ಹಾವೇರಿ: ‘ನಿರಂತರ ಮಳೆಯಿಂದಾಗಿ ಹಾನಿಯಾದ ಮನೆಗಳ ನಿರ್ಮಾಣಕ್ಕೆ ಪರಿಹಾರ ಒದಗಿಸಲು ಹೊಸ ಮಾರ್ಗಸೂಚಿ ರಚಿಸಲಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿ ಅಂತಿಮ ಮಾರ್ಗಸೂಚಿ ಬಿಡುಗಡೆ ಮಾಡಲಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಹಾನಿ ಉಂಟಾಗಿರುವ ಕುಣಿಮೆಳ್ಳಿಹಳ್ಳಿ, ನಾಗನೂರ, ಸಂಗೂರ, ಕೂಡಲ, ಬಾಳಂಬೀಡ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಜಿಲ್ಲೆಯಲ್ಲಿ ಐದು ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. 11 ಮನೆಗಳಿಗೆ ತೀವ್ರ ಹಾಗೂ 1,444 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 15 ದನದ ಕೊಟ್ಟಿಗೆಗಳಿಗೆ ಹಾನಿ ಆಗಿದೆ. ಜಿಲ್ಲೆಯಲ್ಲಿ ಸಂಭವಿಸಿದ್ದ ಅವಘಡದಲ್ಲಿ 6 ಮಂದಿ ಮೃತಪಟ್ಟಿದ್ದು, ತಲಾ ₹ 5 ಲಕ್ಷದಂತೆ ₹ 30 ಲಕ್ಷ ಪರಿಹಾರ ವಿತರಿಸಲಾಗಿದೆ’ ಎಂದರು.
₹ 7.32 ಕೋಟಿ ಬೆಳೆ ಹಾನಿ : ‘ಜಿಲ್ಲೆಯಲ್ಲಿ 5,017 ರೈತರ 3,778 ಹೆಕ್ಟೇರ್ ಕೃಷಿ ಜಮಿನು ಜಲಾವೃತಗೊಂಡಿದೆ. ₹ 7.32 ಕೋಟಿ ಬೆಳೆ ಹಾನಿಯಾಗಿದೆ’ ಎಂದು ಹೇಳಿದರು.
‘339 ವಿದ್ಯುತ್ ಕಂಬ, 18 ಟ್ರಾನ್ಸ್‌ಫಾರ್ಮರ್, 1.42 ಕಿ.ಮೀ ವಿದ್ಯುತ್ ತಂತಿ, ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳು ಸೇರಿದಂತೆ ₹ 17.97 ಕೋಟಿ ಮೊತ್ತದ ಹಾನಿ ಆಗಿದೆ’ ಎಂದು ಹೇಳಿದರು.
‘ನಾಗನೂರ- ಕೂಡಲ ಸೇತುವೆ ವಿಸ್ತರಣೆಗೆ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಇದೆ. ನದಿ ನೀರು ಬಳಸಿಕೊಂಡು ಜಿಲ್ಲೆಯ ಶೇ 65ರಿಂದ 70ರಷ್ಟು ಕೆರೆಗಳನ್ನು ಈಗಾಗಲೇ ತುಂಬಿಸಲಾಗಿದೆ’ ಎಂದರು.
ಶಾಸಕ ಶ್ರೀನಿವಾಸ ಮಾನೆ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಅಕ್ಷಯ್ ಶ್ರೀಧರ್, ಕಾಂಗ್ರೆಸ್ ಮುಖಂಡರಾದ ಆನಂದಸ್ವಾಮಿ ಗಡ್ಡದೇವರಮಠ, ಹಾಗೂ ಯಾಸೀರ್‌ಅಹ್ಮದ ಖಾನ್ ಪಠಾಣ ಇದ್ದರು.
- ರಾಜ್ಯದ ಪರಿಹಾರ ನಿಗದಿ ಯಾವಾಗ ? ‘ನಿರಂತರ ಮಳೆಯಿಂದಾಗಿ ಜಿಲ್ಲೆಯಲ್ಲಿ ಮನೆಗಳು ಬಿದ್ದಿವೆ. ಬೆಳೆ ಹಾನಿ ಆಗಿದೆ. ಸಂತ್ರಸ್ತರಿಗೆ ಸಹಾಯ ಮಾಡಲು ರಾಜ್ಯ ಸರ್ಕಾರದ ಪರಿಹಾರ ನಿಗದಿ ಯಾವಾಗ ಮಾಡುವುದು’ ಎಂದು ಸಂತ್ರಸ್ತರು ಪ್ರಶ್ನಿಸಿದರು. ಮನೆ ಪರಿಶೀಲನೆಗೆ ಬಂದಿದ್ದ ಸಚಿವರಿಗೆ ಮನವಿ ಸಲ್ಲಿಸಿದ ಸಂತ್ರಸ್ತರು ‘ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ ಅನುದಾನ ಲಭ್ಯವಿದೆ. ಆದರೆ ರಾಜ್ಯ ಸರ್ಕಾರದ ಎಸ್‌ಡಿಆರ್‌ಎಫ್ ಅನುದಾನವಿಲ್ಲವೆಂದು ಜಿಲ್ಲಾಡಳಿತ ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ದೂರಿದರು. ‘ಹಾನಿಯಾಗಿರುವ ಮನೆಗಳ ಮರು ನಿರ್ಮಾಣಕ್ಕೆ ಎನ್‌ಡಿಆರ್‌ಎಫ್ ಕಡೆಯಿಂದ ₹ 2.20 ಲಕ್ಷ ನೀಡುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದ ಅವಧಿಯಲ್ಲಿ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಎರಡೂ ಸೇರಿ ₹ 5 ಲಕ್ಷ ನೀಡಲಾಗಿತ್ತು. ಈ ಬಾರಿಯೂ ₹ 5 ಲಕ್ಷ ನೀಡಬೇಕು’ ಎಂದು ಆಗ್ರಹಿಸಿದರು. ಸಚಿವ ಶಿವಾನಂದ ಪಾಟೀಲ ‘₹5 ಲಕ್ಷ ಅನುದಾನ ಕೊಟ್ಟಾಗ ಸಾಕಷ್ಟು ಮಂದಿ ದುರುಪಯೋಗಪಡಿಸಿಕೊಂಡಿದ್ದಾರೆ. ಈ ಬಾರಿ ಹೊಸ ಮಾರ್ಗಸೂಚಿಗಳನ್ನು ರಚಿಸಿ ಪರಿಹಾರ ನಿಗದಿಪಡಿಸಲಾಗುವುದು’ ಎಂದರು.
ಹಾನಗಲ್: ‘ಹವಾಮಾನ ಆಧಾರಿತ ತೋಟಗಾರಿಕೆ ಬೆಳೆ ವಿಮೆ ಕಂತು ಪಾವತಿಯಲ್ಲಿರುವ ತಾಂತ್ರಿಕ ಅಡಚಣೆಗಳನ್ನು ಸರಿಪಡಿಸಬೇಕು.ಕೊನೆ ದಿನಾಂಕವನ್ನು ಮುಂದೂಡಬೇಕು’ ಎಂದು ಆಗ್ರಹಿಸಿ ರೈತ ಸಂಘದ ಹಾನಗಲ್ ತಾಲ್ಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಜಿಲ್ಲಾ ಘಟಕದ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ ಅವರು ಸಚಿವರಿಗೆ ಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.