರಿಯಾಗಿ ಜರುಗಿತು. ಹುಕ್ಕೇರಿಮಠದ ಜಾತ್ರಾ ಮಹೋತ್ಸವ ಅಂಗವಾಗಿ ಯುವಜನತೆಯನ್ನು ದುಶ್ಚಟಗಳಿಂದ ಮುಕ್ತಗೊಳಿಸಲು ಜನಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಸದಾಶಿವ ಸ್ವಾಮೀಜಿ ನೇತೃತ್ವದಲ್ಲಿ ಹಲವು ಸ್ವಾಮೀಜಿಗಳು ಪಾದಯಾತ್ರೆಯಲ್ಲಿ ಭಕ್ತರ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ.
ಶನಿವಾರವೂ ಬಸ್ತಿ ಓಣಿ ಕಲ್ಲು ಮಂಟಪ ರಸ್ತೆ ಹಾಗೂ ದೊಡ್ಡ ಬಸವಣ್ಣ ದೇವಸ್ಥಾನ ಮಾರ್ಗದಲ್ಲಿ ಪಾದಯಾತ್ರೆ ಸಾಗಿತು. ಭಕ್ತರು ತಮ್ಮ ಮನೆ ಹಾಗೂ ತಮ್ಮ ಓಣಿಯನ್ನು ಸ್ವಚ್ಛಗೊಳಿಸಿ ರಸ್ತೆ ಮಧ್ಯದಲ್ಲಿ ರಂಗೋಲಿ ಹಾಕಿ ಸ್ವಾಮೀಜಿಯವರನ್ನು ಭವ್ಯವಾಗಿ ಸ್ವಾಗತಿಸಿದರು. ಹೂವು ಎರಚಿದರು. ಶಿವಬಸವ ಸ್ವಾಮೀಜಿ ಶಿವಲಿಂಗೇಶ್ವರ ಸ್ವಾಮೀಜಿ ವಿಶ್ವಗುರು ಬಸವಣ್ಣ ಹಾಗೂ ಹಾನಗಲ್ ಕುಮಾರ ಸ್ವಾಮೀಜಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು.
ಮಹಿಳೆಯರು ಕುಂಭ ಹೊತ್ತು ಸಾಗಿದರು. ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ ಕೂಡಲದ ಗುರು ಮಹೇಶ್ವರ ಸ್ವಾಮೀಜಿ ವಿಜಯಪುರದ ಅಭಿನವ ಷಣ್ಮುಖರೂಢ ಸ್ವಾಮೀಜಿ ರಾವೂರಿನ ಸಿದ್ಧಲಿಂಗ ಸ್ವಾಮೀಜಿ ಹೇರೂರಿನ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಆಸಂಗಿಯ ವೀರಬಸವ ದೇವರು ಪಾದಯಾತ್ರೆಯಲ್ಲಿದ್ದರು.
‘ಮಕ್ಕಳಿಗೆ ಶಾಲಾ ಶಿಕ್ಷಣ ಜೊತೆಗೆ ಉತ್ತಮ ಸಂಸ್ಕಾರ ಕಲಿಸಬೇಕು. ಅಂದಾಗ ಮಾತ್ರ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸಬಹುದು’ ಎಂದು ಮಾದನಹಿಪ್ಪರಗಿಯ ಶಿವಲಿಂಗ ಸ್ವಾಮೀಜಿ ಹೇಳಿದರು.ಪಾದಯಾತ್ರೆ ಅಂಗವಾಗಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ‘ದೇಶವನ್ನು ಬೆಳಗಿಸಲು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕಾದ ಅಗತ್ಯವಿದೆ. ಅಸಾಧ್ಯವಾಗಿರುವುದನ್ನು ಸಾಧಿಸುವ ಶಕ್ತಿ ಮಕ್ಕಳಲ್ಲಿರುತ್ತದೆ. ಯಾವ ಪಾಲಕರು ತಮ್ಮ ನೈಜಭಕ್ತಿಯಿಂದ ದೇವರನ್ನು ಸ್ಮರಿಸುತ್ತಾರೆಯೋ ಅಂಥವರ ಮಕ್ಕಳು ಸನ್ಮಾರ್ಗದತ್ತ ಸಾಗುತ್ತಾರೆ’ ಎಂದರು. ಸದಾಶಿವ ಸ್ವಾಮೀಜಿ ಮಾತನಾಡಿ ‘ಜನರು ತಮ್ಮ ದುಶ್ಚಟ ಹಾಗೂ -ದುರ್ಗುಣಗಳನ್ನು ಕೈಬಿಡಬೇಕು. ಉತ್ತಮ ಜೀವನ ಕಟ್ಟಿಕೊಳ್ಳಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.