ADVERTISEMENT

ಹಾವೇರಿ | ತಡೆಗೋಡೆ ಇಲ್ಲದ ಏರಿ: ಬಲು ಅಪಾಯಕಾರಿ

ನಿರಂತರ ಮಳೆ–ನೀರಾವರಿ ಯೋಜನೆಗಳಿಂದ ಕೆರೆಗಳು ಭರ್ತಿ | ತಡೆಗೋಡೆ, ಸೂಚನಾ ಫಲಕಗಳಿಲ್ಲದ ದಾರಿಗಳು | ದಡದ ರಸ್ತೆಯಲ್ಲಿ ಸಂಚರಿಸಲು ಭಯ

ಸಂತೋಷ ಜಿಗಳಿಕೊಪ್ಪ
Published 22 ಸೆಪ್ಟೆಂಬರ್ 2025, 2:59 IST
Last Updated 22 ಸೆಪ್ಟೆಂಬರ್ 2025, 2:59 IST
ಹಾವೇರಿ ಜಿಲ್ಲೆಯ ಹೋತನಹಳ್ಳಿ ಬಳಿಯ ಕೆರೆಯ ದಡದ ರಸ್ತೆಯಲ್ಲಿರುವ ಅಪಾಯಕಾರಿ ತಿರುವು
ಹಾವೇರಿ ಜಿಲ್ಲೆಯ ಹೋತನಹಳ್ಳಿ ಬಳಿಯ ಕೆರೆಯ ದಡದ ರಸ್ತೆಯಲ್ಲಿರುವ ಅಪಾಯಕಾರಿ ತಿರುವು   

ಹಾವೇರಿ: ನಿರಂತರ ಮಳೆ ಹಾಗೂ ನೀರಾವರಿ ಯೋಜನೆಗಳ ಫಲವಾಗಿ ಜಿಲ್ಲೆಯ ಬಹುತೇಕ ಕೆರೆಗಳು ಭರ್ತಿಯಾಗಿವೆ. ಆದರೆ, ಕೆರೆಯ ಏರಿಯಲ್ಲಿ ತಡೆಗೋಡೆ ಹಾಗೂ ಸೂಚನಾ ಫಲಕಗಳು ಇಲ್ಲದಿದ್ದರಿಂದ ‘ಅವಘಡದ ಭಯ’ ಶುರುವಾಗಿದೆ ಎಂಬುದಾಗಿ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರದ ದಾಖಲೆ ಪ್ರಕಾರ ಜಿಲ್ಲೆಯಲ್ಲಿ 2,058 ಕೆರೆಗಳಿವೆ. ಸಣ್ಣ ಹಾಗೂ ದೊಡ್ಡ ಕೆರೆಗಳೂ ಈ ಪಟ್ಟಿಯಲ್ಲಿವೆ. ಬಹುತೇಕ ಕೆರೆಗಳು ನೀರಿನಿಂದ ಭರ್ತಿಯಾಗಿದ್ದು, ಕೆರೆ ಪಾತ್ರದ ರೈತರು ಹಾಗೂ ಗ್ರಾಮಸ್ಥರ ಮುಖದಲ್ಲಿ ಹರ್ಷ ತಂದಿದೆ. ಆದರೆ, ಕೆರೆಗಳ ದಡದ ರಸ್ತೆಗಳು ಮಾತ್ರ ಅಪಾಯಕ್ಕೆ ಆಹ್ವಾನ ನೀಡುತ್ತಿರುವಂತೆ ಭಾಸವಾಗುತ್ತಿವೆ.

ಬಹುತೇಕ ಕೆರೆಗಳಿರುವ ಜಾಗದಲ್ಲಿ ದಡದಲ್ಲಿ ರಸ್ತೆಗಳನ್ನು ನಿರ್ಮಿಸಲಾಗಿದೆ. ಈ ರಸ್ತೆಗಳ ಮೂಲಕವೇ ಜನರು ನಿತ್ಯವೂ ಅಗತ್ಯ ಕೆಲಸಗಳಿಗಾಗಿ ಓಡಾಡುತ್ತಿದ್ದಾರೆ. ಬಸ್‌ಗಳು, ಕಾರುಗಳು, ಬೈಕ್‌ಗಳು ಸೇರಿದಂತೆ ಎಲ್ಲ ಬಗೆಯ ವಾಹನಗಳಿಗೆ ಈ ರಸ್ತೆಗಳೇ ಸಂಪರ್ಕ ಸೇತುವೆಯಾಗಿವೆ.

ADVERTISEMENT

ಈಗ ಬಹುತೇಕ ಕೆರೆಗಳು ತುಂಬಿರುವುರಿಂದ ದಡದ ರಸ್ತೆಗಳಲ್ಲಿ ಓಡಾಡಲು ಜನರು ಭಯಪಡುತ್ತಿದ್ದಾರೆ. ಕೆರೆ ದಡದ ರಸ್ತೆಯ ಆರಂಭದಿಂದ ಹಿಡಿದು ಮುಕ್ತಾಯದವರೆಗೂ ಯಾವುದೇ ಕಡೆಯಲ್ಲಿ ತಡೆಗೋಡೆ ಕಾಣಿಸುತ್ತಿಲ್ಲ. ಸೂಚನಾ ಫಲಕಗಳನ್ನೂ ಹಾಕಿಲ್ಲ. ಸಣ್ಣ ಗಾತ್ರದ ಕಲ್ಲುಗಳನ್ನು ನಿಲ್ಲಿಸಿಲ್ಲ. ಯಾವುದೇ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಂಡಿಲ್ಲ. ಇದೇ ಕಾರಣಕ್ಕೆ ಜನರು, ಕೆರೆ ದಡದ ರಸ್ತೆ ಎಂದಕೂಡಲೇ ಆತಂಕ ಹೊರಹಾಕುತ್ತಿದ್ದಾರೆ.

ಹಲವು ಕೆರೆಗಳ ದಡದ ರಸ್ತೆಗಳು, ಹಾವಿನ ನಡೆಗೆ ರೀತಿಯಲ್ಲಿವೆ. ಅಡ್ಡಡ್ಡ ರಸ್ತೆಯಲ್ಲಿ ವಾಹನಗಳು ಸಂಚರಿಸಬೇಕಾದ ಸ್ಥಿತಿಯಿದೆ. ಇಂಥ ರಸ್ತೆಗಳಲ್ಲಿ ಸಂಚರಿಸಲು ವಾಹನಗಳ ಚಾಲಕರು ಭಯಪಡುವ ಸ್ಥಿತಿಯಿದೆ. ಜೊತೆಗೆ, ಕೆಲ ಕೆರೆಗಳ ರಸ್ತೆಗಳು ಕಿರಿದಾಗಿವೆ. ಎದುರಿಗೆ ವಾಹನ ಬಂದರೆ ದಾರಿ ಮಾಡಿಕೊಡಲು ಸಹ ಅನುಕೂಲವಿಲ್ಲ. ಇಂಥ ರಸ್ತೆಗಳೇ ಜನರ ಆತಂಕಕ್ಕೆ ಕಾರಣವಾಗಿವೆ.

ಎಚ್ಚರ ತಪ್ಪಿದರೆ ಕೆರೆಪಾಲು: ಬಹುತೇಕ ಕೆರೆಗಳ ದಡದ ರಸ್ತೆಗಳಲ್ಲಿ ತಿರುವುಗಳು ಹೆಚ್ಚಿವೆ. ಇಂಥ ರಸ್ತೆಗಳ ಬದಿಯಲ್ಲಿ, ಕೆರೆಗೆ ಹೊಂದಿಕೊಂಡ ಜಾಗದಲ್ಲಿ ಯಾವುದೇ ತಡೆಗೋಡೆ ನಿರ್ಮಿಸಿಲ್ಲ. ಜೊತೆಗೆ, ಮುಂಜಾಗ್ರತಾ ಕ್ರಮವಾಗಿ ಸಾಲಾಗಿ ಅಡಿಗಲ್ಲುಗಳನ್ನೂ ನಿಲ್ಲಿಸಿಲ್ಲವೆಂದು ಜನರು ದೂರುತ್ತಿದ್ದಾರೆ.

ಕೆರೆಯ ದಡದ ರಸ್ತೆಯಲ್ಲಿ ಸಂಚರಿಸುವ ಸಂದರ್ಭದಲ್ಲಿ ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೆ, ವಾಹನವು ಕೆರೆ ಪಾಲಾಗುತ್ತದೆ. ಸಾವು–ನೋವು ಸಂಭವಿಸುವ ಸಾಧ್ಯತೆಯೂ ಹೆಚ್ಚಿರುತ್ತದೆ ಎಂದು ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಕೆರೆಯ ದಡದಲ್ಲಿ ಸೂಕ್ತ ತಡೆಗೋಡೆ ನಿರ್ಮಿಸುವಂತೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಸೂಚನಾ ಫಲಕಗಳನ್ನು ಅಳವಡಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು–ಜನಪ್ರತಿನಿಧಿಗಳಿಗೆ ಜನರು ಹಲವು ಬಾರಿ ಮನವಿ ಮಾಡಿದ್ದಾರೆ. ಆದರೆ, ಮನವಿಗೆ ಸ್ಪಂದನೆ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತವಾಗುವ ಮುನ್ನವೇ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ, ಅಮಾಯಕರ ಜೀವಕ್ಕೆ ಸಂಚಕಾರ ಉಂಟಾಗುವ ಸ್ಥಿತಿ ಬರಬಹುದೆಂದು ಜನರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಜಿಲ್ಲೆಯ ಹಾವೇರಿ, ರಾಣೆಬೆನ್ನೂರು, ಹಾನಗಲ್, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನ ಹಲವು ಕೆರೆಗಳ ದಡಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಕೆಲ ದಡದ ರಸ್ತೆಗಳಲ್ಲಿ ಈಗಾಗಲೇ ಹಲವು ಬಾರಿ ಅಪಘಾತಗಳು ನಡೆದಿದ್ದು, ಕೆಲವರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

‘ಹಾನಗಲ್ ತಾಲ್ಲೂಕಿನ ನರೇಗಲ್ ಗ್ರಾಮದ ಕೆರೆಯ ದಡದಲ್ಲಿ ಇತ್ತೀಚೆಗೆ ಹೊಸದಾಗಿ ಡಾಂಬರ್ ರಸ್ತೆ ಮಾಡಲಾಗಿದೆ. ಆದರೆ, ತಡೆಗೋಡೆ ಹಾಗೂ ಯಾವುದೇ ಅಡಿಗಲ್ಲು ನಿಲ್ಲಿಸಿಲ್ಲ. ಇದರಿಂದಾಗಿ ಕೆರೆಯ ದಡದ ರಸ್ತೆಯು ಅಪಾಯಕಾರಿಯಾಗಿದೆ. ಚಾಲಕರು ಎಚ್ಚರ ತಪ್ಪಿದರೆ, ವಾಹನಗಳು ಕೆರೆಯೊಳಗೆ ಬೀಳುವ ಲಕ್ಷಣಗಳು ಹೆಚ್ಚಿವೆ’ ಎಂದು ಗ್ರಾಮದ ನಿವಾಸಿ ರೆಹಮಾನ್ ಹೇಳಿದರು.

‘ನರೇಗಲ್ ಹಾಗೂ ವರ್ದಿ ನಡುವೆ ಕೆರೆಯಿದೆ. ದಡದ ಪ್ರದೇಶದ ಇಂದಿಗೂ ಅಪಾಯಕಾರಿ ಸ್ಥಿತಿಯಿದೆ. ಒಂದು ಕಡೆ ಕೆರೆಯಿದ್ದು, ಸಂಪೂರ್ಣ ಭರ್ತಿಯಾಗಿದೆ. ಇನ್ನೊಂದು ಕಡೆ ಆಳವಾದ ತಗ್ಗು ಪ್ರದೇಶವಿದೆ. ಎರಡೂ ಕಡೆಯೂ ಅಪಾಯವೇ ಹೆಚ್ಚಿದೆ. ಹೀಗಾಗಿ, ಕೆರೆ ದಡದ ರಸ್ತೆಯ ಎರಡೂ ಕಡೆಯೂ ತಡೆಗೋಡೆ ನಿರ್ಮಿಸಬೇಕು’ ಎಂದು ಆಗ್ರಹಿಸಿದರು.

ಸೂಚನಾ ಫಲಕವೂ ಇಲ್ಲ: ಕೆರೆ ದಡದ ರಸ್ತೆಯ ಪ್ರವೇಶ ದ್ವಾರ ಹಾಗೂ ಇತರೆ ಕಡೆಗಳಲ್ಲಿ ‘ಅಪಾಯಕಾರಿ ರಸ್ತೆ’ ಬಗ್ಗೆ ಯಾವುದೇ ಸೂಚನಾ ಫಲಕಗಳನ್ನೂ ಅಳವಡಿಸಿಲ್ಲ. ಇದರಿಂದಾಗಿ ಕೆರೆಯ ದಡದ ರಸ್ತೆಯ ಬಗ್ಗೆ ಚಾಲಕರಿಗೆ ಮಾಹಿತಿ ಲಭ್ಯವಾಗುತ್ತಿಲ್ಲ.

‘ಕೆರೆ ದಡದ ಬಗ್ಗೆ ಗೊತ್ತಿರುವ ಸ್ಥಳೀಯರು, ಎಚ್ಚರದಿಂದ ವಾಹನ ಚಲಾಯಿಸುತ್ತಾರೆ. ಆದರೆ, ಬೇರೆ ಊರಿನಿಂದ ಬರುವ ಜನರು ಕೆರೆ ದಡದಲ್ಲಿ ಸಂಚರಿಸುವಾಗ ಅವಘಡ ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ, ಕೆರೆ ದಡಗಳಲ್ಲಿ ತ್ವರಿತವಾಗಿ ಸೂಚನಾ ಫಲಕಗಳನ್ನು ಅಳವಡಿಸುವ ಅಗತ್ಯವಿದೆ’ ಎಂದು ಜನರು ಆಗ್ರಹಿಸಿದರು.

ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ನರೇಗಲ್ ಕೆರೆಯ ದಡದ ರಸ್ತೆಯಲ್ಲಿ ತಡೆಗೋಡೆ–ಅಡಿಗಲ್ಲು ಇಲ್ಲದಿರುವುದು
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ನರೇಗಲ್ ಕೆರೆಯ ದಡದ ರಸ್ತೆಯಲ್ಲಿ ತಡೆಗೋಡೆ–ಅಡಿಗಲ್ಲು ಇಲ್ಲದಿರುವುದು
ಹಾವೇರಿ ಜಿಲ್ಲೆಯ ತಿಳವಳ್ಳಿ ದೊಡ್ಡಕೆರೆ ದಡದ ರಸ್ತೆಯು ಅಪಾಯಕಾರಿ ಸ್ಥಿತಿಯಲ್ಲಿರುವುದು
ಜಿಲ್ಲೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಕೆರೆ ದಡದ ರಸ್ತೆಗಳ ಬಗ್ಗೆ ಸಮೀಕ್ಷೆ ಮಾಡಬೇಕು. ತುರ್ತಾಗಿ ಅಗತ್ಯ ಕ್ರಮಗಳನ್ನು ಕೈಗೊಂಡು ಜನರ ಜೀವಕ್ಕೆ ಸುರಕ್ಷತೆ ಒದಗಿಸಬೇಕು
ಬಾಷಾ ತಿಳವಳ್ಳಿ, ವ್ಯಾಪಾರಿ
ತಡೆಗೋಡೆ ಇಲ್ಲದಿದ್ದರಿಂದ ಕೆರೆಯೊಳಗೆ ವಾಹನಗಳು ಬೀಳುವ ಸಾಧ್ಯತೆ ಹೆಚ್ಚು. ಹೀಗಾಗಿ ಪ್ರತಿಯೊಂದು ಕೆರೆಯ ದಡದಲ್ಲಿ ತಡೆಗೋಡೆ ನಿರ್ಮಿಸಬೇಕು
ಚಂದ್ರು ನರೇಗಲ್, ನಿವಾಸಿ

ತಿಳಿವಳ್ಳಿ ದೊಡ್ಡಕೆರೆ ರಸ್ತೆ ಅಪಾಯಕಾರಿ

ಜಿಲ್ಲೆಯ ಹಾನಗಲ್ ತಾಲ್ಲೂಕಿನ ತಿಳವಳ್ಳಿ ಗ್ರಾಮದ ದೊಡ್ಡಕೆರೆಯ ದಡದ ರಸ್ತೆಯೂ ಅಪಾಯಕಾರಿ ಸ್ಥಿತಿಯಲ್ಲಿದೆ. ತಡೆಗೋಡೆ ಇಲ್ಲದಿದ್ದರಿಂದ ಈ ರಸ್ತೆಯಲ್ಲಿ ಸಂಚರಿಸಲು ಜನರು ಭಯಪಡುವ ಸ್ಥಿತಿಯಿದೆ. ತಿಳವಳ್ಳಿಯಿಂದ ಹಾವೇರಿ–-ಬ್ಯಾಡಗಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಸಾಕಷ್ಟು ತಿರುವುಗಳಿವೆ. ವಾಹನಗಳ ಚಾಲನೆ ಸಂದರ್ಭದಲ್ಲಿ ಸ್ವಲ್ಪ ಯಾಮಾರಿದರೂ ವಾಹನ ಕೆರೆಯೊಳಗೆ ಬೀಳುತ್ತದೆ. ‘ಸುಮಾರು 1500 ಎಕರೆ ವಿಸ್ತೀರ್ಣದಲ್ಲಿ ದೊಡ್ಡಕೆರೆಯಿದೆ. ಸತತ ಮಳೆ ಹಾಗೂ ಏತ ನೀರಾವರಿ ಯೋಜನೆಯಿಂದ ಕೆರೆ ಸಂಪೂರ್ಣ ಭರ್ತಿಯಾಗಿದೆ. ಕೋಡಿ ಸಹ ಬಿದ್ದಿದೆ. ಕೆರೆ ಏರಿಯ ರಸ್ತೆ ಮೂಲಕವೇ ಹಾವೇರಿ ಮತ್ತು ಬ್ಯಾಡಗಿ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ವಾಹನಗಳು ತೆರಳುತ್ತವೆ. ಈ ರಸ್ತೆ ಅಪಾಯಕಾರಿ ಸ್ಥಿತಿಯಲ್ಲಿದೆ. ದಯವಿಟ್ಟು ತಡೆಗೋಡೆ ನಿರ್ಮಿಸಿ ಜನರ ಆತಂಕ ದೂರ ಮಾಡಬೇಕು’ ಎಂದು ಜನರು ಆಗ್ರಹಿಸುತ್ತಿದ್ದಾರೆ.

ಪೊಲೀಸರ ಪತ್ರಕ್ಕೂ ಕಿಮ್ಮತ್ತಿಲ್ಲ

ಜಿಲ್ಲೆಯ ಹಲವು ಕಡೆ ಅಪಾಯಕಾರಿ ರೀತಿಯಲ್ಲಿರುವ ಕೆರೆ ದಡದ ರಸ್ತೆಗಳ ಸುಧಾರಣೆಗಾಗಿ ಪೊಲೀಸರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಪತ್ರ ಬರೆದಿದ್ದಾರೆ. ಆದರೆ ಪತ್ರಕ್ಕೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ‘ದಡದ ರಸ್ತೆಗಳು ಹಾಳಾಗಿವೆ. ಕೆಲವು ಕಡೆ ತಡೆಗೋಡೆಗಳಿಲ್ಲ. ಅವೈಜ್ಞಾನಿಕ ತಿರುವುಗಳಿವೆ. ದಡದ ರಸ್ತೆ ಸುಧಾರಣೆಗಾಗಿ ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಆಗಾಗ ಪತ್ರ ಬರೆಯುತ್ತಿದ್ದೇವೆ. ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿಯೂ ಎಚ್ಚರಿಸುತ್ತಿದ್ದೇವೆ. ಅಷ್ಟಾದರೂ ದಡದ ರಸ್ತೆಗಳಲ್ಲಿ ತಡೆಗೋಡೆ ನಿರ್ಮಿಸುತ್ತಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಜಿಲ್ಲೆಯ ತಾಲ್ಲೂಕುವಾರು ಕೆರೆಗಳು

ತಾಲ್ಲೂಕು; ಒಟ್ಟು ಕೆರೆಗಳು

ಹಾವೇರಿ; 62

ರಾಣೆಬೆನ್ನೂರು; 49

ಸವಣೂರು; 38

ರಟ್ಟೀಹಳ್ಳಿ; 41

ಶಿಗ್ಗಾವಿ; 251

ಬ್ಯಾಡಗಿ; 341

ಹಿರೇಕೆರೂರು; 375

ಹಾನಗಲ್; 901

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.