ADVERTISEMENT

ಹಾವೇರಿ: ಸಾಲಕ್ಕೂ ಮುನ್ನ ₹4.70 ಲಕ್ಷ EMI ಕೇಳಿದ ಫೈನಾನ್ಸ್ ಕಂಪನಿ; ದಂಪತಿ ಧರಣಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2025, 15:32 IST
Last Updated 27 ಜನವರಿ 2025, 15:32 IST
ಹಾವೇರಿಯ ಹಳೇ ಪಿ.ಬಿ.ರಸ್ತೆಯಲ್ಲಿರುವ ಹಿಂದೂಜಾ ಹೌಸಿಂಗ್ ಫೈನಾನ್ಸ್ ಕಂಪನಿಯ ಪ್ರವೇಶ ದ್ವಾರದಲ್ಲಿ ಧರಣಿ ಕುಳಿತಿದ್ದ ಶರಣಯ್ಯ ಮಹಾಂತಿನಮಠ ಅವರ ಪತ್ನಿ
ಹಾವೇರಿಯ ಹಳೇ ಪಿ.ಬಿ.ರಸ್ತೆಯಲ್ಲಿರುವ ಹಿಂದೂಜಾ ಹೌಸಿಂಗ್ ಫೈನಾನ್ಸ್ ಕಂಪನಿಯ ಪ್ರವೇಶ ದ್ವಾರದಲ್ಲಿ ಧರಣಿ ಕುಳಿತಿದ್ದ ಶರಣಯ್ಯ ಮಹಾಂತಿನಮಠ ಅವರ ಪತ್ನಿ   

ಹಾವೇರಿ: ‘₹ 40 ಲಕ್ಷ ಸಾಲ ನೀಡುವುದಾಗಿ ಹೇಳಿದ್ದ ಹಿಂದೂಜಾ ಹೌಸಿಂಗ್ ಫೈನಾನ್ಸ್ ಕಂಪನಿಯವರು, ನಮ್ಮಿಂದ ಮುಂಗಡವಾಗಿ ಪ್ರತಿ ತಿಂಗಳು ₹ 47 ಸಾವಿರದಂತೆ 10 ತಿಂಗಳಿಗೆ ಕ್ರಮವಾಗಿ ₹ 4.70 ಲಕ್ಷ ಇಎಂಐ ಕಟ್ಟಿಸಿಕೊಂಡಿದ್ದಾರೆ. ಆದರೆ, ಸಾಲ ಜಮೆ ಮಾಡಿಲ್ಲ’ ಎಂದು ಆರೋಪಿಸಿ ಸಂತ್ರಸ್ತ ದಂಪತಿ, ಕಂಪನಿಯ ಕಚೇರಿಯಲ್ಲಿ ಶನಿವಾರ ಧರಣಿ ನಡೆಸಿದರು.

ನಗರದ ಹಳೇ ಪಿ.ಬಿ.ರಸ್ತೆಯಲ್ಲಿರುವ ಕಂಪನಿಯ ಕಚೇರಿಗೆ ಸೋಮವಾರ ಬಂದಿದ್ದ ಗ್ರಾಹಕ ಶರಣಯ್ಯ ಮಹಾಂತಿನಮಠ ದಂಪತಿ, ಬ್ಯಾಂಕ್ ಖಾತೆಗೆ ಸಾಲ ಜಮೆ ಮಾಡುವಂತೆ ಒತ್ತಾಯಿಸಿದರು. ಅದಕ್ಕೆ ಸಿಬ್ಬಂದಿ ಸ್ಪಂದಿಸದಿದ್ದಾಗ, ಕಚೇರಿ ಪ್ರವೇಶ ದ್ವಾರದ ಬಳಿಯೇ ಧರಣಿ ಆರಂಭಿಸಿದರು. ಹಣ ಜಮೆ ಆಗುವವರೆಗೆ ಸ್ಥಳದಿಂದ ಕದಲಲ್ಲ ಎಂದು ಪಟ್ಟು ಹಿಡಿದರು.

‘ನಮ್ಮದು ಸವಣೂರು. ಹಾವೇರಿಯಲ್ಲಿ ಮನೆ ಖರೀದಿಸಿದ್ದೇವೆ. ಇದಕ್ಕಾಗಿ ₹40 ಲಕ್ಷ ಸಾಲ ನೀಡುವಂತೆ ಹಿಂದೂಜಾ ಹೌಸಿಂಗ್ ಫೈನಾನ್ಸ್ ಕಂಪನಿಗೆ 2024ರ ಫೆಬ್ರುವರಿಯಲ್ಲಿ ಅರ್ಜಿ ಸಲ್ಲಿಸಿದ್ದೆವು. ₹ 37.43 ಲಕ್ಷ ಸಾಲ ಮಂಜೂರಾಗಿರುವುದಾಗಿ ಹೇಳಿದ್ದ ಪ್ರತಿನಿಧಿ, ಮೊಬೈಲ್‌ನಲ್ಲಿ ಚೆಕ್‌ ಫೋಟೊ ತೋರಿಸಿದ್ದರು. ನಂತರ, ಪ್ರತಿ ತಿಂಗಳು ₹ 47 ಸಾವಿರ ಕಂತು ಕಟ್ಟುವಂತೆ ಹೇಳಿದ್ದರು. ಬ್ಯಾಂಕ್ ಖಾತೆಗೆ ಹಣ ಜಮೆ ಆಗದಿದ್ದರೂ ಮೊದಲ ಕಂತು ಕಟ್ಟಿದ್ದೆವು’ ಎಂದು ಶರಣಯ್ಯ ತಿಳಿಸಿದರು.

ADVERTISEMENT

‘ನನಗೆ ಅಪಘಾತವಾಯಿತು. ಹೀಗಾಗಿ, ನೋಂದಣಿ ಪ್ರಕ್ರಿಯೆ ಮುಂದೂಡಿದೆವು. ಚೆಕ್ ತೋರಿಸಿದ್ದರಿಂದ ಸಾಲ ಮಂಜೂರಾಗಿರಬಹುದೆಂದು ತಿಳಿದು ಕ್ರಮವಾಗಿ 10 ಕಂತು ಕಟ್ಟಿದ್ದೆವು. ಇತ್ತೀಚೆಗೆ ಮನೆ ನೋಂದಣಿ ಮಾಡಿಕೊಳ್ಳಲು ಪ್ರಕ್ರಿಯೆ ಆರಂಭಿಸಿದ್ದೆವು. ಆದರೆ, ಮಾಲೀಕರಿಗೆ ಕಂಪನಿಯಿಂದ ಹಣ ಸಂದಾಯವಾಗಿಲ್ಲ ಎಂಬುದು ತಿಳಿಯಿತು. ಚೆಕ್ ಅವಧಿ ಸಹ ಮುಗಿದಿತ್ತು. ಹೊಸ ಚೆಕ್ ಮೂಲಕ ಹಣ ಜಮೆ ಮಾಡುವಂತೆ ಕೋರಿದರೂ ಕಂಪನಿಯವರು ಸ್ಪಂದಿಸಿಲ್ಲ. ನೋಂದಣಿಗಾಗಿ ಸರ್ಕಾರಕ್ಕೆ ಕಟ್ಟಿದ್ದ ₹ 3.54 ಲಕ್ಷವೂ ಹೋಗಿದೆ. ಹೀಗಾಗಿ, ಧರಣಿ ಆರಂಭಿಸಿದ್ದೇವೆ. ನಮಗೆ ಸಾಲ ಬೇಕು. ಇಲ್ಲದಿದ್ದರೆ, ಕಟ್ಟಿದ ಹಣವನ್ನು ವಾಪಸು ಕೊಡಬೇಕು’ ಎಂದು ಅವರು ಒತ್ತಾಯಿಸಿದರು.

ಶರಣಯ್ಯ ಅವರ ಆರೋಪದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಹಿಂದೂಜಾ ಹೌಸಿಂಗ್ ಫೈನಾನ್ಸ್ ಕಂಪನಿ ಪ್ರತಿನಿಧಿಗಳು ಲಭ್ಯರಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.