ADVERTISEMENT

ಹಾವೇರಿ | 4 ಲಕ್ಷ ಮೆ.ಟನ್ ಮೆಕ್ಕೆಜೋಳ ಖರೀದಿಸದಿದ್ದರೆ ಹೋರಾಟ: ರೈತರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 4:16 IST
Last Updated 9 ಡಿಸೆಂಬರ್ 2025, 4:16 IST
ಹಾವೇರಿ ಹಾಲು ಒಕ್ಕೂಟದ ಆಡಳಿತ ಕಚೇರಿಯಲ್ಲಿರುವ ಮೆಕ್ಕೆಜೋಳ ಖರೀದಿ ಕೇಂದ್ರದಲ್ಲಿ ಸೋಮವಾರ ಬೆಳಿಗ್ಗೆ ರೈತರು ನೋಂದಣಿ ಮಾಡಿಸಿದರು
ಹಾವೇರಿ ಹಾಲು ಒಕ್ಕೂಟದ ಆಡಳಿತ ಕಚೇರಿಯಲ್ಲಿರುವ ಮೆಕ್ಕೆಜೋಳ ಖರೀದಿ ಕೇಂದ್ರದಲ್ಲಿ ಸೋಮವಾರ ಬೆಳಿಗ್ಗೆ ರೈತರು ನೋಂದಣಿ ಮಾಡಿಸಿದರು   

ಹಾವೇರಿ: ‘ಜಿಲ್ಲೆಯಲ್ಲಿ ರೈತರು 12 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಳೆದಿದ್ದಾರೆ. ಈ ಪೈಕಿ ಕನಿಷ್ಠ 4 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಬೇಕು. ಇಲ್ಲದಿದ್ದರೆ, ಮತ್ತೆ ಹೋರಾಟ ಅನಿವಾರ್ಯ’ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

‘ಪ್ರತಿಯೊಬ್ಬ ರೈತರಿಂದ ಕ್ವಿಂಟಲ್‌ಗೆ ₹2,400 ಬೆಲೆಯಲ್ಲಿ ಗರಿಷ್ಠ 50 ಕ್ವಿಂಟಲ್ ಮೆಕ್ಕೆಜೋಳ ಖರೀದಿಸಲಾಗುವುದು’ ಎಂದು ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಇದರನ್ವಯ ಜಿಲ್ಲಾಡಳಿತದ ಕೇಂದ್ರಗಳಲ್ಲಿ 50 ಕ್ವಿಂಟಲ್ ಖರೀದಿ ನೋಂದಣಿ ಸೋಮವಾರದಿಂದ ಆರಂಭವಾಗಿದೆ.

ಕೆಎಂಎಫ್‌ ವತಿಯಿಂದ ತೆರೆದಿರುವ 5 ಕೇಂದ್ರಗಳಲ್ಲಿ ಮಾತ್ರ 20 ಕ್ವಿಂಟಲ್ ನೋಂದಣಿ ಮಾಡಿಕೊಳ್ಳುತ್ತಿದ್ದು, ಇದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಕೆಎಂಎಫ್‌ ನೋಂದಣಿ ಪ್ರಕ್ರಿಯೆ ಸೋಮವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಮಂಗಳವಾರದಿಂದ ಪುನಃ ನೋಂದಣಿ ಆರಂಭವಾಗಲಿದೆ.

ADVERTISEMENT

‘ರೈತರು ಬೆಳೆದಿರುವ ಎಲ್ಲ ಮೆಕ್ಕೆಜೋಳ ಖರೀದಿಸಬೇಕು’ ಎಂದು ಒತ್ತಾಯಿಸಿ ‘ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ’ಯ ಜಿಲ್ಲಾ ಘಟಕದ ನೇತೃತ್ವದಲ್ಲಿ ರೈತರು ಡಿ. 8ರಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸಲು ಸಜ್ಜಾಗಿದ್ದರು. ಈ ಮಾಹಿತಿ ಅರಿತ ಸರ್ಕಾರ, ಡಿ. 7ರಂದೇ 50 ಕ್ವಿಂಟಲ್ ಖರೀದಿ ಬಗ್ಗೆ ಆದೇಶ ಹೊರಡಿಸಿದೆ.

ಈ ಆದೇಶದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ರೈತರು, ‘ಆರಂಭದಲ್ಲಿ ಬರುವ ರೈತರ ಮೆಕ್ಕೆಜೋಳವನ್ನು ಮಾತ್ರ ತರಾತುರಿಯಲ್ಲಿ ನೋಂದಣಿ ಮಾಡಿಕೊಂಡು, ಆ ನಂತರ ಬರುವ ರೈತರನ್ನು ನೋಂದಣಿ ಮಾಡದೇ ಕಳುಹಿಸುವ ಸಾಧ್ಯತೆಯಿದೆ’ ಎಂದು ದೂರಿದ್ದಾರೆ.

‘ಕೇಂದ್ರಕ್ಕೆ ಬರುವ ಎಲ್ಲ ರೈತರ ಮೆಕ್ಕೆಜೋಳ ಖರೀದಿಸಲು ನೋಂದಣಿ ಮಾಡಿಕೊಳ್ಳಬೇಕು. ಎರಡು ದಿನ ಬಿಟ್ಟು, ನೋಂದಣಿ ಮುಗಿದಿದೆ ಎಂದು ಫಲಕ ಹಾಕಿದರೆ ನಾವು ಸುಮ್ಮನಿರುವುದಿಲ್ಲ. ಮತ್ತೆ ಬೀದಿಗೆ ಇಳಿಯಬೇಕಾಗುತ್ತದೆ’ ಎಂದು ರೈತರು ಎಚ್ಚರಿಕೆ ನೀಡಿದರು.

ಹೋರಾಟ ಅನಿವಾರ್ಯ: ಮೆಕ್ಕೆಜೋಳ ಖರೀದಿ ಗೊಂದಲದ ಬಗ್ಗೆ ಮಾತನಾಡಿದ ‘ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ’ಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ‘ರೈತರ ಹೋರಾಟಕ್ಕೆ ಮಣಿದು ರಾಜ್ಯ ಸರ್ಕಾರ ಗರಿಷ್ಠ 50 ಕ್ವಿಂಟಲ್ ಖರೀದಿ ಆದೇಶ ಹೊರಡಿಸಿದೆ. ಈ ಆದೇಶದಲ್ಲಿ ಹಾವೇರಿ ಜಿಲ್ಲೆಯಲ್ಲಿ 4 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಖರೀದಿಸಬೇಕು. ಇಲ್ಲದಿದ್ದರೆ, ಮತ್ತೆ ಹೋರಾಟ ಅನಿವಾರ್ಯವಾಗಲಿದೆ’ ಎಂದು ಎಚ್ಚರಿಸಿದರು.

‘ಸರ್ಕಾರದ ಆದೇಶವಿದ್ದರೂ ಕೆಎಂಎಫ್‌ನಲ್ಲಿ ಸೋಮವಾರ 20 ಕ್ವಿಂಟಲ್ ಮಾತ್ರ ನೋಂದಣಿ ಮಾಡಿಕೊಳ್ಳಲಾಗುತ್ತಿತ್ತು. ಇದನ್ನು ಪ್ರಶ್ನಿಸಿದಾಗ, ಸಾಫ್ಟ್‌ವೇರ್ ಸಮಸ್ಯೆಯೆಂದು ಅಧಿಕಾರಿಗಳು ಸಬೂಬು ಹೇಳಿದರು. ನೋಂದಣಿ ಮಾಡಿಸುವುದಿಲ್ಲವೆಂದು ಹೇಳಿರುವ ರೈತರು, ಕೇಂದ್ರದಲ್ಲಿಯೇ ಮೆಕ್ಕೆಜೋಳ ಮಾದರಿ ಹಾಗೂ ಆಧಾರ್ ಕಾರ್ಡ್ ಇಟ್ಟು ಬಂದಿದ್ದಾರೆ. ಸಾಫ್ಟ್‌ವೇರ್ ಸರಿಯಾದ ಮೇಲೆಯೇ 50 ಕ್ವಿಂಟಲ್ ಖರೀದಿಗೆ ನೋಂದಣಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ’ ಎಂದು ಹೇಳಿದರು.

‘ಪರಿಷ್ಕೃತ ಆದೇಶ ಹೊರಡಿಸಿದರೆ, ರೈತರ ಹೋರಾಟ ಹತ್ತಿಕ್ಕಬಹುದೆಂದು ರಾಜ್ಯ ಸರ್ಕಾರ ಅಂದುಕೊಂಡಿದ್ದರೆ ಅದು ತಪ್ಪು. ರೈತರು ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಜಿಲ್ಲೆಯಲ್ಲಿ 12 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಳೆಯಲಾಗಿದೆ. ಈ ಪೈಕಿ 4 ಲಕ್ಷ ಮೆಟ್ರಿಕ್ ಟನ್‌ ಮೆಕ್ಕೆಜೋಳ ಖರೀದಿಸಲೇ ಬೇಕು. ಇಲ್ಲದಿದ್ದರೆ, ಅದರ ಪರಿಣಾಮವನ್ನು ಸರ್ಕಾರ ಎದುರಿಸಬೇಕಾಗುತ್ತದೆ’ ಎಂದರು.

8 ಕೇಂದ್ರಗಳಲ್ಲಿ 976 ನೋಂದಣಿ

ಹಾವೇರಿ ತಾಲ್ಲೂಕಿನ ಗುತ್ತಲ ಹಾವನೂರು ನೆಗಳೂರು ರಾಣೆಬೆನ್ನೂರು ತಾಲ್ಲೂಕಿನ ಕರೂರ ಇಟಗಿ ಹಾಗೂ ಕಮದೊಂಡದಲ್ಲಿ ಜಿಲ್ಲಾಡಳಿತದಿಂದ ಖರೀದಿ ಕೇಂದ್ರ ತೆರೆಯಲಾಗಿದೆ. ಈ ಏಳು ಕೇಂದ್ರಗಳಲ್ಲಿ 971 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಬ್ಯಾಡಗಿ ಎಪಿಎಂಸಿ ಆವರಣದಲ್ಲಿರುವ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಸಂಘದಲ್ಲಿಯೂ ಹೊಸದಾಗಿ ಕೇಂದ್ರ ತೆರೆಯಲಾಗಿದೆ. ಕೋಳಿ ಆಹಾರ ತಯಾರಿಕಾ ಘಟಕಕ್ಕೆ ಮೆಕ್ಕೆಜೋಳ ಖರೀದಿ ನಡೆಯಲಿದೆ. ಈ ಕೇಂದ್ರದಲ್ಲಿ ಸೋಮವಾರ 5 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ‘ಜಿಲ್ಲಾಡಳಿತದಿಂದ ಎಂಟು ಕೇಂದ್ರಗಳಲ್ಲಿ ರೈತರಿಂದ ಗರಿಷ್ಠ 50 ಕ್ವಿಂಟಲ್ ಮೆಕ್ಕೆಜೋಳ ಖರೀದಿಗೆ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಮಂಗಳವಾರವೂ ನೋಂದಣಿ ಪ್ರಕ್ರಿಯೆ ಇರಲಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.