ADVERTISEMENT

ಹಾವೇರಿ | ಬಿತ್ತನೆ ಬೀಜಕ್ಕೆ ಮುಗಿಬಿದ್ದ ರೈತರು: ಡಿಎಪಿ ಅಭಾವ

ಜಿಲ್ಲೆಯಾದ್ಯಂತ ಡಿಎಪಿ ಕೊರತೆ; ಗೊಬ್ಬರ ಮಾಫಿಯಾ ಆರೋಪ, ಪರ್ಯಾಯ ಗೊಬ್ಬರ ಖರೀದಿಸಲು ಅಧಿಕಾರಿಗಳ ಸಲಹೆ

ಸಂತೋಷ ಜಿಗಳಿಕೊಪ್ಪ
Published 27 ಮೇ 2025, 4:47 IST
Last Updated 27 ಮೇ 2025, 4:47 IST
ಹಾವೇರಿಯ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಬೀಜ ಖರೀದಿಸಿ ಚೀಲಗಳ ಮೇಲೆ ಕುಳಿತಿದ್ದ ರೈತರೊಬ್ಬರು, ತಮ್ಮೂರಿನ ರೈತರ ಸರದಿಯನ್ನು ವೀಕ್ಷಿಸಿದರು
ಹಾವೇರಿಯ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಬೀಜ ಖರೀದಿಸಿ ಚೀಲಗಳ ಮೇಲೆ ಕುಳಿತಿದ್ದ ರೈತರೊಬ್ಬರು, ತಮ್ಮೂರಿನ ರೈತರ ಸರದಿಯನ್ನು ವೀಕ್ಷಿಸಿದರು   

ಹಾವೇರಿ: ಮುಂಗಾರು ಪೂರ್ವ ಮಳೆ ಶುರುವಾಗುತ್ತಿದ್ದಂತೆ ಕೃಷಿ ಭೂಮಿ ಹದಗೊಳಿಸುತ್ತಿರುವ ರೈತರು, ಬಿತ್ತನೆಗಾಗಿ ಗೊಬ್ಬರ ಹಾಗೂ ಬೀಜವನ್ನು ಖರೀದಿಸಿ ಇಟ್ಟುಕೊಳ್ಳುತ್ತಿದ್ದಾರೆ. ಜಿಲ್ಲೆಯಾದ್ಯಂತ ಬೀಜ ಖರೀದಿಸಲು ರೈತರು ಮುಗಿಬೀಳುತ್ತಿದ್ದು, ಡಿಎಪಿ ಗೊಬ್ಬರದ ಕೊರತೆ ಉಂಟಾಗಿದೆ.

ಕೇರಳಕ್ಕೆ ಮುಂಗಾರು ಪ್ರವೇಶಕ್ಕೆ ದಿನಗಣನೆ ಶುರುವಾಗಿದ್ದು, ಅದಾದ ಕೆಲದಿನಗಳ ನಂತರ ರಾಜ್ಯಕ್ಕೂ ಮುಂಗಾರು ಪ್ರವೇಶಿಸುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಜಿಲ್ಲೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಬಿಡುವು ನೀಡುತ್ತ ಉತ್ತಮ ಮಳೆ ಸುರಿಯುತ್ತಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.

ಕೃಷಿ ಇಲಾಖೆ ವತಿಯಿಂದ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜಗಳು ಮಾರಲಾಗುತ್ತಿದೆ. ಇದರ ಜೊತೆಯಲ್ಲಿ ವ್ಯವಸಾಯ ಸೇವಾ ಸೂಸೈಟಿ ಹಾಗೂ ಖಾಸಗಿ ಮಳಿಗೆಗಳ ಮೂಲಕ ಡಿಎಪಿ ಮತ್ತು ಇತರೆ ಗೊಬ್ಬರಗಳ ಮಾರಾಟವೂ ನಡೆಯುತ್ತಿದೆ.

ADVERTISEMENT

ಹಾವೇರಿಯ ಸಹಾಯ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಬಿತ್ತನೆ ಬೀಜಗಳನ್ನು ಖರೀದಿಸಲು ರೈತರು ಸೋಮವಾರ ಮುಗಿಬಿದ್ದರು. ತಾಲ್ಲೂಕಿನ ಹಲವು ಗ್ರಾಮಗಳಿಂದ ಬೆಳಿಗ್ಗೆ ಕಚೇರಿಗೆ ಬಂದಿದ್ದ ರೈತರು, ಸರದಿಯಲ್ಲಿ ನಿಂತು ಬೀಜಗಳನ್ನು ಖರೀದಿಸಿ ತಮ್ಮೊರಿಗೆ ತೆಗೆದುಕೊಂಡು ಹೋದರು.

ಬೆಳಿಗ್ಗೆ 8 ಗಂಟೆಯಿಂದಲೇ ಬೀಜ ವಿತರಣೆ ಆರಂಭಿಸಲಾಗಿತ್ತು. ಅದಕ್ಕೂ ಮುನ್ನವೇ ಕಚೇರಿಗೆ ಬಂದಿದ್ದ ರೈತರು, ಸರದಿಯಲ್ಲಿ ನಿಂತುಕೊಂಡಿದ್ದರು. ತಮ್ಮ ಜಮೀನಿನ ಪಹಣಿ ಹಾಗೂ ಇತರೆ ದಾಖಲೆಗಳನ್ನು ತೋರಿಸಿ, ಬೀಜಗಳನ್ನು ಪಡೆದುಕೊಂಡರು.

ತೊಗರಿ, ಹೆಸರು, ಶೇಂಗಾ, ಸೋಯಾಬಿನ್ ಬೀಜಗಳನ್ನು ಸಬ್ಸಿಡಿ ದರದಲ್ಲಿ ಮಾರಾಟಕ್ಕೆ ಇರಿಸಲಾಗಿದೆ. ಕಚೇರಿಗೆ ಬಂದಿದ್ದ ಬಹುತೇಕ ರೈತರು, ಸೋಯಾಬಿನ್ ಬೀಜಗಳನ್ನು ಹೆಚ್ಚಾಗಿ ಕೊಂಡೊಯ್ದರು.

‘ಈ ವರ್ಷ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿದೆ. ಮುಂಬರುವ ಮುಂಗಾರಿನಲ್ಲೂ ಉತ್ತಮ ಮಳೆಯಾಗುವ ಮುನ್ಸೂಚನೆಯಿದೆ. ಮೊದಲ ಮಳೆ ಬೀಳುತ್ತಿದ್ದಂತೆ ಜಮೀನು ಹದಗೊಳಿಸಲಾಗಿದೆ. ಸ್ವಲ್ಪ ದಿನ ಮಳೆ ಬಿಡುವು ನೀಡುತ್ತಲೇ ಬಿತ್ತನೆ ಕಾರ್ಯ ಆರಂಭಿಸಲಾಗುವುದು. ಮುಂಗಡವಾಗಿ ಬೀಜ ಹಾಗೂ ಗೊಬ್ಬರ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದೇವೆ’ ಎಂದು ದೇವಿಹೊಸೂರು ರೈತರು ಹೇಳಿದರು.

‘ರೈತರ ಬೇಡಿಕೆಗೆ ತಕ್ಕಷ್ಟು ಬಿತ್ತನೆ ಬೀಜಗಳನ್ನು ಪೂರೈಸಲಾಗುತ್ತಿದೆ. ಹೆಚ್ಚಿನ ರೈತರು ಈ ಬಾರಿ ಸೋಯಾಬಿನ್ ಬೆಳೆಯಲು ತೀರ್ಮಾನಿಸಿದ್ದಾರೆ. ಹೀಗಾಗಿ, ಸೋಯಾಬಿನ್ ಬೀಜಕ್ಕೆ ಬೇಡಿಕೆ ಬಂದಿದೆ. ಇನ್ನೊಂದು ವಾರ, ಬೀಜ ಖರೀದಿ ಜೋರಾಗಿರಲಿದೆ’ ಎಂದು ತಿಳಿಸಿದರು.

ಡಿಎಪಿ ಗೊಬ್ಬರ ಕೊರತೆ: ಬೀಜ ಬಿತ್ತನೆಗೂ ಮುನ್ನವೇ ಡಿಎಪಿ ಗೊಬ್ಬರದ ಕೊರತೆ ಉಂಟಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಡಿಎಪಿ ದಾಸ್ತಾನು ಕಡಿಮೆಯಾಗಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಡಿಎಪಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

₹ 1,370 ಬೆಲೆಗೆ ಒಂದು ಚೀಲ ಡಿಎಪಿ ಮಾರಲು ಅವಕಾಶವಿದೆ. ಆದರೆ, ಬಹುತೇಕ ಸೊಸೈಟಿ ಹಾಗೂ ಮಳಿಗೆಗಳಲ್ಲಿ ₹ 1,400 ಬೆಲೆಗೆ ಮಾರಲಾಗುತ್ತಿದೆ. ಕೆಲ ಮಳಿಗೆಗಳಲ್ಲಿ ಗೊಬ್ಬರ ಮಾರಲು ಲಿಂಕ್ ಖರೀದಿಯನ್ನು ಕಡ್ಡಾಯ ಮಾಡಿರುವುದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ.

‘ಜಿಲ್ಲೆಯಲ್ಲಿ ಬಿತ್ತನೆಗೂ ಮುನ್ನವೇ ಡಿಎಪಿ ಗೊಬ್ಬರ ಕೊರತೆ ಉಂಟಾಗಿದೆ. ಕೆಲವರು, ಲಿಂಕ್ ಖರೀದಿ ಮಾಡಿದರಷ್ಟೇ ಗೊಬ್ಬರ ಕೊಡುವುದಾಗಿ ಹೇಳುತ್ತಿದ್ದಾರೆ. ಜಿಲ್ಲೆಯಲ್ಲಿ ಗೊಬ್ಬರ ಮಾಫಿಯಾ ನಡೆದಿದ್ದು, ಇದಕ್ಕೆ ಕೆಲ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಹಕಾರ ನೀಡುತ್ತಿದ್ದಾರೆ’ ಎಂದು ರೈತರು ಆರೋಪಿಸಿದರು.

ಆರೋಪಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೀರಭದ್ರಪ್ಪ ಬಿ.ಎಚ್., ‘ಹಲವು ಕಡೆ ಡಿಎಪಿ ಗೊಬ್ಬರ ಕೊರತೆ ಇರುವುದು ಗಮನದಲ್ಲಿದ್ದು, ಇದು ರಾಷ್ಟ್ರೀಯ ಸಮಸ್ಯೆ. ರೈತರು ಡಿಎಪಿಯನ್ನೇ ಹೆಚ್ಚು ಅವಲಂಬಿಸಲಾರದು. ಡಿಎಪಿಗೆ ಪರ್ಯಾಯವಾದ ಗೊಬ್ಬರಗಳನ್ನು ಬಳಸಬೇಕು’ ಎಂದರು.

‘ಲಿಂಕ್ ಖರೀದಿ ಕಡ್ಡಾಯವಲ್ಲ. ನಿಗದಿತ ದರಕ್ಕೆ ರೈತರಿಗೆ ಗೊಬ್ಬರ ಮಾತ್ರ ಮಾಡುವಂತೆ ವ್ಯಾಪಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ. ಯಾರಾದರೂ ನಿಯಮ ಮೀರಿದ್ದು ಕಂಡುಬಂದರೆ ರೈತರು ನಮಗೆ ದೂರು ನೀಡಬೇಕು. ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಚೀಲಕ್ಕೊಂದು ಲಿಂಕ್ ಕಡ್ಡಾಯ’

‘ಕೆಲ ಮಳಿಗೆಗಳಲ್ಲಿ ಡಿಎಪಿ ಗೊಬ್ಬರ ಲಭ್ಯವಿದೆ. ಆದರೆ ಒಂದು ಚೀಲಕ್ಕೆ ಒಂದು ಲಿಂಕ್ ಖರೀದಿಸುವುದನ್ನು ಮಳಿಗೆಯವರು ಕಡ್ಡಾಯ ಮಾಡಿದ್ದಾರೆ. ಲಿಂಕ್ ಖರೀದಿಸದಿದ್ದರೆ ಗೊಬ್ಬರ ಇಲ್ಲವೆಂದು ಹೇಳುತ್ತಿದ್ದಾರೆ’ ಎಂದು ರೈತರು ದೂರಿದರು.

‘ಸೊಸೈಟಿಗಳಲ್ಲಿ ಮೂರು ಗೊಬ್ಬರ ಚೀಲಕ್ಕೆ ಒಂದು ಲಿಂಕ್‌ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಲಿಂಕ್ ಪಡೆದರಷ್ಟೇ ಗೊಬ್ಬರ ನೀಡುತ್ತಿದ್ದಾರೆ. ಜನಪ್ರತಿನಿಧಿಗಳು ಹಾಗೂ ಪ್ರಭಾವಿಗಳು ಹೇಳಿದರೆ ಅವರಿಗಷ್ಟೇ ಗೊಬ್ಬರ ಕೊಡುತ್ತಿದ್ದಾರೆ. ರೈತರಿಗೆ ಅನ್ಯಾಯವಾಗುತ್ತಿದೆ’ ಎಂದು ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ನಿರ್ದೇಶ ವೀರಭದ್ರಪ್ಪ ’ಲಿಂಕ್ ಖರೀದಿ ಕಡ್ಡಾಯವಲ್ಲ. ಆ ರೀತಿ ಯಾರಾದರೂ ಹೇಳಿದರೆ ದೂರು ನೀಡಬಹುದು’ ಎಂದುದ್ದಾರೆ.

‘ರಷ್ಯಾ ಚೀನಾದಿಂದ ಆಮದಾಗದ ಫಾಸ್ಪರಿಕ್ ಆಮ್ಲ’

‘ಡಿಎಪಿ ತಯಾರಿಗೆ ಬೇಕಿರುವ ಫಾಸ್ಪರಿಕ್ ಆಮ್ಲವನ್ನು ರಷ್ಯಾ ಹಾಗೂ ಚೀನಾದಿಂದ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಯುದ್ಧದ ಪರಿಸ್ಥಿತಿಯಿಂದಾಗಿ ಫಾಸ್ಪರಿಕ್ ಆಮ್ಲದ ಆಮದು ಬಂದ್ ಆಗಿದೆ. ಇದರಿಂದಾಗಿ ಡಿಎಪಿ ಉತ್ಪಾದನೆಯೂ ಕ್ಷೀಣಿಸಿದೆ’ ಎಂದು ಕೃಷಿ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

‘ದೇಶದಲ್ಲಿರುವ ಕೆಲ ಕಂಪನಿಯವರು ಹೊರದೇಶದಿಂದ ಕಚ್ಚಾ ಸಾಮಗ್ರಿ ತರಿಸಿ ಡಿಎಪಿ ತಯಾರಿಸುತ್ತಿದ್ದರು. ಈಗ ಅವರಿಂದ ನಿಗದಿಯಷ್ಟು ಡಿಎಪಿ ತಯಾರಿಸಲು ಆಗುತ್ತಿಲ್ಲ. ದೇಶದಾದ್ಯಂತ ಗೊಬ್ಬರ ಕೊರತೆ ಉಂಟಾಗಿದೆ’ ಎಂದು ಹೇಳಿದರು.

‘ಕ್ಷೇತ್ರವಿಲ್ಲದಿದ್ದರೂ ರಾಗಿ ಹಂಚಿಕೆ’

‘ಜಿಲ್ಲೆಯಲ್ಲಿ ರಾಗಿ ಬೆಳೆಯುವ ಕ್ಷೇತ್ರವಿಲ್ಲ. ಅಷ್ಟಾದರೂ ಕೇಂದ್ರ ಕಚೇರಿಯಿಂದ 516.70 ಕ್ವಿಂಟಲ್ ರಾಗಿ ಹಂಚಿಕೆ ಮಾಡಲಾಗಿದೆ. ಅನಿವಾರ್ಯವಾಗಿ 8.06 ಕ್ವಿಂಟಲ್ ರಾಗಿಗೆ ಬೇಡಿಕೆ ಸಲ್ಲಿಸಲಾಗಿದೆ’ ಎಂದು ಕೃಷಿ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

ಬೀಜ–ಗೊಬ್ಬರದ ಬಗ್ಗೆ ರೈತರು ಮೌಖಿಕವಾಗಿ ಆರೋಪಿಸುತ್ತಾರೆ. ಲಿಖಿತ ದೂರು ನೀಡಿದರೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು.
ವೀರಭದ್ರಪ್ಪ, ಬಿ.ಎಚ್. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಹಾವೇರಿ
ಡಿಎಪಿಗೆ ಬೇಡಿಕೆ ಬಂದಿದೆ. ಕೆಲವರು ಗೊಬ್ಬರನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ಹೆಚ್ಚಿನ ದರಕ್ಕೆ ಮಾರಲು ಮುಂದಾಗುತ್ತಿದ್ದಾರೆ.
ಬಸವಂತಪ್ಪ, ರೈತ
ಹಾವೇರಿಯ ಕೃಷಿ ಸಹಾಯಕ ನಿರ್ದೇಶಕರ ಕಚೇರಿ ಎದುರು ಬೀಜ ಖರೀದಿಸಲು ಸೋಮವಾರ ಸೇರಿದ್ದ ಜನರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.