
ಹಾವೇರಿ: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಅವಧಿಯಲ್ಲಿ 1.11 ಲಕ್ಷ ಮಂದಿಗೆ ಹಕ್ಕು ಪತ್ರ ನೀಡಲಾಗಿದೆ. ಹಾವೇರಿ ಜಿಲ್ಲೆಯಲ್ಲಿಯೂ 28 ಸಾವಿರ ಜನರಿಗೆ ಹಕ್ಕುಪತ್ರ ಕೊಟ್ಟಿದ್ದೇನೆ. ಫೆ.13ರಂದು ಹಾವೇರಿಯಲ್ಲಿ ನಡೆಯುವ ಸರ್ಕಾರದ ಸಾಧನಾ ಸಮಾವೇಶದಲ್ಲಿಯೂ ಹೊಸದಾಗಿ 1 ಲಕ್ಷ ಜನರಿಗೆ ಹಕ್ಕುಪತ್ರ ನೀಡಲಾಗುತ್ತಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ನಗರದ ಹೊರವಲಯದಲ್ಲಿರುವ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜರುಗಿದ ‘ಕಂದಾಯ ಇಲಾಖೆ ಹಕ್ಕುಪತ್ರ ವಿತರಣಾ ಸಮಾವೇಶದ ಪೂರ್ವಭಾವಿ ಸಭೆ’ಯಲ್ಲಿ ಪಾಲ್ಗೊಂಡಿದ್ದ ಅವರು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
‘ದಾಖಲೆ ರಹಿತರಿಗೆ ಕಂದಾಯ ಗ್ರಾಮ ಮಾಡುವುದು ಬಹಳ ದಿನಗಳ ಹೋರಾಟವಾಗಿತ್ತು. ನಮ್ಮ ಸರ್ಕಾರ ಬಂದ ನಂತರ, ಅರ್ಹರನ್ನು ಗುರುತಿಸಿ ಹಕ್ಕುಪತ್ರ ವಿತರಿಸಲಾಗುತ್ತಿದೆ. ಹಾಡಿ, ಹಟ್ಟಿ, ತಾಂಡಾ... ಹೀಗೆ ಬೇರೆ ಬೇರೆ ಹೆಸರಿನಿಂದ ದಾಖಲೆ ರಹಿತವಾಗಿ ವಾಸಿಸುತ್ತಿದ್ದ ಜನರು ಅತಂತ್ರ ಸ್ಥಿತಿಯಲ್ಲಿದ್ದರು. ಅವರಿಗೆ ಮುಕ್ತಿ ನೀಡಿ, ನೆಮ್ಮದಿ ಬದುಕು ನಡೆಸಲು ಹಕ್ಕುಪತ್ರ ನೀಡಲಾಗುತ್ತಿದೆ’ ಎಂದರು.
‘ದೊಡ್ಡಮಟ್ಟದಲ್ಲಿ ಹಕ್ಕುಪತ್ರಗಳ ತಯಾರಿಗೆ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಗಳ ಶ್ರಮವಿದೆ. ನಿಮ್ಮ ಕೆಲಸದ ಸಾರ್ಥಕತೆಯಾಗಲು ಹಕ್ಕು ಪತ್ರ ವಿತರಣೆ ಸಮಾವೇಶ ಹಾವೇರಿಯಲ್ಲಿ ಮಾಡಲು ತೀರ್ಮಾನಿಸಲಾಗಿದೆ’ ಎಂದರು.
‘ಜಿಲ್ಲೆಯಲ್ಲಿ ಆರ್‌ಟಿಸಿ (ಪಹಣಿ) ತಿದ್ದುಪಡಿ, ದರಖಾಸ್ತ ಕೆಲಸ, ಪೋತಿ ಖಾತೆ ಸೇರಿದಂತೆ ವಿವಿಧ ಕೆಲಸಗಳು ಅತ್ಯಂತ ಉತ್ತಮವಾಗಿ ಆಗಿವೆ. ಈ ಮೊದಲು ಹದ್ದುಬಸ್ತಿಗೆ 6 ರಿಂದ 12 ತಿಂಗಳು ಆಗುತ್ತಿತ್ತು. ಈಗ ಒಂದು ತಿಂಗಳಲ್ಲಿ ಕೆಲಸ ಆಗುತ್ತಿದೆ. ಎಲ್ಲರೂ ಸೇರಿ ಬದಲಾವಣೆ ತಂದಿದ್ದೀರಿ. ಆಗಿರುವ ಕೆಲಸ ಜನರಿಗೆ ಕಾಣಬೇಕು. ಕೆಲಸ ಮಾಡಿದವರನ್ನು ಗುರುತಿಸುವ ಕೆಲಸವಾಗಬೇಕು. ಕೆಲಸ ಮಾಡಲು ಪ್ರೋತ್ಸಾಹ ಸಿಗುವಂತಾಗಬೇಕು. ಅದು ಇಂತಹ ಕಾರ್ಯಕ್ರಮಗಳಿಂದ ಸಾಧ್ಯ’ ಎಂದರು.
ಶಾಸಕರಾದ ಬಸವರಾಜ ಶಿವಣ್ಣನವರ, ಯು.ಬಿ. ಬಣಕಾರ, ಶ್ರೀನಿವಾಸ ಮಾನೆ, ಯಾಸೀರ ಅಹ್ಮದಖಾನ ಪಠಾಣ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಜಿ.ಪಂ. ಸಿಇಒ ರುಚಿ ಬಿಂದಲ್, ಜಿಲ್ಲಾ ಎಸ್.ಪಿ. ಯಶೋಧಾ ವಂಟಗೋಡಿ ಹಾಗೂ ಇತರರು ಸಭೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.