ADVERTISEMENT

ಹಾವೇರಿ | ಹುಕ್ಕೇರಿಮಠ ಜಾತ್ರಾ ಮಹೋತ್ಸವ: ರೈತರಿಗೆ ಕೃಷಿ ಮಾಹಿತಿ ತೆರೆದಿಟ್ಟ ಮೇಳ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 3:59 IST
Last Updated 27 ಡಿಸೆಂಬರ್ 2025, 3:59 IST
ಹಾವೇರಿ ಎಪಿಎಂಸಿ ಜಾನುವಾರು ಮಾರುಕಟ್ಟೆ ಆವರಣದಲ್ಲಿ ಹಮ್ಮಿಕೊಂಡಿರುವ ಕೃಷಿ ಮೇಳಕ್ಕೆ ಶುಕ್ರವಾರ ಬಂದಿದ್ದ ಶಾಲಾ ಮಕ್ಕಳು, ಕುಬ್ಜ ತಳಿಯ ಪುಂಗನೂರು ಜಾನುವಾರುಗಳನ್ನು ಮುಟ್ಟಿ ಖುಷಿಪಟ್ಟರು
ಹಾವೇರಿ ಎಪಿಎಂಸಿ ಜಾನುವಾರು ಮಾರುಕಟ್ಟೆ ಆವರಣದಲ್ಲಿ ಹಮ್ಮಿಕೊಂಡಿರುವ ಕೃಷಿ ಮೇಳಕ್ಕೆ ಶುಕ್ರವಾರ ಬಂದಿದ್ದ ಶಾಲಾ ಮಕ್ಕಳು, ಕುಬ್ಜ ತಳಿಯ ಪುಂಗನೂರು ಜಾನುವಾರುಗಳನ್ನು ಮುಟ್ಟಿ ಖುಷಿಪಟ್ಟರು   

ಹಾವೇರಿ: ಇಲ್ಲಿಯ ಹುಕ್ಕೇರಿಮಠ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ಎರಡು ದಿನಗಳ ‘ಸಿರಿಧಾನ್ಯ ಹಬ್ಬ ಹಾಗೂ ಕೃಷಿ ಮೇಳ’ವು ಕೃಷಿ ಕ್ಷೇತ್ರದ ಆಧುನಿಕ ಅವಕಾಶಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿತು.

ನಗರದ ಹಾನಗಲ್‌ ರಸ್ತೆಯಲ್ಲಿರುವ ಎಂಪಿಎಂಸಿ ಜಾನುವಾರು ಮಾರುಕಟ್ಟೆ ಆವರಣದಲ್ಲಿ ‘ಅಂತರರಾಷ್ಟ್ರೀಯ ವಾಣಿಜ್ಯ ಮೇಳ–2026’ ಅಂಗವಾಗಿ ಮೇಳ ಹಮ್ಮಿಕೊಳ್ಳಲಾಗಿದೆ. 

ಕೃಷಿ ಬೀಜ, ಗೊಬ್ಬರ, ಯಂತ್ರೋಪಕರಣ, ಹೊಸ ತಳಿಗಳ ಮಾಹಿತಿ ಸೇರಿದಂತೆ ಹಲವು ಮಳಿಗೆಗಳು ಮೇಳದಲ್ಲಿವೆ. ಪ್ರತಿ ಮಳಿಗೆಯಲ್ಲೂ ತಜ್ಞರು ಲಭ್ಯರಿದ್ದು, ತಮ್ಮ ಉತ್ಪನ್ನಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ADVERTISEMENT

ಮೇಳದ ಪ್ರವೇಶ ದ್ವಾರದಲ್ಲಿ ಮೆಕ್ಕೆಜೋಳದಿಂದ ಕೇದಾರನಾಥ ಸ್ವಾಮಿ ದೇವಸ್ಥಾನ, ಚಕ್ಕಡಿ ಹಾಗೂ ಮಂಟಪ ನಿರ್ಮಾಣ ಮಾಡಲಾಗಿದೆ. ಅದರ ಪಕ್ಕದೇ ಸಿರಿಧಾನ್ಯಗಳ ರಾಶಿ ಮಾಡಲಾಗಿದ್ದು, ನೋಡುಗರ ಗಮನ ಸೆಳೆಯಿತು. ನೀರಿನ ನಿರ್ವಹಣೆ ಜೊತೆಯಲ್ಲಿ ಆರೋಗ್ಯಕರ ಬದುಕು ಕಟ್ಟಿಕೊಳ್ಳುವುದು ಹೇಗೆ ಎಂಬುದನ್ನು ಮಳಿಗೆಯ ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಗಿದೆ.

ರೈತಾಪಿ ನಾಡಾಗಿರುವ ಹಾವೇರಿ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಕೃಷಿ ಮೇಳ ನಡೆದಿರಲಿಲ್ಲ. ಜಾತ್ರೆ ಅಂಗವಾಗಿ ಮೇಳ ನಡೆದಿರುವುದು ರೈತರಲ್ಲಿ ಖುಷಿಯನ್ನುಂಟು ಮಾಡಿದೆ.

ಕಾರ್ಮಿಕರ ಕೊರತೆ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಯಂತ್ರೋಪಕರಣಗಳಿಗೆ ಬೇಡಿಕೆ ಬಂದಿದೆ. ಟ್ರ್ಯಾಕ್ಟರ್, ರೋಟಾವೇಟರ್, ಕೂರಿಗೆ ಸೇರಿದಂತೆ ವಿವಿಧ ಯಂತ್ರಗಳ ಪ್ರದರ್ಶನವೂ ಮಳಿಗೆಯಲ್ಲಿತ್ತು. ಯಂತ್ರಗಳ ಉತ್ಪಾದಕರು ಹಾಗೂ ವಿತರಕರ ಜೊತೆ ಮಾತನಾಡಿದ ರೈತರು, ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡರು.

ಕೃಷಿ ಇಲಾಖೆ ಬೆಳೆಗಳು ಹಾಗೂ ತೋಟಗಾರಿಕೆ ಇಲಾಖೆ ಬೆಳೆಗಳ ಬಗ್ಗೆಯೂ ಮೇಳದಲ್ಲಿ ರೈತರಿಗೆ ಮಾಹಿತಿ ಲಭ್ಯವಾಯಿತು. ಕೃಷಿ ಇಲಾಖೆಯ ಅಧಿಕಾರಿಗಳು ಪ್ರತ್ಯೇಕ ಮಳಿಗೆ ತೆರೆದಿದ್ದರು. ತೋಟಗಾರಿಕೆ ಇಲಾಖೆಯ ತಜ್ಞರು ಸಹ ಹಾಜರಿದ್ದು, ರೈತರಿಗೆ ಸಲಹೆ ನೀಡಿದರು.

ರೈತರ ಜಮೀನುಗಳಲ್ಲಿ ಬೆಳೆಸಿದ್ದ ನಿಂಬೆ, ಹುಣಸೆಹಣ್ಣು, ಪೇರಲ, ಬಾಳೆ, ಅಡಿಕೆ, ಪಪ್ಪಾಯಿ ಸೇರಿದಂತೆ ಎಲ್ಲ ಬೆಳೆಗಳ ಮಾದರಿಯನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ರೈತ ಉತ್ಪಾದಕ ಕಂಪನಿಗಳ ಉತ್ಪನ್ನಗಳು ಸಹ ಪ್ರದರ್ಶನದಲ್ಲಿವೆ.

ಮೇಳವನ್ನು ಶಾಸಕ ಬಸವರಾಜ ಶಿವಣ್ಣನವರ ಉದ್ಘಾಟಿಸಿದರು. ಜಾನುವಾರು ಪ್ರದರ್ಶನವನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಪಾಟೀಲ ಉದ್ಘಾಟಿಸಿದರು.  ಸದಾಶಿವ ಸ್ವಾಮೀಜಿ, ನರಗುಂದ ಪಂಚಗ್ರಹ ಗುಡ್ಡದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ,  ಮಾಜಿ ಶಾಸಕರಾದ ನೆಹರು ಓಲೇಕಾರ, ಶಿವರಾಜ ಸಜ್ಜನವರ, ಜಿಲ್ಲಾ ಎಸ್‌ಪಿ ಯಶೋದಾ ವಂಟಗೋಡಿ ಇದ್ದರು.  

ಜಾನುವಾರು ಪ್ರದರ್ಶನ: ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿ ಗುರುವಾರ ನಡೆಯುವ ಜಾನುವಾರು ಸಂತೆಯು ರಾಜ್ಯ–ಹೊರ ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿದೆ. ಹೀಗಾಗಿ, ಜಾತ್ರೆ ಅಂಗವಾಗಿ ಜಾನುವಾರು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ವಿವಿಧ ಗ್ರಾಮಗಳ ರೈತರು ಜಾನುವಾರುಗಳ ಸಮೇತ ಆಗಮಿಸಿ, ನೋಡುಗರಿಗೆ ಅವುಗಳ ಮಾಹಿತಿ ನೀಡಿದರು.

ಖಿಲಾರಿ, ಎಚ್‌.ಎಫ್‌., ಗಿರ್ ಹಾಗೂ ಸ್ಥಳೀಯ ವಿಭಾಗದ ಜಾನುವಾರುಗಳು ಪ್ರದರ್ಶನದಲ್ಲಿದ್ದವು. ಜಗತ್ತಿನಲ್ಲಿಯೇ ಅತೀ ಕುಬ್ಜವಾದ ಪುಂಗನೂರು ತಳಿಯ ಜಾನುವಾರು ಪ್ರದರ್ಶನದ ವಿಶೇಷತೆಯಾಗಿತ್ತು. ಆಂಧ್ರಪ‍್ರದೇಶದ ಈ ತಳಿಯನ್ನು ಸ್ಥಳೀಯ ತಳಿಯ ಜೊತೆ ಮಿಶ್ರಣ ಮಾಡಿ ಆವಿಷ್ಕರಿಸಲಾಗಿದೆ. ಜಿಲ್ಲೆಯಲ್ಲಿ ಸದ್ಯ ಕೇವಲ 6 ಜಾನುವಾರುಗಳಿವೆ.

ಇಂದು ತೆರೆ: ಕೃಷಿ ಮಾಹಿತಿ ನೀಡಲು ಹಮ್ಮಿಕೊಂಡಿರುವ ಕೃಷಿ ಮೇಳಕ್ಕೆ ಡಿ. 27ರಂದು ತೆರೆ ಬೀಳಲಿದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಮೇಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ಹಾವೇರಿಯಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ಗಮನ ಸೆಳೆಯುತ್ತಿರುವ ಮೆಕ್ಕೆಜೋಳದ ಕೇದಾರನಾಥ ಸ್ವಾಮಿ ದೇವಸ್ಥಾನದ ಮಾದರಿ

Highlights - null

Quote - ಜಾನುವಾರು ಮಾರುಕಟ್ಟೆಯಲ್ಲಿ ಪ್ರತಿ ವರ್ಷ ಸುಮಾರು ₹ 250 ಕೋಟಿ ವಹಿವಾಟು ನಡೆಯುತ್ತದೆ. ಇಲ್ಲಿ ಪಶು ಆಸ್ಪತ್ರೆ ಆರಂಭಿಸಬೇಕು ಬಸವರಾಜ ಅರಬಗೊಂಡ ಹಾವೆಮುಲ್ ಮಾಜಿ ಅಧ್ಯಕ್ಷ

Quote - ಕೃಷಿ ಪ್ರಧಾನವಾದ ಹಾವೇರಿ ಜಿಲ್ಲೆಯ ರೈತರು ಸಾಂಪ್ರದಾಯಿಕ ಕೃಷಿ ಜೊತೆ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಕೃಷಿ ಲಾಭದಾಯಕವಾಗುತ್ತದೆ ಪಿ.ಎಲ್. ಪಾಟೀಲ ಧಾರವಾಡ ಕೃಷಿ ವಿವಿ ಕುಲಪತಿ

Cut-off box - ಶ್ವಾನ ಪ್ರದರ್ಶನ: ರಂಜಿತ್ ಚಾಂಪಿಯನ್ ಜಾತ್ರೆ ಅಂಗವಾಗಿ ಶ್ವಾನಗಳ ಪ್ರದರ್ಶನವನ್ನೂ ಹಮ್ಮಿಕೊಳ್ಳಲಾಗಿತ್ತು. ಹಾವೇರಿ ಜಿಲ್ಲೆಯ ವಿವಿಧ ಊರುಗಳಿಂದ ಮಾಲೀಕರು ತನ್ನ ಶ್ವಾನಗಳ ಸಮೇತ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಶ್ವಾನಗಳ ನಡಿಗೆ ಹಾವಭಾವ ಮಾಲೀಕರ ಜೊತೆಗಿನ ಒಡನಾಟ ಹಾಗೂ ಚಲನವಲನವನ್ನು ಗಮನಿಸಿ ಅತ್ಯುತ್ತಮ ಶ್ವಾನಕ್ಕೆ ಪ್ರಶಸ್ತಿ ನೀಡಲಾಯಿತು. ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ಶ್ವಾನ ತರಬೇತುದಾರ ರಂಜಿತ್ ಪೂಜಾರ ಅವರು ಪ್ರದರ್ಶಿಸಿದ ಜರ್ಮನ್ ಶೇಪರ್ಡ್ ತಳಿಯ ಶ್ವಾನವು ಚಾಂಪಿಯನ್ ಆಯಿತು. ಸುರೇಶ ಲಕ್ಷ್ಮಣ ಅವರ ಮುಧೋಳ ಹೌಂಡ್ ರಾಹುಲ್ ಹಾವೇರಿಕರ ಅವರ ಬೆಲ್ಜಿಯನ್ ಮ್ಯಾಲಿನೊಯಿಸ್ ಪ್ರತೀಕ್ ಅಸೂಟಿ ಅವರ ಗೋಲ್ಟನ್ ರಿಟ್ರೀವರ್ ಹಾಗೂ ವಿ.ಎಸ್. ರಾಜೀವ್ ಅವರ ಲ್ಯಾಬ್ರಡಾರ್ ತಳಿಯ ಶ್ವಾನವು ನಂತರದ ಸ್ಥಾನ ಪಡೆದುಕೊಂಡವು.

Cut-off box - ‘ರೈತರ ಸಮಸ್ಯೆ ಪರಿಹಾರಕ್ಕೆ ಸಮಿತಿ ರಚಿಸಿ’ ‘ಕೃಷಿ ಪ್ರಧಾನವಾದ ಹಾವೇರಿ ಜಿಲ್ಲೆಯ ರೈತರ ಸಮಸ್ಯೆಗಳಿಗೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಪರಿಹಾರ ಸೂಚಿಸಲು ಸಮಿತಿಯೊಂದನ್ನು ರಚಿಸಬೇಕು’ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಆಗ್ರಹಿಸಿದರು.   ಕೃಷಿ ಮೇಳ ಹಾಗೂ ಜಾನುವಾರು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಸ್ವಾಮೀಜಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ‘ರೈತರ ಬೆಳೆ ಹಾನಿಗೆ ಸೂಕ್ತ ರೀತಿಯಲ್ಲಿ ಪರಿಹಾರ ನೀಡಬೇಕು. ಬಾಕಿ ಇರುವ ವಿಮೆ ಹಣ ಪಾವತಿಸಬೇಕು. ರೈತರ ಬೆಳೆಗೆ ಸೂಕ್ತ ಬೆಲೆ ನಿಗದಿಪಡಿಸಬೇಕು. ಕಬ್ಬು ಬೆಳೆಗಾರರು–ಕಾರ್ಖಾನೆ ಮಾಲೀಕರ ಜೊತೆ ಸಮನ್ವಯತೆ ಸಾಧಿಸಬೇಕು. ಕಳೆಗಳ ನಿರ್ವಹಣೆಗೆ ಗುಣಮಟ್ಟದ ಕಳೆನಾಶಕ ಸಿಗುವಂತೆ ಮಾಡಬೇಕು’ ಎಂದು ಅವರು ಒತ್ತಾಯಿಸಿದರು. ‘ತೋಟಗಾರಿಕೆ ಹಾಗೂ ಕೃಷಿ ಬೆಳೆಗಳನ್ನು ಮೌಲ್ಯವರ್ಧನೆ ಮಾಡುವ ಘಟಕಗಳನ್ನು ಸ್ಥಾಪಿಸಬೇಕು. ಮೆಕ್ಕೆಜೋಳ ಬೆಳೆಯಲ್ಲಿ ಹೆಚ್ಚಾಗುವ ಮುಳ್ಳಸಜ್ಜೆಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು. ಕೃಷಿ ಉತ್ಪನ್ನಗಳನ್ನು ಒಣಗಿಸುವ ಘಟಕಗಳನ್ನು ತೆರೆಯಬೇಕು. ಆಹಾರ ಸಂಸ್ಕರಣಾ ಘಟಕ ಸ್ಥಾಪಿಸಲು ಶೇ 50ರಷ್ಟು ಸಹಾಯಧನ ನೀಡಬೇಕು. ಜಾನುವಾರು ಮಾರುಕಟ್ಟೆ ಆವರಣದಲ್ಲಿ ಪಶು ಆಸ್ಪತ್ರೆ ಸ್ಥಾಪಿಸಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.